ಗುಲ್ಬರ್ಗಾ

ಇಲ್ಲದಿದ್ದರೆ ಉಪ ಸಮಿತಿ ಸಭೆಗಳಿಗೆ ಧಿಕ್ಕಾರ

Published On :

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಜೂ.23
ಕಲಂ 371(ಜೆ) ಮಸೂದೆ ಹಿನ್ನೆಲೆಯಲ್ಲಿ ವೃತ್ತಿಪರ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳ ಹಂಚಿಕೆಗೆ ಆಗ್ರಹಿಸಿರುವ ಹೈ.ಕ. ಹೋರಾಟ ಸಮಿತಿ ಈ ಬೇಡಿಕೆ ಈಡೇರಿಕೆಗಾಗಿ ಈಗ ಆರಂಭವಾಗಿರುವ ಸಿಇಟಿ ಪ್ರಕ್ರಿಯೆಯನ್ನೇ ಮುಂದೂಡಲು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಭಾನುವಾರ ನಗರದ ಕನ್ನಡ ಭವನದಲ್ಲಿ ಹೈ ಕ. ಹೋರಾಟ ಸಮಿತಿ ಪದಾಧಿಕಾರಿಗಳ, ಈ ಭಾಗದ ಸಿಇಟಿ ಬರೆದ ವಿದ್ಯಾರ್ಥಿಗಳ ಪಾಲಕರು, ಚಿಂತಕರನ್ನೊಳಗೊಂಡು ನಡೆದ ಸಭೆಯಲ್ಲಿ ಈ ಕುರಿತಂತೆ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.
ಸಭೆಯಲ್ಲಿ ಹೋರಾಟ ಸಮಿತಿಯ ರೂವಾರಿ ವೈಜನಾಥ ಪಾಟೀಲ್ ಮಾತನಾಡಿ, ಭಾನುವಾರ ಸಂಜೆಯೇ 371ನೇ (ಜೆ) ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಅವರಿಗೆ ಸಿಇಟಿ ಪ್ರವೇಶಾತಿ ಪ್ರಕ್ರಿಯೆ ತಕ್ಷಣವೇ ಮುಂದೂಡಬೇಕು ಎಂದು ಫ್ಯಾಕ್ಸ್ ಮೂಲಕ ಪತ್ರ ರವಾನಿಸಲಾಗಿದೆ.  ಎಚ್.ಕೆ. ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿ, ಕೂಡಲೇ ಈ ಸಿಇಟಿ ಪ್ರಕ್ರಿಯೆ ಮುಂದೂಡಿಸಿ, ನಂತರವೇ ಈ ಕುರಿತಾದ ಅಭಿಪ್ರಾಯ ಸಂಗ್ರಹಣೆಗೆ ಗುಲ್ಬರ್ಗಕ್ಕೆ ಬರಬೇಕು ಎಂದು ಆಗ್ರಹಿಸಿದರು.
ಎಚ್ಚರಿಕೆ: ಒಂದು ವೇಳೆ ತಕ್ಷಣ ಸಿಇಟಿ ಪ್ರಕ್ರಿಯೆ ಮುಂದೂಡದಿದ್ದರೆ ಹೈ.ಕ. ಭಾಗದಲ್ಲಿ ಸಂಪುಟ ಉಪ ಸಮಿತಿ ಅಭಿಪ್ರಾಯ ಸಂಗ್ರಹಕ್ಕಾಗಿ ಕೈಗೊಳ್ಳುವ ಪ್ರವಾಸವನ್ನು ವಿರೋಧಿಸಿ ಸಮಿತಿ ಹೋಗುವ ಪ್ರತಿಯೊಂದು ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ನಡೆಸುವ ಸಭೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜುಲೈ 2ರಂದು ಸಂಪುಟ ಉಪ ಸಮಿತಿ ಗುಲ್ಬರ್ಗಕ್ಕೆ ಪ್ರವಾಸ ಬೆಳೆಸಿ ಹೋರಾಟಗಾರರ, ಜನರ ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಿದೆ. ಒಂದು ವೇಳೆ ಸಿಇಟಿ ಪ್ರಕ್ರಿಯೆ ಮುಂದೂಡದಿದ್ದರೆ, ಅಂದಿನ ಸಭೆ ನಡೆಯಲು ಬಿಡುವುದಿಲ್ಲ. ಇಲ್ಲಿನ ಜನತೆ, ವಿದ್ಯಾರ್ಥಿಗಳು, ಪಾಲಕರು ಹೋರಾಟಕ್ಕೆ ಇಳಿಯಲಿದ್ದಾರೆ ಎಂದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಅವರು ಹಲವಾರು ಘೋಷಣೆ ಮಾಡಿದ್ದರು. ಡಿಪಿಎಆರ್ ಕಾರ್ಯದರ್ಶಿ ಸಂಜೀವ ಕುಮಾರ ಅಧ್ಯಕ್ಷತೆಯಲ್ಲಿ ನೇಮಿಸಿದ ಅಧಿಕಾರಿಗಳ ಸಮಿತಿ 371(ಜೆ) ವಿಧಿಗೆ ಉತ್ತಮ ನಿಯಮಾವಳಿ ರೂಪಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ, ಅದನ್ನು ಕಾರ್ಯರೂಪಕ್ಕೆ ತರಲು ಹಿಂದೇಟು ಹಾಕುತ್ತಿದ್ದಾರೆ ಎಂದು ವೈಜನಾಥ ಪಾಟೀಲ್ ಆರೋಪಿಸಿದರು.
ನಿಯಮಾವಳಿ: ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿರುವ ಸಂದರ್ಭದಲ್ಲಿಯೇ ಡಿಪಿಎಆರ್ ಕಾರ್ಯದರ್ಶಿ ಸಂಜೀವಕುಮಾರ ಅಧ್ಯಕ್ಷತೆಯಲ್ಲಿ ನೇಮಿಸಿದ ಅಧಿಕಾರಿಗಳ ಸಮಿತಿ 371 (ಜೆ) ವಿಧಿಗೆ ಉತ್ತಮ ನಿಯಮಾವಳಿ ರೂಪಿಸಿ ಶಿಫಾರಸು ಮಾಡಿತ್ತು. ಆಗಲೇ ಶೆಟ್ಟರ್, ಅದನ್ನು ಅಂಗೀಕರಿಸಿ ಕಾನೂನು ರಚನೆಗೆ ಕೇಂದ್ರಕ್ಕೆ ಕಳುಹಿಸಬೇಕಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ವಿಧಾನಸಭೆ ಚುನಾನವಣೆ ಎಂದು ನೆಪವೊಡ್ಡಿ ಮುಂದೂಡುತ್ತಲೇ ಬಂದಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಅದೇ ಧೋರಣೆ ಮುಂದುವರಿಸಬಾರದು ಎಂದರು.
ಆಳಂದ ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ಎಚ್.ಕೆ. ಪಾಟೀಲ್ ಅವರು ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿರುವುದಕ್ಕೆ ಹಲವಾರು ಮುಖಂಡರಿಗೆ ಬೇಸರವಾಗಿದೆ. ಈ ಉಪ ಸಮಿತಿ ರಚನೆ ಮಾಡುವ ಮುಂಚೆ ಈ ಭಾಗದ ಹೋರಾಟಗಾರರಿಗೆ, ಪರಿಣಿತ ತಜ್ಞರ ಸಲಹೆ ಸೂಚನೆ ಪಡೆಯಬೇಕಾಗಿತ್ತು ಎಂದು ಆರೋಪಿಸಿದರು. ನಿವೃತ್ತ ನ್ಯಾಯಾಧೀಶ ಡಾ. ಶಿವರಾಜ ಪಾಟೀಲ್ ಮತ್ತು 371 ಹೋರಾಟದ ರೂವಾರಿ ವೈಜನಾಥ ಪಾಟೀಲ್ ಸೇರಿದಂತೆ ಈ ಭಾಗದ ಹಲವಾರು ಹೋರಾಟರಾರರಿಗೆ ಸಮಿತಿಯಲ್ಲಿ ಸೇರ್ಪಡೆ ಮಾಡಿಕೊಂಡು ಅವರೊಂದಿಗೆ ಸಮಾಲೋಚನೆ ನಡೆಸಿ ನಂತರ ಸಂಪುಟ ಉಪ ಸಮಿತಿ ಅಭಿಪ್ರಾಯ ಸಂಗ್ರಹಿಸಲು ಪ್ರವಾಸ ಕೈಗೊಳ್ಳುವುದು ಸೂಕ್ತ ಎಂದರು.
ಸಭೆಯಲ್ಲಿ ಡಾ. ವಸಂತ ಕುಷ್ಟಗಿ, ಪ್ರೊ. ಹುಡಗಿ, ಉಮಾಕಾಂತ ನಿಗ್ಗುಡಗಿ, ಶಿಮರಾಮ ಮೋಘ, ಅಲ್ಲಮ ಬೆಟ್ಟದೂರ, ಬಸವರಾಜಪ್ಪ, ನ್ಯಾಯವಾದಿ ರಜಾಕ್, ವೆಂಕಟರೆಡ್ಡಿ ಮುದ್ನಾಳ, ಸುರೇಶ ಸಜ್ಜನ್, ಲಕ್ಷ್ಮಣರಾವ್ ಗೋಗಿ, ಎಂ.ಎಸ್. ಪಾಟೀಲ್ ನರಿಬೋಳ, ಎಂ.ಬಿ. ಅಂಬಲಗಿ ಸೇರಿದಂತೆ ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳ ಹೈ.ಕ. ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಹಲವಾರು ಹೋರಾಟಗಾರರು, ನ್ಯಾಯವಾದಿಗಳು ಮತ್ತು ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.