ಶಹಾಪುರ ಕ್ಷೇತ್ರ: ಈ ಬಾರಿಯೂ ಆದೀತೆ? ದರ್ಶನ
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.25
ಶಹಾಪುರ ವಿಧಾನಸಭಾ ಕ್ಷೇತ್ರದ ವಿಶೇಷವೆಂದರೆ ದರ್ಶನಾಪುರ ಹಾಗೂ ಶಿರವಾಳ ಕುಟುಂಬದ ನಡುವೆಯೇ ಪ್ರತಿ ಚುನಾವಣೆಯಲ್ಲಿ ಪೈಪೋಟಿ. ಅಲ್ಲದೇ ಒಂದೇ ಪಕ್ಷವನ್ನು ಸತತ ಎರಡು ಬಾರಿ ಗೆಲ್ಲಿಸಿದ ಉದಾಹರಣೆಯೂ ಕಮ್ಮಿ.
ಆದರೆ ಈ ಬಾರಿ ಹಾಲಿ ಶಾಸಕ ಕಾಂಗ್ರೆಸ್ನ ಶರಣಬಸಪ್ಪಗೌಡ ದರ್ಶನಾಪುರ ಹ್ಯಾಟ್ರಿಕ್ ಗೆಲವಿಗೆ ಪ್ರಯತ್ನಿಸುತ್ತಿದ್ದರೆ, ದರ್ಶನ ತಪ್ಪಿಸಲು ಇತರರು ಕಸರತ್ತು ಆರಂಭಿಸಿದ್ದಾರೆ.
ಹಾಲಿ ಶಾಸಕ ದರ್ಶನಾಪುರ ಅವರು ಈ ಬಾರಿಯೂ ಕಾಂಗ್ರೆಸ್ನಿಂದಲೇ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಅವರನ್ನು ಬಿಟ್ಟು ಪಕ್ಷದಲ್ಲಿ ಬೇರೊಬ್ಬ ಪ್ರಬಾವಿ ಮುಖಂಡ ಇಲ್ಲದ ಕಾರಣ ದರ್ಶನಾಪುರರಿಗೆ ಟಿಕೆಟ್ ಗ್ಯಾರಂಟಿ. ಅವರ ಕುಟುಂಬದ ಸಾಂಪ್ರದಾಯಿಕ ಎದುರಾಳಿ ಶಿರವಾಳ ಕುಟುಂಬದ ಯುವ ಮುಖಂಡ ಗುರು ಪಾಟೀಲ ಅವರಿಗೆ ಈ ಬಾರಿ ಕೆಜೆಪಿ ಟಿಕೆಟ್ ನೀಡಿದೆ. ಆದ್ದರಿಂದ ಈ ಸಲವೂ ಶಹಾಪುರ ಕ್ಷೇತ್ರದಲ್ಲಿ ಎರಡು ಕುಟುಂಬಗಳ ರಾಜಕೀಯ ಜಿದ್ದಾಜಿದ್ದಿಗೆ ಮುಹೂರ್ತ ಫಿಕ್ಸ್ ಆಗಿದೆ. ಜತೆಗೆ ಜೆಡಿಎಸ್, ಬಿಜೆಪಿ, ಬಿಎಸ್ಸಾರ್ ಪಕ್ಷಗಳೂ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿವೆ.
ಕುಟುಂಬ ವಾರ್: ಶಹಾಪುರ ಕ್ಷೇತ್ರದಲ್ಲಿ 1967ರಿಂದ ಈವರೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ದರ್ಶನಾಪುರ ಹಾಗೂ ಶಿರವಾಳ ಕುಟುಂಬದವರೂ ಪಕ್ಷ ಬದಲಾಯಿಸಿಯೇ ಗೆಲವು ಪಡೆಯುತ್ತಿದ್ದಾರೆ. 1967ರಲ್ಲಿ ಹಾಲಿ ಶಾಸಕದ ತಂದೆ ಬಾಪುಗೌಡ ದರ್ಶನಾಪುರ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು. 1972ರಲ್ಲಿ ಅವರು ಪಕ್ಷ ಬದಲಿಸಿ ಪುನರಾಯ್ಕೆಯಾದರು. 1983ರಲ್ಲಿ ಬಾಪುಗೌಡ ಅವರು ಜನತಾ ಪಕ್ಷದಿಂದ ಆಯ್ಕೆಯಾದರು.
1985 ಮತ್ತು 89ರಲ್ಲಿ ಶಿವಶೇಖರಪ್ಪಗೌಡ ಶಿರವಾಳ ಕಾಂಗ್ರೆಸ್ನಿಂದ ಆಯ್ಕೆಯಾದರು. 1994ರಲ್ಲಿ ಜನತಾದಳದಿಂದ ಶರಣಬಸಪ್ಪಗೌಡ ದರ್ಶನಾಪುರ ಆಯ್ಕೆಯಾದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಶಿವಶೇಖರಪ್ಪ ಶಿರವಾಳ ಕಾಂಗ್ರೆಸ್ನಿಂದ ಆಯ್ಕೆಯಾದರು. 2004ರಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಜೆಡಿಎಸ್ನಿಂದ ಆಯ್ಕೆಯಾದರು. 2008ರಲ್ಲಿ ದರ್ಶನಾಪುರ ಅವರು ಕಾಂಗ್ರೆಸ್ ಸೇರಿ ಆಯ್ಕೆಯಾದರು. ಈ ಬಾರಿ ಮತ್ತೆ ಕಾಂಗ್ರೆಸ್ನಿಂದಲೇ ಸ್ಪರ್ಧಿಸುತ್ತಿದ್ದಾರೆ.
ದರ್ಶನಾಪುರ ಹಾಗೂ ಶಿರವಾಳ ಕುಟುಂಬದ ಎರಡನೇ ತಲೆಮಾರಿನ ಮುಖಂಡರ ನಡುವೆ ಈಗ ಸ್ಪರ್ಧೆ ಏರ್ಪಟ್ಟಿದೆ. ಬಾಪುಗೌಡ ನಿಧನದ ನಂತರ ಶರಣಬಸಪ್ಪಗೌಡ ರಾಜಕೀಯಕ್ಕೆ ಧುಮುಕಿದರೆ, ಶಿವಶೇಖರಪ್ಪ ಶಿರವಾಳ ನಿಧನದ ನಂತರ ಅವರ ಪುತ್ರ ಗುರು ಪಾಟೀಲರ ಆಗಮನವಾಗಿದೆ. ಆದ್ದರಿಂದ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಕೆಜೆಪಿ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
'ಗುರು'ವಿಗೆ ಬೆಂಬಲ: ಬಿಜೆಪಿಯಲ್ಲಿದ್ದ ಗುರು ಪಾಟೀಲ ಶಿರವಾಳ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಪಕ್ಷ ತೊರೆದು ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಹಾಕಿ 5 ಕಡೆ ಗೆದ್ದು ಶಕ್ತಿ ಪ್ರದರ್ಶಿಸಿದ್ದರು. ದರ್ಶನಾಪುರ ಅವರ ಪ್ರಾಬಲ್ಯ ಮುರಿಯಲು ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ ಸೇರಿದಂತೆ ಇತರರು ಬಿಜೆಪಿಯಿಂದ ಹೊರಬಂದು ಗುರು ಪಾಟೀಲರನ್ನು ಬೆಂಬಲಿಸುತ್ತಿದ್ದಾರೆ.
ಅಲ್ಲದೇ ಶಿವಶೇಖರಪ್ಪಗೌಡ ಶಿರವಾಳ ಹೆಸರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಈ ತಂತ್ರ ಮತದಾರರನ್ನು ಸೆಳೆಯುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದುನೋಡಬೇಕು.
ಇತರ ಪಕ್ಷಗಳ ಪೈಪೋಟಿ: ಗುರು ಪಾಟೀಲ ಬಿಜೆಪಿಯಿಂದ ನಿರ್ಗಮಿಸಿದಾಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಾಗಿ ಪರದಾಡುವಂತಾಯ್ತು. ಆದ್ದರಿಂದ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಮಲ್ಲಾಬಾದಿ ಅವರಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ. ಬಿಜೆಪಿಯಲ್ಲಿದ್ದ ಅನೇಕ ಮುಖಂಡರು ಕೆಜೆಪಿ ಸೇರಿರುವುದರಿಂದ ಆ ಪಕ್ಷಕ್ಕೆ ಚುನಾವಣೆ ಎದುರಿಸುವುದು ಕಷ್ಟ ಎನ್ನಲಾಗುತ್ತಿದೆ.
ಬಿಎಸ್ಸಾರ್ ಕಾಂಗ್ರೆಸ್, ಜೆಡಿಎಸ್ ಕೂಡ ಕ್ಷೇತ್ರದಲ್ಲಿ ಕರಾಮತ್ತು ತೋರಿಸಲು ಯತ್ನಿಸುತ್ತಿದೆ. ಶಂಕ್ರಣ್ಣ ವಣಿಕ್ಯಾಳ ಬಿಎಸ್ಸಾರ್ ಕಾಂಗ್ರೆಸ್ನಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಜೆಡಿಎಸ್ನಿಂದ ಶರಣಪ್ಪ ಸಲಾದಪುರ ಅವರ ಹೆಸರು ಹೇಳಿಬರುತ್ತಿದೆ. ಶಹಾಪುರ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತವೇ ನಿರ್ಣಾಯಕವಾದ್ದರಿಂದ ಅವರ ಮತ ಪಡೆಯಲು ಎಲ್ಲ ಪಕ್ಷಗಳು ತಂತ್ರ ರೂಪಿಸುತ್ತಿವೆ. ಇದರಲ್ಲಿ ಯಾರು ಯಶಸ್ವಿಯಾಗುತ್ತಾರೋ ನೋಡಬೇಕಿದೆ.
ಆದರೂ ಸದ್ಯದ ಪರಿಸ್ಥಿತಿಯಲ್ಲಿ ದರ್ಶನಾಪುರ ಗೆಲವು ತಪ್ಪಿಸುವುದು ಸುಲಭವಲ್ಲ ಎಂಬ ಮಾತು ಕೇಳಿಬರುತ್ತಿದೆ. ಚುನಾವಣೆಯಲ್ಲಿ ಏನು ಬೇಕಾದರೂ ಆಗಬಹುದಾಗಿದ್ದು, ಮತದಾರರ ಒಲವು ಯಾರ ಕಡೆಗಿದೆ ಎನ್ನುವುದು ನಂತರವೇ ಗೊತ್ತಗಲಿದೆ.
ಹ್ಯಾಟ್ರಿಕ್ ಗೆಲವಿನತ್ತ ದರ್ಶನಾಪುರ ಮುನ್ನುಗ್ಗುತ್ತಿದ್ದರೆ, ಇತರ ಪಕ್ಷಗಳು ಅದನ್ನು ತಪ್ಪಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

