ಗುಲ್ಬರ್ಗಾ

ಆಸ್ಪತ್ರೆ, ತಹಸೀಲ್ದಾರ್ ಕಚೇರಿಗೆ ಶಾಸಕರ ದಿಢೀರ್ ಭೇಟಿ

Published On :

ಕ.ಪ್ರ. ವಾರ್ತೆ   ಚಿತ್ತಾಪುರ  ಜೂ. 24
ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ತಹಸೀಲ್ದಾರ್ ಕಚೇರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ದಿಢೀರ್ ಭೇಟಿ ನೀಡಿ ವೈದ್ಯಾಧಿಕಾರಿ ಹಾಗೂ ಆಹಾರ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಅವರು ತಾಲೂಕಿನಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸದೇ ಗೈರು ಹಾಜರಾಗುವುದರಿಂದ ಅನೇಕ ಜನರು ಚಿಕಿತ್ಸೆಯಿಂದ ವಂಚಿತರಾಗುತ್ತಿರುವ ಬಗ್ಗೆ ದೂರು ಬಂದ ಕಾರಣ ತಾಲೂಕು ಆರೋಗ್ಯಧಿಕಾರಿ, ತಾಪಂ ಅಧಿಕಾರಿಗಳ ಜತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯನ್ನು ಕಂಡು ಆರೋಗ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಸಮರ್ಪಕ ಚಿಕಿತ್ಸೆ ನೀಡಿ: ಬಡವರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಮಾಡಬೇಕು. ಶ್ರೀಮಂತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಬಡವರಿಗೆ ಇದು ಸಾಧ್ಯವೇ ಎಂದು ಪ್ರಶ್ನಿಸಿ, ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗೆ ಬೇಕಾಗುವ ಸೌಲಭ್ಯ ಬಗ್ಗೆ ತಕ್ಷಣ ಮಾಹಿತಿ ನೀಡಲು ಸೂಚಿಸಿದರು.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರದಲ್ಲಿ ಇದ್ದು, ಸೇವೆ ಸಲ್ಲಿಸುವಂತೆ ನೋಡಿಕೊಳ್ಳಬೇಕು. ತಪ್ಪಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿ, ಇವುಗಳನ್ನು ಎಷ್ಟು ದಿನದಲ್ಲಿ ಮಾಡುವಿರಿ ಎಂದು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ತಾಲೂಕು ಆರೋಗ್ಯಾಧಿಕಾರಿ ಪ್ರಭುಲಿಂಗ ಮಾನಕರ್, 10 ದಿನದಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವರದಿ ಸಂಗ್ರಹಿಸಿ ಸಲ್ಲಿಸುವುದಾಗಿ ತಿಳಿಸಿದರು.
ಪಡಿತರ ಕಾರ್ಡ್: ನಂತರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ಪಡಿತರ ಕಾರ್ಡ್ ನೋಂದಣಿಯನ್ನು ಆಯಾ ಗ್ರಾಪಂಗಳಲ್ಲಿ ಮಾಡಬೇಕು. ಆದರೆ ಚಿತ್ತಾಪುರದಲ್ಲಿ ಖಾಸಗಿಯವರಿಂದ ಪಡಿತರ ನೋಂದಣಿ ಮಾಡಿ ಬಡವರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆಹಾರ ನಿರೀಕ್ಷಕ ಸೂರ್ಯಕಾಂತ ಪುಲಾರಿ ಅವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಪಡಿತರ ನೋಂದಣಿಗೆ ಸರ್ಕಾರ ನೀಡುವ ಗುಪ್ತ ಸಂಖ್ಯೆ ಸೋರಿಕೆಯಾಗಿ ಸಿಕ್ಕ ಸಿಕ್ಕವರು ಇದರ ದುರುಪಯೋಗ ಪಡಿಸಿಕೊಂಡು ಬಡವರಿಂದ ಲೂಟಿ ಮಾಡಿದರೂ, ಕ್ರಮ ಕೈಗೊಳ್ಳದೆ ಇರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ತಹಸೀಲ್ದಾರರಿಗೆ, ಪಡಿತರ ನೋಂದಣಿ ಜೂ. 30ಕ್ಕೆ ಕೊನೆಗೊಳ್ಳುವುದು. ಆದರೆ, ನೀವು ಶೇ. 50ರಷ್ಟೂ ಕಾರ್ಡ್ ನೋಂದಣಿ ಮಾಡಿಲ್ಲ. ಇನ್ನು ಉಳಿದ ಅವಧಿಯಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದರು. ಈಗ ಉಳಿದಿರುವ ಅವಧಿಯಲ್ಲಿ ಗುರಿ ನಿಗದಿ ಮಾಡಿ ಎಲ್ಲರಿಗೂ ಪಡಿತರ ಕಾರ್ಡ್ ಸಿಗುವಂತೆ ಮಾಡಲು ತಾಕೀತು ಮಾಡಿದರು.  ಎರಡು ವರ್ಷ ಮೇಲ್ಪಟ್ಟ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್‌ಗಳನ್ನು ತಕ್ಷಣವೇ ವರ್ಗಾವಣೆ ಮಾಡಲು ಸ್ಥಳದಲ್ಲಿದ್ದ ತಾಪಂ ಇಓ ಸುರೇಶ ಬಿರಾದಾರಗೆ ಸೂಚಿಸಿದರು.
ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯ ರಮೇಶ ಮರಗೋಳ, ಇಬ್ರಾಹಿಂ ಪಟೇಲ್, ಶ್ರೀನಿವಾಸ ಸಗರ, ಸೋಮಶೇಖರ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಕಾಶಿ, ಶರಣಪ್ಪ ಹೊಸೂರು, ಶರಣಗೌಡ ಭೀಮನಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.