ಗುಲ್ಬರ್ಗಾ

ಪೇದೆಯಿಂದ ಅಮಾಯಕನ ಥಳಿತ: ಸಂಬಂಧಿಕರ ಪ್ರತಿಭಟನೆ

Published On :

ಶಹಾಪುರ: ಭಿಮರಾಯನಗುಡಿ ಠಾಣೆಯ ಪೊಲೀಸ್ ಪೇದೆಯೊಬ್ಬರು ಅಮಾಯಕ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ತಪ್ಪಿತಸ್ಥ ಪೇದೆಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಹಲ್ಲೆಗೊಳಗಾದ ವ್ಯಕ್ತಿಯ ಸಂಬಂಧಿಕರು ಭಾನುವಾರ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
  ಪರಶುರಾಮ ಎಂಬ ಪೇದೆ ಕ್ಷುಲ್ಲಕ ಕಾರಣವೊಂದನ್ನು ನೆಪಮಾಡಿಕೊಂಡು ಏವೂರು ಗ್ರಾಮದ ತನ್ನ ಸಂಬಂಧಿಕರಿಬ್ಬರೊಂದಿಗೆ ಕೂಡಿಕೊಂಡು ತಾಲೂಕಿನ ಶಖಾಪುರ ಗ್ರಾಮದ ನಾಗಪ್ಪಗೌಡ ತಂದೆ ಸಂಗಪ್ಪಗೌಡ ಎಂಬ ಅಮಾಯಕನನ್ನು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಖಂಡಿಸಿ ಭೀ.ಗುಡಿ ಪೊಲೀಸ್ ಠಾಣೆಯ ಮುಂದೆ ಭಾನುವಾರ ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆದು ಪೇದೆ ಪರಶುರಾಮನನ್ನು ಕೂಡಲೇ ಅಮಾನತು ಗೊಳಿಸಬೇಕು ಮತ್ತು ಆತನ ಸಂಬಂಧಿಕರಾದ ಇನ್ನಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ಪೇದೆ ಪರಶುರಾಮನ ಮೇಲೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಭೀಗುಡಿ ಠಾಣೆಯಲ್ಲಿ ದೂರು ನೀಡಿರುವ ನಾಗಪ್ಪಗೌಡನ ಸಹೋದರ ಸಾಹೇಬಗೌಡ ವಿವರ ನೀಡಿದ್ದು, ಜೂ.29ರಂದು ರಾತ್ರಿ 9-30ರ ವೇಳೆಗೆ ಪೇದೆ ಪರಶುರಾಮ ಮತ್ತು ಇನ್ನಿಬ್ಬರು ನನ್ನ ತಮ್ಮ ನಾಗಪ್ಪಗೌಡನನ್ನು ಊಟಕ್ಕೆ ದಾಬಾಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಕಾನೂನು ಕೈಗೆತ್ತಿಕೊಂಡು ಥಳಿಸಿ ರಕ್ತಸಿಕ್ತವಾಗಿದ್ದ ನಾಗಪ್ಪಗೌಡನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಈ ಸುದ್ದಿ ತಿಳಿದ ಗ್ರಾಮದ ಈರಪ್ಪ, ರಾಘವೇಂದ್ರ, ಸಿದ್ದಪ್ಪ ತಕ್ಷಣವೇ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ನಾಗಪ್ಪಗೌಡನನ್ನು ಬಿ.ಗುಡಿ ಠಾಣೆಗೆ ಕರೆದುಕೊಂಡು ಬಂದಾಗ ಅಲ್ಲಿಯೇ ಇದ್ದ ಪೇದೆ ಪರಶುರಾಮ ದರ್ಪ ತೋರಿಸಿದ್ದು, ಕಾನೂನನ್ನು ರಕ್ಷಣೆ ಮಾಡುವ ಪೊಲೀಸರೇ ಗೂಂಡಾಗಿರಿಗಿಳಿದಿರುವುದು ದಂಗುಬಡಿಸಿದೆ ಎಂದು ತಿಳಿಸಿದ್ದಾರೆ. ಈ ಕುರಿತು ತಕ್ಷಣವೇ ಪೇದೆ ಪರುಶುರಾಮ, ಇನ್ನಿಬ್ಬರ ಮೇಲೆ ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮರಿಗೌಡ ಹುಲ್ಕಲ್, ಧರ್ಮಣ್ಣ ಹೋತಪೇಟ, ಶಿವಮಹಾಂತ ಚಂದಾಪುರ, ನಾಗಪ್ಪಗೌಡನ ಕುಟುಂಬದವರು ಅನೇಕರು ಇದ್ದರು. ಪ್ರತಿಭಟನೆಗೆ ಸ್ಪಂದಿಸಿದ ಅಧಿಕಾರಿಗಳು ಪೇದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.