ಮಾದಕ ದ್ರವ್ಯ ವಿರೋಧಿ ದಿನಾಚರಣೆ
ಯಾದಗಿರಿ: ತಾಲೂಕಿನ ಸೈದಾಪುರ ಠಾಣೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಪಿಎಸ್ಐ ವೀರಣ್ಣ ದೊಡ್ಡಮನಿ ಮಾತನಾಡಿ, ಉತ್ತಮ ನಾಗರಿಕರಾಗಲು ಮಕ್ಕಳು ಒಳ್ಳೆಯ ಹವ್ಯಾಸಗಳು ಬೆಳೆಸಿಕೊಳ್ಳಬೇಕು. ಆರೋಗ್ಯದ ಮೇಲೆ ಪರಿಣಾಮ ಭೀರುವಂಥ ಯಾವದೇ ವಸ್ತುಗಳ ವ್ಯಸನಿಗಳಾಗಬಾರದು. ಇದರಿಂದ ವ್ಯಕ್ತಿಗತ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇದರ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಬೇಕು. ಆ ಮೂಲಕ ಅವರನ್ನು ದೇಶದ, ನಾಡಿನ, ಗ್ರಾಮದ ಉತ್ತಮ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ನ್ಯಾಯವಾದಿ ಭೀಮರೆಡ್ಡಿ ಪಾಟೀಲ ಶೆಟ್ಟಳ್ಳಿ, ಭೀಮಶಪ್ಪ ಜೇಗರ, ಶ್ರೀಪಾಲರೆಡ್ಡಿ, ಗಾಂಧಿ ವಂಕಸಂಬ್ರ ಇದ್ದರು. ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ವಿದ್ಯಾ ವರ್ಧಕ ಪ್ರೌಢಶಾಲೆ ಮಕ್ಕಳಾದ ದೇವರಾಜ ರಂಗಣ್ಣ ಪ್ರಥಮ, ತಾಯಪ್ಪ ಚಂದ್ರಪ್ಪ ದ್ವಿತೀಯ, ಸುಪ್ರೀಯ ವಿಶ್ವನಾಥ ತೃತೀಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಾದ ನಾಜನೀನ ಸಿರಾಜಪಾಶಾ ಪ್ರಥಮ, ಮಯೂರ ಯಂಕಾರೆಡ್ಡಿ ದ್ವಿತೀಯ, ಪ್ರಕಾಶ ಸೈದಪ್ಪ ತೃತೀಯ ಸ್ಥಾನಗಳನ್ನು ಪಡೆದರು. ಈ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಇದಕ್ಕೂ ಮುನ್ನ ಗ್ರಾಮದಲ್ಲಿ ಮಾದಕ ದ್ರವ್ಯದ ಬಗ್ಗೆ ಅರಿವು ಮೂಡಿಸುವ ಜಾಥಾ ನಡೆಸಲಾಯಿತು. ಶಿಕ್ಷಕರಾದ ಬಸರೆಡ್ಡಿ ಸಾವೂರ, ಸೋಮರೆಡ್ಡಿ, ಕಾಶಿನಾಥ, ವಿಶ್ವನಾಥ ಕಣೇಕಲ್, ಶಂಕರಪ್ಪ ಬದ್ದೇಪಲ್ಲಿ, ಶಿವಕುಮಾರ ಮುನಗಲ ಇದ್ದರು. ಜಿಂದಾವಲಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಬಳೆ ನಿರೂಪಿಸಿದರು.
ಕೊಳೆತ ಸ್ಥಿತಿಯಲ್ಲಿ
ಶವ ಪತ್ತೆ, ಕೊಲೆ?
ಕೆಂಭಾವಿ: ಇಲ್ಲಿಗೆ ಸಮೀಪದ ಚಿಗರಿಹಾಳ ಗ್ರಾಮದ ಜಮೀನೊಂದರಲ್ಲಿ ವ್ಯಕ್ತಿಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಲಾಗಿದೆ. ಮಲಕಪ್ಪ ಸಿದ್ದಪ್ಪ ಕರ್ನಾಳ(32) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆಯೇ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೀನು ಹಿಡಿಯಲು ಬಂದ ವೇಳೆ ಈತನನ್ನು ಕೊಲೆ ಮಾಡಲಾಗಿದೆ. ಗುರುವಾರ ಸಾರ್ವಜನಿಕರಿಗೆ ಶವ ಪತ್ತೆಯಾಗಿ ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ. ಶಹಾಪುರ ತಾಲೂಕಿನ ವನದುರ್ಗ ಗ್ರಾಮದಿಂದ ಸೋಮವಾರ ಬೆಳಗ್ಗೆ ಹೊರಟ ಮಲಕಪ್ಪ ಹಾಗೂ ಅವನ ಸಂಗಡಿಗ ಲಕ್ಷ್ಮಣ ಬೆಟಗೇರಿ ಎಂಬವರು ಬಂದಿದ್ದು, ಇಬ್ಬರ ನಡುವೆ ಜಗಳವಾಗಿ ನಂತರ ಕೊಲೆಯಲ್ಲಿ ಅಂತ್ಯವಾಗಿದೆ. ಲಕ್ಷ್ಮಣ ಎಂಬ ಯುವಕ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈಗ ಆತ ತಲೆಮರೆಸಿಕೊಂಡಿದ್ದು ಶಂಕಿತ ಆರೋಪಿಯ ಪತ್ತೆಗಾಗಿ ವ್ಯಾಪಕ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ ಹಾಗೂ ಸಿಪಿಐ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲಿಸಿದರು. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

