ಗುಲ್ಬರ್ಗಾ

ದ್ವಂದ್ವಾರ್ಥ- ಅಶ್ಲೀಲ; ನೆಲೆ ಕಳೆದುಕೊಂಡ ನಾಟಕ

Published On :

(ಶ್ರೀವಿಜಯ ಮಹಾಮಂಟಪ)
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.16

ದ್ವಂದ್ವಾರ್ಥ ಹಾಗೂ ಅಶ್ಲೀಲ ಸಂಭಾಷಣೆಗಳು ಮತ್ತು ಅರೆನಗ್ನ ನೃತ್ಯಗಳಿಂದ ಇಂದು ನಾಟಕಗಳು ತಮ್ಮ ನೆಲೆ ಕಳೆದುಕೊಳ್ಳುತ್ತಿವೆ ಎಂದು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಲ್.ಬಿ.ಕೆ. ಆಲ್ದಾಳ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ನಡೆದ ಸಮ್ಮೇಳನದ ಸಂವಾದಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಟಿವಿ ಮತ್ತು ಚಲನಚಿತ್ರಗಳಲ್ಲಿ ಮೂಡಿ ಬರುತ್ತಿರುವ ಅಶ್ಲೀಲ ಸಂಭಾಷಣ ಮತ್ತು ಅರೆನಗ್ನ ನೃತ್ಯಗಳಿಂದ ಪ್ರಭಾವಿತಗೊಂಡು ನಾಟಕ ಮಾಲೀಕರು ಅವುಗಳನ್ನು ನಾಟಕದಲ್ಲಿ ಪ್ರತಿಬಿಂಬಿಸುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಇಂತಹ ದ್ವಂದ್ವಾರ್ಥ ಹಾಗೂ ಅಶ್ಲೀಲ ಸಂಭಾಷಣೆ ಮತ್ತು ಅರೆನಗ್ನ ನೃತ್ಯಗಳಗೆ ಕಡಿವಾಣ ಹಾಕಿ ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವ ಸಾಮಾಜಿಕ ನಾಟಕ ಪ್ರದರ್ಶಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ನಿರ್ಮಾಣ ಮಾಡಬೇಕೆಂದು ನಾಟಕ ಪ್ರದರ್ಶನ ಮಾಡುವ ಮಾಲೀಕರಿಗೆ ಸಲಹೆ ನೀಡಿದರು.
ನಾಟಕ ಶಾಲೆ ಆರಂಭಿಸಿ: ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ನಾಟಕಾರರು ಎಲ್ಲರೂ ಒಗ್ಗೂಡಿ ಒಂದು ಸಂಘ ಸ್ಥಾಪಿಸಿ ಆ ಮೂಲಕ ನಶಿಸಿ ಹೋಗುತ್ತಿರುವ ನಾಟಕ ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸಲು ನಾಟಕ ಶಾಲೆ ಪ್ರಾರಂಭಿಸುವ ಪ್ರಯತ್ನ ಮಾಡಬೇಕೆಂದು ಆಲ್ದಾಳ್ ನಾಟಕರಾರರಿಗೆ ಕರೆ ನೀಡಿದರು.
ಕಿರಿಯ ನಾಟಕಕಾರರಿಗೆ ಮತ್ತು ನಾಟಕ ಕಲಾ ಆಸಕ್ತರಿಗೆ ಮಾರ್ಗದರ್ಶನ, ಸಲಹೆ ನೀಡಲು ತರಬೇತಿ ಕೇಂದ್ರ ಆರಂಭಿಸುವಂತೆ ಪಂಡಿತ ನೆಲ್ಲಗಿ ಅವರ ಕೋರಿಕೆಗೆ ಆಲ್ದಾಳ್ ಪ್ರತಿಕ್ರಿಯಿಸಿ ಈಗಾಗಲೇ ರಂಗಾಯಣ ಗುಲ್ಬರ್ಗದಲ್ಲಿ ತರಬೇತಿ ಕೇಂದ್ರ ಆರಂಭಿಸಲು ನಿರ್ಧರಿಸಿದೆ. ಅದೊಂದು ಉತ್ತಮ ರಂಗ ಕಲೆ ಬೆಳೆಸುವ ಸಂಸ್ಥೆಯಾಗಿದ್ದು, ಅದರಡಿಯಲ್ಲಿ ತರಬೇತಿ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದರು.
ಮಾಧ್ಯಮಗಳಲ್ಲಿ ರಂಗ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಯುವ ನಾಟಕ ಬರಹಗಾರರು ಸಮಾಜದ ಸ್ವಾಸ್ಥವನ್ನು ಕಾಪಾಡುವ ಮತ್ತು ಉತ್ತಮ ಕೌಟುಂಬಿಕ, ಧಾರ್ಮಿಕ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ನಾಟಕ ಬರೆಯಬೇಕು ಎಂದು ಕರೆ ನೀಡಿದರು.
ಸರ್ಕಾರ ಪ್ರೋತ್ಸಾಹಿಸಬೇಕು: ಸರ್ಕಾರಗಳಿಗೆ ದುಂಬಾಲು ಬಿದ್ದಿರುವ ನಾಟಕ ಮಾಲೀಕರಿಗೆ ಮಾತ್ರ ಸರ್ಕಾರ 7 ಲಕ್ಷ ಪ್ರೋತ್ಸಾಹಧನ ನೀಡುತ್ತಿದೆ. ಆದರೆ, ಕರ್ನಾಟಕದ ಗಡಿನಾಡಿಯಲ್ಲಿ 1,008 ಉತ್ತಮ ಸಾಮಾಜಿಕ ನಾಟಕಗಳನ್ನು ಪ್ರದರ್ಶನ ನೀಡಿದ ರೇಣುಕಾ ನಾಟ್ಯ ಸಂಘಕ್ಕೆ ಇದುವರೆಗೂ ಯಾವುದೇ ಪ್ರೋತ್ಸಾಹಧನ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ರಂಗ ಮಾಧ್ಯಮ ಬೆಳೆಯಬೇಕಾದರೆ ಪ್ರೇಕ್ಷಕರೊಂದಿಗೆ ಸರ್ಕಾರದ ನೆರವು ಸಹ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ತಾರತಮ್ಯ ಧೋರಣೆ ಅನುಸರಿಸದೆ ಎಲ್ಲ ರಂಗ ಮಾಧ್ಯಮಗಳಿಗೆ 10 ಲಕ್ಷ ಪ್ರೋತ್ಸಾಹಧನ ಬಿಡುಗಡೆ ಮಾಡುವ ಮೂಲಕ ಅಳಿವಿನ ಅಂಚಿನಲ್ಲಿರುವ ರಂಗ ಕ್ಷೇತ್ರ ಉಳಿಸಬೇಕೆಂದು ಮನವಿ ಮಾಡಿದರು.
ಶಾಲೆಯಲ್ಲೇ ನಾಟಕದ ಗೀಳು: ರಂಗಭೂಮಿ ಆಸಕ್ತಿಗೆ ಕಾರಣ ಕೇಳಿದ ಶಂಕರಯ್ಯ ಘಂಟಿ ಅವರ ಪ್ರಶ್ನಿಗೆ ಪ್ರತಿಕ್ರಿಯೆ ನೀಡಿದ ಆಲ್ದಾಳ್ರು, ಶಾಲೆ ಕಲಿಯುವ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಶಾಲೆಯಲ್ಲಿ ನಡೆಯುತ್ತಿರುವ ನಾಟಕದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅಭಿನಯಿಸಿ ಪ್ರೋತ್ಸಾಹ ಧನ ಪಡೆಯುತ್ತ ರಂಗಭೂಮಿಗೆ ಪ್ರವೇಶ ಮಾಡಿರುವೆ ಎಂದರು.
ಹಲವಾರು ಕಷ್ಟಗಳನ್ನು ಅನುಭವಿಸಿ ಹಿರಿಯ ನಾಟಕ ರಂಗಕರ್ಮಿಯಾಗಿ ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದೆ. ಇಂದು 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ ಜನತೆ ಮುಂದೆ ನಿಂತಿರುವೆ ಎಂದು ತಮ್ಮ ಬದುಕಿನ ಬುತ್ತಿ ಬಿಚ್ಚಿಟ್ಟರು. ಈ ಸಾಧನೆಗೆ ತಮ್ಮ ಧರ್ಮಪತ್ನಿ ಅಮೀನಾ ಬೇಗಂ ಕೊಡುಗೆ ಅಪಾರವಿದೆ. ಬಡತನ ಬವಣೆಯಲ್ಲಿ ತತ್ತರಿಸಿರುವ ತಮ್ಮ ಕುಟುಂಬದ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿಕೊಂಡು ಕೂಲಿ ಮಾಡಿ ಮಕ್ಕಳಿಗೆ ಶಿಕ್ಷಣ ನೀಡಿದ್ದಾಳೆಂದರು.
ಗುಲ್ಬರ್ಗದ ಸೂಫಿ ಖಾಜಾ ಬಂದೇ ನವಾಜರ ಬಗ್ಗೆ ಏಕೆ ನಾಟಕ ಬರೆಯಬಾರದೆಂದು ಕೇಳಿದ ಪ್ರಶ್ನೆಗೆ, ಯುವ ನಾಟಕಾರರು, ನಾಟಕ ಕಲಾವಿದರು ನಾಟಕ ಪ್ರದರ್ಶನಕ್ಕೆ ಸಿದ್ಧಗೊಂಡರೆ ಖಾಜಾ ಬಂದೇ ನವಾಜ ಜೀವನ ಚರಿತ್ರೆ ಕುರಿತಾದ ನಾಟಕ ಕೇವಲ ಎರಡು ತಿಂಗಳಲ್ಲಿ ಬರೆಯುವುದಾಗಿ ಹೇಳಿದರು.
ಹಾವೇರಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ. ಭಾಸ್ಕರ್, ಸಾಹಿತಿ ಡಾ. ವಸಂತ ಕುಷ್ಟಗಿ  ಅವರು ಆಲ್ದಾಳ ಅವರ ಬದುಕು ಮತ್ತು ಬರಹ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಗವೀಶ ಹಿರೇಮಠ, ಎಸ್.ಎನ್. ದಂಡಿನಕುಮಾರ, ನೀಲಾಂಬಿಕಾ ಪೊಲೀಸ್ಪಾಟೀಲ್, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಗಾಯತ್ರಿ ಮಹಾಮುನಿ, ಡಾ. ಶಂಕರ ಬಾಳಿ, ಕಾಶಿನಾಥ ಬಿರಾದಾರ ಇತರರು ಉಪಸ್ಥಿತರಿದ್ದರು. ಮಹಾದೇವ ಕಡಗೋಳ ಸ್ವಾಗತಿಸಿದರು. ಡಾ. ನಾಗಪ್ಪ ಗೋಗಿ ಕಾರ್ಯಕ್ರಮ ನಿರೂಪಿಸಿದರು. ಶಂಕರಲಿಂಗ ಹೆಂಬಾಡಿ ವಂದಿದರು.

ಹಿಂದುವೂ ಅಲ್ಲ- ಮುಸ್ಲಿಂ ಅಲ್ಲ, ನಾನು ಮಾನವ
ಹಿಂದೂ ಧರ್ಮ ಪ್ರಚಾರ, ಹಲವಾರು ಮಠಗಳು ಸೇರಿದಂತೆ ಹಲವಾರು ಹಿಂದೂ ಸಮುದಾಯದ ಪರವಾದ ನಾಟಕಗಳನ್ನು ಬರೆದಿದ್ದೀರಿ. ಆದರೆ, ಮುಸ್ಲಿಂ ಸಮುದಾಯದ ಪರವಾದ ನಾಟಕ ಏಕೆ ಬರೆಯಲಿಲ್ಲ ಎಂದು ಸುಬ್ರಾವ ಕುಲಕರ್ಣಿ ಕೇಳಿದ ಪ್ರಶ್ನೆಗೆ, ಹೆಚ್ಚಾಗಿ ಹಿಂದೂ ಸಮುದಾಯದ ನಾಟಕಗಳನ್ನು ಬರೆದಿರುವೆ, ಮುಸ್ಲಿಂ ಸಮುದಾಯದ ನಾಟಕ ಬರೆದಿದ್ದು ವಿರಳ. ನಾನು ಹಿಂದೂವೂ ಅಲ್ಲ, ಮುಸ್ಲಿಮವೂ ಅಲ್ಲ ಕೇವಲ ಒಬ್ಬ ಮಾನವನಾಗಿ ನಾಟಕ ಬರೆದಿರುವೆ.

ಸಮ್ಮೇಳನದ 13 ನಿರ್ಣಯ
ಸಮ್ಮೇಳನದಲ್ಲಿ ಕೈಗೊಳ್ಳಲಾಗಿರುವ ಪ್ರಮುಖ ನಿರ್ಣಯಗಳ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸಲಾಗುತ್ತದೆ. ಬರುವ ದಿನಗಳಲ್ಲಿ ಈ ನಿರ್ಣಯಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೆಲಸಗಳು ಆಗುವಂತೆ ಆಗ್ರಹಿಸುತ್ತೇವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
1. ಜಿಲ್ಲೆಯ ಜೀವ ನದಿಗಳಾದ ಭೀಮೆ ಮತ್ತು ಕೃಷ್ಣೆಯನ್ನು ಸಂರಕ್ಷಿಸಬೇಕು. ಈ ನದಿಗಳು ಸದಾಕಾಲ ನೀರಿನಿಂದ ಕೂಡಿರಬೇಕು. ನದಿಗಳಲ್ಲಿನ ಮರಳು ಅಕ್ರಮ ಸಾಗಾಟ ಆಗಬಾರದು.
2. ಕೇಂದ್ರ ಸರ್ಕಾರ ಜಾರಿಗೆ ತಂದಿರುವ 371(ಜೆ) ವಿಧಿಗೆ ರಾಜ್ಯ ಸರ್ಕಾರ ಕೂಡಲೇ ನೀತಿ ನಿಯಮಾವಳಿ ತಯಾರಿಸಿ ಸಾಹಿತ್ಯಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಅನುಷ್ಠಾನಕ್ಕೆ ಚಾಲನೆ ನೀಡಬೇಕು
3. ಪಕ್ಕದ ರಾಜ್ಯಗಳ ಗಡಿ ಪ್ರದೇಶಗಳ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆ ಆರಂಭಿಸಬೇಕು. ಗಡಿ ಗ್ರಾಮದ ಶಾಲೆಗಳಲ್ಲಿ ಶಿಕ್ಷಕರ ನೇಮಕ ಮಾಡಿಕೊಂಡು ಕನ್ನಡವನ್ನು ಉಳಿಸುವ ಕಾರ್ಯವಾಗಬೇಕು.
4. ಬಾಲಕಿಯರು, ವೃದ್ಧೆಯರು ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
5. ಗುಲ್ಬರ್ಗ ಜಿಲ್ಲೆಯ ವಿವಿಧೆಡೆ ಸ್ಥಾಪಿತಗೊಳ್ಳುತ್ತಿರುವ ಸಿಮೆಂಟ್ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕು.
6. ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ಕುರಿತು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಮತ್ತು ಅವುಗಳನ್ನು ಸಂರಕ್ಷಿಸಿ ಪ್ರವಾಸಿ ಕೇಂದ್ರಗಳನ್ನಾಗಿಸಬೇಕು.
7. ಗುಲ್ಬರ್ಗದಲ್ಲಿ ರಂಗಾಯಣ ಆರಂಭಕ್ಕೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು.
8. ಕನ್ನಡದಲ್ಲಿ ವಾದ ಮಂಡಿಸಿದ ವಕೀಲರಿಗೆ ಹಾಗೂ ಕನ್ನಡದಲ್ಲೇ ತೀರ್ಪುಗಳನ್ನು ನೀಡಿದ ನ್ಯಾಯಾಧೀಶರಿಗೆ ಸರ್ಕಾರ ಗೌರವಿಸಬೇಕು.
9. ಜಿಲ್ಲಾ ಸಾಹಿತ್ಯ ಸಮ್ಮೇಳನ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡುವಂತೆ ವಿಧಾನಸಭಾ ಮತಕ್ಷೇತ್ರ ಹಾಗೂ ವಲಯ ಮಟ್ಟದ ಸಮ್ಮೇಳನಕ್ಕೂ ಅನುದಾನ ನೀಡುವುದಕ್ಕಾಗಿ ಸರ್ಕಾರ ಆರ್ಥಿಕ ನೆರವು ನೀಡಬೇಕು.
10. ಬೀದರ್ ಮತ್ತು ಗುಲ್ಬರ್ಗ ನಡುವೆ ರೇಲ್ವೆ ಸಂಪರ್ಕ ಕಾರ್ಯ ತುರ್ತಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.
11. ಗುಲ್ಬರ್ಗದಲ್ಲಿ ರೇಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ಮಾಡಬೇಕು.
12. ತೊಗರಿ ಮಂಡಳಿಗೆ ಸ್ವಾಯತ್ತತೆ ಕಲ್ಪಿಸಬೇಕು.
13. ಮಳೆ ನೀರು ಸಂಗ್ರಹ ಹಾಗೂ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ರೈತರ ಹೊಲ ಗದ್ದೆಗಳಿಗೆ ಅನುಕೂಲ ಮಾಡಿಕೊಡುವ, ಅದರ ಆರ್ಥಿಕ ಮಟ್ಟು ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
-ಶಂಕರಬಾಬು ರೆಡ್ಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.