ಗೆಳೆಯನನ್ನೇ ದೋಚಿದ ಖದೀಮ ಈಗ ಪೊಲೀಸ್ ಅತಿಥಿ
ಕ.ಪ್ರ. ವಾರ್ತೆ ಗುಲ್ಬರ್ಗ ಜೂ.29
ಸಾಲದ ಸುಳಿಯಿಂದ ಹೊರಬರಲು ಗೆಳೆಯನೋರ್ವ ಖದೀಮರೊಂದಿಗೆ ಸೇರಿಕೊಂಡು ಸಂಚು ರೂಪಿಸಿ ಬಾಲ್ಯದ ಗೆಳೆಯನನ್ನೇ ದೋಚಿ ಇದೀಗ ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಪೊಲೀಸ್ ಅತಿಥಿಯಾದ ಪ್ರಸಂಗ ಗುಲ್ಬರ್ಗದಲ್ಲಿ ನಡೆದಿದೆ.
ಬಾಲ್ಯದ ಸ್ನೇಹಿತನನ್ನೇ ದೋಚಿರುವ ಖದೀಮ ಅಯ್ಯರವಾಡಿ ನಿವಾಸಿ, ವಿದ್ಯಾರ್ಥಿ ಶ್ರೀಕಾಂತ ಅಶೋಕ ಚವ್ಹಾಣ್ (23). ಈತ ರೂಪಿಸಿದ್ದ ಸಂಚಿಗೆ ಬಲಿಪಶುವಾದದ್ದು ಅಯ್ಯರವಾಡಿ ಬಡಾವಣೆಯ ವಿದ್ಯಾರ್ಥಿ ಆನಂದ ಲಕ್ಷ್ಮಣ ಚವ್ಹಾಣ್ (23).
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಶ್ರೀಕಾಂತ ಕೈಸುಟ್ಟುಕೊಂಡಿದ್ದ. ಮನೆಯಲ್ಲಿ ವಿಷಯ ಗೊತ್ತಾಗಿತ್ತು. ಹೇಗೋ 3ಲಕ್ಷ ಹೊಂದಿಸಿದ್ದ ಪೋಷಕರು ಸಾಲ ತೀರಿಸಿದ್ದರು. ಶ್ರೀಕಾಂತ ಹೆಚ್ಚಿನ ಸಾಲದಿಂದ ಹೊರಬರಲು 2ನೇ ತರಗತಿಯಿಂದ ಗೆಳೆಯನಾಗಿದ್ದ ಆನಂದದನ್ನೇ ಸುಲಿಗೆ ಮಾಡಲು ಖತರನಾಕ್ ಐಡಿಯಾ ರೂಪಿಸಿದ. ಇಲ್ಲಿನ ರಿಂಗ್ ರಸ್ತೆಯ ಇಂಜಿನಿಯರ್ಸ್ ಕ್ಲಬ್ ಹತ್ತಿರ ಕಳೆದ 24ರಂದು ಸುಲಿಗೆ ಘಟನೆ ಸಂಭವಿಸಿ ಆನಂದ ಸುಲಿಗೆಕೋರರಿಂದ ಚಾಕು ಇರಿತಕ್ಕೊಳಗಾಗಿ ಚಿನ್ನಾಭರಣ, ಹಣ ಎಲ್ಲವನ್ನು ಕಳೆದುಕೊಂಡಾಗ ಶ್ರೀಕಾಂತ ಜೊತೆಗೆ ಇದ್ದು ಸಾಂತ್ವನ ಹೇಳಿದ್ದ. ಅಷ್ಟೆ ಅಲ್ಲ, ಆನಂದನೊಂದಿಗೆ ಸೇರಿಕೊಂಡು ವಿಶ್ವವಿದ್ಯಾಲಯ ಠಾಣೆಗೆ ಹೋಗಿ ಖದೀಮರ ಗುಂಪು ದಾಳಿ ಮಾಡಿದೆ, ಸುಲಿಗೆ ಮಾಡಿದ್ದಾರೆ ಎಂದು ತನ್ನನ್ನು ಒಳಗೊಂಡಂತೆ ದೂರು ದಾಖಲಿಸಿದ್ದ.
ಖದೀಮನನ್ನು ಮಾತಿನಲ್ಲೇ ಗುರುತಿಸಿದ್ರು ಪೊಲೀಸ್ರು: ಜೂನ್ 24ರ ರಾತ್ರಿ ತಮ್ಮ ಮೇಲೆ ದಾಳಿ ನಡೆದು ಲಕ್ಷಾಂತರ ರುಪಾಯಿ ಸುಲಿಗೆಯಾಯ್ತು ಎಂದು ಶ್ರೀಕಾಂತ, ಆನಂದ ಇವರ ದೂರು ದಾಖಲಿಸಿಕೊಂಡ ವಿವಿ ಪಿಐ ಪ್ರದೀಸ ಬೀಸೆ ಹಾಗೂ ಸಿಬ್ಬಂದಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಫಿರ್ಯಾದಿ ಶ್ರೀಕಾಂತ ಹಾಗೂ ಆನಂದನ ಹೇಳಿಕೆಗಳಲ್ಲಿ ಸಾಮ್ಯತೆ ಕಂಡಿಲ್ಲ. ಮೇಲಾಗಿ ಆನಂದನಿಗೆ ಕೈಗೆ ಚಾಕು ಇರಿತದ ಗಾಯವಾಗಿದೆ, ಶ್ರೀಕಾಂತನಿಗೆ ಯಾವುದೇ ಗಾಯವಾಗಿಲ್ಲ, ಆತನ ಬಳಿಯಲ್ಲಿದ್ದ ಮೊಬೈಲ್, ಬಂಗಾರ ಯಾವುದೂ ಕಳವಾಗಿಲ್ಲ. ಇದೆಲ್ಲವೂ ಪೊಲೀಸರಿಗೆ ಶ್ರೀಕಾಂತನ ಮೇಲೆಯೇ ಶಂಕೆ ಬಲಗೊಳಿಸಿವೆ. ಇನ್ನೇಕೆ ತಡ ಎಂದು ಪೊಲೀಸರು ಜೂನ್ 28ರ ಶನಿವಾರ ನೋಟೀಸ್ ಕೊಟ್ಟು ಶ್ರೀಕಾಂತನಿಗೂ ವಿಚಾರಣೆಗೊಳಪಡಿಸಿದಾಗ ಗೆಳೆಯ ಖದೀಮರೊಂದಿಗೆ ಸೇರಿಕೊಂಡು ಸುಲಿಗೆ ಮಾಡಿದ ಸಂಚು ಬಯಲಾಗಿದೆ.
ಮದ್ಯ ಕುಡಿಸಿ ಸುಲಿಗೆ: ಸಾಲದ ಸುಳಿಯಿಂದ ಹೊರಬರಲು ಶ್ರೀಕಾಂತ ಚವ್ಹಾಣ್ ಈತ ಗಂಜ್ ಬಡಾವಣೆಯ ಗೆಳೆಯ ಅಭಿಷೇಕ ಪಾಟೀಲ್ (23, ವಿದ್ಯಾರ್ಥಿ), ಆಟೋ ಚಾಲಕ ಅಯ್ಯರವಾಡಿಯ ರವಿ ಅರ್ಜುನ ಕಂಡೇಕರ್ (42), ಸೆಂಟ್ರಿಂಗ್ ಕೆಲಸಗಾರ, ಅಯ್ಯರವಾಡಿಯ ಕೃಷ್ಣ ಜಾಧವ (24) ಇವರೊಂದಿಗೆ ಕೂಡಿಕೊಂಡು ಆನಂದನಿಗೆ ಸುಲಿಗೆ ಮಾಡಲು ಮುಂದಾಗಿದ್ದಾನೆ. ಆನಂದನನ್ನು ಕರೆದುಕೊಂಡು ಇವರೆಲ್ಲರೂ ಜೇವರ್ಗಿ ರಸ್ತೆ ಬಾರ್ಗೆ ಹೋಗಿ ಪಾನಗೋಷ್ಠಿ ಮಾಡಿದ್ದಾರೆ. ಗೋಷ್ಠಿಯ ಮಧ್ಯೆ ಅಭಿಷೇಕ ಪಾಟೀಲ್ ಈತ ಊಟ ಮಾಡದೆ ಕೆಲಸವಿದೆ ಎಂದು ಎದ್ದು ಹೋಗಿದ್ದಾನೆ. ಯೋಜನೆಯಂತೆ ರವಿ ಕಂಡೇಕರ್, ಕೃಷ್ಣ ಜಾಧವ ಜೊತೆಗೂಡಿಕೊಂಡು ಇಂಜಿನಿಯರ್ಸ್ ಕ್ಲಬ್ ಕತ್ತತಲ್ಲಿ ಕುಳಿತಿದ್ದಾರೆ.
ಇತ್ತ ಪಾನಗೋಷ್ಠಿ, ಊಟ ಮುಗಿಸಿಕೊಂಡು ಶ್ರೀಕಾಂತ, ಆನಂದ ಜೊತೆಗೂಡಿಕೊಂಡು ಬೈಕ್ನಲ್ಲಿ ಹೊರಟಿದ್ದಾರೆ. ಬೈಕ್ ಚಾಲನೆ ಮಾಡುವಾಗಲೇ ಶ್ರೀಕಾಂತ ಮೂತ್ರವಿಸರ್ಜನೆ ನೆಪ ಒಡ್ಡಿ ಇಂಜಿನಿಯರ್ಸ್ ಕ್ಲಬ್ ಬಳಿ ಬೈಕ್ ನಿಲ್ಲಿಸಿದ್ದಾನೆ. ಇದೇ ಸಮಯಕ್ಕೆ ಹೊಂಚು ಹಾಕಿ ಕುಳಿತಿದ್ದ ಖದೀಮರು ಚಾಕು ಹಿಡಿದು ಆನಂದನ ಮೇಲೆ ದಾಳಿ ಮಾಡಿದ್ದಾರೆ. ಕೆಳಗೆ ಬೀಳಿಸಿ ಚಿನ್ನಾಭರಣ ಎಲ್ಲವನ್ನು ದೋಚಿದ್ದಾರೆ.
ಸಿಸಿ ಟಿವಿ, ಮೊಬೈಲ್ ಸಾಕ್ಷ್ಯ: ಸದರಿ ಘಟನೆಯಲ್ಲಿ ವಿವಿ ಪೊಲೀಸರು ಬಾರ್ನಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿ ನೋಡಿ ಸದರಿ ಘಟನೆಯ ಹಿಂದಿನ ಖದೀಮರ ಕರಾಮತ್ತು ಧೃಢಪಡಸಿದ್ದಾರಲ್ಲದೆ ಮೊಬೈಲ್ ಕರೆಗಳಿಂದಲೂ ಖದೀಮರ ಸಂಚು, ಸಂಬಂಧಗಳು ಬಯಲಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ ಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ಪ್ರಕರಣದ ತನಿಖೆಯ ಹಂತಗಳನ್ನು ವಿವರಿಸುತ್ತ ಪೊಲೀಸರಿಗೆ ಹಾಗೂ ಮಾರ್ಗದರ್ಶನ ನೀಡಿರುವ ಅಧಿಕಾರಿಗಳ ತಂಡದ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಸದರಿ ಅಪರಾಧ ಘಟನೆಯ ಜಾತಕ ಜಾಲಾಡುವಲ್ಲಿ ಎಂಬಿ ನಗರ ಸಿಪಿಐ ಬಸವರಾಜ ತೇಲಿ, ವಿವಿ ಠಾಣೆ ಪಿಎಸ್ಐ ಪ್ರದೀಪ ಬೀಸೆ, ಗೋಪಾಲ ರಾಠೋಡ, ಎಂಬಿ ನಗರದ ತಿಮ್ಮಣ್ಣ ಚಾಮನೂರ್, ಫರತಾಬಾದ್ ಪಿಎಸ್ಐ ಪರಶುರಾಮ ಮನಗೂಳಿ, ಸಿಬ್ಬಂದಿ ಶಿವಪುತ್ರಸ್ವಾಮಿ, ಶಂಕರ, ಅಣ್ಣಪ್ಪ, ಮನೋಹರ, ರಫೀಕ್, ಅಶೋಕ, ಆನಂದ, ಮಶಾಕ್, ಅರ್ಜುನ, ವೀರಶೆಟ್ಟಿ, ಹಣಮಂತ, ಮಲ್ಲೀನಾಥ, ತಾರಾಸಿಂಗ್, ವೇರತ್ನಂ ಪಾಲ್ಗೊಂಡಿದ್ದರು.
ವಶಪಡಿಸಿಕೊಂಡ ವಸ್ತುಗಳು: 25 ಗ್ರಾಂ ಚಿನ್ನದ ಬ್ರಾಸಲೆಟ್, 2ಮೋಟರ್ ಬೈಕ್, 5ಮೊಬೈಲ್, 2 ಚಾಕು ಒಟ್ಟು 2.50ಲಕ್ಷ ಮೌಲ್ಯದ ವಸ್ತುಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

