ಆಸ್ಪತ್ರೆಗೆ ಅವ್ಯವಸ್ಥೆಗೆ ಸಚಿವ ಅತೃಪ್ತಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.14
ಜವಳಿ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಅವರು ಶುಕ್ರವಾರ ಜಿಲ್ಲಾಸ್ಪತ್ರೆ ಹಾಗೂ ಬಾಲಕಿಯರ ಹಾಸ್ಟೆಲ್ಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಅವರು, 15 ದಿನದೊಳಗೆ ಅಗತ್ಯ ಸೌಲಭ್ಯ ಕಲ್ಪಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಸರ್ಜನ್ಗೆ ಎಚ್ಚರಿಕೆ ನೀಡಿದರು.
ಸಚಿವರು ಆಸ್ಪತ್ರೆ ಪ್ರವೇಶಿಸುತ್ತಿದ್ದಂತೆ ಮಹಿಳೆಯೊಬ್ಬರು ಅವರ ಕಾಲಿಗೆ ಬಿದ್ದು, 'ತನ್ನ ಪತಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ಗುರುವಾರ ರಾತ್ರಿಯೇ ಇಲ್ಲಿ ದಾಖಲಿಸಲಾಗಿದೆ. ಆದರೆ ಇದುವರೆಗೆ ಒಬ್ಬ ವೈದ್ಯರೂ ಅವರನ್ನು ಉಪಚರಿಸಿಲ್ಲ' ಎಂದು ಕಣ್ಣೀರು ಸುರಿಸಿದರು. ಇದರಿಂದ ಆಸ್ಪತ್ರೆ ಸಿಬ್ಬಂದಿ ಬಗ್ಗೆ ಅಸಮಾಧಾನಗೊಂಡ ಸಚಿವರು ನೇರವಾಗಿ ಪ್ರಯೋಗಾಲಯಕ್ಕೆ ತೆರಳಿದರು.
ಆದರೆ ಅಲ್ಲಿ ಯಾವ ಸಿಬ್ಬಂದಿ ಇಲ್ಲದ್ದನ್ನು ಕಂಡು ಅವಕ್ಕಾದರು. ಜಿಲ್ಲಾ ಸರ್ಜನ್ರಿಗೆ ಕರೆಯುವಂತೆ ಸೂಚಿಸಿ, ಹಾಜರಿ ಪುಸ್ತಕ ತರುವಂತೆ ಹೇಳಿದರು. ಆದರೂ ಯಾವ ಸಿಬ್ಬಂದಿಯೂ ತಕ್ಷಣ ಬಾರದ್ದನ್ನು ಕಂಡು ಕೆಂಡಾಮಂಡಲರಾದ ಚಿಂಚನಸೂರ, ತಾವೇ ಎದ್ದು ವೈದ್ಯಾಧಿಕಾರಿಯನ್ನು ಕಾಣಲು ಮುಂದಾದರು. ಆಗ ಅಲ್ಲಿಗೆ ಜಿಲ್ಲಾ ಸರ್ಜನ್ ಡಾ. ವಿಜಯಕುಮಾರ ಆಗಮಿಸಿದರು. ಆಗ ಸರ್ಜನ್ ವಿಜಯಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡರು.
ಆರೋಗ್ಯವಂತನೂ ರೋಗಿಯಾಗುತ್ತಾನೆ: ಅಲ್ರಿ, ನಿನ್ನೆಯೇ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಇನ್ನೂ ಚಿಕಿತ್ಸೆ ನೀಡಿಲ್ಲವಂತೆ. ಸ್ವಲ್ಪವೂ ಮಾನವೀಯತೆ ಇಲ್ವೇನ್ರಿ ನಿಮಗೆ. ಸತ್ತ ಮೇಲೆಯೇ ನೀವು ಬರುತ್ತೀರಾ? ಜನ ನಿಮ್ಮನ್ನು ಎರಡನೇ ದೇವರು ಎಂಬ ಭಾವನೆಯಿಂದ ನೋಡುತ್ತಾರೆ. ಉಳಿದ ವೈದ್ಯರೆಲ್ಲ ಎಲ್ಲಿಗೆ ಹೋಗಿದ್ದಾರೆ. ಯಾವ ಸಿಬ್ಬಂದಿಯೂ ಇಲ್ಲಿ ಕಾಣುತ್ತಿಲ್ಲ. ಹೀಗಾದರೆ ಜನರು ಏನು ಮಾಡಬೇಕು. ಜಿಲ್ಲೆಯಲ್ಲಿ ಅತ್ಯಂತ ಬಡಜನತೆ ಇದ್ದಾರೆ. ಅವರಿಗೆ ಸರಿಯಾಗಿ ಆರೋಗ್ಯ ಸೇವೆ ಒದಗಿಸುವಲ್ಲಿ ಜಿಲ್ಲಾಸ್ಪತ್ರೆ ವಿಫಲವಾಗಿದೆ. ಸ್ವಚ್ಛತೆ ಬಗ್ಗೆಯೂ ಗಮನ ನೀಡುತ್ತಿಲ್ಲ. ಆರೋಗ್ಯವಂತ ಬಂದರೂ ಇಲ್ಲಿಂದ ಹೊರಹೋಗುವಾಗ ರೋಗಿಯಾಗುತ್ತಾನೆ. ಇಂಥ ಜಿಲ್ಲಾಸ್ಪತ್ರೆಯನ್ನೇ ನಾನು ನೋಡಿಲ್ಲ ಎಂದು ಚಿಂಚನಸೂರ ಜಿಲ್ಲಾ ಸರ್ಜನ್ರನ್ನು ತರಾಟೆಗೆ ತೆಗೆದುಕೊಂಡರು.
ರೋಗಿಗಳ ಸುಲಿಗೆ ಆರೋಪ: ಸಿಬ್ಬಂದಿ ಇಲ್ಲದಿರುವುದು ಹಾಗೂ ವಿವಿಧ ವಿಭಾಗಗಳ ವೈದ್ಯರು ಇಲ್ಲದಿರುವುದನ್ನು ತಿಳಿದು, ತಕ್ಷಣ ವೈದ್ಯರು, ಸಿಬ್ಬಂದಿ ಕೊರತೆ ಹಾಗೂ ಯಾವ ಸೌಲಭ್ಯದ ಅಗತ್ಯವಿದೆ ಎಂಬುದರ ಪಟ್ಟಿ ಮಾಡಿ ನೀಡುವಂತೆ ಚಿಂಚನಸೂರ ಸರ್ಜನ್ ವಿಜಯಕುಮಾರ ಅವರಿಗೆ ಸೂಚಿಸಿದರು. ಜಿಲ್ಲಾಸ್ಪತ್ರೆಗೆ ನಿವೇಶನ ಸಮಸ್ಯೆಯಿದೆ ಒದಗಿಸಿಕೊಡಿ ಎಂದು ಸರ್ಜನ್ ಮನವಿ ಮಾಡಿದರು.
ಇದರಿಂದ ಮತ್ತಷ್ಟು ಕೋಪಗೊಂಡ ಸಚಿವರು, ಇರುವ ಆಸ್ಪತ್ರೆಯನ್ನೇ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇನ್ನು 15 ದಿನದೊಳಗೆ ಸ್ವಚ್ಛತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಅನಿರೀಕ್ಷಿತವಾಗಿ ಮತ್ತೆ ಭೇಟಿ ನೀಡಿದಾಗ ಅವ್ಯವಸ್ಥೆ ಕಂಡರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು. ಇದೇ ವೇಳೆ ಸಾರ್ವಜನಿಕರು ಮಾತನಾಡಿ, ರಾತ್ರಿ ವೇಳೆ ಯಾವ ವೈದ್ಯರೂ ಇರುವುದಿಲ್ಲ. ಎಲ್ಲರೂ ಖಾಸಗಿ ಕ್ಲಿನಿಕ್ ಇಟ್ಟುಕೊಂಡಿದ್ದು ಅದರ ಬಗ್ಗೆಯೇ ಕಾಳಜಿ ವಹಿಸುತ್ತಿದ್ದಾರೆ. ಆ್ಯಂಬುಲೆನ್ಸ್ನಲ್ಲಿ ರೋಗಿಯನ್ನು ಕರೆದೊಯ್ಯಬೇಕಾದರೆ ಹಣ ಕೇಳುತ್ತಾರೆ. ಚಾಲಕನಿಗೆ ಭತ್ಯೆ ನೀಡುವಂತೆ ರೋಗಿಗಳ ಕಡೆಯಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇನ್ನು ಮುಂದೆ ಇಂಥ ಆರೋಪಗಳು ಕೇಳಿಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಚಿಂಚನಸೂರ ತಿಳಿಸಿದರು. ನಂತರ ಜನರಲ್ ವಾರ್ಡಿಗೆ ಭೇಟಿ ನೀಡಿದ ಸಚಿವರು, ಅಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ವಿಚಾರಿಸಿದರು.
ಹಾಸ್ಟೆಲ್ ಭೇಟಿ: ನಂತರ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಯಲಕ್ಕೆ ಭೇಟಿ ನೀಡಿದರು. ಊಟ, ವಸತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿದ್ದಾರೆಯೇ ಎಂದು ವಿದ್ಯಾರ್ಥಿನಿಯರನ್ನು ವಿಚಾರಿಸಿದರು. ನಂತರ ಸ್ವಚ್ಛತೆ ಪರಿಶೀಲಿಸಿದರು. ಮಾಡಿರುವ ಅಡುಗೆ ಪದಾರ್ಥಗಳನ್ನು ತರುವಂತೆ ಮೇಲ್ವಿಚಾರಕರಿಗೆ ಹೇಳಿದಾಗ, ಇಲ್ಲಿ ಮಾಡಿಲ್ಲ ಎಂದು ಉತ್ತರಿಸಿದರು. ಆದರೆ ವಿದ್ಯಾರ್ಥಿಗಳು ಇಲ್ಲೇ ಮಾಡಲಾಗಿತ್ತು ಎಂದರು. ಈ ರೀತಿ ಸುಳ್ಳು ಹೇಳಬೇಡಿ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ತಲುಪಿಸಬೇಕು. ಇಲ್ಲದಿದ್ದರೆ ಕ್ರಮ ನಿಶ್ಚಿತ ಎಂದು ವಾರ್ಡನ್ಗೆ ಎಚ್ಚರಿಸಿದರು.
ಜಿಪಂ ಉಪಾಧ್ಯಕ್ಷ ಶರಣಿಕಕುಮಾರು ದೋಖಾ, ಮಹಿಪಾಲರೆಡ್ಡಿ ದುಪ್ಪಲ್ಲಿ, ಚಿದಾನಂದಪ್ಪ ಕಾಳೆಬೆಳಗುಂದಿ, ಅಣ್ಣಾರಾವ ಮುತ್ತಟ್ಟಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

