ರಾಜುಗೌಡರ ಸಾಧನೆ ಮುಂದಿಟ್ಟು ಮತಭಿಕ್ಷೆ
ಕ.ಪ್ರ. ವಾರ್ತೆ, ಹುಣಸಗಿ, ಮಾ.25
ಸುರಪುರ ವಿಧಾನಸಭಾ ಕ್ಷೇತ್ರ ಚುನಾವಣೆ ವಿಷಯ ಎಲ್ಲೆಡೆ ಗಮನ ಸೆಳೆದಿದೆ. ರಾಜ್ಯದ ಅನೇಕ ಕಡೆ ಚುನಾವಣೆ ಪ್ರಚಾರಗಳು ಆರಂಭವಾಗಿದೆ. ಅದರೆ ಈ ಕ್ಷೇತ್ರದಲ್ಲಿ ಮಾತ್ರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಮಾಜಿ ಸಚಿವ ರಾಜುಗೌಡ ಅವರ ಮಧ್ಯೆ ಕಾಂಗ್ರೆಸ್ ಟಿಕೆಟ್ಗಾಗಿ ಸಮರ ಇನ್ನೂ ಚಾಲ್ತಿಯಲ್ಲಿದೆ. ಅಲ್ಲದೇ ಇತರ ಪಕ್ಷಗಳ ನಾಯಕರೂ ಪ್ರಚಾರ ಆರಂಭಿಸದಿರುವುದು ಸೋಜಿಗ.
ಒಂದು ಕಡೆ ರಾಜುಗೌಡರು ಕಾಂಗ್ರೆಸ್ ಟಿಕೆಟ್ಗಾಗಿ ಶತಾಯಗತಾಯ ಪ್ರಯತ್ನಿಸುತ್ತಿದ್ದರೆ ಅವರ ಪರವಾಗಿ ಚುನಾವಣಾ ಪ್ರಚಾರ ಆರಂಭಕ್ಕೂ ಬೆಂಬಲಿಗರು ರೆಡಿಯಾಗಿದ್ದಾರೆ. ಈ ಕುರಿತು ಜಿಪಂ ವಿರೋಧ ಪಕ್ಷದ ನಾಯಕ ಎಚ್.ಸಿ. ಪಾಟೀಲ ಮಾತನಾಡಿ, ಸುರಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಂಗವಾಗಿ, ಮಾ.26ರಿಂದ ತಮ್ಮ ಸ್ವಗ್ರಾಮ ಹಾಗೂ ಜಿಪಂ ಕ್ಷೇತ್ರವಾದ ರಾಜನಕೋಳೂರು ಹಾಗೂ ಕಾಮನಟಗಿಯಿಂದ ನಮ್ಮ ನಾಯಕ ರಾಜುಗೌಡರ ಪರವಾಗಿ ಚುನಾವಣೆ ಪ್ರಚಾರವನ್ನು ಗ್ರಾಮದೇವತೆಗೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ.
ಎಲ್ಲ ಗ್ರಾಮಗಳಿಗೆ ಮೂಲ ಸೌಕರ್ಯ: ನನ್ನ ಜಿಪಂ ಮತಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಿಕೊಡಲಾಗಿದೆ. ದ್ಯಾಮನಾಳ, ಕಾಮನಟಗಿ, ಗೆದ್ದಲಮರಿ, ಬಲಶೆಟ್ಟಿಹಾಳ, ಮಾಳನೂರು, ಬೊಮ್ಮಗುಡ್ಡ, ಹಣಮಸಾಗರ, ರಾಜನಕೋಳೂರು, ಹಗರಟಗಿ, ಬೂದಿಹಾಳ, ತೀರ್ಥ, ಏದಲಭಾವಿ, ಕುಪ್ಪಿ, ಬನ್ನೆಟ್ಟಿ, ಮಾರಲಭಾವಿ ಗ್ರಾಮಗಳಲ್ಲಿ ಸುಸಜ್ಜಿತ ಸಿಮೆಂಟ್ ರಸ್ತೆ, ಒಳಚರಂಡಿಗಳನ್ನು ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಲವು ಗ್ರಾಮಗಳ ರಸ್ತೆ ಡಾಂಬರೀಕರಣ, ಚೆಕ್ಡ್ಯಾಂ, ಪೈಪಲೈನ್, ಸೇತುವೆ, ಏತ ನೀರಾವರಿ, ಕಡುಬಡವರಿಗೆ ಆಸರೆ ಮನೆಗಳನ್ನು ಒದಗಿಸಲಾಗಿದೆ. ಇದು ಒಂದು ಜಿಪಂ ಕ್ಷೇತ್ರದಲ್ಲಿ ರಾಜುಗೌಡ ಮಾಡಿದ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
ಮತ ಕೇಳಲು ಹೆಮ್ಮೆ: ಇನ್ನು ತಾಲೂಕಿನಲ್ಲಿ ನೂರಾರು ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿಯನ್ನು ಮಾಜಿ ಸಚಿವ ರಾಜುಗೌಡ ಮಾಡಿದ್ದಾರೆ. ಹೀಗಾಗಿ ನಮಗೆ ರೈತರಲ್ಲಿ ಹೋಗಿ ಮತ ಕೇಳಲು ಹೆಮ್ಮೆ ಎನಿಸುತ್ತಿದೆ. ಚುನಾವಣೆಗೆ ದಿನಗಳು ಕಡಿಮೆ ಇರುವುದರಿಂದ ನನ್ನ ಮತಕ್ಷೇತ್ರದಲ್ಲಿ ಪ್ರಚಾರವನ್ನು ಆರಂಭಿಸುತ್ತಿದ್ದೇನೆ. ಸಾಧನೆಗಳು ಸಾವಿರ ಇದ್ದಾಗ ಹಾಗೂ ಜನರ ಸದಾ ನಮ್ಮೊಂದಿಗೆ ಇರುವಾಗ ಮತ ಕೇಳಲು ಯಾವುದೇ ಅಳುಕಿಲ್ಲ. ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದು ರಾಜುಗೌಡ ಗೆಲ್ಲಲಿದ್ದಾರೆ ಎಂದು ಪಾಟೀಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

