ಗುಲ್ಬರ್ಗಾ

'ಕೈ' ಹಿಡಿದ ಅರ್ಧ ಡಜನ್ ಪಕ್ಷೇತರರು

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.12
ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರ ಗದ್ದುಗೆ ಇದೀಗ ಕಾಂಗ್ರೆಸ್‌ಗೆ ಬಲು ಹತ್ತಿರವಾಗಿದೆ. 55 ಸ್ಥಾನಗಳಲ್ಲಿ 23 ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಬಹುಮತ ಚಿಂತೆಯಲ್ಲಿತ್ತು. ಆದರೀಗ ಪಾಲಿಕೆ ರಾಜಕೀಯ ಅಂಗಳದಲ್ಲಿನ ಮಹತ್ತರ ಬೆಳವಣಿಗೆಯೊಂದರಲ್ಲಿ ಪಕ್ಷೇತರರಾಗಿ ಗೆದ್ದಿರುವ 6 ಸದಸ್ಯರು ಬೇಷರತ್ತಾಗಿ 'ಕೈ' ಹಿಡಿಯುವ ಮೂಲಕ ಪಾಲಿಕೆ ಆಡಳಿತ 'ಕೈ'ಗೆ ಸುಲಭದ ತುತ್ತಾಗಿಸಿದ್ದಾರೆ.
ಪಾಲಿಕೆ ಚುನಾವಣೆ ಫಲಿತಾಂಶ ಬಂದ ಮಂಗಳವಾರದ ರಾತ್ರಿಯೇ ಪಕ್ಷೇತರ 6 ಜನ ಸದಸ್ಯರು ತಮ್ಮನ್ನು ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ತತ್ವ- ಸಿದ್ಧಾಂತಗಳ ಮೇಲೆ ನಂಬಿಕೆ ಇರುವ ತಾವು ಪಾಲಿಕೆಯಲ್ಲಿ 'ಕೈ' ಹಿಡಿಯುವುದಾಗಿ ಹೇಳಿದ್ದಾರೆಂದು ಗುಲ್ಬರ್ಗ ಉತ್ತರ ಶಾಸಕ ಖಮರುಲ್ ಇಸ್ಲಾಂ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಸ್ಲಾಂ, ಗುಲ್ಬರ್ಗದಲ್ಲಿ ಕಳೆದ ಬಾರಿಯ 24 ಸ್ಥಾನಗಳ ಬದಲು ಕಾಂಗ್ರೆಸ್ 23ರಲ್ಲಿ ಗೆದ್ದಿದೆ. 1 ಸ್ಥಾನ ಆಚೀಚೆ ಆಗಿದ್ದರಲ್ಲಿ ಹೆಚ್ಚಿನ ಪರಿಣಾಮವಾಗದು. ಈ ಬಾರಿ ಪಕ್ಷ ಸಾಮಾಜಿಕ ಸಮಾನತೆ ಹಿನ್ನೆಲೆಯಲ್ಲಿ ಎಲ್ಲ ಜಾತಿ-ವರ್ಗಕ್ಕೂ ಆದ್ಯತೆ ನೀಡಿದ್ದು ತಮಗೆ ತೃಪ್ತಿ ತಂದಿದೆ ಎಂದರು.
ಅದರಲ್ಲೂ ಗುಲ್ಬರ್ಗ ಉತ್ತರ ಮತಕ್ಷೇತ್ರದ ಅಡಿಯಲ್ಲಿ ಬರುವ ವಾರ್ಡ್ 1ರಿಂದ 30ರವರೆಗಿನ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಸ್ಲಿಂ, ಎಸ್ಸಿ-ಎಸ್ಟಿ, ಲಿಂಗಾಯತ ಹೀಗೆ ಸರ್ವ ಧರ್ಮೀಯರನ್ನು ಅಪ್ಪಿಕೊಳ್ಳುವ ಯತ್ನ ಮಾಡಿದೆ. ಇದು 'ಕೈ' ಪಡೆಯ ಜಾತ್ಯತೀತ ನಿಲುವಿನ ಸಂಕೇತ ಎಂದರು.
ಆರೂ ಮಂದಿ ಪಕ್ಷೇತರರೂ ನಮ್ಮವರೆ ಸಾರ್: ಗುಲ್ಬರ್ಗ ಪಾಲಿಕೆಯಲ್ಲಿ ವಾರ್ಡ್ 12ರ ಮೊಹ್ಮದ್ ಜಾವೆದ್ ಮೊಹ್ಮದ್ ಅಜಗರ್, ವಾರ್ಡ್ 16ರ ಮೊಹ್ಮದ್ ನಿಜಾಮುದ್ದೀನ್ ಗೋಲಾ, 20ರಿಂದ ಅಲಿಮುದ್ದೀನ್ ಪಟೇಲ್, 26ರಿಂದ ಅಖಿಲಾ ಬೇಗಂ, 37ರಿಂದ ಗೆದ್ದಿರುವ ಐಶಾ ಫಿರಮೇಶ, 52ರ ಶಬಾನಾ ಬೇಗಂ ಇವರನ್ನೊಳಗೊಂಡಿರುವ 6 ಮಂದಿ ಸದಸ್ಯರು ಇದೀಗ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದರು.
ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯದ ಬಾವುಟ ಹಿಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪಕ್ಷೇತರರಾಗಿ ಗೆದ್ದವರಿವರು. ನಮ್ಮನ್ನೇ ಬೆಂಬಲಿಸಿದ್ದಾರೆಂದು ಎಲ್ಲರನ್ನು ಹತ್ತಿರ ಕರೆದುಕೊಂಡರೆ ಕಾಂಗ್ರೆಸ್ ಸಂಘಟನೆಯ ಮೇಲೆ ಪರಿಣಾಮ ಬೀರುವುದಿಲ್ಲವೆ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ, ಖಮರುಲ್ ಇಸ್ಲಾಂ ನೇರವಾಗಿ ಉತ್ತರಿಸದೆ ಇದಕ್ಕೆಲ್ಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೇ ಉತ್ತರಿಸುತ್ತಾರೆ. ಈ ಬಗ್ಗೆ ತಾವು ಉತ್ತರಿಸಲು ಸಮರ್ಥರಲ್ಲ ಎಂದು ನುಣುಚಿಕೊಂಡರು.
ವಾರ್ಡ್ ಕಚೇರಿ ಆರಂಭಿಸಿ: ಈಗ ಗೆದ್ದಿರುವ ಕಾಂಗ್ರೆಸ್ ಪಾಲಿಕೆ ಸದಸ್ಯರೆಲ್ಲರೂ ತಮ್ಮ ವಾರ್ಡ್‌ಗಳಲ್ಲಿ ಕಚೇರಿಗಳನ್ನು ಆರಂಭಿಸಿ ಜನರೊಂದಿಗೆ ನಿತ್ಯ ಬೆರೆತು ಇರಬೇಕು. ಅಹವಾಲು ಆಲಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಪಾಲಿಕೆ ಆಯುಕ್ತರ ವರ್ಗಾವಣೆಯಲ್ಲಿನ ರಾಜಕೀಯ ಖಂಡಿಸಿದ ಖಮರುಲ್ ಇಸ್ಲಾಂ, ಅಧಿಕಾರಿಗಳ ಹಿಂದೆ ಬಿದ್ದವರಿಗೆ ಜನತೆ ಚುನಾವಣೆಯಲ್ಲಿ ಶಾಸ್ತಿ ಮಾಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹ್ಮದ್ ಅಜಗರ್ ಚುಲಬುಲ್, ಪಾಲಿಕೆಗೆ ಪುನರಾಯ್ಕೆಗೊಂಡಿರುವ ಭೀಮರೆಡ್ಡಿ ಪಾಟೀಲ್ ಕುರಕುಂದಾ ಸುದ್ದಿಗೋಷ್ಠಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.