ಗುಲ್ಬರ್ಗಾ

ಸರ್ವಧರ್ಮ ಸಮನ್ವಯದಿಂದ ದೇಶದ ಪ್ರಗತಿ: ಮೋರಾಸ್

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.19
ವಿವಿಧ ಧರ್ಮಗಳ ಜನತೆ ಪರಸ್ಪರ ಪ್ರೀತಿ- ಸಾಮರಸ್ಯದಿಂದ ಜೀವನ ನಡೆಸಿದರೆ ದೇಶ ಅಭಿವೃದ್ಧಿಗೊಳ್ಳುವುದರ ಜತೆಗೆ ಜನರ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಬೆಂಗಳೂರಿನ ಮಹಾ ಧರ್ಮಾಧ್ಯಕ್ಷ ಬರ್ನಾಡ್ ಮೋರಾಸ್ ಅಭಿಪ್ರಾಯಪಟ್ಟರು.
ಗುಲ್ಬರ್ಗದ ಧರ್ಮಕ್ಷೇತ್ರದ ದೈವಾನುಗ್ರಹ ಮಾತೆ ಮರಿಯಳ ನೂತನ ಮಹಾದೇವಾಲಯದಲ್ಲಿ ಆಶೀರ್ವಚನದ ಪ್ರಯುಕ್ತ ಬುಧವಾರ ನಡೆದ ಧರ್ಮ ಮತ್ತು ಸಾಮರಸ್ಯ ಕುರಿತ ಸರ್ವಧರ್ಮಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಧರ್ಮಗಳ ತವರೂರು: ಭಾರತ ವಿವಿಧ ಧರ್ಮಗಳ ತವರೂರು. ಇಲ್ಲಿ ದೇವನೊಬ್ಬ ನಾಮ ಹಲವು. ಎಲ್ಲ ಧರ್ಮದ ಜನತೆ ಅವರವರ ಧರ್ಮದ ದೇವರನ್ನು ಆರಾಧಿಸುತ್ತಾರೆ. ಎಲ್ಲರ ಪ್ರಾರ್ಥನೆ ಸಲ್ಲುವುದು ದೇವನೊಬ್ಬನಿಗೇ ಎಂದರು.
ದೇವರನ್ನು ಪ್ರೀತಿಸಿ ಆರಾಧಿಸುವಂತೆ ಜನತೆ ಪರಸ್ಪರ ಜನರನ್ನು ಪ್ರೀತಿಸಿ ಸಾಮರಸ್ಯದಿಂದ ಜೀವನ ಸಾಗಿಸಿದರೆ ದೇಶ ಮತ್ತು ಧರ್ಮ ಎರಡೂ ಬೆಳವಣಿಗೆ ಹೊಂದಲು ಸಾಧ್ಯ. ಕೇವಲ ಇಂತಹ ಸರ್ವಧರ್ಮಗಳ ಸಮಾವೇಶದಲ್ಲಿ ಪಾಲ್ಗೊಂಡು ಪ್ರವಚನ ಕೇಳಿ ಹೋದರೆ ಸಾಲದು. ಎಲ್ಲರೂ ಸಾಮರಸ್ಯ ಜೀವನ ನಡೆಸಲು ಪಣ ತೊಡಬೇಕೆಂದು ಕರೆ ನೀಡಿದರು.
ಕೆಲವರಿಂದ ಸಾಮರಸ್ಯ ಹಾಳು: ಆಶೀರ್ವಚನ ನೀಡಿದ ಸುಲಫಲ ಮಠದ ಡಾ. ಮಹಾಂತ ಶಿವಾಚಾರ್ಯರು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕ್ರೈಸ್ತರ ಶೈಕ್ಷಣಿಕ ಕ್ರಾಂತಿಯಿಂದಾಗಿ ಇಂದು ರಾಜ್ಯದ ಹಲವಾರು ಮಠಗಳಲ್ಲಿ  ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗಿದೆ. ಅಲ್ಪಸಂಖ್ಯಾತ ಕ್ರೈಸ್ತರ ಅಭಿವೃದ್ಧಿಗೆ ಎಲ್ಲ ಜನಾಂಗದ ಜನತೆ ಸಹಕರಿಸಬೇಕಾಗಿದೆ ಎಂದರು.
ಎಲ್ಲರಲ್ಲಿ ಹರಿದಾಡುವ ರಕ್ತ, ನಡೆದಾಡುವ ಭೂಮಿ, ಉಸಿರಾಡುವ ಗಾಳಿಯೂ ಒಂದೇ. ಹೀಗಾಗಿ ಎಲ್ಲರೂ ಜಾತಿ- ಭೇಧ- ಭಾವ- ತಾರತಮ್ಯ ಮಾಡದೆ ಎಲ್ಲರೂ ಭಾರತೀಯರೆಂದು ಪರಸ್ಪರ ಪ್ರೀತಿ ಸಾಮರಸ್ಯದಿಂದ ನಡೆಯಬೇಕೆಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಬೌದ್ಧ ಬಿಕ್ಕು ಸಂಗಾನಂದ ಬಂತೇಜಿ, ಮುಸ್ಲಿಂ ಧರ್ಮದ ರಿಜವಾನ್, ಹಬೀಬ್, ಗುಲ್ಬರ್ಗ ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆ೤ ಎಚ್.ಪ್ರಭಾಕರ್, ರಾಬರ್ಟ್ ಮೈಕಲ್ ಮಿರಾಂದ, ವಿಕ್ಟರ್ ಮಜಾದೋ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಸೂರಜಸಿಂಗ್ ತಿವಾರಿ ಇತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಸಾಮೂಹಿಕ ನೃತ್ಯ ಪ್ರದರ್ಶಿಸಲಾಯಿತು. ವಿವಿಧ ರಾಜ್ಯ, ಜಿಲ್ಲೆಗಳಿಂದ ಹಲವಾರು ಕ್ರೈಸ್ತ ಧರ್ಮಗುರುಗಳು, ಕ್ರೈಸ್ತ ಬಾಂಧವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.