ಗುಲ್ಬರ್ಗಾ

ಕಡಿಮೆ ಕರಾಮತ್ತು

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ. 9
ಗುಲ್ಬರ್ಗ ರಾಜ್ಯದಲ್ಲೇ ಅತಿ ಕಡಿಮೆ ಮತದಾನ ದಾಖಲಾಗಿರುವ ಜಿಲ್ಲೆಯಾಗಿ ಹೊರಹೊಮ್ಮಿದೆ. ಇದಕ್ಕೇನು ಕಾರಣ ಎಂಬುದು ಇದೀಗ ಗಂಭೀರ ಚರ್ಚೆಯ ವಿಷಯವಾಗಿದೆ. ಅದರಲ್ಲೂ ಗುಲ್ಬರ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶೇ. 51.41ರಷ್ಟು ಮಾತ್ರ ಮತದಾನವಾಗಿರುವುದು ಇನ್ನೂ ಆತಂಕಕ್ಕೆ ಕಾರಣವಾಗಿದೆ.
ವ್ಯಾಪಕ ಚರ್ಚೆ: ಅನೇಕರು ಇದು ಕುಸಿದು ಬಿದ್ದಿರುವ ಜಿಲ್ಲಾಡಳಿತ, ಅದರಲ್ಲೂ ಪಾಲಿಕೆ ವ್ಯಾಪ್ತಿಯಲ್ಲಿನ ಸಮಸ್ಯೆಗಳು ದಿನಕ್ಕೊಂದು ಹೊಸರೂಪ ಪಡೆದುಕೊಂಡು ಜನರನ್ನು ಕಾಡುತ್ತಿರುವುದೇ ಕಾರಣ. ಜನ ಪ್ರಜಾಪ್ರಭುತ್ವ, ಮತದಾನದಂತಹ ವ್ಯವಸ್ಥೆ ಬಗ್ಗೆಯೇ ಸಿನಿಕತನ ಬೆಳೆಸಿಕೊಂಡಿರುವುದು ಇದೇ ಕಾರಣಕ್ಕಾಗಿ ಎಂಬ ಚರ್ಚೆಗಳು ಸಾಗಿವೆ.
ಆದರೆ ಇನ್ನೂ ಕೆಲವು ಹಂತಗಳಲ್ಲಿ ಮತದಾರರ ಡಬ್ಬಲ್ ಎಂಟ್ರಿಗಳೇ ಗುಲ್ಬರ್ಗ ಮತದಾನ ಕಮ್ಮಿ ಪ್ರಮಾಣದಲ್ಲಿ ಆಗಲು ಮೂಲ ಕಾರಣ ಎಂಬ ಮಾತುಗಳು ಚರ್ಚೆಯಲ್ಲಿವೆ. ಅದರಲ್ಲೂ ಈ ಬಾರಿಯ ಚುನಾವಣೆಯಲ್ಲಿ ಹಿಂದೆಂದೂ ಆಗದಷ್ಟು ಹಿರಿಯರ ಹೆಸರುಗಳು ಮತದಾರರ ಯಾದಿಯಿಂದ ಮಾಯವಾಗಿವೆ.
ಗುಲ್ಬರ್ಗದ 55 ವಾರ್ಡ್‌ಗಳಲ್ಲಿ ಮತದಾನದ ಸುತ್ತಮುತ್ತ ಕಂಡು ಬಂದಿರುವ ಸಾಮಾನ್ಯ ಬೆಳವಣಿಗೆ ಎಂದರೆ ನಿಧನ ಹೊಂದಿದವರ ಹೆಸರುಗಳು ಮತದಾರರ ಯಾದಿಯಲ್ಲಿ ಕಂಡಿವೆ. ಬದುಕಿದ್ದವರ ಹೆಸರುಗಳು ಮಾತ್ರ ಕಣ್ಮರೆಯಾಗಿವೆ ಇದರಿಂದಾಗಿ ಸಾವಿರಾರು ಮತದಾರರು ಮತದಾನ ವಂಚಿತರಾಗುವಂತಹ ಸನ್ನಿವೇಶ ನಗರದಲ್ಲಿ ಕಂಡಿದೆ.
ಡಬ್ಬಲ್ ಎಂಟ್ರಿ: ಜನಗರ ಸ್ಥಳೀಯ ಸಂಸ್ಥೆಗಳ ಮತದಾರರ ಯಾದಿಯಲ್ಲಿ ಒಬ್ಬ ಮತದಾರನ ಹೆಸರು ಎರಡೆರಡು ಕಡೆಗಳಲ್ಲಿ ದಾಖಲಾಗಿರುವುದು ಕಂಡಿದೆ. ಇದರಿಂದಾಗಿಯೂ ನಗರ ಮತದಾರರ ಒಟ್ಟಾರೆ ಸಂಖ್ಯೆಯಲ್ಲಿ ನೈಜತೆಗಿಂತ ಬಿನ್ನ ಅಂಕಿ- ಸಂಖ್ಯೆಯೇ ಗೋಚರವಾಗುವಂತಾಗಿದೆ.
ಮತದಾರರ ಡಬ್ಬಲ್ ಎಂಟ್ರಿಯಿಂದಲೂ ಗುಲ್ಬರ್ಗ ಮತದಾರರ ಸಂಖ್ಯಾಬಲ ಹೆಚ್ಚಿದೆ. ಅಷ್ಟೊಂದು ಮತದಾರರೇ ಇಲ್ಲವೆಂದ ಮೇಲೆ ಅದೆಲ್ಲಿಂದ ಮತದಾನ ಶೇಕಡಾವಾರು ಹೆಚ್ಚಳ ಕಂಡೀತು.  ಈ ಅವಾಂತರಗಳು ಕಂಡು ಬಂದಿದ್ದರಿಂದ ಜಿಲ್ಲೆ ರಾಜ್ಯದಲ್ಲೇ ಕಡಿಮೆ ಮತದಾನವಾದಂತಹ ದಾಖಲೆ ಜಿಲ್ಲೆಯಾಗಿ ಹೊರಹೊಮ್ಮುವಂತಾಗಿದೆ ಎನ್ನುತ್ತಾರೆ ವಾರ್ಡ್ 54 ರಲ್ಲಿರುವ ವಿವಿಧೋದ್ದೇಶ ಸಂಘ- ಮಿತ್ರ ಮಂಡಳಿಯ ಕಾರ್ಯಕರ್ತರು.
ತಪ್ಪುಗಳ ಹೆಚ್ಚಳ: 'ಕನ್ನಡಪ್ರಭ' ಜೊತೆ ಮಾತನಾಡಿದ ಈ ಸಂಘ, ಮಂಡಳಿಯ ಶ್ರೀನಿವಾಸ ಕುಲ್ಕರ್ಣಿ, ಗುರುಪ್ರಸಾದ ಅಂಬಲಗಿ, ರಾಕೇಶ, ಪದ್ಮಾಕರ್ ಗಚ್ಚಿನಮನಿ ಇವರೆಲ್ಲರೂ ತಾವು ಮತದಾರರ ಪಟ್ಟಿಯಲ್ಲಿ ಕಂಡಿರುವ ಮತದಾರರ ಡಬ್ಬಲ್ ಎಂಟ್ರಿ ಮಾಹಿತಿಗಳನ್ನು ಪತ್ರಿಕೆ ನೀಡಿದರಲ್ಲದೆ ವಾರ್ಡ್ 54ರಲ್ಲೇ ನೂರಾರು ಇಂತಹ ಡಬ್ಬಲ್ ಎಂಟ್ರಿ ಕಂಡಿರುವಾಗ ಇಡೀ ಗುಲ್ಬರ್ಗದ ಎಲ್ಲಾ ವಾರ್ಡ್‌ಗಳು ಸೇರಿಸಿ ಲೆಕ್ಕ ಹಾಕಿದರೆ, ಪರಿಶೀಲನೆ ಮಾಡಿದರೆ ನಿಸ್ಸಂಶಯವಾಗಿ 10 ಸಾವಿರಕ್ಕೂ ಹೆಚ್ಚು ಇಂತಹ ಎಂಟ್ರಿಗಳು ಗೋಚರವಾಗುತ್ತವೆ ಎನ್ನುತ್ತಾರೆ.
ಅನೇಕ ನಿಧನರಾದವರ ಹೆಸರುಗಳು ಇಲ್ಲಿ ಕಂಡಿವೆ. ಆದರೆ ಈ ಬಡಾವಣೆಯಲ್ಲಿ ಬದುಕಿದ್ದವರ ಹೆಸರುಗಳೇ ಇಲ್ಲ. ಇಂತಹ ದೋಷಗಳಿಂದಲೇ ಗುಲ್ಬರ್ಗ ಅತಿ ಕಡಿಮೆ ಮತದಾನದ ಜಿಲ್ಲೆ ಎಂಬ ರಾಜ್ಯ ಮಟ್ಟದ ಕೆಟ್ಟ ಹೆಸರು ಪಡೆಯುವಂತಾಗಿದೆ ಎಂಬುದು ಗುರುಪ್ರಸಾದ ಸೇರಿದಂತೆ ಗೆಳೆಯರ ಬಳಗದ ಅಭಿಮತ.
ದೋಷಕ್ಕೆ ಮುಕ್ತಿ ಎಂದು?: ಶೀಘ್ರದಲ್ಲೇ ಅಸೆಂಬ್ಲಿ ಚುನಾವಣೆ ನಡೆಯುತ್ತದೆ. ಈ ಸಂದರ್ಭದಲ್ಲಾದರೂ ಇಂತಹ ದೋಷಗಳಿರುವ ಮತದಾರರ ಯಾದಿ ಪರಿಷ್ಕರಣೆಯಾಗಬೇಕು ಎಂಬುದು ಈ ಯುವಕರ ಕಳಕಳಿ. ಜಿಲ್ಲಾಡಳಿತ ಈ ಯುವಕರು ಎತ್ತಿ ತೋರಿಸಿರುವಂತಹ ಅಂಶಗಳ ಮೇಲೆ ಹೆಚ್ಚಿನ ಅಧ್ಯಯನ ನಡೆಸಿ ಮತದಾರರ ಯಾದಿ ಪರಿಷ್ಕರಣೆ ಯಾವ ಹಂತದಲ್ಲಿ ಇಂತಹ ದೋಷಗಳು ನುಸಳಿವೆ ಎಂಬುದನ್ನು ಕಂಡುಹಿಡಿದು ಅವುಗಳನ್ನು ಸರಿಪಡಿಸುವುದೇ ಎನ್ನುವುದನ್ನು ಕಾದು ನೋಡಬೇಕಷ್ಟೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.