ಗುಲ್ಬರ್ಗಾ

ಸುರಪುರ ಅಸೆಂಬ್ಲಿ: ಕುರುಬ ಸಮಾಜದ ಅಭ್ಯರ್ಥಿ ಕಣಕ್ಕೆ?

Published On :

ಕ.ಪ್ರ.ವಾರ್ತೆ ೤ ಹುಣಸಗಿ ೤ ಮಾ.30
ಕಳೆದೆರಡು ವರ್ಷಗಳಿಂದ ಸುರಪುರ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿಯೇ ಚರ್ಚೆಗೆ ಗ್ರಾಸವಾಗಿದ್ದ ಕುರುಬ ಸಮಾಜದ ಮುಖಂಡರೊಬ್ಬರನ್ನು ಸುರಪುರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಮಾತುಗಳು ಈಗ ನಿಜವಾದಂತೆ ಕಾಣುತ್ತಿವೆ.
  ಸುರಪುರ ಮತಕ್ಷೇತ್ರದ ಅಭ್ಯರ್ಥಿಯನ್ನಾಗಿ ಕುರುಬ ಸಮಾಜದ ವ್ಯಕ್ತಿಯೊಬ್ಬರನ್ನು ಕಣಕ್ಕಿಳಿಸುವ ಸಿದ್ಧತೆಗಳು ತೆರೆಮರೆಯಲ್ಲಿ ಆರಂಭವಾಗಿವೆ. ಇದಕ್ಕೆ ಇನ್ನೂ ಹೆಚ್ಚಿನ ಇಂಬು ಕೊಡುವಂತೆ ಶುಕ್ರವಾರ ಸಮೀಪದ ವಜ್ಜಲ್ ಗ್ರಾಮದ ಹೊರವಲಯದ ಹೊಲದಲ್ಲಿ ನೂರಾರು ಯುವಕರು ಸಭೆ ಸೇರಿ ಈ ಕುರಿತು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಿವರಾಜ ಮಲ್ಲೇಶಿ ಕಣಕ್ಕೆ?: ಸುರಪುರ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮಿಸಲಾಗಿದ್ದು, ಗೊಂಡ ಕುರುಬ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರುತ್ತದೆ. ಆದ್ದರಿಂದ ಈ ಸಮಾಜದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕುರುಬ ಸಮಾಜದ ಮತವನ್ನೇ ನಂಬಿರುವ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಲು ಮುಂದಾಗಿದ್ದಾರೆ. ಬೀದರ್ ಜಿಲ್ಲೆಯ ಗೊಂಡಕುರುಬ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವ ಮೂಲಕ ಚಿರಪರಿಚಿತರಾಗಿರುವ ಶಿವರಾಜ ಮಲ್ಲೇಶಿ ಅವರನ್ನು ಈ ಬಾರಿ ಸುರಪುರ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
  ಸಭೆಯ ನಂತರ ಕನಕ ಯುವ ಸೇನೆಯ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ರಂಗನಗೌಡ ದೇವಿಕೇರಿ ಮಾತನಾಡಿ, ಸಮಾಜದ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಶಿವರಾಜ ಮಲ್ಲೇಶಿ ಅವರನ್ನು ಕಣಕ್ಕಿಳಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇನ್ನೆರಡು ದಿನಗಳಲ್ಲಿ ವಿವಿಧ ಮುಖಂಡರೊಂದಿಗೆ ಇನ್ನೊಂದು ಸುತ್ತಿನ ಚರ್ಚೆ ನಡೆಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಜನರ ಬಯಕೆಯಂತೆ ನಡೆಯುವೆ: ಈ ಕುರಿತು ಪ್ರತಿಕ್ರಿಯಿಸಿದ ಶಿವರಾಜ ಮಲ್ಲೇಶಿ, ಸಮಾಜ ಸೇವೆಯೇ ನನ್ನ ಗುರಿ. ಸುರಪುರ ಕ್ಷೇತ್ರದ ಜನರ ಸೇವೆ ಮಾಡಲು ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಇಲ್ಲಿನ ಜನತೆ ಕೇಳಿದ್ದಾರೆ. ಅವರ ಆಸೆಯಂತೆ ಮುನ್ನಡೆಯಲು ನಿರ್ಧರಿಸಿದ್ದೇನೆ ಎಂದರು.
ಯಾವ ಪಕ್ಷದಿಂದ ಸ್ಪರ್ಧೆ?: ಯಾವ ಪಕ್ಷದಿಂದ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಹಿರಿಯ ಮುಖಂಡರಾದ ಕೆ.ಮುಕಡಪ್ಪ ಮತ್ತು ಶಿವಾನಂದ ಮಾನಕರ ಅವರು ಕೆಜೆಪಿಯಿಂದ ಸ್ಪರ್ಧೆ ಮಾಡುವಂತೆ ತಿಳಿಸಿದ್ದಾರೆ. ಆದರೂ ಇನ್ನೂ ಯಾವುದೇ ಪಕ್ಷ ಸೇರ್ಪಡೆ ಕುರಿತು ನಿರ್ಧರಿಸಿಲ್ಲ ಎಂದರು.
  ಕುರುಬ ಸಮಾಜದಿಂದ ಗುರುತಿಸಿಕೊಂಡಿರುವ ಶಿವರಾಜ ಮಲ್ಲೇಶಿ ಸುರಪುರ ಕ್ಷೇತ್ರದಿಂದ ಸ್ಪರ್ಧಿಸಿದರೆ ಉಳಿದ ಪಕ್ಷದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆಂದು ಹೇಳುವುದು ಕಷ್ಟ. ಸುರಪುರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮಾಜದವರಿದ್ದು, ಈ ಮತಗಳು ಬಹುತೇಕ ನಿರ್ಣಾಯಕ ಪಾತ್ರ ವಹಿಸಲಿವೆ. ಆದ್ದರಿಂದ ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.