ಬಿಟ್ಟುಕೊಡುತ್ತಿಲ್ಲ ಗುಟ್ಟು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.22
ಕುಸ್ತಿಪಟು ರೇವುನಾಯಕ ಬೆಳಮಗಿ ತಮ್ಮ ರಾಜಕೀಯ ಜೀವನದಲ್ಲಿಯೂ ಕುಸ್ತಿ ಅಖಾಡದಲ್ಲಿನ ಗುಟ್ಟಿನ ಸೂತ್ರಗಳನ್ನೇ ಪ್ರಯೋಗಿಸುತ್ತಿರುವಂತಿದೆ!
ಕುಸ್ತಿ ಗೆಲ್ಲುವಾಗ ಅದ್ಹೇಗೆ ಯಾವ ಪಟ್ಟು ಹಾಕಲಾಗುತ್ತದೆ ಎಂಬುದರ ಸುಳಿವೂ ಎದುರಾಳಿ ಗುಂಪಿಗೆ ಚೂರು ಬಿಟ್ಟುಕೊಡುವುದಿಲ್ಲವೋ, ಅದೇ ರೀತಿ ಬೆಳಮಗಿ ರಾಜಕೀಯ ಕುಸ್ತಿಯಲ್ಲೂ ಗುಟ್ಟು ಬಿಟ್ಟುಕೊಡುತ್ತಿಲ್ಲ.
ಇದರಿಂದ ಗುಲ್ಬರ್ಗ ಗ್ರಾಮೀಣ ರಾಜಕೀಯ ಬೆಳಮಗಿ ಸುತ್ತಲೇ ಗಿರಕಿ ಹೊಡೆಯುವಂತಾಗಿದೆ. ತಾವು ಬಿಜೆಪಿಯಲ್ಲೇ ಮುಂದುವರಿಯುವ ಅಥವಾ ಕೆಜೆಪಿ ಸೇರುವ ವಿಚಾರದಲ್ಲಿ ಕಳೆದ ಅನೇಕ ತಿಂಗಳಿಂದ ಗೊಂದಲಕಾರಿ ಹೇಳಿಕೆಗಳನ್ನೇ ನೀಡುತ್ತ ದಿನದೂಡುತ್ತಿರುವ ಬೆಳಮಗಿ ಚುನಾವಣೆ ಘೋಷಣೆಯಾದರೂ ಆ ಬಗ್ಗೆ ಮೌನ ಮುರಿದಿಲ್ಲ.
ಸತತ 4 ಬಾರಿ ಗುಲ್ಬರ್ಗ ಗ್ರಾಮೀಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಬೆಳಮಗಿ ತಾವು ಯಡಿಯೂರಪ್ಪ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡವರು. ಯಡಿಯೂರಪ್ಪ ಬಿಜೆಪಿ ತ್ಯಜಿಸಿ ಕೆಜೆಪಿ ಕಟ್ಟಿದಾಗ ಬೆಳಮಗಿ ನಿಲುವೇನು ಎಂಬ ಕುತೂಹಲ ಹುಟ್ಟಿದ್ದು ಸಹಜ. ಆಗಿನಿಂದಲೂ ಬೆಳಮಗಿ ಹಾರಿಕೆ ಉತ್ತರಗಳನ್ನೇ ನೀಡುತ್ತಿದ್ದಾರೆ ಹೊರತು ಕಡ್ಡಿ ಮುರಿದಂತೆ ಯಾವುದೇ ನಿರ್ಧಾರವನ್ನು ಸ್ಪಷ್ಟಪಡಿಸುತ್ತಿಲ್ಲ.
ಗೊಂದಲ ಒಪ್ಪಿಕೊಂಡ ಬೆಳಮಗಿ: ತಂದೆತಾಯಿ, ಕ್ಷೇತ್ರದ ಜನತೆ ತಮಗೆ ಮುಖ್ಯ ಎಂದು ಹೇಳಿದ್ದ ಬೆಳಮಗಿ, ನಂತರದ ದಿನಗಳಲ್ಲಿ ಬಿಜೆಪಿ ತಮ್ಮ ತಾಯಿ ಎಂದೂ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಇವರನ್ನು ತಂದೆ ಹಾಗೂ ಗುರುಗಳಿಗೆ ಹೋಲಿಸುವ ಮೂಲಕ ರಾಜಕೀಯವಾಗಿ ಯಾವ ನಿರ್ಣಯ ಕೈಗೊಳ್ಳಲಾಗದೆ ತಾವು ಗೊಂದಲದಲ್ಲಿರುವುದಾಗಿ ಒಪ್ಪಿಕೊಂಡಿದ್ದರು.
ಇತ್ತೀಚೆಗೆ ಚುನಾವಣೆ ದಿನಾಂಕ ಘೋಷಣೆಯಾಗಲಿ, ಆಗ ನಾನು ನನ್ನ ರಾಜಕೀಯ ನಿಲುವು ಸ್ಪಷ್ಟಪಡಿಸುವೆ ಎಂದು ನುಣುಚಿಕೊಂಡಿದ್ದರು. ಅವರು ಹೇಳಿದಂತೆ ಕದನಕ್ಕೆ ಮುಹೂರ್ತವಂತೂ ನಿಗದಿಯಾಗಿದೆ. ಇದಾದ ನಂತರವೂ ಬೆಳಮಗಿ ಇಂದಿಗೂ ಬಾಯಿ ಬಿಟ್ಟಿಲ್ಲ. ಈಚೆಗೆ ಜೇವರ್ಗಿಗೆ ಆಗಮಿಸಿದ್ದ ಸಿಎಂ ಶೆಟ್ಟರ್ ಸಮಾರಂಭದಿಂದಲೂ ದೂರ ಉಳಿಯುವ ಮೂಲಕ ರಾಜಕೀಯವಾಗಿ ಹಲವು ಹೊಸ ಚರ್ಚೆಗಳಿಗೂ ಕಾರಣರಾದರು. ಎಂದಿಗೂ ಅವರು ಬಿಜೆಪಿಯಲ್ಲೇ ಮುಂದುವರಿಯುವ ಹೇಳಿಕೆ ಗಟ್ಟಿಯಾಗಿ ನೀಡಿಲ್ಲ. ಇದರಿಂದಾಗಿಯೇ ಈ ಕುಸ್ತಿಪಟುವಿನ ಹೊಸ ಕುಸ್ತಿ ಅಖಾಡ ಯಾವುದು ಎಂಬ ಕುತೂಹಲದ ಚರ್ಚೆ ಇದೀಗ ಶುರುವಾಗಿದೆ.
ರಾಜಕೀಯ ಗೊಂದಲ: ಚುನಾವಣೆ ದಿನ ನಿಗದಿಯಾಗುತ್ತಿದ್ದಂತೆಯೇ ಗುಲ್ಬರ್ಗ ಗ್ರಾಮೀಣ ಕ್ಷೇತ್ರಕ್ಕೆ ಬಿಜೆಪಿಯಿಂದ, ಕೆಜೆಪಿಯಿಂದ ಕಣಕ್ಕಿಳಿಯುವವರ ಪಟ್ಟಿ ದೊಡ್ಡದಾಗುತ್ತಲೇ ಸಾಗಿದೆ. ಆದರೆ ಈ ಉಭಯ ಪಕ್ಷಗಳ ವರಿಷ್ಠರೂ ಬೆಳಮಗಿ ನಿರ್ಣಯ ನೋಡಿಕೊಂಡೇ ತಮ್ಮ ಅಭ್ಯರ್ಥಿಗಳನ್ನು ಹೆಸರಿಸಲು ನಿರ್ಧರಿಸಿದ್ದಾರೆ.
ಪುತ್ರನಿಗೆ ಪಟ್ಟಾಭಿಷೇಕ: ಬೆಳಮಗಿ ಆಪ್ತರ ಪ್ರಕಾರ ಈ ಬಾರಿ ತಾವು ಸ್ಪರ್ಧಿಸದೆ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಬಯಕೆ ಬೆಳಮಗಿ ಹೊಂದಿದ್ದಾರೆ. ಆದರೂ ಪುತ್ರನನ್ನು ಕಣಕ್ಕಿಳಿಸಿದರೂ ಯಾವ ಪಕ್ಷದ ಹುರಿಯಾಳಾಗಿಸುತ್ತಾರೆ ಎಂಬುದು ನಿಗೂಢ.
ಬೆಳಮಗಿಯವರು ತಾವು ಬಿಜೆಪಿಯಲ್ಲೇ ಮುಂದುವರಿಯುವ, ಪುತ್ರನಿಗೆ ಅನ್ಯ ಪಕ್ಷದ ಅಭ್ಯರ್ಥಿಯಾಗಿಸುವ ಇರಾದೆ ಹೊಂದಿದ್ದಾರೆ ಎಂಬ ಮಾತುಗಳಿದ್ದರೂ ತಮ್ಮ ಈ ಮನದಿಂಗಿತ ಸಾಧಿಸಿಕೊಳ್ಳಲು ಬೆಳಮಗಿ ಇಂದಿಗೂ ಯಾವ ವೇದಿಕೆಯಲ್ಲಿಯೂ ಪ್ರಸ್ತಾಪ ಇಟ್ಟ ಉದಾಹರಣೆಗಳಿಲ್ಲ. ಆದಾಗ್ಯೂ ಆಪ್ತ ವಲಯದಲ್ಲಂತೂ ಈ ಚರ್ಚೆಗಳು ಬಿರುಸಾಗಿ ಸಾಗಿವೆ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

