ಹುಣಸಗಿ- ದೇವಾಪುರ ರಸ್ತೆ ದುರಸ್ತಿ
ಹುಣಸಗಿ: ಸುಮಾರು ಐದಾರು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಸಂಪೂರ್ಣ ಹದೆಗೆಟ್ಟಿದ್ದ ದೇವಾಪುರ- ಹುಣಸಗಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾರ್ಯ ಭರದಿಂದ ಸಾಗಿದೆ.
ದೇವಾಪುರ ಮನಗೂಳಿ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ ನಂತರ ಈ ರಸ್ತೆ ದುರಸ್ತಿ ಕಾರ್ಯ ನಡೆದಿರಲಿಲ್ಲ. ಇದರಿಂದಾಗಿ ವಜ್ಜಲ್, ಚನ್ನೂರು, ಕಲ್ಲದೇವನಹಳ್ಳಿ, ಹೆಬ್ಬಾಳ, ದೇವತಕಲ್ಲ ಸೇರಿದಂತೆ ಇತರ ಗ್ರಾಮದ ರೈತರು ನಿತ್ಯ ಯಾತನೆ ಅನುಭವಿಸುತ್ತಿದ್ದರು. ಸುಮಾರು ಮೂರು ವರ್ಷಗಳ ಹಿಂದೆ ಈ ರಸ್ತೆಗೆ ಕೆ-ಶಿಪ್ನಡಿ ಟೆಂಡರ್ ಕರೆಯಲಾಗಿದ್ದು, ರಸ್ತೆ ಪಕ್ಕದ ವಿದ್ಯುತ್ ಕಂಬಗಳು, ಕುಡಿಯುವ ನೀರಿನ ಪೈಪ್ಗಳನ್ನು ಸ್ಥಳಾಂತರಿಸಿ ರಸ್ತೆ ಬದಿಯ ಮರಗಳನ್ನು ತೆಗೆಯಲಾಯಿತು.
ಹುಣಸಗಿಯಿಂದ ಚನ್ನೂರ ಗ್ರಾಮದವರೆಗೆ 5 ಕಿಮೀ ಮತ್ತು ದೇವಾಪುರದಿಂದ ದೇವತಕಲ್ಲವರೆಗೆ ಸುಮಾರು 10 ಕಿಮೀ, ಒಟ್ಟು 15 ಕಿಮೀ ರಸ್ತೆ ಗುಂಡಿಗಳನ್ನು ಮುಚ್ಚಿ ಡಾಂಬರ್ ಹಾಕುವ ಕಾರ್ಯ ಭರದಿಂದ ನಡೆದಿದೆ. ಸುಮಾರು 1.2 ಕೋಟಿ ರುಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ವಿಶೇಷ ಯೋಜನೆಯಡಿ ಕಾಮಗಾರಿ ನಡೆದಿದೆ. ರಸ್ತೆ ಹಾಳಾಗಿದ್ದರಿಂದ ಈ ಭಾಗದಲ್ಲಿ ಸಂಚರಿಸುತ್ತಿರುವ ಕೆಲ ಬಸ್ಗಳು ಸಂಚಾರವನ್ನೇ ಸ್ಥಗಿತಗೊಳಿಸಿದ್ದವು. ವಿಜಾಪುರ- ಶ್ರೀಶೈಲ, ವಿಜಾಪುರ- ಮಂತ್ರಾಲಯ, ಯಾದಗಿರಿ- ವಿಜಾಪುರ ಸೇರಿದಂತೆ ಹಲವಾರು ಬಸ್ ಸಂಚಾರದ ಮಾರ್ಗವನ್ನೇ ಬದಲಿಸಲಾಗಿತ್ತು. ಈಗ ಡಾಂಬರೀಕರಣ ಆರಂಭವಾಗಿರುವುದರಿಂದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ದೇವಾಪುರಯಿಂದ ಹುಣಸಗಿವರೆಗೆ ನಡೆದಿರುವ ರಸ್ತೆ ದುರಸ್ತಿಯನ್ನು ಹುಣಸಗಿಯಿಂದ ಮಾಳನೂರವರೆಗೂ ಮುಂದುವರಿಸಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಮಾಳನೂರು ಯಾದಗಿರಿ ಜಿಲ್ಲೆಯ ಗಡಿ ಗ್ರಾಮವಾಗಿದ್ದು, ಇಲ್ಲಿಗೆ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಎಲ್ಲಿ ನೋಡಿದರೂ ತಗ್ಗುಗಳಿಂದ ಕೂಡಿದ ರಸ್ತೆ ಇದಾಗಿದೆ. ಕೂಡಲೇ ಅಧಿಕಾರಿಗಳು ಹುಣಸಗಿ ಮಾಳನೂರು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

