ಗುಲ್ಬರ್ಗಾ

ವರ್ತಮಾನದ ತಲ್ಲಣಗಳಿಗೆ ಇಚ್ಛಾಶಕ್ತಿಯೇ ಔಷಧ

Published On :

ಶ್ರೀವಿಜಯ ಮಹಾಮಂಟಪ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.16

ಕೃಷಿ ರಂಗ, ಧಾರ್ಮಿಕ ರಂಗ, ಲಿಂಗ ತಾರತಮ್ಯ, ಮೌಢ್ಯಗಳು ಹೀಗೆ ಹತ್ತು ಹಲವು ರೂಪಗಳಲ್ಲಿನ ತಲ್ಲಣಗಳು ನಮ್ಮನ್ನೆಲ್ಲ ಈ ವರ್ತಮಾನದಲ್ಲಿ ನಿತ್ಯವೂ ಕಾಡುತ್ತಿವೆ ಎಂದು ಕಳವಳ ಹೊರಹಾಕಿರುವ ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಸಮಾಜ, ಕುಟುಂಬ, ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಇವುಗಳಿಗೆ ಪರಿಹಾರ ಹುಡುಕಲು ಸಾಧ್ಯ ಎಂದರು.
ಅವರು ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ವರ್ತಮಾನದ ತಲ್ಲಣ ವ್ಯಾಪಕವಾಗಿದೆ. ಈ ತಲ್ಲಣಕ್ಕೆ ಒಳಗಾಗಿ ಜೀವನ ವ್ಯರ್ಥ ಮಾಡಿಕೊಳ್ಳದೆ ಯುವ ಸಮಾಜ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಕರೆ ನೀಡಿದರು.
ಶೈಕ್ಷಣಿಕ ಸಮಸ್ಯೆ: ಭ್ರೂಣಹತ್ಯೆ ನಿಷೇಧಗೊಂಡರೂ ಸಮಾಜದಲ್ಲಿ ಇನ್ನೂ ಹೆಣ್ಣು ಮಕ್ಕಳ ಅನುಪಾತ ಕಡಿಮೆಯಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಡೊನೇಷನ್ ಹಾವಳಿ ಅಧಿಕವಾಗಿದೆ. ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ನೀಡದೆ ಆಂಗ್ಲ ವ್ಯಾಮೋಹ ಒಳಗಾಗಿ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಇತ್ತೀಚೆಗೆ ಶೇ.30 ರಷ್ಟು ರೈತರು ಕೃಷಿ ಚಟುವಟಿಕೆಯಿಂದ ಹೊರ ಬಂದಿದ್ದಾರೆ. ಇದು ಆಹಾರ ಉತ್ಪಾದನೆ ಮೇಲೆ ದೊಡ್ಡ ಪೆಟ್ಟು ಬಿದ್ದು, ಇದರ ಪರಿಣಾಮವಾಗಿ ಬೇರೆ ದೇಶಗಳಿಂದ ಆಹಾರ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಜನಸೇವೆ ಮರೆತ ರಾಜಕಾರಣಿಗಳು: ರಾಜಕೀಯ ಕ್ಷೇತ್ರ ತಲ್ಲಣದಿಂದ ಹೊರತಾಗಿಲ್ಲ. ರಾಜ್ಯ, ಜನರ ಅಭಿವೃದ್ಧಿ ಮಾಡುವುದಾಗಿ ಶಪಥ ಮಾಡಿ ಅಧಿಕಾರಕ್ಕೆ ಬರುವ ರಾಜಕೀಯ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿ ಜನ ಸೇವೆಯೇ ಮರೆತು ಬಿಡುತ್ತಿದ್ದಾರೆ ಎಂದರು.
ವರ್ತಮಾನದ ತಲ್ಲಣದಿಂದ ಜನತೆ ತಪ್ಪು ದಾರಿಗೆ ಇಳಿಯುತ್ತಿದ್ದಾರೆ. ಕೂಡಲೇ ಕುಟುಂಬ ಮತ್ತು ಸಮಾಜ ಎಚ್ಚೆತ್ತು ಉತ್ತಮ ಸಂಸ್ಕಾರ ನೀಡಿ ಯುವ ಜನತೆಗೆ ಸನ್ಮಾರ್ಗದಲ್ಲಿ ತರುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಪತ್ರಕರ್ತ ಶಿವರಾಮ ಅಸುಂಡಿ ಮಾತನಾಡಿ, ಇಂದು ಮಾಧ್ಯಮ ರಾಜಕೀಯ ವ್ಯಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಅವರ ಅಣತಿಯಂತೆಯೇ ಸುದ್ದಿಗಳು ಬಿತ್ತರಿಸುತ್ತಿವೆ. ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾಗಿರುವ ಮಾಧ್ಯಮ ಇಂದು ಕೆಟ್ಟ ದಾರಿಗೆ ತಾನು ಇಳಿಯುವುದರ ಜತೆಗೆ ಸಮಾಜದ ದಾರಿಯನ್ನು ತಪ್ಪಿಸುತ್ತಿದೆ ಎಂದರು.
ಡಾ. ಚಿ.ಸಿ. ಲಿಂಗಣ್ಣ ಯುವ ಸಮೂಹ, ಡಾ. ಶಾಂತಾ ಮಠ ಮಹಿಳಾ ಶೋಷಣ ಕುರಿತು ಮಾತನಾಡಿದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪಿ.ಎಂ. ಮಣ್ಣೂರ, ಉಪನ್ಯಾಸಕ ಗುರುರಾಜ ಅಗ್ನಿಹೋತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.