ಮತ ಮನೆ ಮಗಳಿದ್ದಂತೆ, ಯೋಗ್ಯರಿಗೆ ಮಾತ್ರ ಕೊಡಿ..
ಯಾದಗಿರಿ: ಮತ ಎನ್ನುವುದು ಮನೆಯ ಮಗಳಿದ್ದಂತೆ. ಮಗಳನ್ನು ಮದುವೆ ಮಾಡಿಕೊಡುವಾಗ ಯೋಗ್ಯ ವರನನ್ನು ಆಯ್ಕೆ ಮಾಡುವಂತೆ ಮತದಾನ ಮಾಡುವಾಗಲೂ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯ. ಆಸೆ ಆಮಿಷಗಳಿಗೆ ಬಲಿಯಾಗದೇ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕು ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ಕರೆ ನೀಡಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಶನಿವಾರ ಜಿಲ್ಲಾ ಪ್ರಗತಿಪರ ವಿಚಾರ ವೇದಿಕೆ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಯಾವ ರಾಜಕೀಯ ಪಕ್ಷವೂ ಆರೋಪಗಳಿಂದ ಮುಕ್ತವಲ್ಲ. ರಾಜಕೀಯ ಕಲುಷಿತಗೊಳ್ಳುತ್ತಿರುವ ಈ ದಿನಗಳಲ್ಲಿ ಮತದಾರ ಎಚ್ಚೆತ್ತುಕೊಳ್ಳಬೇಕು. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಣಕ್ಕೆ ಮಾರಿಕೊಳ್ಳಬಾರದು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ನಗರ ಸ್ಥಳೀಯ ಸಂಸ್ಥೆ ಹಾಗೂ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ನಮ್ಮ ಮತವನ್ನು ಯೋಗ್ಯ ಹಾಗೂ ಪ್ರಾಮಾಣಿಕ ವ್ಯಕ್ತಿಗೆ ಕೊಡಬೇಕು ಎಂದು ಮನವಿ ಮಾಡಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಬೀಳದ ಹೊರತು ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಭ್ರಷ್ಟಾಚಾರ ಮಟ್ಟಹಾಕಲು ಸಮಾಜದಲ್ಲಿ ಪರಿವರ್ತನೆ ಆಗಬೇಕು. ಅದಕ್ಕಾಗಿ ಇಂತಹ ಪ್ರಗತಿಪರ ವಿಚಾರ ವೇದಿಕೆಗಳು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಚುನಾವಣಾ ವ್ಯವಸ್ಥೆಯಲ್ಲಿ ಸುದಾರಣೆ ತರಬೇಕು. ಮಠಾಧೀಶರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಪರಿವರ್ತನೆ ಮೊದಲು ನಮ್ಮಿಂದ ಹಾಗೂ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಮತದಾನದ ಹಕ್ಕನ್ನು ಸರಿಯಾಗಿ ಚಲಾಯಿಸಬೇಕೆಂದು ಹೇಳಿದರು.
ಮಾಜಿ ಸಚಿವ ಮದನಗೋಪಾಲ ನಾಯಕ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಮತ ಕೇಳುವ ನೈತಿಕ ಹಕ್ಕಿಲ್ಲ. ಜಿಲ್ಲೆಯ ಯಾವುದೇ ಪಟ್ಟಣಗಳಿಗೆ ತೆರಳಿದರೂ ಅಲ್ಲಿ ಚರಂಡಿ, ರಸ್ತೆ, ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಜಿಲ್ಲೆಯಾದರೂ ಅಭಿವೃದ್ಧಿ ಮಾತ್ರ ಶೂನ್ಯ. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡರಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಅನ್ಯಾಯವಾಗಿದೆ. ಅನುದಾನ ದುರ್ಬಳಕೆ ಆದರೂ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಿಲ್ಲೆಯ ಸಮಸ್ಯೆಗಳಿಗೆ ರಾಜುಗೌಡರೇ ನೇರ ಹೊಣೆ ಎಂದು ಆರೋಪಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಜನರಿಗೆ ಯಾರಿಗೆ ಮತ ಹಾಕಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಜನ ಎಚ್ಚೆತ್ತು ಪಕ್ಷಬೇಧ ಮರೆತು ನಗರದ ಅಭಿವೃದ್ಧಿಗೆ ಶ್ರಮಿಸುವ ಮನೋಭಾವನೆ ಇರುವ ಅಭ್ಯರ್ಥಿಗನ್ನು ಆಯ್ಕೆ ಮಾಡಬೇಕು. ಆ ಮೂಲಕ ನಮ್ಮ ನಗರದ ಅಭಿವೃದ್ಧಿಗೆ ನಾವು ಕಾರಣರಾಗಬೇಕು. ಮತದಾರರ ಮತ್ತೊಮ್ಮೆ ಮೋಸ ಹೋಗದೇ ಜನಪರ ಕಾಳಜಿ ಹೊಂದಿರುವ ವ್ಯಕ್ತಿಯನ್ನು ಗುರುತಿಸಿ ಮತ ಹಾಕಬೇಕು ಎಂದು ಮನವಿ ಮಾಡಿದರು. ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ವಿಶ್ವನಾಥರೆಡ್ಡಿ ಗೊಂದಡಗಿ, ನಿರ್ಮಲಕುಮಾರ ಜೈನ್, ಶಿವಣ್ಣ ಇಜೇರಿ, ರಾಜು ಕುಂಬಾರ ಇದ್ದರು.
ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ: ಮದನಗೋಪಾಲ
ಪಟ್ಟಣದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಮುಕ್ತವಾಗಿ ಓಡಾಡುವ ಪರಿಸ್ಥಿತಿ ಇಲ್ಲವಾಗಿದೆ. ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದಲ್ಲದೆ, ಯುವಕರು ಪೊಲೀಸರ ಸಮ್ಮುಖ ವಿದ್ಯಾರ್ಥಿನಿಯರನ್ನು ಛೇಡಿಸುತ್ತಿದ್ದರೂ, ಯಾವುದೇ ಕ್ರಮ ಜರುಗಿಸುತ್ತಿಲ್ಲ. ಅಧಿಕಾರಿಗಳು ನೋಡಿಯೂ ಸುಮ್ಮನಿರುವುದು ಯಾಕೆಂದು ಅರ್ಥವಾಗುತ್ತಿಲ್ಲ ಎಂದು ಮದನಗೋಪಾಲ ನಾಯಕ ಖೇದ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಆಡಳಿತವೂ ಇಲ್ಲ, ಕಾನೂನು ಸುವ್ಯವಸ್ಥೆಯೂ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಎಸ್ಪಿಯವರಿಗೆ ಪರಿಸ್ಥಿತಿ ಬಗ್ಗೆ ತಿಳಿಸಿದ್ದೆ. ಆದರೆ ಅವರು ಗಮನ ನೀಡಿಲ್ಲ. ಹೊಸ ಎಸ್ಪಿಯವರಾದರೂ ಈ ಬಗ್ಗೆ ಗಮನ ನೀಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

