ಗುಲ್ಬರ್ಗಾ

ಮುಂಜಾಗ್ರತೆ ವಹಿಸಿದ್ರೆ ಮಾತ್ರ ಕುಡಿವ ನೀರು..!

Published On :

ಕನ್ನಡಪ್ರಭ ವಾರ್ತೆ ೤ ಶಹಾಪುರ ೤ ಮಾ.30
ಪಟ್ಟಣದ ಜನತೆಗೆ ಕುಡಿವ ನೀರು ಪೂರೈಸುವ ನೀರು ಸಂಗ್ರಹಣಾ ಕೆರೆಯಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿದೆ. ಪುರಸಭೆ ಈ ಕುರಿತು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದೇ ನಿರ್ಲಕ್ಷ್ಯ ವಹಿಸಿದರೆ ತಿಂಗಳೊಳಗಾಗಿ ಕುಡಿವ ನೀರಿಗೆ ತಾಪತ್ರಯ ಬರುವುದು ನಿಶ್ಚಿತ.
ಕಾಲುವೆಗಳಲ್ಲಿ ನೀರು ಹರಿಯುವುದು ಮುಂಚಿತವಾಗಿಯೇ ಸ್ಥಗಿತವಾಗಿದ್ದು, ನೀರು ಸಂಗ್ರಹದಲ್ಲಿ ಕೊರತೆ ಆಗಿರುವುದು ಒಂದಡೆಯಾದರೆ ಅನವಶ್ಯಕವಾಗಿ ನೀರು ಪೋಲಾಗುತ್ತಿರುವುದು ಮತ್ತೊಂದು ಕಾರಣವಾಗಿದೆ. ಸದ್ಯ ದಿನನಿತ್ಯ ನೀರು ಸರಬರಾಜು ಆಗುತ್ತಿದ್ದು, ಪೈಪ್ಲೈನ್ಗಳ ಅವೈಜ್ಞಾನಿಕ ಜೋಡಣೆ, ಅಲ್ಲಲ್ಲಿ ಪೈಪುಗಳ ಸೋರಿಕೆಯಿಂದ ಕೆಲವು ವಾರ್ಡುಗಳ ಜನತೆ ನೀರಿಲ್ಲದೆ ಬವಣೆ ಅನುಭವಿಸುತ್ತಿದ್ದಾರೆ.
ಪುರಸಭೆ ವಿಫಲ: ಎರಡು ದಿನಕ್ಕೊಮ್ಮೆಯಾದರೂ ಸಮರ್ಪಕ ನೀರು ಬಿಡುವಲ್ಲಿ ಪುರಸಭೆ ಮುಖ್ಯಾಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟ ಎಂಜಿನಿಯರುಗಳಾಗಲಿ ಹೆಚ್ಚಿನ ಗಮನ ಹರಿಸುತ್ತಿಲ್ಲ. ಮುಂದಿನ ಮುಂಗಾರು ಮಳೆ ಪ್ರಾರಂಭವಾಗಿ ಜಲಾಶಯ ಭರ್ತಿಯಾಗಿ ಕಾಲುವೆಗೆ ನೀರು ಹರಿಯುವವರೆಗೂ ನೀರಿನ ಸಂರಕ್ಷಣೆ ಮಾಡಬೇಕು. ಆದರೆ ಇದ್ಯಾವುದರ ಬಗ್ಗೆಯೂ ಕಾಳಜಿ ಇಲ್ಲದೆ ನೀರಿನ ಸದ್ಬಳಕೆ ಮಾಡುವಲ್ಲಿ ಪುರಸಭೆ ಕೈಚಲ್ಲಿ ಕುಳಿತಿದೆ.
ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಲಿ: ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಸಾರ್ವಜನಿಕರ ಮೂಲಭೂತ ಅವಶ್ಯಕತೆಗೆ ತೊಂದರೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇರುವ ಬಾವಿಗಳನ್ನು ಶುದ್ಧೀಕರಿಸಬೇಕು. ಕೆಟ್ಟಿರುವ ಮೋಟಾರು ದುರಸ್ತಿಗೊಳಿಸಿ ಆಯಾ ವಾರ್ಡುಗಳಿಗೆ ನೀರು ಕೊಡಬೇಕು. ನೀರಿನ ಮಿತಬಳಕೆಯತ್ತ ಗಮನ ನೀಡಿ ಬೇಸಿಗೆ ದಿನದಲ್ಲಿ ನೀರಿನ ಅಭಾವ ಎದುರಾಗದಂತೆ ಎಚ್ಚರಿಕೆ ವಹಿಸಬೇಕಾದದ್ದು ಪುರಸಭೆಯ ಆದ್ಯ ಕೆಲಸವಾಗಿದೆ.
  ಇಲ್ಲದಿದ್ದರೆ ಮೇ ತಿಂಗಳಲ್ಲಿ ಜನತೆ ಕಣ್ಣೀರು ಹರಿಸಿದರೂ ತೊಟ್ಟು ನೀರು ಪೂರೈಸಲು ಪುರಸಭೆಯಿಂದ ಅಸಾಧ್ಯ ಎಂಬಂತಾಗುತ್ತದೆ. ಆದ್ದರಿಂದ ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತು ನೀರು ಸಂರಕ್ಷಣೆಗೆ ಗಮನ ನೀಡಬೇಕು ಎಂದು ಪಟ್ಟಣದ ಜನತೆ ಅಭಿಪ್ರಾಯಪಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.