ಗುಲ್ಬರ್ಗಾ

ಅಖಿಲ ಭಾರತ ಸಮ್ಮೇಳನ ಗುಲ್ಬರ್ಗಕ್ಕೆ ತರುವ ಗುರಿ

Published On :

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಮೂರು ಮಾತು
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಕಳೆದೊಂದು ವರ್ಷದಿಂದ ಕಾರ್ಯಭಾರ ವಹಿಸಿಕೊಂಡವರು ಪತ್ರಕರ್ತ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್. ಇವರು ಅಧ್ಯಕ್ಷರಾದ ಮರುದಿನದಿಂದಲೇ ಕನ್ನಡ ಭವನದ ಕೋಣೆಗೆ ಯಾರೇ ಬಂದರೂ ಅವರಿಗೆ ಚಾಕೋಲೇಟ್ ಕೊಟ್ಟು ಮರ್ಯಾದೆ ಮಾಡುವ ಹೊಸತನಕ್ಕೆ ನಾಂದಿ ಹಾಡಿದರು. ಈ ಮೂಲಕ ಕನ್ನಡ ಉಳಿಸಿ ಬೆಳೆಸುವ, ಸರ್ವರನ್ನು ಕನ್ನಡತನಕ್ಕಾಗಿ ಮಿಡಿಯುವಂತೆ ಅದ್ಹೇಗೆ ಆಕರ್ಷಿಸಬೇಕೆಂಬುದನ್ನು ಸೂಚ್ಯವಾಗಿ ತೋರಿಸಿಕೊಟ್ಟವರು.
13ನೇ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾ ಕೇಂದ್ರ ಗುಲ್ಬರ್ಗ ಮಹಾನಗರದ ಬಾಪುಗೌಡ ದರ್ಶನಾಪುರ ರಂಗ ಮಂದಿರದಲ್ಲಿ ಆಚರಿಸಲ್ಪಡುತ್ತಿರುವ ಈ ಸಂದರ್ಭದಲ್ಲಿ 'ಕನ್ನಡಪ್ರಭ' ಅವರನ್ನು ಮಾತಿಗೆಳೆದಾಗ ತಮ್ಮ ಮನದಲ್ಲಿರುವ ಕನ್ನಡ ಕಟ್ಟುವ ಕೆಲಸದ ಚಿಂತನೆ, ನೀಲ ನಕಾಶೆ ಎಲ್ಲವನ್ನು ಹೇಳಿಕೊಂಡರು. ಅವರು 'ಕನ್ನಡಪ್ರಭ' ಜೊತೆ ಮಾತನಾಡಿದ ಸಂಗತಿಗಳಿವು...
1. ಗುಲ್ಬರ್ಗ ನೆಲ ಕನ್ನಡ ಸಾಹಿತ್ಯಕ್ಕೆ ಲಾಕ್ಷಣಿಕ ಗ್ರಂಥ ಕವಿರಾಜ ಮಾರ್ಗ ಕೊಟ್ಟಿದೆ. ಅಂತಹ ನೆಲದಲ್ಲಿ ಮಾದರಿ ಸಮ್ಮೇಳನ ಮಾಡುವ ಮೂಲಕ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಇಲ್ಲೇ ನಡೆಯುವಂತೆ ಮಾಡುವುದೇ ಗುರಿ. ಕಸಾಪಕ್ಕೆ 100 ತುಂಬಲು ಇನ್ನೆರಡು ವರ್ಷವಿದೆ. ಶತಮಾನದ ಸಮ್ಮೇಳನ ಕವಿರಾಜಮಾರ್ಗ ನೆಲದಲ್ಲೇ ಆಗಬೇಕು. ಅದೇ ರೀತಿ ಇಲ್ಲಿನ ಬೆಳವಣಿಗೆಗಳು ಸಾಗಬೇಕೆಂಬುದು ಕನಸು. ಈ ಕನಸಿಗೆ ಈ ನೆಲದ ಸಹೃದಯವರು ಪ್ರೋತ್ಸಾಹ ನೀಡುತ್ತಿದ್ದಾರೆ. ಅದರ ಫಲವೇ 13ನೇ ಸಾಹಿತ್ಯ ಸಮ್ಮೇಳನ.
2. ಶ್ರೀವಿಜಯನ ನೆಲವಿದು. ಕವಿರಾಜ ಮಾರ್ಗ ಕೃತಿ ರಚನೆಯಾಗಿದ್ದು ಮಳಖೇಡದಲ್ಲಿ. ಅದಿರುವುದು ಗುಲ್ಬರ್ಗ ಜಿಲ್ಲೆಯಲ್ಲಿ ಶತಮಾನದ ಸಾಹಿತ್ಯ ಸಮ್ಮೇಳನಕ್ಕೆ ಇದಕ್ಕಿಂತ ಔಚಿತ್ಯಪೂರ್ಣ ಜಿಲ್ಲೆ ಇನ್ನಾವುದು ಹೇಳಿ, ಅದಕ್ಕೇ ಜಿಲ್ಲಾ ಕಸಾಪದಿಂದ ರಾಜ್ಯ ಕಸಾಪಕ್ಕೆ ಈಗಾಗಲೇ ಈ ಸಂಗತಿ ಮನವರಿಕೆ ಮಾಡಿ ಕೊಡುವ ಕೆಲಸ ಸಾಗಿದೆ. ಅವೆಲ್ಲದರ ಪೂರ್ವ ತಯಾರಿ ಎಂಬಂತೆ ದೇಸೀತನದ, ಜನಸಾಮಾನ್ಯರಿಗೆ ಹತ್ತಿರವಾಗುವಂತಹ ಸಮ್ಮೇಳನ ಜಿಲ್ಲಾ ಮಟ್ಟದಲ್ಲಿ ಮಾಡಿ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತೇವೆ. ಕನ್ನಡತನ ಎಲ್ಲರ ಮನೆ- ಮನ ತಲುಪಬೇಕೆಂಬುದೇ ನಮ್ಮ ಗುರಿ.
3. ಕನ್ನಡ ಕಟ್ಟುವ ಕೆಲಸ ಎಲ್ಲರ ಮನೆಗಳಲ್ಲಿ ಸಾಗಬೇಕೆಂದು ಮನೆಮನೆಗಳಲ್ಲಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಕಥಾ ವಾಚನ, ಕವನ ವಾಚನ ಇತ್ಯಾದಿ ಕಾರ್ಯಗಳ ಮೂಲಕ ಕನ್ನಡೀಕರಣ ಮನೆಗಳಿಂದಲೇ ಶುರುವಾಗಲಿ ಎಂಬುದೇ ನಮ್ಮ ಇಚ್ಛೆ. ಇಲ್ಲಿ ಕನ್ನಡ ಹಸಿರು ಚಿಗುರಿ ಹೆಮ್ಮರವಾಗಬೇಕೆಂಬುದು ಸದಿಚ್ಛೆ. ಸಹೃದಯರೆಲ್ಲರೂ ಅದಕ್ಕೆ ಕೈಮಿಲಾಯಿಸಬೇಕು. ಹೆಚ್ಚಿನ ಬೆಂಬಲ ನೀಡುತ್ತಾರೆ ಎಂಬುದೇ ನಮ್ಮ ನಿರೀಕ್ಷೆ.
--
ಸಮ್ಮೇಳನ: ಶಿಕ್ಷಕರಿಗೆ ಒಒಡಿ ಸೌಲಭ್ಯ
ಗುಲ್ಬರ್ಗ: ನಗರದ ಕನ್ನಡ ಭವನದಲ್ಲಿ ಜೂ.15, 16ರಂದು ನಡೆಯಲಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ  ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಒಒಡಿ ನೀಡಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ.
ಜೂ.15ರಂದು ಒಂದು ದಿನಕ್ಕೆ ವಿಶೇಷ ಸಾಂದರ್ಭಿಕ ರಜೆಯನ್ನು ಪಡೆದುಕೊಳ್ಳಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಧಿಕೃತ ಜ್ಞಾಪನ ಸುತ್ತೋಲೆ ಹೊರಡಿಸಿದ್ದು, ನಿಯಮಾನುಸಾರವಾಗಿ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ರಜೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಸಾಪ ನೀಡುವ ಹಾಜರಾತಿ ಪ್ರಮಾಣ ಪತ್ರವನ್ನು ಕಡ್‌ಡಾಯವಾಗಿ ಶಾಲಾ ಮುಖ್ಯಸ್ಥರಿಗೆ ಹಾಜರುಪಡಿಸಬೇಕು ಎಂದು ಡಿಡಿಪಿಐ ಸುತ್ತೋಲೆಯಲ್ಲಿ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.