ರಾಮಕಥೆಗೆ ಹರಿದು ಬಂತು ಜನಸಾಗರ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.16
ಜೈ ಶ್ರೀರಾಮ್ ನಾಮ ಸ್ಮರಣ... ಎಂದು ಮಧುರ ಕಂಠದಿಂದ ತೇಲಿ ಬಂದ ಗಾಯನ ಒಂದೆಡೆಯಾದರೆ, ಹಾಡು ಮುಗಿಯುವುದರೊಳಗೇ ಮರ್ಯಾದಾ ಪುರುಷೋತ್ತಮನನ್ನು ಚಿತ್ರಿಸಿದ ಕಲಾವಿದರ ಉದ್ಭುತ ಕೈಚಳಕ ಸಭಿಕರನ್ನು ಕುತೂಹಲದ ತುಟ್ಟ ತುದಿಗೆ ಕೊಂಡೊಯ್ದಿತ್ತು.
ಅಚ್ಚರಿ ಮೂಡಿಸುವ ಚಿತ್ರಕಲೆ, ಅಷ್ಟೇ ಮಧುರ ಕಂಠದ ಗಾಯನ ಸೇರಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಕಥಾ ನಿರೂಪಣೆಯ ಒಂದು ಘಟ್ಟ ಪೂರ್ಣಗೊಂಡ ನಂತರ ಅದೆಲ್ಲರ ಸಾರಸಂಗ್ರಹ ಎಂಬಂತೆ ರಂಗದ ಮೇಲೆ ಪ್ರತ್ಯಕ್ಷಗೊಂಡ ರಾಮಾಯಣದ ಪಾತ್ರ ವೈಭವ ಕಂಡು ಜನಮಾನಸ ಜೈ ಶ್ರೀರಾಮ ಎಂದು ಆನಂದದ ಉದ್ಘೋಷಣೆ ಮಾಡಿತ್ತು.
ಜನಸಾಗರ: ಶ್ರೀರಾಮ ಮಾನವ ಜನಾಂಗದ ಆದರ್ಶ ಪುರುಷ. ಹೇಗೆ ಬದುಕು ಕಟ್ಟಬೇಕೆಂದು ತೋರಿಸಿದ ರಾಮನ ನಡೆ ಜನಮಾನಸದ ಬದುಕನ್ನಾವರಿಸಬೇಂಬ ಸತ್ಸಂಕಲ್ಪದೊಂದಿಗೆ ರಾಘವೇಶ್ವರ ಭಾರತಿ ಶ್ರೀಗಳು ಗುಲ್ಬರ್ಗದಲ್ಲಿ ಆಯೋಜಿಸಿರುವ ರಾಮಕಥೆಗೆ ಇಲ್ಲಿನ ನೂತನ ವಿದ್ಯಾಲಯ ಮೈದಾನಕ್ಕೆ ಜನಸಾಗರವೇ ಹರಿದು ಬಂದಿತ್ತು.
ಶುಕ್ರವಾರದ ಶೋಭಾಯಾತ್ರೆಯ ನಂತರ ಶನಿವಾರದಿಂದ ವಿಧ್ಯುಕ್ತವಾಗಿ ಆರಂಭವಾಗಿರುವ ರಾಮಕಥಾ ಸಪ್ತಾಹಕ್ಕೆ ಸಾಕ್ಷಿಯಾಗಲು, ಅಲ್ಲಿನ ಗಾಯನ- ಚಿತ್ರಕಲೆ, ಕೂಜನ, ಅಭಿನಯ ಹೀಗೆ ಹಲವು ಕಲಾಪ್ರಕಾರಗಳ ಸಂಗಮವಾಗಿರುವ ವಾಲ್ಮೀಕಿ ರಾಮಾಯಣದ ಅನಾವರಣಕ್ಕೆ ಸಾಕ್ಷಿಯಾಗುವ ಹಂಬಲದೊಂದಿಗೆ ಪುರುಷ, ಸ್ತ್ರೀಯರು ಅಪಾರ ಸಂಖ್ಯೆಯಲ್ಲಿ ಸೇರಿದ್ದು ವಿಶೇಷವಾಗಿತ್ತು.
ಅದ್ಭುತ ಗಾಯನಸಿರಿ: ವಾಲ್ಮೀಕಿ ರಾಮಾಯಣ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡಿ ಮಂಗಳರಾತಿ ಅರ್ಪಿಸುವುದರೊಂದಿಗೆ ರಾಘವೇಶ್ವರ ಭಾರತಿ ಶ್ರೀಗಳು ರಾಮಕಥೆಗೆ ಶ್ರೀಕಾರ ಹಾಕುತ್ತಿದ್ದಂತೆಯೇ ಗಾಯಕರ ತಂಡದಿಂದ ಗಣನಾಥ- ಗೋಕರ್ಣನಾಥರ ಸ್ಮ ರಮೆಯ ಅದ್ಭುತ ಗಾಯನ ಸಿರಿ ಇಡೀ ವೇದಿಕೆಯನ್ನು ವ್ಯಾಪಿಸಿತು. ಸಂದರ್ಭದ ಚಿತ್ರ ಚಿತ್ರಿಸಿದ ಕಲಾವಿದರು ಗಣನಾಥ ಗೋಕರ್ಣನಾಥನನ್ನು ಪೂಜಿಸುವ ಅದ್ಭುತ ಚಿತ್ರ ಬಿಡಿಸಿದಾಗ ಸೇರಿದ್ದ ಸಭಿಕರೆಲ್ಲರೂ ಅಚ್ಚರಿಯಿಂದ ಅದನ್ನು ಕಣ್ಮಲ್ಲಿ ತುಂಬಿಕೊಂಡರು.
ರಾಮಕಥೆಯ ದಿವ್ಯ ಸಂಕಲ್ಪಕಾರರು, ಸಜ್ಜನರಿಂದ ಕೂಡಿದಂತಹ ಸಮಾಜ ನಿರ್ಮಾಣದ ಕನಸು ಹೊತ್ತು ಇಂತಹ ಕಾರ್ಯಕ್ರಮವನ್ನು ಗುಲ್ಬರ್ಗಕ್ಕೆ ತಂದಿರುವ ಗಂವ್ಹಾರ ಮಠದ ಶ್ರೋತ್ರೀಯ ಬ್ರಹ್ಮನಿಷ್ಠ ಸೋಪಾನನಾಥ ಸ್ವಾಮೀಜಿ, ಪಾಂಡುರಂಗ ಸ್ವಾಮೀಜಿ, ಬಸವರಾಜಪ್ಪ ಅಪ್ಪ, ಎಸ್.ಎಸ್. ಪಾಟೀಲ್, ಬಬಲಾದ ಗುರುಪಾದಲಿಂಗ ಸ್ವಾಮೀಜಿ ಸೇರಿದಂತೆ ಅನೇಕರು ರಾಮಕಥೆಯ ಮೊದಲ ದಿನದ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಸಾಮರಸ್ಯದ ರಾಮಕಥೆ: ಗುಲ್ಬರ್ಗ ರಾಮಕಥೆ ಸಮಾರಂಭದ ಸಂದರ್ಭ ಇಲ್ಲಿ ವಿವಿಧ ಜಾತಿ- ಜನ ಸಮುದಾಯಗಳಲ್ಲಿನ ಸಾಮರಸ್ಯದ ಎಳೆಯನ್ನು ಮತ್ತೂ ಗಟ್ಟಿಗೊಳಿಸಿದೆ ಎಂದೇ ಹೇಳಬೇಕು.
ಏಕೆಂದರೆ ಕಾರ್ಯಕ್ರಮ ಸಂಘಟನೆಯ ಹಿಂದೆ 42ಕ್ಕೂ ಹೆಚ್ಚು ಜಾತಿ- ಸಮುದಾಯದ ಸಂಘಟನೆಗಳು ಸೇರಿಕೊಂಡರೆ ಕಥೆಯ ಮೊದಲ ದಿನ ಸಭಿಕರಾಗಿ ಎಲ್ಲ ಸಮುದಾಯಗಳ ಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿದ್ದು ವಿಶೇಷವಾಗಿತ್ತು.
ವಿಶೇಷವಾಗಿ ಮುಸ್ಲಿಂ ಜನ ಸಮುದಾಯದ ಮಹಿಳೆಯರೂ ರಾಮಕಥೆಯನ್ನು ಆಲಿಸಿ ವೇದಿಕೆಯಲ್ಲಿನ ಅಭಿಯನಗಳು, ಚಿತ್ರಕಲೆ ಮೂಡಿಸಿದ ಪರಿಣಾಮಕಾರಿ ಸಂದೇಶಗಳನ್ನು ಗ್ರಹಿಸುವಲ್ಲಿ ತನ್ಮಯರಾಗಿದ್ದು ಕಂಡುಬಂತು.
ಒಟ್ಟಿನಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ರಾಮಕಥೆ ಮೊದಲ ದಿನವೇ ಗುಲ್ಬರ್ಗದ ಸಭಿಕರ ಮನಸೂರೆಗೊಂಡಿತ್ತು.
ದಶರಥನ ಪರಿಚಯ: ರಾಮಕಥೆಯ ಮೊದಲ ದಿನ ಕಥಾಪ್ರವೇಶವಾಯ್ತು. ದಶರಥ ರಾಜನ ಪರಿಚಯ, ಆತನ ಗುಣಸ್ವಭಾವ ವಿಶ್ಲೇಷಣೆ, ಜ್ಞಾನ ಸಂಪತ್ತು, ಆತನಲ್ಲಿನ ಮಹಾರಥಿ ಗುಣಗಳ ಬಗ್ಗೆ ಸ್ವಾಮೀಜಿಗಳ ಸೊಗಸಾದ ನಿರೂಪಣೆಗೆ ಸಭಿಕರು ತಲೆದೂಗಿದರು. ಅಯೋಧ್ಯೆ ರಾಮನ ಜನ್ಮಭೂಮಿಯಾದರೂ ರಾಮಾಯಣ ನಡೆದದ್ದೆಲ್ಲ ದಕ್ಷಿಣ ಭಾರತದಲ್ಲಿ. ಅದರಲ್ಲೂ ಹೈ- ಕ.ದ ಹಂಪಿ, ಹೊಸಪೇಟೆ, ಕಿಷ್ಕಿಂಧೆ ಭಾಗಕ್ಕೂ ರಾಮಾಯಣಕ್ಕೂ ಹತ್ತಿರದ ನಂಟು. ಇದೇ ಭಾಗದಲ್ಲಿ ತಮ್ಮ ಪರಿಕಲ್ಪನೆಯ ರಾಮಕಥೆ ಸಾಗಿರುವುದು ತುಂಬ ಸಂತಸದ ಸಂಗತಿ. ಗೋಕರ್ಣ ಹನುಮಂತನ ಜನ್ನಸ್ಥಳವಾದರೆ, ಕಿಷ್ಕಿಂಧೆ ಆತನ ಕರ್ಮಭೂಮಿ. ಇಂದಿನ ಪೀಳಿಗೆಗೆ ರಾಮಾಯಣ ಹೊಂದಿರುವ ಹಲವು ನೀತಿ, ಸಂದೇಶಗಳನ್ನು ತಿಳಿ ಹೇಳುವುದೇ ರಾಮಕಥೆ ಹಿಂದಿನ ಉದ್ದೇಶ ಎಂದರು. ಸಂಘಟಕರ ನಿರೀಕ್ಷೆಗೂ ಮೀರಿ ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಜನ ರಾಮಕಥೆ ವೇದಿಕೆಯಿರುವ ಎನ್ವಿ ಮೈದಾನಕ್ಕೆ ಹರಿದು ಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

