ಕೆಲಸ ಮಾಡದವರಿಗೆ ಜಿಲ್ಲೆಯಲ್ಲಿ ಉಳಿಗಾಲವಿಲ್ಲ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.15
ಅಧಿಕಾರಿಗಳು ಹೊಸ ಹುರುಪಿನಿಂದ ಕೆಲಸ ಮಾಡುವ ಅಗತ್ಯವಿದೆ. ಜನರ ನಿರೀಕ್ಷೆಯಂತೆ ಸರ್ಕಾರಕ್ಕೆ ಉತ್ತಮ ಹೆಸರು ತರಲು ಎಲ್ಲರೂ ಸಮರೋಪಾದಿಯಲ್ಲಿ ಶ್ರಮಿಸಿ ಮಾದರಿ ಜಿಲ್ಲೆಯನ್ನಾಗಿಸಬೇಕು. ಕೆಲಸ ಮಾಡದ ಅಧಿಕಾರಿಗಳು ಬೇರೆಡೆ ಹೋಗಬಹುದಾಗಿದ್ದು, ಅಂಥವರಿಗೆ ಇನ್ನು ಉಳಿಗಾಲವಿಲ್ಲ.
- ಇದು ಜವಳಿ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಅವರು ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆ.
ಇಲ್ಲಿಯ ಜಿಪಂ ಸಭಾಭವನದಲ್ಲಿ ಶನಿವಾರ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು, ಪ್ರಥಮ ಸಭೆಯಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಎಚ್ಚರಿಕೆ ಪಾಠ: ನಮ್ಮ ಸರ್ಕಾರದ ಮೇಲೆ ಜನ ಬಹಳ ನಿರೀಕ್ಷೆಯಿಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಹೊಸ ಹಾಗೂ ಪುಟ್ಟ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಬೇಕು. ನಾವೂ ನಿಮಗೆ ಸುಮ್ಮನೆ ಕಿರಿಕಿರಿ ಕೊಡಲು ಬಯಸುವುದಿಲ್ಲ. ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳ ಸಹಕಾರದಲ್ಲಿ ಜಿಲ್ಲೆಗೆ ಹೊಸ ರೂಪ ಕೊಡುವ ರೀತಿಯಲ್ಲಿ ಶ್ರಮಿಸಬೇಕು. ಸರ್ಕಾರದಿಂದ ಸಂಬಳ ತೆಗೆದುಕೊಂಡು ಜನರ ಸಮಸ್ಯೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಅಂಥವರು ಕೆಲಸ ಬಿಟ್ಟು ಹೋಗಬಹುದು.
ಇನ್ನು 15 ದಿನಗಳ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ನಿಮ್ಮ ಮನಸ್ಥಿತಿ ಬದಲಾಯಿಸಿಕೊಂಡು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ತೋರಿಸಬೇಕು. ಆಗಲೂ ಅಧಿಕಾರಿಗಳು ಸರಿಯಾಗದಿದ್ದಲ್ಲಿ ಮುಂದೆ ಏನು ಮಾಡಬೇಕೆನ್ನುವುದು ಗೊತ್ತಿದೆ. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ಶಿಸ್ತು ಕ್ರಮ ನಿಶ್ಚಿತ ಎಂದು ಚಿಂಚನಸೂರ ಅಧಿಕಾರಿಗಳಿಗೆ ಎಚ್ಚರಿಕೆಯ ಪಾಠ ಮಾಡಿದರು.
ಅಪೇಕ್ಷೆಯಂತೆ ಕೆಲಸ: ನಂತರ ಜಿಲ್ಲಾಧಿಕಾರಿ ಜಮಾದಾರ್ ಮಾತನಾಡಿ, ನಿಮ್ಮ ಅಪೇಕ್ಷೆಯಂತೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆಂಬ ಭರವಸೆ ನೀಡುತ್ತೇನೆ. ಆದರೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ 1,200ಕ್ಕೂ ಹೆಚ್ಚು ಹುದ್ದೆ ಖಾಲಿಯಿದೆ. ಜಿಲ್ಲಾ ಮಟ್ಟದ 18 ಅಧಿಕಾರಿಗಳ ಹುದ್ದೆ ಭರ್ತಿಯಾಗಬೇಕಿದೆ. ತಾವು ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಲ್ಲಿ ಸಹಾಯವಾಗುತ್ತದೆ. ಆದರೆ ಇದನ್ನೇ ನೆಪ ಮಾಡಿಕೊಂಡು ಸುಮ್ಮನಿರುವುದಿಲ್ಲ. ಸಿಬ್ಬಂದಿ ಕೊರತೆ ಮಧ್ಯೆಯೂ ಸಾಧನೆ ಮಾಡುತ್ತೇವೆ. ಇದಕ್ಕೆ ಎಲ್ಲ ಜನಪ್ರತಿನಿಧಿಗಳ ಸಹಕಾರವೂ ಬೇಕೆಂದು ಜಿಲ್ಲಾಧಿಕಾರಿಯವರು ಹೇಳಿದರು.
ಮಿಂಚಿದ ಗುರು ಪಾಟೀಲ: ಶಾಸಕರಾಗಿ ಪಾಲ್ಗೊಂಡ ಮೊದಲ ಸಭೆಯಲ್ಲೇ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ ಶಹಾಪುರ ಕ್ಷೇತ್ರದ ಶಾಸಕ ಗುರು ಪಾಟೀಲ ಶಿರವಾಳ ಗಮನ ಸೆಳೆದರು. ಪಟ್ಟಣಕ್ಕೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ಮುಖ್ಯಾಧಿಕಾರಿ ಸ್ವಲ್ಪವೂ ಗಮನ ನೀಡುತ್ತಿಲ್ಲ. ಚರಂಡಿ, ರಸ್ತೆ ಸೇರಿದಂತೆ ಅನೇಕ ಕಾಮಗಾರಿ ಆಗಿಲ್ಲ. ಮಳೆ ಬಂದರೆ ಚರಂಡಿ ನೀರು ಮನೆಗೆ ನುಗ್ಗುವ ಅಪಾಯವಿದೆ. ಬಂದ ಅನುದಾನ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಅಲ್ಲದೇ ಪಟ್ಟಣದ ದುಸ್ಥಿತಿ ಹೇಳುವ ಫೋಟೋಗಳಿರುವ ಅಲ್ಬಂ ಪ್ರದರ್ಶಿಸಿದರು. ಆಗ ಶಹಾಪುರ ಪುರಸಭೆ ಮುಖ್ಯಾಧಿಕಾರಿ ಸರೋಜಾ ಪಾಟೀಲ, ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಇದರಿಂದ ಗರಂ ಆದ ಚಿಂಚನಸೂರ, 'ಈ ಫೋಟೋಗಳನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ಸುಮ್ಮನೆ ಏನೋ ಹೇಳಿ ತಪ್ಪಿಸಿಕೊಳ್ಳುವುದು ಬೇಡ. ಶಾಸಕರು ಹೇಳಿದಂತೆ ನಡೆದುಕೊಳ್ಳಿ. ಇನ್ನು 15 ದಿನದೊಳಗೆ ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಅವರನ್ನು ಅಮಾನತು ಮಾಡಿ' ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಶಾಸಕ ಗುರು ಪಾಟೀಲ ಮಾತನಾಡಿ, ಕಿರದಳ್ಳಿ ತಾಂಡಾ, ಗೋಗಿ, ಏವೂರಲ್ಲಿ ಆರ್ಸೆನಿಕ್, ನೈಟ್ರೇಟ್ ಅಂಶವಿರುವ ನೀರು ಪೂರೈಕೆಯಾಗುತ್ತಿದ್ದು ಈಗಾಗಲೇ 10 ಜನರು ಚರ್ಮದ ಕ್ಯಾನ್ಸರ್ನಿಂದ ಸತ್ತಿದ್ದಾರೆ. ಇನ್ನೂ ಸುಮಾರು 60 ಜನರು ಪಾರ್ಶ್ವ ವಾಯು ಸೇರಿದಂತೆ ವಿವಿಧ ರೀತಿಯ ವ್ಯಾಧಿಯಿಂದ ಬಳಲುತ್ತಿದ್ದಾರೆ. ತಾಂಡಾ ನಿವಾಸಿಗಳಿಗೆ ಪುನಾವಸತಿ ಕಲ್ಪಿಸುವ ಅಗತ್ಯವಿದೆ. ಆರ್ಸೆನಿಕ್ ಹಾಗೂ ರಾಸಾಯನಿಕ ಅಂಶವಿರುವ ನೀರು ಪೂರೈಕೆಯಾಗುತ್ತಿವ ಕಡೆಗಳಲ್ಲಿ ಆದ್ಯತೆ ಮೇರೆಗೆ ಶುದ್ಧ ನೀರು ಪೂರೈಸಲು ಯೋಜನೆ ರೂಪಿಸಬೇಕೆಂದು ತಿಳಿಸಿದರು.
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ 3 ದಿನದೊಳಗೆ ವರದಿ ನೀಡುವಂತೆ ಜಿಪಂ ಸಿಇಒ ಅವರಿಗೆ ಸಚಿವರು ಸೂಚಿಸಿದರು. ಅಲ್ಲದೇ ಈ ಗ್ರಾಮಗಳಿಗೆ ಶಾಸಕರೊಂದಿಗೆ ಭೇಟಿ ನೀಡುವುದಾಗಿಯೂ ಅವರು ತಿಳಿಸಿದರು.
ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಸತಿ ಯೋಜನೆ, ಬಿಸಿಯೂಟ ಇತ್ಯಾದಿ ಪ್ರಮುಖ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಪಂ ಅಧ್ಯಕ್ಷೆ ಮರೆಮ್ಮ, ಉಪಾಧ್ಯಕ್ಷ ಶರಣಿಕಕುಮಾರ, ಸಿಇಒ ಜಿಲಾನಿ, ಎಸ್ಪಿ ವಂಶಿಕೃಷ್ಟ ಇದ್ದರು.
ಶುದ್ಧ ಕುಡಿವ ನೀರು ಕೊಡಿ: ಡಿಸಿ
ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿವ ನೀರಿನ ಕೊರತೆಯಿದೆ. ಜನರಿಗೆ ಶುದ್ಧ ನೀರು ಕೊಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಸಚಿವರು, ಕುಡಿವ ನೀರಿನ ಕಾಮಗಾರಿ ಕುರಿತು ಮಾಹಿತಿ ಕೋರಿದರು. ಜಿಲ್ಲೆಯ 4 ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದಂತೆ ತುರ್ತು ಕಾಮಗಾರಿ ನಿರ್ವಹಿಸಿ ಸಮಸ್ಯೆ ನಿವಾರಿಸಲಾಗಿದೆ. ಹಣದ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಜಮಾದಾರ ಸಭೆಗೆ ತಿಳಿಸಿದರು. ಸಮರ್ಪಕವಾಗಿ ಪಡಿತರ ವಿತರಿಸಬೇಕು, ರೈತರಿಗೆ, ವಿದ್ಯಾರ್ಥಿಗಳಿಗೆ ಅಗತ್ಯ ಪ್ರಮಾಣ ಪತ್ರ ನೀಡುವ ಕೆಲಸ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಗುರುಮಠಕಲ್ಗೆ ಭೀಮಾ ನದಿಯಿಂದ ನೀರು ಪೂರೈಸುವ ಕಾಮಗಾರಿ ಜು.15ರೊಳಗೆ ಉದ್ಘಾಟನೆಗೆ ಸಿದ್ಧಗೊಳ್ಳಬೇಕು. ರೈತರಿಗೆ ತೊಂದರೆಯಾಗದಂತೆ ಬೀಜ, ರಸಗೊಬ್ಬರ ನೀಡಬೇಕೆಂದು ಚಿಂಚನಸೂರ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

