ಗುಲ್ಬರ್ಗಾ

ಪರಿಹಾರ ಕೇಳಲು ಬಂದವರಿಗೆ ರೆಡ್ ಸಿಗ್ನಲ್!

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮಾ. 19
ಜೇವರ್ಗಿ ಹೆಲಿಪ್ಯಾಡ್ ರಸ್ತೆಯಲ್ಲಿಂದು ಕೆಲಕಾಲ ಹೋರಾಟಗಾರರು ಹಾಗೂ ಪೊಲೀಸ್ ಮಧ್ಯೆ ವಾಗ್ವಾದ- ಮಾತಿನ ಚಕಮಕಿ ನಡೆಯಿತು. ಇದರಿಂದಾಗಿ ಪೊಲೀಸರು ಮನವಿ ಕೊಡಲು ಬಂದ ಹೋರಾಟಗಾರರನ್ನೇ ಬಂಧಿಸಿ ವ್ಯಾನ್‌ನಲ್ಲಿ ಕುಳ್ಳಿರಿಸಿದ ಘಟನೆಯೂ ನಡೆಯಿತು.
ಈ ಘಟನೆಯನ್ನು ತಿಳಿದ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸ್ಥಳಕ್ಕೆ ಧಾವಿಸಿ ಹೋರಾಟಗಾರರು ಹಾಗೂ ಪೊಲಾಸ್ ಮಧ್ಯೆ ಮಾತುಕತೆ ನಡೆಸಿದರಲ್ಲದೆ ರೈತರು ಸಿಎಂಗೆ ಹೆಲಿಪ್ಯಾಡಿನಲ್ಲೇ ಮನವಿ ಕೊಡುವಂತಹ ವ್ಯವಸ್ಥೆ ಮಾಡಿದಾಗ ವಾತಾವರಣ ತಿಳಿಯಾಯ್ತು.
ಹೋರಾಟಗಾರ್ತಿ ಜಿಪಂ ಸದಸ್ಯೆ ಶೋಭಾ ಬಾಣಿ, ಹಿರಿಯ ಕಾಮ್ರೆಡ್ ಗೋಪಾಲರಾವ ಗುಡಿ ಸೇರಿದಂತೆ ನೂರಾರು ರೈತರು ಹೆಲಿಪ್ಯಾಡಿಗೆ ಬಂದಿದ್ದರು. ನಿತ್ಯ ತಾವು ಅನುಭವಿಸುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ಸಿಎಂ ಅವರಿಗೆ ಹೇಳಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸುವುದೇ ಅವರ ಗುರಿಯಾಗಿತ್ತು.
ರೈತರ ಘೋಷಣೆ: ಆದರೆ ಪೊಲೀಸರು ಮನವಿ ಕೊಡಲಿಕ್ಕೂ ಆಸ್ಪದ ಕೊಡದಿದ್ದಾಗ ಕೆರಳಿದ ರೈತರು ಘೋಷಣೆ ಕೂಗಿದರು. ಇದಕ್ಕೆ ಸ್ಥಳದಲ್ಲೇ ಇದ್ದಂತಹ ಕಾಂಗ್ರೆಸ್ ನಾಯಕರಾದ ಅಲ್ಲಂಪ್ರಭು ಪಾಟೀಲ್, ಡಾ. ಅಜಯ್‌ಸಿಂಗ್ ಮೊದಲಾದವರು ಕೈಜೋಡಿಸಿದರು. ಹೀಗಾಗಿ ಹೋರಾಟದ ವಾತಾವರಣ ಬೇರೆ ರೀತಿಯಲ್ಲಿ ತಿರುವು ಪಡೆದುಕೊಳ್ಳುವ ಲಕ್ಷಣ ಕಂಡಾಗ ಇದನ್ನರಿತ ಶಾಸಕ ದೊಡ್ಡಪ್ಪಗೌಡ ತಕ್ಷಣ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರಲ್ಲದೆ ಪೊಲೀಸ್ ವ್ಯಾನ್‌ನಲ್ಲಿದ್ದ ಹೋರಾಟಗಾರರನ್ನು- ರೈತರನ್ನು ಬಂಧಮುಕ್ತರನ್ನಾಗಿಸಿ ಸಿಎಂಗೆ ಮನವಿ ಕೊಡಲು ಅವಕಾಶ ಕಲ್ಪಿಸಿದರು.
ಮೂರು ಫೇಸ್ ಕರೆಂಟ್ ರಾತ್ರಿಗಿಂತ ಹಗಲು ಹೊತ್ತು ಕೊಡಬೇಕು. ವಿದ್ಯುತ್ ಪೂರೈಕೆಯಲ್ಲಿನ ತೊಂದರೆಗಳನ್ನು ನೀಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ರೈತರು ಸಿಎಂ ಶೆಟ್ಟರ್ ಅವರಿಗೆ ನೀಡಿದರು.ಧರಂಗೆ ಇಲ್ಲದ ಆಹ್ವಾನ; ಕೆರಳಿದ ಕೈಪಡೆ:ಮಾಜಿ ಸಿಎಂ, ಬೀದರ್ ಸಂಸದ್ ಧರಂಸಿಂಗ್ ಅವರಿಗೆ ಸದರಿ ಸಮಾರಂಭದಿಂದ ದೂರ ಇಡಲಾಗಿದೆ. ಇದಕ್ಕೆ ಸ್ಥಳೀಯ ಬಿಜೆಪಿ ಶಾಸಕ ದೊಡ್ಡಪ್ಪಗೌಡ ಕಾರಣ. ಈ ಮೂಲಕ ಜನರಲ್ಲಿ ತಪ್ಪು ಸಂದೇಶ ರವಾನಿಸುವುದೇ ಅವರ ಹುನ್ನಾರ. ಈಗ ಚಾಲನೆ ನೀಡುತ್ತಿರುವ 78 ಕಾಮಗಾರಿಗಳಲ್ಲಿ ಅರ್ಧಕ್ಕೂ ಅಧಿಕ ಧರಂಸಿಂಗ್ ಕಾಲದವಾಗಿವೆ. ಮಾಜಿ ಸಿಎಂ ಎಂಬ ಕಾರಣಕ್ಕಾದರೂ ಅವರಿಗೆ ಆಹ್ವಾನಿಸುವ ಸೌಜನ್ಯ ತೋರಲಾಗಿಲ್ಲ. ಇದು ಸರ್ಕಾರದ ಸಮಾರಂಭವಲ್ಲ, ಪಕ್ಷದ ಕಾರ್ಯಕ್ರಮ ಎಂದು ಕಾಂಗ್ರೆಸ್ ಶಾಸಕರು, ಕಾರ್ಯಕರ್ತರೆಲ್ಲರೂ ಕೋಪದಲ್ಲಿ ಸಿಎಂ ಶೆಟ್ಟರ್ ಅವರನ್ನು ಕಂಡು ತಮ್ಮ ಮನವಿ ಪತ್ರ ಸಲ್ಲಿಸಿ ಸಮಾರಂಭ ಬಹಿಷ್ಕರಿಸಿದ ಪ್ರಸಂಗವೂ ನಡೆಯಿತು.
ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಡಾ. ಅಜಯ್‌ಸಿಂಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ನೀರಡಗಿ ಸೇರಿದಂತೆ ಅನೇಕರು ಹೋರಾಟದಲ್ಲಿ ಭಾಗವಹಿಸಿ ಧರಂಗೆ ಆಹ್ವಾನ ನೀಡದೆ ಇರುವುದು ಸ್ಥಳೀಯ ಶಾಸಕರ ರಾಜಕೀಯ ಭಾಗ ಎಂದು ಶೆಟ್ಟರ್ ಅವರಿಗೆ ಮನವರಿಕೆ ಮಾಡುವ ಯತ್ನ ಮಾಡಿದರು.
ಕೆರಳಿದ ಎಸ್ಪಿ:ಜೇವರ್ಗಿ ಹೆಲಿಪ್ಯಾಡಿನಲ್ಲಿ ಮಂಗಳವಾರ ಎಸ್ಪಿ ಸತೀಶ ಕುಮಾರ್ ಹಾಗೂ ಸ್ಥಳೀಯ ವಕೀಲರೊಬ್ಬರ ಮಧ್ಯೆ ಬಹುಹೊತ್ತು ವಾಗ್ವಾದ- ಮಾತಿನ ಚಕಮಕಿ ನಡೆಯಿತು. ವಕೀಲರ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿ ಎಸ್ಪಿ ಹಾಗೂ ಇತರೆ ಅಧಿಕಾರಿಗಳನ್ನು ಬೈದಾಗ ಕೆರಳಿದ ಎಸ್ಪಿ ಸತೀಶ ಕುಮಾರ್ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಅವರ ಬಂಧನಕ್ಕೆ ಸೂಚಿಸಿದರಲ್ಲದೆ ಬೈಗುಳಕ್ಕೆ ಪ್ರತಿಯಾಗಿ ಕ್ಷಮಾಪಣೆಗೆ ಒತ್ತಾಯಿಸಿದರು.
ಇಲ್ಲಿ ಡಾ. ಅಂಜಯ್‌ಸಿಂಗ್ ಮಧ್ಯಪ್ರವೇಶ ಮಾಡುವ ಮೂಲಕ ಕೆರಳಿದ ಎಸ್ಪಿ- ಬೈಗುಳ ನೀಡಿದ್ದವರ ಮಧ್ಯೆ ರಾಜಿ ಒಪ್ಪಂದವಾಗುವಂತೆ ಮಾಡಿದರಲ್ಲದೆ ಹೆಲಿಪ್ಯಾಡನಲ್ಲಿಯೇ ಇಂತಹ ಹಲವು ಸಂಘರ್ಷಗಳ ಮೇಲೆ ನಿಗಾ ಇಟ್ಟು ಅವುಗಳೆಲ್ಲವೂ ತಪ್ಪುವಂತೆ ಪ್ರಯತ್ನಿಸಿದರು.
ಶಸ್ತ್ರಾಸ್ತ್ರ ಜತೆ ಮಾಜಿ ತಾಪಂ ಅಧ್ಯಕ್ಷ: ಮಾಜಿ ತಾಪಂ ಅಧ್ಯಕ್ಷ ರಾಜಶೇಖರ ಪಾಟೀಲ್ ಅರವಳ್ಳಿ ಅವರು ಎಸ್ಪಿ ಸತೀಶ ಕುಮಾರ್ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು.ಅವರ ಸೊಂಟದಲ್ಲಿ ಶಸ್ತ್ರಾಸ್ತ್ರ ಇರುವುದನ್ನು ಗಮನಿಸಿ ಎಸ್ಪಿ ಸತೀಶ ಕುಮಾರ್ ಖುದ್ದಾಗಿ ತಾವೇ ಮುಂದಾಗಿ ಅರವಳ್ಳಿಯನವರನ್ನು ಹೆಲಿಪ್ಯಾಡ್ ಮುಖ್ಯ ಸ್ಥಳದಿಂದ ದೂರ ಕರೆತಂದರಲ್ಲದೆ ವೆಪನ್ ಸಮೇತ ಒಳಗೆ ಬಂದಂದಕ್ಕೆ ಹಿಗ್ಗಾಮುಗ್ಗಾ ಬೈದರು. ಈ ಪ್ರಸಂಗ ಪುನರಾವರ್ತನೆಯಾದರೆ ಹುಶಾರ್,  ಎಂದು ತಾಕೀತು ಮಾಡಿದ  ಪ್ರಸಂಗ ನಡೆಯಿತು. ಖುದ್ದು ಎಸ್ಪಿ ಅವರೇ ರಾಜಕುಮಾರ್ ಅವರನ್ನು ಸಿಎಂ ಇದ್ದ ಹೆಲಿಪ್ಯಾಡ್‌ನಿಂದ ದೂರ ಕರೆತಂದಿದ್ದು ಯಾಕೆ ಎಂಬುದು ಗೊತ್ತಾಗಲಿಲ್ಲವಾದರೂ ಈ ಪ್ರಸಂಗದ ವಿಚಾರಣೆ ನಡೆಸಿದಾಗ ಶಸ್ತ್ರಾಸ್ತ್ರ ಸಮೇತ ರಾಜಕುಮಾರ್ ಬಂದಿದ್ದ ಸಂಗತಿ ಬಯಲಾಯ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.