ಗುಲ್ಬರ್ಗಾ

ಮಗನ ಮೇಲೆ ಆಣೆ ಮಾಡಿ ಮುದ್ನಾಳ ಪ್ರಮಾಣ

Published On :

ಗುರುಮಠಕಲ್: ಮತದಾನದ ದಿನ ಹತ್ತಿರವಾದಂತೆ ನಾಟಕೀಯ ಬೆಳವಣಿಗೆಗಳೂ ಕ್ಷೇತ್ರದಲ್ಲಿ ಕಾಣುತ್ತಿವೆ. ರಾಜ್ಯ ರಾಜಕಾರಣಕ್ಕೆ ಮಾತ್ರ ಸಿಮಿತವಾಗಿದ್ದ ಆಣೆ, ಪ್ರಮಾಣಗಳು ಕ್ಷೇತ್ರಕ್ಕೂ ಕಾಲಿಟ್ಟಿದೆ. ಯಡಿಯೂರಪ್ಪ, ಕುಮಾರಸ್ವಾಮಿಯರ ಆಣೆ ಪದ್ಧತಿ ಈ ಗುರುಮಠಕಲ್‌ನಲ್ಲಿ ಕೆಜೆಪಿ ಮತ್ತು ಜೆಡಿಎಸ್ ನಡುವೆ ನಡೆದಿದೆ.
ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ವೇಳೆ ಈಗಿನ ಕೆಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಅವರು ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡು ಹಣ ಪಡೆದಿದ್ದರು ಎಂದು ಜೆಡಿಎಸ್‌ನ ಶರಣಗೌಡ ಕಂದಕೂರ ಬುಧವಾರ ಆರೋಪಿಸಿದ್ದರು. ಇದು ಸುಳ್ಳಾದರೆ ಮಗನ ಮೇಲೆ ಪ್ರಮಾಣ ಮಾಡಿ ಹೇಳುವಂತೆ ಸವಾಲು ಹಾಕಿದ್ದರು.
 ಈ ಸವಾಲನ್ನು ಸ್ವೀಕರಿಸಿದ ವೆಂಕಟರೆಡ್ಡಿ ಮುದ್ನಾಳ ಗುರುವಾರ ತಮ್ಮ ಮಗ ಮಹೇಶನ ಮೇಲೆ ಕೈ ಇಟ್ಟು ತಾವು ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿದರು.
ಪ್ರತ್ಯಾರೋಪ: ನಂತರ ಮಾತನಾಡಿದ ಮುದ್ನಾಳ, ಶರಣಗೌಡನೊಬ್ಬ ಬಚ್ಚಾ. ತನ್ನ ತಂದೆಯ ಸೋಲಿನ ಭೀತಿಯಲ್ಲಿ ಮಾನಸೀಕ ಸ್ಥಿಮಿತ ಕಳೆದುಕೊಂಡು ಮುದ್ನಾಳ ಕುಟುಂಬದ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ನಿಜವಾಗಿ ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರ ಅವರೇ ಲಂಚ ಪಡೆಯುವ ವ್ಯಕ್ತಿಯಾಗಿದ್ದಾರೆಂಬುದು ಜನರಿಗೆ ಗೊತ್ತಿದೆ ಎಂದು ಪ್ರತ್ಯಾರೋಪ ಮಾಡಿದರು..
ನನ್ನ ಏಕೈಕ ಪುತ್ರ ಮಹೇಶನ ತಲೆ ಮೇಲೆ ಕೈ ಇಟ್ಟು ಪ್ರಮಾಣ ಮಾಡುತ್ತಿದ್ದೇನೆ. ನಾನು ಯಾರಿಂದಲೂ ಹಣ ಪಡೆದಿಲ್ಲ ಮತ್ತು ಆ ರೀತಿ ಸಾಬೀತಾದರೆ ಜನರ ಮುಂದೆ ನನ್ನ ಶಿರವನ್ನು ಕತ್ತರಿಸಿಕೊಳ್ಳುತ್ತೇನೆ. ಅದೇ ಅವರ ತಂದೆ ನಾಗನಗೌಡ ಲಂಚ ಸ್ವೀಕಾರಿಸದ ವ್ಯಕ್ತಿ ಅಲ್ಲವೆಂದು ಅವರು ತಮ್ಮ ತಂದೆಯ ಮೇಲೆ ಪ್ರಮಾಣ ಮಾಡಲಿ ನೋಡೋಣ ಎಂದು ಮುದ್ನಾಳ ಪ್ರತಿ ಸವಾಲು ಹಾಕಿದರು.
ಚರ್ಚಿಸಲು ಸಿದ್ಧ: ಮುದ್ನಾಳ ಕುಟುಂಬ ಗೌರವ ಕುಟುಂಬವೆಂಬುದು ಇಡೀ ಜಿಲ್ಲೆಗೆ ಗೊತ್ತಿದೆ. 1999ರಲ್ಲಿ ಜೆಡಿಯು ತಾಲೂಕು ಅಧ್ಯಕ್ಷನಾಗಿಯೂ ಅವರ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಯಾಚಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಾಲಕರೆಡ್ಡಿ ಪರ ಒಳಒಪ್ಪಂದ ಮಾಡಿಕೊಂಡಿದ್ದು, ಆತ್ಮೀಯ ಗೆಳೆಯನಿಂದಲೂ ಎಪಿಎಂಸಿ ಮಳಿಗೆ ಕೊಡಿಸಲು ಲಂಚ ಪಡೆದಿದ್ದು ಹಾಗೂ ನಾಗರತ್ನ ಅನಪುರ ಅವರನ್ನು ಯಾದಗಿರಿ ನಗರಸಭೆ ಅಧ್ಯಕ್ಷರನ್ನಾಗಿ ಮಾಡಲು 5 ಲಕ್ಷ ರು. ಲಂಚ ಪಡೆದಿದ್ದಾರೆ. ಹೀಗೆ ಕಂದಕೂರ ಮಾಡಿದ ಅನೇಕ ಹಗರಣಗಳ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಇದರ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಚರ್ಚಿಸಲು ನಾನು ಸಿದ್ಧ ಎಂದು ಗದ್ಗದಿತರಾಗಿ ಅವರು ನುಡಿದರು.
ಮಹೇಂದ್ರರೆಡ್ಡಿ ಮಾತನಾಡಿ, ಜೆಡಿಎಸ್ ಇಬ್ಬಾಗವಾದಾಗ ನಾಗನಗೌಡ ಕಂದಕೂರ ಅವರ ಅಣ್ಣ ದಿ. ಸದಾಶಿವರೆಡ್ಡಿ ಸೇರಿದ ಪಕ್ಷಕ್ಕೆ ಸೇರದೆ ನಾಗನಗೌಡ ರಾಜಕೀಯ ಬೆಳವಣಿಗೆಗಾಗಿ ಮುದ್ನಾಳ ಕುಟುಂಬವನ್ನು ಆಶ್ರಯಿಸಿದರು. ನಮ್ಮ ಕುಟುಂಬವನ್ನು ಸರ್ವನಾಶ ಮಾಡಲು ಹೊಂಚು ಹಾಕಿದರು. ಇಂದು ಅವರ ಭಾವಚಿತ್ರವನ್ನು ಮುಂದೆ ಇಟ್ಟುಕೊಂಡು ಮತಯಾಚಿಸುತ್ತಿರುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಸದಾಶಿವರೆಡ್ಡಿ, ಮೊಮ್ಮಗ ಮಹೇಂದ್ರರೆಡ್ಡಿ ಕಂದಕೂರ ಪ್ರಶ್ನಿಸಿದರು.
ಸಿದ್ದಪ್ಪ ಹೊಟ್ಟಿ, ಖಂಡಪ್ಪ ದಾಸನ್, ಶರಣಗೌಡ ಬಾಡಿಯಾಳ, ಮಹೇಶ ಮುದ್ನಾಳ, ಚಂದುಲಾಲ್ ಚೌದ್ರಿ ಇದ್ದರು.

ನನ್ನ ಏಕೈಕ ಪುತ್ರ ಮಹೇಶನ ತಲೆ ಮೇಲೆ ಕೈ ಇಟ್ಟು ಪ್ರಮಾಣ ಮಾಡುತ್ತಿದ್ದೇನೆ. ನಾನು ಯಾರಿಂದಲೂ ಹಣ ಪಡೆದಿಲ್ಲ ಮತ್ತು ಆ ರೀತಿ ಸಾಬೀತಾದರೆ ಜನರ ಮುಂದೆ ನನ್ನ ಶಿರವನ್ನು ಕತ್ತರಿಸಿಕೊಳ್ಳುತ್ತೇನೆ. ಅದೇ ಅವರ ತಂದೆ ನಾಗನಗೌಡ ಲಂಚ ಸ್ವೀಕಾರಿಸದ ವ್ಯಕ್ತಿ ಅಲ್ಲವೆಂದು ಅವರು ತಮ್ಮ ತಂದೆಯ ಮೇಲೆ ಪ್ರಮಾಣ ಮಾಡಲಿ ನೋಡೋಣ
-ವೆಂಕಟರೆಡ್ಡಿ ಮುದ್ನಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.