ಅಕ್ರಮ ಮರಳು: ಡಿಸಿಕಟ್ಟುನಿಟ್ಟಿನ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.21
ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಹಾಗೂ ಸಾಗಣೆ ನಿಯಂತ್ರಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂಬ ಆರೋಪ ಬರುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿಷ್ಕಾಳಜಿಯೇ ಕಾರಣವಾಗಿದೆ. ಆದ್ದರಿಂದ ಇನ್ನು ಮರಳು ಗಣಿಗಾರಿಕೆ ನಡೆದರೆ ಆಯಾ ವ್ಯಾಪ್ತಿಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಯಂತ್ರಿಸಲು ಕಳೆದ ಡಿ.17ರಂದು ದಾಳಿ ನಡೆಸಿ 26 ವಾಹನಗಳನ್ನು ಜಪ್ತಿ ಮಾಡಿ ಕ್ರಿಮಿನಲ್ ಕೇಸ್ಗೆ ಕ್ರಮ ಜರುಗಿಸಲಾಗಿರುತ್ತದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಗಣಿಗಾರಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಮತ್ತೆ ಕ್ರಮ: ಆದರೆ ಇತ್ತೀಚೆಗೆ ಮತ್ತೆ ಅಕ್ರಮ ಮರಳು ಗಣಿಗಾರಿಕೆ ಜಿಲ್ಲೆಯಲ್ಲಿ ನಡೆಯುತ್ತಿರುವ ಬಗ್ಗೆ ಆರೋಪ ಕೇಳಿಬರುತ್ತಿದ್ದು, ಈ ಬಗ್ಗೆ ಮೇಲಿಂದ ಮೇಲೆ ಪರಿಶೀಲಿಸುವ ಹಾಗೂ ಮರಳು ಸಾಗಾಣಿಕೆ ದಾಳಿ ಮಾಡಿ ಅಕ್ರಮ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ನಿಮ್ಮಿಂದ ಈವರೆಗೆ ಜರುಗಿಲ್ಲ. ಮೇಲಿಂದ ಮೇಲೆ ನಿಮಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿದರೂ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸದಿರುವುದರಿಂದ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ಬರಲು ಕಾರಣವಾಗುತ್ತಿದೆ.
ಕರ್ತವ್ಯಲೋಪವಾದ್ರೆ ಇನ್ನು ಸುಮ್ಮನಿರಲ್ಲ: ಆದ್ದರಿಂದ ಈವರೆಗೆ ನಿಮಗೆ ನೀಡಲಾದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಿ, ಅಕ್ರಮ ಮರಳು ಗಣಿಗಾರಿಕೆಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಯಂತ್ರಿಸಲು ಕ್ರಮ ಜರುಗಿಸಲು ಕಟ್ಟುನಿಟ್ಟಾಗಿ ನಿರ್ದೇಶನ ನೀಡುತ್ತಿದ್ದೇನೆ. ಒಂದು ವೇಳೆ ನಿಮ್ಮ ಬದಲಿಗೆ ಬೇರೆ ಅಧಿಕಾರಿಯ ಪರಿಶೀಲನೆಯಿಂದ ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ವರದಿಯಾದ್ರೆ ಅದಕ್ಕೆ ನೀವೇ ನೇರ ಹೊಣೆಗಾರರಾಗುತ್ತೀರಿ. ಕಾರಣ ಇನ್ನು ಮುಂದೆ ಮರಳು ಗಣಿಗಾರಿಕೆ ಬಗ್ಗೆ ತೀವ್ರ ನಿಗಾವಹಿಸಿ, ಅಕ್ರಮ ಸಾಗಾಣಿಕೆ ನಿಮ್ಮ ಕಾರ್ಯವ್ಯಾಪ್ತಿ ಪ್ರದೇಶದಲ್ಲಿ ಜರುಗದಂತೆ ಕ್ರಮ ವಹಿಸಬೇಕೆಂದು ಎಲ್ಲ ತಹಸೀಲ್ದಾರರು, ಸಿಪಿಐಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

