ದಲಿತರಿಗೆ ನಾಯಕತ್ವ ನೀಡುವ ಪಕ್ಷಗಳಿಗೆ ಮಣೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.16
ಇಲ್ಲಿನ ಸರ್ಕಾರಿ ಐಟಿಐ ಕಾಲೇಜು ಮೈದಾನದಲ್ಲಿ ಶನಿವಾರ ದಸಂಸ ಆಯೋಜಿಸಿದ್ದ ದಲಿತರ ಚೈತನ್ಯ ಸಮಾವೇಶ ಯಶಸ್ವಿಯಾಯಿತು. ಸಮಾವೇಶದಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು ಗಮನಾರ್ಹವಾಗಿತ್ತು.
ಇದರಂಗವಾಗಿ ಜಗತ್ ವೃತ್ತದಿಂದ ದಲಿತ ಸಮುದಾಯದ ಹಿರಿಯರಾದ ಶಿವರಾಂ ಮೋಘಾ, ದಸಂಸ ಸಂಚಾಲಕ ರವಿ ಮದನಕರ್ ಇವರನ್ನು ಕುದುರೆ ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಸಮಾವೇಶದ ಸ್ಥಳಕ್ಕೆ ಕರೆತರಲಾಯಿತು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಕ್ರಾಂತಿ ಗೀತೆಗಳನ್ನು ಹಾಡಲಾಯ್ತು. ಅಲ್ಲದೆ ಸೇರಿದ್ದ ಜನತೆ ದಲಿತರಿಗೆ ಮುಖ್ಯಮಂತ್ರಿಯಾಗುವಂತಹ ಅವಕಾಶ ನೀಡಬೇಕು.
ಸರ್ಕಾರ ನಡೆಸುವಲ್ಲಿ ದಲಿತರ ಕೊಡುಗೆಯೂ ಈ ರಾಜ್ಯಕ್ಕೆ ಅಗತ್ಯ ಎಂಬ ಘೋಷಣೆಗಳನ್ನು ಹಾಕಿ ಜನರ ಗಮನ ಸೆಳೆದರು.
ಕರ್ನಾಟಕ ದಲಿತ ಚಳವಳಿ, ಜಿಲ್ಲೆಯಲ್ಲಿ ನಡೆದು ಬಂದ ದಲಿತ ಚಳವಳಿಗಳ ಬಗ್ಗೆ ಸಮಾವೇಶದಲ್ಲಿ ಉಪನ್ಯಾಸಕರು ಚರ್ಚಿಸಿದರಲ್ಲದೆ ಚಳುವಳಿಯ ಮುಂದಿನ ಹೆಜ್ಜೆಗಳ ಬಗ್ಗೆಯೂ ಅನೇಕರು ಅನಿಸಿಕೆ ವ್ಯಕ್ತಪಡಿಸಿದರು.
ಯಾರಿಗೆ ಮಣೆ?: ಈಗಿನ ರಾಜಕಾರಣದಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ಕಳವಳ ವ್ಯಕ್ತವಾದ ಸಮಾವೇಶದಲ್ಲಿ ಮಾತನಾಡಿದ ದಲಿತ ನಾಯಕರೆಲ್ಲರೂ ದಲಿತರ ನಾಯಕತ್ವಕ್ಕೆ ಮನ್ನಣೆ ಯಾವ ಪಕ್ಷ ಕೊಡುವುದೋ ಅಂತಹ ಪಕ್ಷಗಳ ಬಗ್ಗೆಯೇ ದಲಿತರು ಚರ್ಚಿಸಬೇಕಾಗುತ್ತದೆ.
ಅಂತಹ ಪಕ್ಷಗಳತ್ತಲೇ ದಲಿತೆರಲ್ಲರೂ ಲಕ್ಷ ಕೊಡಬೇಕಾಗುತ್ತದೆ. ದಲಿತರನ್ನು ಕಡೆಗಣಿಸುವ ಪಕ್ಷಗಳ ಬಗ್ಗೆ ದಲಿತರೂ ಸಾಕಷ್ಟು ಲೆಕ್ಕಾಚಾರದಿಂದಲೇ ಮುಂದಡಿ ಇಡಬೇಕಾಗುತ್ತದೆ ಎಂಬ ಎಚ್ಚರಿಕೆ ಮಾತುಗಳು, ರಾಜಕೀಯ ಪಕ್ಷಗಳವರಿಗೆ ಬಿಸಿ ಮುಟ್ಟಿಸುವಂತಹ ಹೇಳಿಕೆಗಳು ಸಮಾವೇಶದಿಂದ ಮೊಳಗಿದ್ದು ವಿಶೇಷವಾಗಿತ್ತು.
ಇಂದಿಗೂ ಸಿಎಂ ಹುದ್ದೆ ದಕ್ಕಿಲ್ಲ: ಕರ್ನಾಟಕದಲ್ಲಿ ಎಂದೋ ದಲಿತರು ಸಿಎಂ ಹುದ್ದೆ ಅಲಂಕರಿಸಬೇಕಿತ್ತು. ಈ ಕನಸು ಇಂದಿಗೂ ಕೈಗೂಡಿಲ್ಲ. ಆಡಳಿತ, ಅರ್ಹತೆ, ಪ್ರತಿಭೆಗಳಿದ್ದರೂ ಬಿ.ರಾಚಯ್ಯ, ಬಿ.ಬಸವಲಿಂಗಪ್ಪ, ಎನ್.ರಾಚಯ್ಯ, ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಹುದ್ದೆಗೆ ಬರಬೇಕಾಗಿತ್ತು.
65 ವರ್ಷಗಳ ಸ್ವತಂತ್ರ ಭಾರತದಲ್ಲಿ ಕರ್ನಾಟಕದ ಸಿಎಂ ಆಗಿ ಲಿಂಗಾಯತರು 25 ವರ್ಷ, ಒಕ್ಕಲಿಗರು 18 ವರ್ಷ, ಬ್ರಾಹ್ಮಣರು- ಕ್ಷತ್ರಿಯರು 18 ವರ್ಷ, ಹಿಂದುಳಿದ ವರ್ಗದವರು 4 ವರ್ಷ ಹೀಗೆ ಸಿಎಂ ಆಗಿ ಅಧಿಕಾರ ನಡೆಸಿದ್ದಾರೆ.
ದಲಿತರು ಯಾಕೆ ಈ ಅವಕಾಶದಿಂದ ಇಂದಿಗೂ ವಂಚಿತರಾಗಿದ್ದಾರೆ ಇದಕ್ಕೆ ವ್ಯವಸ್ಥಿತ ಸಂಚು ಕಾರಣ ಎಂಬ ಮಾತುಗಳು ಸಮಾವೇಶದ ಹಲವು ಹಂತಗಳ ಚರ್ಚೆಗಳಲ್ಲಿ ಕೇಳಿ ಬಂದವು. ಜಿಕೆ ಗೋವಿಂದರಾವ್, ಅಂಬಾರಾಯ ಅಷ್ಟಗಿ, ಸುಲಫಲ ಶ್ರೀಗಳು, ಕಲಾವಿದ ವಿಜಯ ಹಾಗರಗುಂಡಗಿ, ರವಿ ಮದನಕರ್ ಹಾಗೂ ದಸಂಸ ಜಿಲ್ಲಾ, ರಾಜ್ಯ ಮಟ್ಟದ ಪ್ರಮುಖ ಕಾರ್ಯಕರ್ತರು, ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಸಾಧಕರು ಹಲವರಿಗೆ ಇದೇ ವೇದಿಕೆಯಲ್ಲಿ ಸತ್ಕರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

