ಗುಲ್ಬರ್ಗಾ

ಕ್ಲಾಸ್ ರೂಂನಲ್ಲೇ ಬಟ್ಟೆ ಬದ್ಲಿಸ್ಬೇಕು... ಮಲಗ್ಬೇಕು!

Published On :

ಇದು ಕನ್ನಡಪ್ರಭದಲ್ಲಿ ಮಾತ್ರ
-ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ, ಕರ್ಜಗಿ(ಗುಲ್ಬರ್ಗ), ಮಾ. 12
ಇದು ವಸತಿ ಶಾಲೆಯಾದರೂ, ವಾಸಯೋಗ್ಯ ಪರಿಸರ ಇಲ್ಲಿ ಮರೀಚಿಕೆ. ಮಕ್ಕಳ ವಸತಿಗೆ ಕಿಂಚಿತ್ತೂ ಸೌಕರ್ಯಗಳು ಇಲ್ಲಿಲ್ಲ. ಪಾಠ ನಡೆಯುವ ತರಗತಿ ಕೋಣೆಗಳಲ್ಲೇ ಬಾಲಕಿಯರು ಬಟ್ಟೆ ಬದ್ಲಿಸ್ಬೇಬೇಕು. ಬಾಲಕರು ಹುಣಸೆ, ಬೇವಿನ ಮರಗಳ ಕೆಳಗೋ, ತೋಟದ ಬಾವಿಯ ಅಕ್ಕಪಕ್ಕ ನಿಂತೋ ಬಟ್ಟೆ ತೊಡ್ಬೇಕು. ಜೋರಾಗಿ ಗಾಳಿ ಬೀಸಿದರೆ ಹಾರಿ ಹೋಗುವ ಅಥವಾ ಮೈ ಮೇಲೆ ಬೀಳುವ ಕೊಟ್ಟಿಗೆ ಟಿನ್ ಶೆಡ್‌ಗಳೇ ಮಕ್ಕಳ ಬೆಡ್ ರೂಂ. ಪ್ರೌಢಶಾಲಾ ಹೆಣ್ಮಕ್ಕಳು ಸ್ನಾನಾದಿ ಬೆಳಗಿನ ಕ್ರಿಯೆ ಪೂರೈಸಲು ಇಲ್ಲಿ ಸೌಕರ್ಯಗಳಿಗೆ ಬರ.
ಗುಲ್ಬರ್ಗ ಜಿಲ್ಲೆ ಅಫಜಲ್ಪುರ ತಾಲೂಕಿನ ಗಡಿಗ್ರಾಮ ಕರ್ಜಗಿ ತೋಟದಲ್ಲಿರುವ ಮೊರಾರ್ಜಿ ಶಾಲೆಯ ನೋಟವಿದು. ಹಳ್ಳಿಗಾಡಿನ ಜಾಣ- ಜಾಣೆಯರಿಗೆ ಉತ್ತಮ ಶಿಕ್ಷಣ ಕೊಡುವ ಉದಾತ್ತ ಪರಿಕಲ್ಪನೆಯಿಂದ ಆರಂಭವಾಗಿರುವ ಮೊರಾರ್ಜಿ ವಸತಿ ಶಾಲೆ ಯೋಜನೆ ಕರ್ಜಗಿಯಲ್ಲಿ ಸಂಪೂರ್ಣ ಗೋತಾ ಹೊಡೆದಿದೆ.
ಶಾಲೆಯ ಕಟ್ಟಡ ಸೌಲಭ್ಯ ಪೂರ್ಣವಾಗಿದ್ದರೆಷ್ಟು, ಬಿಟ್ಟರೆಷ್ಟು. ಇಲ್ಲಿ ಕಲಿಕೆಗೆ ಬರುವ ಮಕ್ಕಳಿಗೆ ಮೂಲ ಸೌಕರ್ಯಗಳು ಸಿಕ್ಕರೆಷ್ಟು, ಬಿಟ್ಟರೆಷ್ಟು. ಕಳೆದ 6 ವರ್ಷಗಳಿಂದ ಈ ಶಾಲೆ ಟಿನ್ ಶೆಡ್‌ನಲ್ಲೇ ನಡೆಯುತ್ತಿದೆ.
180 ಮಕ್ಕಳ ವಾಸ: ಕನ್ನಡಪ್ರಭ ಈ ಶಾಲೆಗೆ ಭೇಟಿ ಕೊಟ್ಟಾಗ ತರಗತಿ ಕೋಣೆಗಳಲ್ಲೇ ಮಕ್ಕಳು ಹಾಸಿಗೆ- ಹೊದಿಕೆ, ತಮ್ಮ ದಿರಿಸುಗಳೊಂದಿಗೆ ವಾಸವಾಗಿದ್ದರೂ. ತರಗತಿನೂ ಇಲ್ಲೇ ನಡಿತಾವ್ರಿ, ನಾವು ಮಲಗಿಕೊಳ್ಳೋದು ಇಲ್ಲೇರಿ ಎಂದು ಬಾಲಕಿಯರು ಹೇಳಿದರು.
ಬಾಲಕರಂತೂ ನಮಗ ಪ್ರತ್ಯೇಕ ವಾಸದ ಕೋಣೆಗಳೇನು ಇಲ್ರಿ. ಮರದ ಕೆಳಗೇ ಝಳಕ (ಸ್ನಾನ) ಮಾಡೋದ್ರಿ ಬೈಲಕಡಿಗೆ ಹೋಗಿ ಬರೋದ್ರಿ, ಈ ಪತ್ರಾ (ಟಿನ್) ಶೆಡ್‌ನಾಗೇ ಪೆಟ್ಟಿಗೆ ಇಟ್ಕೊಂಡು ಮಲಗೋದ್ರಿ ಎಂದರು.
6 ರಿಂದ 10ನೇ ತರಗತಿಯವರೆಗೂ ಇಲ್ಲಿ ಕಲಿಯಲು ದೂರದೂರುಗಳಿಂದ ಬಂದಿರುವ 180 ಮಕ್ಕಳಿದ್ದಾರೆ. ಇದರಲ್ಲಿ ಪ್ರತಿಶತ 60 ರಷ್ಟು ಹೆಣ್ಮಕ್ಕಳಿದ್ದಾರೆ.
ದಡಬಡ ಸದ್ದಿನ ಟಿನ್ ಶೆಡ್: ಬಾಲಕರು ಮಲಗುವ ತಗಡಿನ ಶೆಡ್ ಮಳೆಗಾಲದಲ್ಲಿ ಸೋರುತ್ತದೆ. ಬೇಸಿಗೆಯಲ್ಲಿ ಕಾದು ಕೆಂಡವಾಗುತ್ತದೆ, ಚಳಿಗಾಲದಲ್ಲಿ ತಂಪಾಗುತ್ತದೆ. ಫ್ಯಾನ್, ಪ್ರಖರ ಬೆಳಕಿನ ಸೌಕರ್ಯವೂ ಇಲ್ಲಿಲ್ಲ. ಓದುವ ಮಕ್ಕಳು ಇಲ್ಲಿದ್ದಾರೆ ಎಂಬುದೇ ದುರಂತ.
ತುಸು ಗಾಳಿ ಬೀಸಿದರೂ ದಡದಡ ಸದ್ದು ಮಾಡುವ ಪತ್ರಾಗಳಲ್ಲಿ ಮಕ್ಕಳು ಬೆದರುತ್ತಾರೆ, ಹೆದರುತ್ತಾರೆ. ರಾತ್ರಿ ಮಲಗಲು ತುಂಬ ಭಯವಾಗುತ್ತದೆ ಸಾರ್, ಆದ್ರೇನು ಮಾಡೋದು. ಅನಿವಾರ್ಯ, ಮಲಗಲೇಬೇಕಲ್ಲ... ಎಂದು ಮಕ್ಕಳು ತಮ್ಮ ಗೋಳು ತೋಡಿಕೊಂಡರು.
ಇಲ್ಲಿ ಮಕ್ಕಳಿಗಾಗಿಯೇ ಕಬ್ಬಿಣದ ಮಂಚಗಳು, ಡೆಸ್ಕ್‌ಗಳು ಸರಬರಾಜಾಗಿವೆ. ಆದರೆ ಈ ಶಾಲೆಯಲ್ಲಿ ಇವುಗಳನ್ನು ಓರಣವಾಗಿ ಇಡಲು ಸ್ಥಳಾವಕಾಶವೇ ಇಲ್ಲ. ಹೀಗಾಗಿ ಮಂಚ, ಡೆಸ್ಕ್‌ಗಳನ್ನು ತೋಟದ ಬಯಲಲ್ಲಿ ಎಸೆಯಲಾಗಿದ್ದು, ಅವೆಲ್ಲ ಮಳೆ- ಬಿಸಿಲಿಗೆ ತುಕ್ಕು ಹಿಡಿದಿವೆ.
ಬಾಲಕಿಯರ ಪರದಾಟ ದೇವರೇ ಬಲ್ಲ: ಬೆಳಗಿನ ಕರ್ಮಗಳನ್ನು ಪೂರೈಸುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಬಾಲಕಿಯರ ಗೋಳು ದೂರವಾಗೋದೇ ಇಲ್ಲ. ಸ್ನಾನ ಮಾಡಲು ಪ್ರತ್ಯೇಕ ಕೋಣೆಯಾಗಲಿ, ಬಟ್ಟೆ ಬದಲಿಸಲೂ ಮರೆಯಾಗಲಿ ಇಲ್ಲದೆ ಪರದಾಡಬೇಕು. ಶೌಚಕ್ಕೆ ಹೋಗಲೂ ಇವರು ಅನುಭವಿಸುವ ತೊಂದರೆ ದೇವರೇ ಬಲ್ಲ. ಮಳೆಗಾಲದಲ್ಲಂತೂ ಇವರ ಕಷ್ಟಗಳು ದ್ವಿಗುಣಗೊಳ್ಳುತ್ತವೆ.ಬಟ್ಟಿ- ಟ್ರಂಕ್ (ಪೆಟ್ಟಿಗೆ) ಕ್ಲಾಸ್ ರೂಂನಲ್ಲೇ ಇಟ್ಕೋತೀವಿ. ಅಲ್ಲೇ ನಾವು ಬಟ್ಟೆ ಹಾಕೋಬೇಕ್ರಿ ಎನ್ನುವ ಮುಗ್ಧ ಮಕ್ಕಳ ಮಾತುಗಳು ಅಲ್ಲಿನ ಪರಿಸರದ ಬಗ್ಗೆ  ತಿಳಿಸುತ್ತದೆ.
ಸಮಾಜ ಶಿಕ್ಷಕರಿಲ್ಲ: 6 ರಿಂದ 10ನೇ ತರಗತಿಯ ಈ ಶಾಲೆಯಲ್ಲಿ ಸಮಾಜ ಶಿಕ್ಷಕರಿಲ್ಲದೆ ವರ್ಷವಾಯ್ತು. 6ನೇ ಮತ್ತು 7ನೇ ತರಗತಿಗಳಿಗೆ ಕೋಣೆ ಬರ. ಹೀಗಾಗಿ ಮರದಡಿಯೇ ತರಗತಿ ನಡೆಯುತ್ತವೆ. ಪಾಲಕರಿಂದ ದೂರವಾಗಿ 6ನೇ ತರಗತಿಯಿಂದಲೇ ಇಲ್ಲಿಗೆ ಕಲಿಯಲು ಬರುವ ಮಕ್ಕಳಿಗೆ ವಾಸಯೋಗ್ಯ ಪರಿಸರ ಇಲ್ಲಿ ಇಲ್ಲ. ಸರ್ಕಾರ ಪ್ರತಿ ಮಗುವಿಗೆ ತಿಂಗಳಿಗೆ ಏನಿಲ್ಲವೆಂದರೂ ಹೆಚ್ಚುಕಮ್ಮಿ 1,300ರಿಂದ 1,500 ವೆಚ್ಚ ಮಾಡುತ್ತದೆ.

ಅಪಾಯ ತೂಗುಗತ್ತಿ
 ಬಾಲಕರು, ಬಾಲಕಿಯರು ಮಲಗುವ ಶೆಡ್‌ಗಳ ಗೋಡೆಗಳು ಬಿರುಕು ಬಿಟ್ಟಿದೆ. ಈಗಲೋ ಆಗಲೋ ಬೀಳುವ ಹಂತದಲ್ಲಿವೆ. ಇಲ್ಲಿ ಮಕ್ಕಳ ಜೀವಕ್ಕೇ ಅಪಾಯ ನಿಶ್ಚಿತ
 ತೋಟದ ತೆರೆದ ಬಾವಿ ಇಲ್ಲಿದೆ. ಇದಕ್ಕೆ ಸುರಕ್ಷಿತ ಬೇಲಿಯೂ ಹಾಕಿಲ್ಲ. ಸದಾಕಾಲ ನೂರಾರು ಮಕ್ಕಳು ಓಡಾಡುವ ಈ ಪರಿಸರದಲ್ಲಿ ತೆರೆದ ಬಾವಿಯನ್ನು ಹೀಗೆ ಬಿಟ್ಟಿದ್ದು, ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಬಾವಿಗೆ ಬೇಲಿ ಹಾಕಲೇಬೇಕಿದೆ.
 ತರಗತಿ ನಡೆಸಲು ಮತ್ತು ಮಕ್ಕಳು ಓದಿ, ಮಲಗಲು ಪ್ರತ್ಯೇಕ ಕೋಣೆಗಳು ಬೇಕು. ಇಲ್ಲದೆ ಹೋದಲ್ಲಿ ಮಕ್ಕಳ ಶೈಕ್ಷಣಿಕ ಮಟ್ಟದ ಮೇಲೆ ಮಾರಕ ಪರಿಣಾಮ ಉಂಟಾಗುವ ಆತಂಕ.

ಸೌಕರ್ಯ ಏನೂ ಇಲ್ರಿ
ತಿಂಗಳಿಗೆ ಸಾವಿರಾರು ರುಪಾಯಿ ಬಾಡಿಗೆ ಕೊಡ್ತೀವ್ರಿ. ಕರ್ಜಗಿ ಶಾಲೆ ಕಟ್ಟಡದಾಗ ಸೌಕರ್ಯ ಏನೂ ಇಲ್ಲ ಬಿಡ್ರಿ. ಕಟ್ಟಡ ಮಾಲೀಕರಿಗೆ ಸೌಕರ್ಯಕ್ಕಾಗಿ ಕೇಳಿವಿ. ಅದ್ಯಾವುದು ಅಲ್ಲಿ ಆಗಿಲ್ಲ. ಮಕ್ಕಳಿಗೆ ಹಂಗೇ ಇರ್ಲಿಕ್ಕಿ ಕೊಟ್ಟೀವ್ರಿ. ಈ ಶಾಲೆಗೆಂದೇ 12 ಎಕರೆ ಜಾಗ ನೋಡೀವಿ. ಅದರ ಪ್ರಸ್ತಾವನೆ ಸರ್ಕಾರಕ್ಕೆ ಹೋಗ್ಯದರಿ. ಮಂಜೂರಾಗಿ ಅಲ್ಲಿಂದ ಬರಬೇಕು. ಹೆಣ್ಮಕ್ಕಳಿಗೆ, ಗಂಡ್ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥಾ ಬೇಕು. ಎಲ್ಲಾ ಖರೆ, ಆದರ ಎಲ್ಲಿ ಮಾಡ್ಲಿಕ್ಕಿ ಸಾಧ್ಯದ ಹೇಳ್ರಿ. ಊರಾಗ ಶಾಲೆ ನಡೆಸುವಂಗ ಒಂದೂ ಕಟ್ಟಡ ಸಿಗೋದಿಲ್ರಿ. ನಾವು ಹಂಗೇ ತ್ವಾಟದಾಗೇ ಶಾಲೆ ನಡಸ್ಗೊಂಡು ಹೊಂಟೀವ್ರಿ... ನೋಡೋಣ, ಎಲ್ಲಿತಂಕಾ ನಡೀತದ ನಡೀಲಿ.
- ಸುರೇಶ ಜಾಧವ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಗುಲ್ಬರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.