ಮುಗಿಯದ ಜನರ ಗೋಳು
ಕನ್ನಡಪ್ರಭ ವಾರ್ತೆ ಹುಣಸಗಿ ಜೂ.13
ನಾಲ್ಕು ದಶಕಗಳಿಂದ ಜನ ಬೋನಾಳ ಏತ ನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯ ಸಿಗಬಹುದು ಎಂಬ ಆಸೆಗಣ್ಣಿನಿಂದ ನೋಡುತ್ತಿದ್ದ ರೈತರಿಗೆ ಇನ್ನೂ ನೀರಿನ ಭಾಗ್ಯ ದೊರೆತಿಲ್ಲ. ಜನಪ್ರತಿನಿಧಿಗಳ ಮಾತಿನಿಂದಲೇ ಈ ಯೋಜನೆ ಹೆಚ್ಚು ಪ್ರಚಾರಕ್ಕೆ ಬಂದಿದ್ದರೂ ಅದರಿಂದ ಪ್ರಯೋಜನ ಮಾತ್ರ ಶೂನ್ಯ ಎಂಬಂತಾಗಿದೆ. ಆದ್ದರಿಂದ ಯೋಜನೆಯದ್ದೇ ಗೋಳಿನ ಕತೆಯಾಗಿದೆ.
ಬೋನಾಳ ಏತ ನೀರಾವರಿ ಯೋಜನೆ ಬೋನಾಳ ಕೆರೆ ನೀರನ್ನು ಶಹಾಪುರ ವಿತರಣಾ ಕಾಲುವೆಯ ಸಂಖ್ಯೆ 6 ಕ್ಕೆ 17ನೇ ಕಿಲೋ ಮೀಟರ್ನಲ್ಲಿ ಸುರಪುರ ತಾಲೂಕಿನ ತಳವಾರಗೇರಾ, ವಗಣಗೇರಾ ಬಳಿ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಈ ಯೋಜನೆ ಕೈಗೆತ್ತಿಕೊಳ್ಳುವುವರೆಗೆ ಬದುಕುವ ಭರವಸೆಯನ್ನೇ ಈ ಭಾಗದ ಗ್ರಾಮಗಳ ರೈತರು ಕಳೆದುಕೊಂಡು ಗುಳೆ ಹೋಗಿದ್ದರು. 2009ರಲ್ಲಿ ಈ ಯೋಜನೆಗೆ ರು. 17 ಕೋಟಿ ಮೀಸಲಿಟ್ಟು ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಯಿತು. ಇನ್ನಾದರೂ ನಮ್ಮ ಜಮೀನುಗಳಿಗೆ ನೀರು ಸರಿಯಾಗಿ ಹರಿಯಬಹುದು ಎಂಬ ಆಸೆ ರೈತರಲ್ಲಿ ಬೆಳೆಯಿತು. ಆದರೆ ಅವರ ಕನಸು ಇನ್ನೂ ನನಸಾಗದೇ ನಿರಾಸೆ ಮೂಡಿಸಿದೆ.
ಯೋಜನೆಯ ವಿವರ: ಸುರಪುರ ಸಮೀಪದ ಬೋನಾಳ ಗ್ರಾಮದ ಹತ್ತಿರ ನೀರಾವರಿ ಕೆರೆ ಇದ್ದು, ಅದನ್ನು ಲಿಫ್ಟ್ ಮಾಡಿ ರೈತರಿಗೆ ಒದಗಿಸುವ ಯೋಜನೆಯಾಗಿದೆ. ನೀರಾವರಿಯಿಂದ ಬಳಲುತ್ತಿರುವ ಗ್ರಾಮಗಳಿಗೆ ನೀರಾವರಿ ಅಧಿಸೂಚನೆಯಂತೆ ನೀರಾವರಿ ಒದಗಿಸುವುದು ಈ ಯೋಜನೆಯ ಉದ್ದೇಶ.
ಕೆರೆಯ ಏರಿಯಿಂದ ನಾಲ್ಕು ಕಿಮೀವರೆಗೆ ಕಾಲುವೆ ನಿರ್ಮಿಸಿ, 440 ಅಶ್ವ ಶಕ್ತಿಯ ನಾಲ್ಕು ಮೋಟಾರು ಜೋಡಿಸುವುದು, 1.50 ಮೀ. ವ್ಯಾಸದ ಎಂ.ಎಸ್. ಪೈಪುಗಳ ಮೂಲಕ ನೀರನ್ನು ಲಿಂಕ್ ಕಾಲುವೆ ಮುಖಾಂತರ 110 ಕ್ಯುಸೆಕ್ ನೀರನ್ನು ಹರಿಸುವುದು ಯೋಜನೆಯಲ್ಲಿದೆ.
ಇದರ ವ್ಯಾಪ್ತಿಯಡಿ ನವಿಲಹಳ್ಳಿ, ಆಲ್ದಾಳ, ನಾಗರಾಳ, ಕವಡಿಮಟ್ಟಿ, ನರಸಿಂಗ ಪೇಟ್, ಗುಡಿಹಾಳ, ಶೆಳ್ಳಗಿ, ಮುಷ್ಠಳ್ಳಿ, ಬೇವಿನಾಳ, ಚಂದಲಾಪುರ, ಅಡ್ಡೋಡಗಿ, ಹೆಮ್ಮಡಿಗಿ, ಲಿಂಗದಳ್ಳಿ, ರುಕ್ಮಾಪುರ, ಕುಪಗಲ್, ಕರನಾಳ, ಚೌಡೇಶ್ವರಿಹಾಳ, ಹಾವಿನಾಳ ಗ್ರಾಮಗಳು ಬರುತ್ತವೆ.
ಬೋನಾಳ ಏತ ನೀರಾವರಿ ಯೋಜನೆ ಕಾಲುವೆ ಕಳೆದ ನಾಲ್ಕು ದಶಕಗಳಿಂದ ನೀರು ಸರಿಯಾಗಿ ಬಾರದೆ ಇರುವುದರಿಂದ ಕಾಲುವೆಯ ನವೀಕರಣದ ಅವಶ್ಯಕತೆ ತಂಬಾ ಇದೆ. ಚಂದಲಾಪುರ, ಬೇವಿನಾಳ ಸಮೀಪದ ಕಾಲುವೆ ಲೆವೆಲ್ ಕೂಡಾ ಸರಿಯಾಗಿ ಇಲ್ಲದೇ ಇರುವುದರಿಂದ ನೀರು ರೈತರಿಗೆ ತಲುಪುತ್ತಿಲ್ಲ.
ಜಮೀನಿಗೆ ನೀರು ಅನುಮಾನ: ಈ ಕಾಲುವೆಯ ವಾರ್ಷಿಕ ನಿರ್ವಹಣೆಗೆ ಈ ಬಾರಿ ಸೂಕ್ತ ಅನುದಾನ ಲಭ್ಯವಾಗಿಲ್ಲ. ಇದರಿಂದ ಈ ವರ್ಷ ಕೂಡ ರೈತರ ಜಮೀನಿಗೆ ಬೋನಾಳ ಕೆರೆ ನೀರು ಲಭ್ಯವಾಗುವುದು ಅನುಮಾನವಾಗಿದೆ ಎಂದು ಆ ಭಾಗದ ರೈತರು ಅಭಿಪ್ರಾಯಪಡುತ್ತಿದ್ದಾರೆ.
ಪ್ರಸಕ್ತ ವರ್ಷ ಸುಮಾರು 10-15 ಲಕ್ಷ ರು. ಮಾತ್ರ ವಾರ್ಷಿಕ ನಿರ್ವಹಣೆಗೆ ಅವಕಾಶ ದೊರೆತಿದೆ. ಭೀಮರಾಯನ ಗುಡಿ ವಲಯದ ಅಧೀಕ್ಷಕ ಅಭಿಯಂತರ ಈಶ್ವರ ನಾಯಕ ಪತ್ರಿಕೆ ಜತೆ ಮಾತನಾಡಿ, ಕೃಷ್ಣಾ ಅಚ್ಚುಕಟ್ಟಿನಲ್ಲಿ 6 ಸಾವಿರ ಕೋಟಿ ರು.ಗಳ ಬೃಹತ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕಿದೆ. ಇದು ಕಾರ್ಯಗತವಾದರೆ ಒಟ್ಟು ಕಾಲುವೆಗಳ ನವೀಕರಣಕ್ಕೆ ಶಾಶ್ವತ ಪರಿಹಾರ ಸಾಧ್ಯ ಎಂದರು.
ರೈತರ ಆಸೆ: ಕಳೆದ ಫೆಬ್ರುವರಿ ತಿಂಗಳಲ್ಲಿ ಜಗದೀಶ ಶೆಟ್ಟರ್ ಬೋನಾಳ ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿದ್ದರು. ಇನ್ನೇನು ನೀರು ಹರಿಯಿತು ಎಂದುಕೊಂಡ ಕಾಲುವೆ ನಿರ್ವಹಣೆ ಇಲ್ಲದ್ದರಿಂದ ನೀರು ಮುಂದಕ್ಕೆ ಸಾಗಲೇ ಇಲ್ಲ. ಆದ್ದರಿಂದ ಹತ್ತಾರು ಗ್ರಾಮಗಳ ರೈತರು ಈ ಯೋಜನೆಯ ಆಸೆಯನ್ನೇ ಬಿಡುವಂತಾಗಿದೆ. ಈ ಸರ್ಕಾರವಾದರೂ ಯೋಜನೆ ಬಗ್ಗೆ ಆಸಕ್ತಿ ವಹಿಸಿದಲ್ಲಿ ಈ ಭಾಗದ ರೈತರ ಬಾಳು ಹಸನಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

