ಗುಲ್ಬರ್ಗಾ

ಕುಡಿವ ನೀರಿನ ಕಾಮಗಾರಿಗೆ ಆದ್ಯತೆ ನೀಡಿ: ಸೂಚನೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.18
ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಸುವ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶರಣಪ್ಪ ವೀರಶೆಟ್ಟಿ ಪೊಲೀಸ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ನಗರದ ಜಿಪಂ ಹಳೆ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಭೀಮಕ್ಕನವರ್ ವರದಿ ಮಂಡಿಸುವ ಮಧ್ಯೆ ಅಧ್ಯಕ್ಷರು ಮೇಲಿನಂತೆ ಸೂಚನೆ ನೀಡಿದರು.
ಕಾಮಗಾರಿ ಪೂರ್ಣ: ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಯೋಜನೆಯಡಿ 2012- 13ನೇ ಸಾಲಿಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ವಾರ್ಷಿಕವಾಗಿ ಬಿಡುಗಡೆಯಾಗಿದ್ದ ರು. 57. 22 ಕೋಟಿ ಗಳಲ್ಲಿ ಫೆಬ್ರವರಿ ಅಂತ್ಯದವರೆಗೆ ರು. 44 ಕೋಟಿ ವೆಚ್ಚಮಾಡಿ 544 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇತ್ತೀಚೆಗೆ ಅಫಜಲ್ಪುರ ತಾಲೂಕಿನ ರೇವೂರ ಕೆ., ಸ್ಟೇಷನ್ ಗಾಣಗಾಪುರದ ನಲ್ಲಿ ನೀರು ಸರಬರಾಜು ಕಾಮಗಾರಿಗಳಿಗೆ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಕಾಮಗಾರಿ ಮುಕ್ತಾಯ: ಈ ಯೋಜನೆಯಲ್ಲಿ ಮೇಲ್ಮಟ್ಟದ ನೀರು ಸಂಗ್ರಹಾಗಾರಕ್ಕೆ ಕುಡಿಯುವ ನೀರಿನ ನಲ್ಲಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಅದರಂತೆ ಅಳಂದ ತಾಲೂಕಿನ ಖಂಡಾಲ ಹಾಗೂ ಸಿಸಲಿಯಲ್ಲಿ ನಲ್ಲಿ ನೀರು ಸರಬರಾಜು ಯೋಜನೆಯ ಕಾಮಗಾರಿಗಳು ಮುಕ್ತಾಯವಾಗಿವೆ. ಚಿಂಚೋಳಿಯ ವಜೀರ್ ಗಾಂವ್ ಗ್ರಾಮದಲ್ಲಿಯೂ ಇತ್ತೀಚೆಗೆ ಈ ಯೋಜನೆ ಕಾಮಗಾರಿ ಮುಕ್ತಾಯಗೊಂಡಿದೆ ಎಂದು ಜಿಪಂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಭೀಮಕ್ಕನವರ್ ಸಭೆಗೆ ಮಾಹಿತಿ ನೀಡಿದರು.
ಅಭಾವ ಪರಿಹಾರ ಯೋಜನೆಯಡಿ ಮಂಜೂರಾದ ಕಾಮಗಾರಿಗಳಲ್ಲಿ 2012- 13ನೇ ಸಾಲಿಗೆ ಒಟ್ಟಾರೆ ರು. 9.30 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ಫೆಬ್ರವರಿ ಅಂತ್ಯಕ್ಕೆ ರು. 8 ಕೋಟಿ 50 ಲಕ್ಷ ಸಂಚಿತ ಗುರಿಯನ್ನು ನೀಡಲಾಗಿತ್ತು. ಅದರಲ್ಲಿ ರು. 8.35 ಕೋಟಿ ಸಂಚಿತ ಸಾಧನೆಯನ್ನು ಮಾಡಿ ಒಟ್ಟು 1111 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಬಾವಿಗೆ ಸುತ್ತುಗೋಡೆ: ಈ ಯೋಜನೆಯಡಿಯಲ್ಲಿ ಇತ್ತೀಚೆಗೆ ಚಿಂಚೋಳಿ ತಾಲೂಕಿನ ಹಣದುನಾಯ್ಕ ತಾಂಡದಲ್ಲಿ ಕುಡಿಯುವ ನೀರಿಗೆ ಪೈಪ್‌ಲೈನ್ ಅಳವಡಿಸುವ ಹೆಚ್ಚುವರಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ಕೊಂಚಾವರಂ ಗ್ರಾಮದಲ್ಲಿ ಬಾವಿಗೆ ಸುತ್ತುಗೋಡೆಯನ್ನು ನಿರ್ಮಾಣ ಮಾಡಲಾಗಿದೆ. ಟಾಸ್ಕ್‌ಫೋರ್ಸ್ ಸಿಆರ್‌ಎಫ್‌ನಲ್ಲಿ ಮಂಜೂರಾದ 595 ಕಾಮಗಾರಿಗಳಲ್ಲಿ ಇದುವರೆಗೂ 585 ಕಾಮಗಾರಿಗಳು ಮುಕ್ತಾಯವಾಗಿವೆ.
ಅದಕ್ಕಾಗಿ ಕಳೆದ ಸಾಲಿನಲ್ಲಿ ರು. 10.96 ಕೋಟಿಯಲ್ಲಿ ರು. 8.62 ಕೋಟಿ ಬಿಡುಗಡೆಯಾಗಿತ್ತು. ಸಂಭವನೀಯ ಕ್ರಿಯಾ ಯೋಜನೆಯಡಿ ರು. 16.30 ಕೋಟಿಗಳಲ್ಲಿ ರು. 86 ಲಕ್ಷ ಬಿಡುಗಡೆಯಾಗಿದ್ದು, ಅದರಲ್ಲಿ 752 ಕಾಮಗಾರಿಗಳನ್ನು ನಿಗದಿಗೊಳಿಸಲಾಗಿತ್ತು. ಅದರಲ್ಲಿ 66 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.