ಅಧಿಕಾರಿಗಳ ಆಲಾಪ.. ಜನಪ್ರತಿನಿಧಿಗಳ ಪ್ರಲಾಪ...
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.18
ನೋಟ- 1
ಸ್ಥಾಯಿ ಸಮಿತಿ ಅಧ್ಯಕ್ಷರು- ಮೆಡಮ್, ನಿಮ್ಮಲ್ಲಿ(ಜಿಲ್ಲಾ ಆಸ್ಪತ್ರೆ) ಆಶಾ ಕಾರ್ಯಕರ್ತೆಯರು ಇಲ್ವೇನ್ರಿ, ಏನಿದೆ ಅವರ ಕೆಲಸದ ಪ್ರೋಗ್ರೆಸ್ ರಿಪೋರ್ಟ್?
ಜಿಲ್ಲಾ ಆಸ್ಪತ್ರೆ ಸರ್ಜನ್- ಮಾನ್ಯರೆ(ಸ್ಥಾಯಿ ಸಮೀತಿ ಅಧ್ಯಕ್ಷರನ್ನುದ್ದೇಶಿಸಿ), ನಮ್ಮಲ್ಲಿ ಆಶಾ ಕಾರ್ಯಕರ್ತೆಯರು ಇರೋದಿಲ್ಲ, ನಮ್ಮದೇನಿದ್ದರೂ ಚಿಕಿತ್ಸಾ ವಿಭಾಗ. ಆರೋಗ್ಯ ಇಲಾಖೆಯವರ ಪ್ರಚಾರ ಇತ್ಯಾದಿ ಕೆಲಸಗಳಿಗೆ ಪ್ರತಿಯಾಗಿ ಹಳ್ಳಿ ಮಂದಿ ಆಸ್ಪತ್ರೆಗೆ ಬಂದಾಗ ನಾವು ಚಿಕಿತ್ಸೆ ನೀಡುತ್ತೇವೆ.
ನೋಟ- 2
ಜಿಪಂ ಅಧ್ಯಕ್ಷರು- ನೀವು ಕೊಡೋ ಫಿಗರ್ರು ಬ್ಯಾರೇನೇ ಅವ, ಅವ್ರು ಹೇಳಿದ್ದು ಬ್ಯಾರೇನೆ ಅದಾವಲ್ರಿ, ಇದರಲ್ಲಿ ತಾಳ ಮೇಳ ಇಲ್ಲಲ್ರಿ... ಇದೇನಿದು..?
ಡಿಎಚ್ಒ- ಸರ್, ನಮ್ಮದು ಆರೋಗ್ಯ- ಕುಟುಂಬ ಕಲ್ಯಾಣ ಇಲಾಖೆ, ಅವರದ್ದು(ಜಿಲ್ಲಾ ಆಸ್ಪತ್ರೆ) ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಆಸ್ಪತ್ರೆ. ಅವರು ಆಸ್ಪತ್ರೆಯಲ್ಲಿ ಸೇವೆ ಕೊಟ್ಟರೆ ನಾವು ಆಶಾ ಕಾರ್ಯಕರ್ತೆಯರ ಮೂಲಕ ಹಳ್ಳಿಹಳ್ಳಿ ಸುತ್ತಿ ಜನಜಾಗೃತಿ ಸೇವೆ ಮಾಡೋದು. ಅದ್ಕೇ ಅವರ ಸಾಧನೆಗೂ ನಮ್ಮದಕ್ಕೂ ವ್ಯತ್ಯಾಸ.
ನೋಟ- 3
ತೋಟಗಾರಿಕೆ ಅಧಿಕಾರಿ- ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಕೊಡಲು ರೈತರ ತರಬೇತಿಗೆಂದು 2 ಲಕ್ಷ ಅನುದಾನವಿದೆ. ಫೆಬ್ರವರಿವರೆಗೂ 50 ಸಾವಿರ ವೆಚ್ಚವಾಗಿದೆ. ಮಾರ್ಚ್ನೊಳಗಾಗಿ ಉಳಿದ 1.50 ಲಕ್ಷ ವೆಚ್ಚ ಮಾಡುತ್ತೇವೆ.
ತೋಟಗಾರಿಕೆ ಇಲಾಖೆ ಅಧಿಕಾರಿಯ ಈ ಹೇಳಿಕೆಗೆ ಅಧ್ಯಕ್ಷರಾದಿಯಾಗಿ ಎಲ್ಲರೂ ಮೌನ. ರೈತರ ತರಬೇತಿ ವಿಚಾರದಲ್ಲಿ ಫೆಬ್ರವರಿಗೆ ವೆಚ್ಚವಾಗಿದ್ದು ಕೇವಲ 50 ಸಾವಿರ. ಇನ್ನೇನು ಮಾರ್ಚ್ ಮುಗಿಯಲು 12 ದಿನ ಬಾಕಿ. ಇಷ್ಟರೊಳಗೆ 1.50 ಲಕ್ಷ ರೈತರಿಗೆ ತರಬೇತಿ ನೀಡಿ ಖರ್ಚು ಮಾಡುವುದು ಸಾಧ್ಯವೇ ಎಂದು ಸಭೆಯಲ್ಲಿದ್ದ ಜನನಾಯಕರಾರೂ ಪ್ರಶ್ನೆ ಎತ್ತಿ ರೈತ ಸಂಬಂಧಿತ ಈ ವಿಷಯದ ಚರ್ಚೆಗೆ ಮುಂದಾಗಲಿಲ್ಲ.
ನೋಟ- 4
ಡಿಎಚ್ಒ- ಈ ಬಾರಿ 17 ಮಂದಿಗೆ ಮನವೊಲಿಸಿ ವ್ಯಾಸೆಕ್ಟಮಿ ಆಪರೇಷನ್ ಮಾಡಿಸಿದ್ದೇವೆ. ನಿವೇಶನ ರಹಿತರಿಗೆ ನಿವೇಶನ ಕೊಡಿಸುವುದಾಗಿ ಹೇಳಿದ್ದೇ ಈ ಸಾದನೆಗೆ ಕಾರಣವಾಯ್ತು. ಚಿಂಚೋಳಿಯಲ್ಲೇ 11 ಮಂದಿ ವ್ಯಾಸೆಕ್ಟಮಿಗೆ ಒಳಗಾಗಿದ್ದಾರ್ರಿ.
ಸ್ಥಾಯಿ ಸಮಿತಿ ಅಧ್ಯಕ್ಷ- ಇದು ಸರಿಯಲ್ಲ, ನೀವು ಕುಟುಂಬ ಯೋಜನೆ ಮಾಹಿತಿ ಕೊಟ್ಟು ವ್ಯಾಸೆಕ್ಟಮಿಗೆ ಮುಂದಾಗಬೇಕಿತ್ತು. ಹೀಗೆಲ್ಲ ಹೇಳಿದರೆ ತಪ್ಪಲ್ಲವೇ?
ಸಿಇಒ- ಅಯ್ಯೋ ಸರ್ಕಾರದ ಅನುಮತಿ ಇಲ್ಲದೆ ಯಾವ ಯೋಜನೆಯೊಂದಿಗೂ ವ್ಯಾಸೆಕ್ಟಮಿ ಫಲಾನುಭವಿಗಳನ್ನು ಜೋಡಿಸಲಾಗದು ಅಂತ ಹೇಳ್ರಿ...
- ಇಲ್ಲಿನ ಹಳೇ ಜಿಪಂ ಸಭಾಂಗಣದಲ್ಲಿ ಸೋಮವಾರ ಸೇರಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದ ಅಧಿಕಾರಿಗಳು, ಜಿಪಂ ಅಧ್ಯಕ್ಷರು, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರ ನಡುವಿನ ಸಂವಾದದ ಝಲಕ್ ಇದು.
ಸಭೆ ನಡೆದ ಸಿಂಹಪಾಲು ಇಂತಹ ಅಸಂಬದ್ಧ ಆಲಾಪ- ಪ್ರಲಾಪಗಳದ್ದೇ ಸಿಂಹಪಾಲು. ಹೀಗಾಗಿ ಉರಿ ಬೇಸಿಗೆಯ ಈ ದಿನಗಳಲ್ಲಿ ಜಿಲ್ಲೆಯ ಜನಜೀವನ ಎದುರಿಸುತ್ತಿರುವ ನೀರು, ಆರೋಗ್ಯದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದ್ದು ಅಷ್ಟಕ್ಕಷ್ಟೆ.
ಮಿಂಚಿ ಮರೆಯಾದ ಸಮಸ್ಯೆಗಳು: ಅಂಗನವಾಡಿಗಳ ನಿವೇಶನ ಸಮಸ್ಯೆ, ಕಾರ್ಯಕರ್ತೆಯರು ಸ್ಥಳದಲ್ಲಿಲ್ಲದೆ ಮಕ್ಕಳು ಬಿಸಿಲಲ್ಲಿ ಅಡ್ಡಾಡುತ್ತಿರುವ ವಿಚಾರಗಳು ಸಭೆಯಲ್ಲಿ ಆಗಾಗ ಪ್ರಸ್ತಾಪವಾದವಾದರೂ ಅವುಗಳು ಹೆಚ್ಚು ಹೊತ್ತು ಚರ್ಚೆ ರೂಪದಲ್ಲಿ ಸಭಾಂಗಣದಲ್ಲಿ ಪ್ರತಿಧ್ವನಿಸದೆ ಮಿಂಚಿ ಮರೆಯಾದವು.
ಅಧ್ಯಕ್ಷರಾದಿಯಾಗಿ ಅಲ್ಲಿದ್ದ ಜನಪ್ರತಿನಿಧಿಗಳು ಇಲಾಖಾವಾರು ಕಾರ್ಯಕಮಗಳ ಕುರಿತಂತೆ ಚರ್ಚೆ ನಡೆಸುವಾಗ ನಡೆಸಿದ ಅಸಂಬದ್ಧ ಚರ್ಚೆಗಳು ಸಭೆಯ ಅನೇಕ ಸಂದರ್ಭಗಳಲ್ಲಿ ಅಲ್ಲಿದ್ದ ಹಿರಿಯ ಅಧಿಕಾರಿಗಳನ್ನು, ಸಾರ್ವಜನಿಕರನ್ನು, ಪತ್ರಕರ್ತರನ್ನು ಬೆಚ್ಚಿ ಬೀಳಿಸಿದ್ದವು. ಆದಾಗ್ಯೂ ಸುಧಾರಿಸಿಕೊಂಡು ಅನೇಕರು ತಮ್ಮ ಇಲಾಖೆಯ ಕಾರ್ಯವ್ಯಾಪ್ತಿ ಇತ್ಯಾದಿಗಳ ಬಗ್ಗೆ ವಿವರಿಸುವುದರಲ್ಲಿಯೇ ಕಾಲ ಕಳೆದರು.
ಡಿಡಿಪಿಐ ಖುದ್ದು ಶಾಲೆಯೊಂದರ ಶಿಥಿಲ ಕೋಣೆ ಸಮಸ್ಯೆ ಸಭೆಯ ಗಮನಕ್ಕೆ ತಂದರೂ ಸಭೆಯಲ್ಲಿ ಆ ಬಗ್ಗೆ ಹೆಚ್ಚಿನ ಚರ್ಚೆಗಳಾಗಲಿಲ್ಲ. ಬದಲಾಗಿ ಬಗೆಹರಿಯದೆ ಕಬ್ಬಿಣದ ಕಡಲೆಯಾಗಿರುವ ಶೌಚಾಲಯ ಸಮಸ್ಯೆಯ ಬಗ್ಗೆ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು.
ನೋಟಿಸ್ ಕೊಟ್ಟೀವ್ರಿ: ಸಭೆಯಲ್ಲಿ ತುಸು ಗಂಭೀರವಾಗಿ ನಡೆದದ್ದು ಜೇವರ್ಗಿ, ಆಳಂದ ತಾಲೂಕಿನ ಅಂಗನವಾಡಿ ವಿಚಾರ. ಜೇರಟಗಿ, ಹುಲ್ಲೂರ್, ಬೇಲೂರು ಇಲ್ಲೆಲ್ಲಾ ಅಂಗನವಾಡಿಗಳೇ ಮುಚ್ಚಿರುತ್ತವೆ. ಮಕ್ಕಳಿಗೂ ತೊಂದರೆ ಎಂಬ ಚರ್ಚೆಗೆ ಸದಸ್ಯರು ಧ್ವನಿಗೂಡಿಸಿದ್ದು ವಿಶೇಷವಾಗಿತ್ತು. ಆಗ ಸ್ಪಂದಿಸಿದ ಇಲಾಖೆಯ ಉಪ ನಿರ್ದೇಶಕಿ ರತ್ನಾ ಕಲಂದಾನಿ, ಇಂತಹ ಬೆಳವಮಿಗೆ ಕಂಡಲ್ಲೆಲ್ಲಾ ಕಾರಣ ಕೇಳುವ ನೋಟೀಸ್ ನೀಡಿದ್ದಾಗಿ ಹೇಳಿದರಲ್ಲದೆ ವೇತನ ಕಡಿತ ಇತ್ಯಾದಿ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಸಮಜಾಯಿಷಿ ನೀಡಿದರು.
ಬಿಸಿಯೂಟದ ಬಿಸಿ ತಟ್ಟಲೇ ಇಲ್ಲ: ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ 4 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಬಿಸಿಯೂಟ ಸ್ಥಗಿತಗೊಂಡಿದೆ ಎಂಬ ಬಿಸಿ ಸಮಾಚಾರ ಸಭೆಯಲ್ಲಿ ಸ್ಫೋಟಗೊಂಡರೂ ಇದು ಗಂಭೀರ ಚರ್ಚೆಗೆ ಗ್ರಾಸವಾಗಲೇ ಇಲ್ಲ. ಬೇಳೆ ಟೆಂಡರ್ನಲ್ಲಿನ ಗೊಂದಲವೇ ಇದಕ್ಕೆ ಕಾರಣವೆಂದು ಸಂಬಂಧಿತ ಅಧಿಕಾರಿ ಹೇಳಿದರೂ ಯಾರೂ ಅಷ್ಟಾಗಿ ಲಕ್ಷ ಕೊಡಲಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಸಾವಳೇಶ್ವರ ಈ ಬಗ್ಗೆ ತರಾಟೆಗೆ ತೆಗೆದುಕೊಂಡರೂ ಯಾರೂ ಕ್ಯಾರೆ ಏನ್ನಲಿಲ್ಲ. ಸಭೆ ಚಲ್ತೆ ಕಾ ನಾಮ್... ಎಂಬಂತೆ ಮುಂದುವರಿಯಿತು. ಸಭೆಯುದ್ದಕ್ಕೂ ವಿದ್ಯುತ್ ಕಣ್ಣಾಮುಚ್ಚಾಲೆ ನಡೆದಿತ್ತು. ಇದರಿಂದಾಗಿ ಸಭಾಂಗಣದ ಫ್ಯಾನ್ ಸೌಕರ್ಯ ಸ್ಥಗಿತಗೊಂಡಿತ್ತು. ಸೆಕೆಯಲ್ಲಿಯೂ ಅನೇಕ ಅಧಿಕಾರಿಗಳು ಚೌಚೌ ಬಾತ್ ಗಡದ್ದಾಗಿ ಜಡೆದು(ಸೇವಿಸಿ) ಚರ್ಚೆ ಮಧ್ಯೆಯೇ ನಸುನಿದ್ರೆಗೂ ಮೊರೆ ಹೋಗಿದ್ದ ನೋಟಗಳು ಕಂಡವು.
- ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

