ಜಾಣ- ಜಾಣೆಯರ ಹಕ್ಕು ಚಲಾವಣೆಯಿಂದ ಕಕ್ಕಾಬಿಕ್ಕಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 10
ಆಡಳಿತ ವಿರೋಧಿ ಅಲೆ, ಗಟ್ಟಿ ನಾಯಕರಿಗೆ ಬರ, ನಾಯಕರೆನಿಸಿಕೊಂಡವರು ತಮ್ಮ ಕ್ಷೇತ್ರವನ್ನೇ ಸಂಭಾಳಿಸಲಾಗದ ದುರವಸ್ಥೆ... ಇಂತಹ ಅಪಸವ್ಯಗಳಿಂದಾಗಿ ಬಿಜೆಪಿ, ಕೆಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಬಿರುಗಾಳಿಗೆ ತರಗೆಲೆಯಂತೆ ಉದುರಿ ಹೋಗಿವೆ.
2008 ರಲ್ಲಿ ಜಿಲ್ಲೆಯ ಮತದಾರ ಕಾಳಜಿಯಿಂದ ಕಮಲ ಅರಳಿಸಿದ್ದ. 9 ರಲ್ಲಿ 5 ಕ್ಷೇತ್ರಗಳಲ್ಲಿ ಕಮಲ ಅರಳಿದ್ದಕ್ಕೆ ಬಿಸಿಲೂರಲ್ಲಿ ಕಾಂಗ್ರೆಸ್ ಕತೆ ಮುಗಿದಂತೆಯೇ... ಎಂಬ ಮಾತುಗಳು ರಾಜಕೀಯ ವಿಶ್ಲೇಷಕರಿಂದ ಕೇಳಿ ಬಂದಿದ್ದವು.
ಆದರೇನು ಮಾಡುವುದು, ರಾಜಕೀಯ ನಿಂತ ನೀರಲ್ಲ ಎಂಬಂತೆ 5 ವರ್ಷಗಳಲ್ಲೇ ಬಿಜೆಪಿ ಜಿಲ್ಲೆಯ ಮತದಾರ ಮಹಾಪ್ರಭು ಕೆಂಗಣ್ಣಿಗೆ ಗುರಿಯಾಗಿದೆ. ಇದ್ದೊಂದು ಸ್ಥಾನವನ್ನೂ ಜೆಡಿಎಸ್ಗೆ ಕೊಡದಂತೆ ಮತದಾರರು ಜಾಣತನದಿಂದ ಮತದಾನ ಮಾಡಿ ಪ್ರಜ್ಞೆ ಮೆರೆದಿದ್ದಾರೆ. ಆ ಮೂಲಕ ಜಿಲ್ಲೆಯ ಪ್ರಗತಿಗೆ ಯಾರ್ಯಾರು ಸದನದಲ್ಲಿದ್ದರೆ ಚೆಂದ ಎಂಬುದನ್ನು ಯೋಚಿಸಿ ನಿರ್ಣಯಿಸಿದ್ದಾರೆ ಎಂಬ ಮಾತಿಗೆ 2013ರ ಫಲಿತಾಂಶ ಕನ್ನಡಿ.
ಜಿಲ್ಲೆ ಕಡೆಗಣಿಸಿದ್ದಕ್ಕೆ ಬಿಜೆಪಿಗೆ ಶಾಸ್ತಿ: ತಮ್ಮ 5 ವರ್ಷಗಳ ಆಡಳಿತದಲ್ಲಿ ಬಿಜೆಪಿ ರಾಜ್ಯ ನಾಯಕರು ಜಿಲ್ಲೆಯ ಪ್ರತಿ ಅನುಸರಿಸಿದ ಅವಗಣನೆ ನೀತಿಯೇ ಈ ಫಲಿತಾಂಶಕ್ಕೆ ಕಾರಣ. ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಜಿಲ್ಲೆಯ ಯಾರೊಬ್ಬರಿಗೂ ಅವಕಾಶ ನೀಡಲಿಲ್ಲ. ಕೊನೆ ಗಳಿಗೆಯಲ್ಲಿ ರೇವು ನಾಯಕರಿಗೆ ಆ ಸ್ಥಾನ ದಕ್ಕಿತ್ತಾದರೂ ಅವರಂತೂ ತನಗೇನು ಗೊತ್ತಿಲ್ಲ ಎಂದು ಹೇಳುತ್ತಲೇ ಕಾಲಹರಣ ಮಾಡಿದ್ದರು.
ಇದರಿಂದಾಗಿಯೇ ಬಿಜೆಪಿ ಅಧಿಕಾರಾವಧಿಯಲ್ಲಿ ಜಿಲ್ಲೆಗೆ ಬಹುಕೋಟಿ ಹರಿದು ಬಂದರೂ, ಅದರ ಸಮರ್ಪಕ ಬಳಕೆ, ಸದ್ಬಳಕೆ, ಕೆಲಸಕಾರ್ಯಗಳ ಮೇಲೆ ನಿಗಾ ಇಡುವ ಕೆಲಸ ಇಲ್ಲಿ ಆಗಲೇ ಇಲ್ಲ.
ಅಥಣಿ ಶಾಸಕ ಲಕ್ಷ್ಮಣ ಸವದಿ, ಶಿಗ್ಗಾಂವಿ ಶಾಸಕ ಬಸವರಾಜ ಬೊಮ್ಮಾಯಿಯಂತಹವರಿಗೆ ಆಡಳಿತ ಮೊದಲ 4 ವರ್ಷ ಜಿಲ್ಲಾ ಉಸ್ತುವಾರಿ ಕೊಡಲ್ಪಟ್ಟಿತ್ತು. ಈ ಸಚಿವರು ಸಿಎಂ ಬಂದಾಗೊಮ್ಮೆ ಜಿಲ್ಲೆಗೆ ಬಂದು ಹೋಗಿದ್ದು ಬಿಟ್ಟರೆ ಇಲ್ಲಿನ ಪ್ರಗತಿ- ವಿಗತಿಗಳ ಮೇಲೆ ನಿಗಾ ಇಡುವ ಕೆಲಸ ಕಕ್ಕುಲಾತಿಯಿಂದ ಮಾಡಲೇ ಇಲ್ಲ.
ಸ್ಥಳೀಯರಾದ ರೇವು ನಾಯಕರಿಗೆ ಉಸ್ತುವಾರಿ ದೊರಕಿದ್ದರೂ, ಅವರು ಅದರ ಸದುಪಯೋಗಕ್ಕೆ ಬಯಸಲಿಲ್ಲ. ಜಿಪಂ, ತಾಪಂ, ಪಾಲಿಕೆ, ನಗರಸಭೆಯಂತಹ ಜನಾಭಿಪ್ರಾಯಗಳಿಗೆ ಸ್ಥಳೀಯ ಚುನಾವಣೆಗಳಲ್ಲಿ ಕಮಲ ಮುರುಟಿದರೂ ಯಾರೂ ತಲೆ ಕೆಡೆಸಿಕೊಳ್ಳಲಿಲ್ಲ. ಯಾರ ಪೋಷಣೆ- ಪಾಲನೆಯೂ ಇಲ್ಲದೆ ಹೋದಾಗ ಜಿಲ್ಲೆಯಲ್ಲಿ ಅರಳಿದ್ದ ಕಮಲ ಅದ್ಹೇಗೆ ಲವಲವಿಕೆಯಿಂದ ಇರಲು ಸಾಧ್ಯ ಹೇಳಿ?
ಉದ್ಯೋಗ ಖಾತ್ರಿ, ಬಸವ ವಸತಿ ಯೋಜನೆಯಂತಹ ಜನಪ್ರಿಯ ಯೋಜನೆಗಳಲ್ಲಿ ನಡೆದಂತಹ ಬಹುಕೋಟಿ ಭ್ರಷ್ಟಾಚಾರದ ದೂರುಗಳಿದ್ದರೂ ಜಿಲ್ಲೆಯಲ್ಲಿ ಇದ್ಯಾವುದರ ವಿಚಾರಣೆಗೆ ಬಿಜೆಪಿ ನಾಯಕರು ಆಸಕ್ತಿ ತೋರಲಿಲ್ಲ. ಹೀಗಿದ್ದಾಗ ಸಾಮಾನ್ಯ ಜನತೆ ಕಮಲಕ್ಕೆ ಹೇಗೆ ಒಲಿಯಲು ಸಾಧ್ಯ?
ಯುದ್ಧಕಾಲೇ ಶಸ್ತ್ರಾಭ್ಯಾಸ: ವಿಧಾನಸಭೆ ಚುನಾವಣೆಯಲ್ಲೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತರಾತುರಿ ನೀತಿಯೇ ಬಿಜೆಪಿ ಅನುಸರಿಸಿದ್ದು ದುರಂತ. ರಾಷ್ಟ್ರೀಯ ಪಕ್ಷವೊಂದರಲ್ಲಿ ನಾಲ್ಕು ತಿಂಗಳ ಹಿಂದೆ ಬಂದವರೇ ಅಸೆಂಬ್ಲಿ ಅಭ್ಯರ್ಥಿಗಳಾಗಿ ಕಣದಲ್ಲಿ ಕಂಡರೆ, ಮತದಾರ ಒಲಿಯಲು ಸಾಧ್ಯವೆ? ಕಾರ್ಯಕರ್ತರ ಆಧಾರದ ಮೇಲಿನ ಪಕ್ಷ ನಮ್ಮದು ಎಂದು ಹೇಳುವ ಬಿಡಜೆಪಿ ಜಿಲ್ಲೆಯಲ್ಲಿ ಈ ನೀತಿ ಅನುಸರಿಸಲೇ ಇಲ್ಲ.
ಕೊನೆ ಗಳಿಗೆಯಲ್ಲಿ ಪುಢಾರಿಗಳಿಗೆ ಮಣೆ ಹಾಕಿ ಆಯಾ ಪ್ರಾಂತದಲ್ಲಿ ಮತದಾರರ ಸಮೂಹದಲ್ಲಿ ತನಗಿದ್ದ ಅಳಿದುಳಿದ ಗರವನ್ನೂ ಕಳೆದುಕೊಂಡಿದ್ದು ದುರಂತ. ಏಕೆಂದರೆ 9 ಕ್ಷೇತ್ರಗಳಲ್ಲಿ ಜೇವರ್ಗಿ, ಚಿತ್ತಾಪುರ, ಸೇಡಂ ಹಾಗೂ ಗುಲ್ಬರ್ಗ ಗ್ರಾಮೀಣ ಹೊರತು ಪಡಿಸಿದಲ್ಲಿ ಉಳಿದೆಲ್ಲಡೆ ಮೂರು, ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಚುನಾವಣೆಗೂ ಪೂರ್ವ ನಾಯಕರನ್ನು ಬೆಳೆಸುವ, ಅವರಿಗೆ ಅನುಭವ ಹೊಂದಲು, ಕ್ಷೇತ್ರ ಸುತ್ತಲು ಅವಕಾಶ ಕಲ್ಪಿಸುವ ಕೆಲಸ ಬಿಜೆಪಿ ಮಾಡಲೇ ಇಲ್ಲ, ಯುದ್ಧಕಾಲೆ... ಎಂಬಂತೆ ಚುನಾವಣೆ ಘೋಷಣೆಯಾದ ನಂತರವೇ ಅಭ್ಯರ್ಥಿಗಳ ಹುಡುಕಾಟ ಶುರು ಮಾಡಿದ್ದಲ್ಲದೆ ಅಫಜಲ್ಪುರ, ಆಳಂದದಂತಹ ಕ್ಷೇತ್ರಗಳಲ್ಲಿ ಆತುರದಲ್ಲೇ ಕಣಕ್ಕಿಳಿಸುವ ತೀರ್ಮಾನ ಮಾಡಿದ್ದೂ ಪಕ್ಷದ ಹೀನಾಯ ಸೋಲಿಗೆ ಕಾರಣವಾಯ್ತು
ಕೈಗೆ ಕಲಂ 371 ವರವಾಯ್ತು: ಕಾಂಗ್ರೆಸ್ ಇಲ್ಲಿ ಗತವೈಭವಕ್ಕೆ ಬರುವಂತಾಗಲು ಆ ಪಕ್ಷದ ಜಿಲ್ಲೆಯ ನಾಯಕರಾದ ಖರ್ಗೆ, ಧರಂಸಿಂಗ್ ದೆಹಲಿ ಹಂತದಲ್ಲಿ ಲಾಬಿ ಮಾಡಿ ಕಲಂ 371 ಬೇಡಿಕೆಗೆ ವಿಧೇಯಕ ರೂಪ ಕೊಡಿಸಿದ್ದೇ ಕಾರಣ. ಇದಲ್ಲದೆ ಪಕ್ಷದಲ್ಲಿ ಅಸೆಂಬ್ಲಿ ಕ್ಷೇತ್ರವಾರು ನಾಯಕತ್ವ ಬೆಳೆಸುವ, ಅವರಿಗೆ ಕೆಲಸ ಮಾಡಲು ಸಾಕಷ್ಟು ಅವಕಾಶ ನೀಡುವ ಕೆಲಸವಾಗಿದ್ದರಿಂದ ಜಿಲ್ಲೆಯಲ್ಲಿ ಕೈ ಬಲಗೊಂಡಿತು.
ಚಿಂಚೋಳಿಯಲ್ಲಿ ಡಾ. ಉಮೇಶ ಜಾಧವ, ಚಿತ್ತಾಪುರ ಹಾಗೂ ಜೇವರ್ಗಿಯಲ್ಲಿ ಪ್ರಿಯಾಂಕ್, ಡಾ. ಅಜಯ್ ರಾತ್ರೋರಾತ್ರಿ ಗೆದ್ದು ಬರಲಿಲ್ಲ. ಅಲ್ಲಿ ಅವರು ಕಳೆದ 4 ವರ್ಷಗಳಿಂದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಲ್ಲದೆ ಹಲವು ಚುನಾವಣೆಗಳಲ್ಲಿ ಜನಕ್ಕೆ ಹತ್ತಿರವಾಗಿ ಮನಸೂರೆಗೊಂಡಿದ್ದರಿಂದಲೇ ಗೆಲವು ಸಾಧಿಸಲು ಸಾಧ್ಯವಾಯ್ತು. ಸೇಡಂನಲ್ಲಿ ಕಲಂ ಬಿರುಗಾಳಿ ಕಂಡರೂ ಅಲ್ಲಿ 3 ನೇ ಬಾರಿ ಆಯ್ಕೆ ಬಯಸಿದ್ದ ಡಾ. ಶರಣಪ್ರಕಾಶಗೆ ಮತದಾರ ಒಲಿದದ್ದು ಅವರ ಕೆಲಸಗಳಿಂದಲೇ ಹೊರತು ಇನ್ಯಾವುದಕ್ಕೂ ಅಲ್ಲ.
ಗುಲ್ಬರ್ಗ ಗ್ರಾಮೀಣದಲ್ಲಂತೂ ಬಲವಾಗಿ ಬೀಸಿದ ಆಡಳಿತ ವಿರೋಧಿ ಬಿರುಗಾಳಿಗೆ ಕುಸ್ತಿಪಟು ರೇವುನಾಯಕ ಚಿತ್ ಆಗಲೇಬೇಕಾಯ್ತು. ಇಲ್ಲಿ ಮಾಜಿ ಮಂತ್ರಿ ರಾಮಕೃಷ್ಣ ವಿಜಯ ಕಾಂಗ್ರೆಸ್ಗೆ ಮತ್ತಷ್ಟೂ ಬಲ ನೀಡಿದ್ದು ವಾಸ್ತವ.
ಕೆಜೆಪಿ ಅಬ್ಬರಕ್ಕೆ ಗಮನ ಕೊಡಲಿಲ್ಲ ಮತದಾರ: ಬಿಎಸ್ ಯಡಿಯೂರಪ್ಪ ಸತತ 9 ಬಾರಿ ಬಿರುಗಾಳಿಯಂತೆ ಗುಲ್ಬರ್ಗ ಸುತ್ತಿದರು. ಇಲ್ಲಿಯೂ 25ಕ್ಕೂ ಅಧಿಕ ಸಮಾವೇಶಗಳು, ಅಷ್ಟೇ ಸಂಖ್ಯೆಯ ಸುದ್ದಿಗೋಷ್ಠಿಗಳು, ಮೊಹಲ್ಲಾ ಮೀಟಿಂಗ್ಗಳು ನಡೆಸಲಾಯ್ತು. ಇಷ್ಟೊಂದು ಅಬ್ಬರದ ಪ್ರಚಾರಕ್ಕೆ ಮತದಾರ ಕಿವಿಗೊಡಲೇ ಇಲ್ಲ.
2004 ರಲ್ಲಿ ಜಿಲ್ಲೆಯಲ್ಲಿ ಮತದಾರ ಜೆಡಿಎಸ್ಗೆ ಸೈ ಎಂದಿದ್ದ. ಅದಾದ ನಂತರ ಇಲ್ಲಿಯವರೆಗೂ ಆ ಪಕ್ಷಕ್ಕೆ ಜಿಲ್ಲೆಯಲ್ಲಿ ಎಲ್ಲಿಯೂ ಬೆಂಬಲ ಕಂಡಿಲ್ಲ. ಆದರೆ ಆಳಂದದಲ್ಲಿ ಮಾತ್ರ ಜೆಡಿಎಸ್ 2008ರಲ್ಲಿ ಗೆದ್ದಿತ್ತು. ಇದಾದ ನಂತರ 2010 ರ ಗುಲ್ಬರ್ಗ ದಕ್ಷಿಣ ಉಪ ಚುನಾವಣೆಯಲ್ಲೂ ಜೆಡಿಎಸ್ ಗೆದ್ದಿತ್ತು.
ಈ ಬಾರಿ ಈ ಎರಡೂ ಸ್ಥಾನ ಜೆಡಿಎಸ್ ಕೈ ತಪ್ಪಿವೆ. ಆಳಂದದಲ್ಲಿ ಕೆಜೆಪಿ ಗೆದ್ದರೆ, ಗುಲ್ಬರ್ಗ ದಕ್ಷಿಣದಲ್ಲಿ ಕಮಲ ಅರಳಿದೆ. ಹೀಗಾಗಿ ಈಗಾಗಲೇ ಹೀನಾಯ ಸ್ಥಿತಿಯಲ್ಲಿರುವ ಜಿಲ್ಲಾ ಜೆಡಿಎಸ್ ಈ ಚುನಾವಣೆಯ ಸೋಲಿನ ಹೊಡೆತದಿಂದಾಗಿ ಇನ್ನೂ ಕುಸಿದಿದೆ.
ಪ್ರಗತಿಗೆ ಮುನ್ನುಡಿ: ಕಾಂಗ್ರೆಸ್ಮಯವಾಗಿರುವ ಜಿಲ್ಲೆಯಲ್ಲಿ ಮುಂದಿನ 5 ವರ್ಷ ಪ್ರಗತಿಪರ್ವ ಕಾಣಲಿ ಎಂಬುದೇ ಮತದಾರರ ಸದಾಶಯ. ಆಯ್ಕೆಯಾದ ಎಲ್ಲರೂ ಹಿಂದುಳಿದ ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ಒತ್ತಾಸೆಯಾಗಿ ನಿಲ್ಲಬೇಕಾಗಿದೆ. ಮತಾದರರ ಮನದಾಳದ ಆಶಯಕ್ಕೆ ಹೊಸ ಶಾಸಕ ಪಡೆ ಸ್ಪಂದಿಸುವುದೇ ಎಂಬುದನ್ನು ಕಾದುನೋಡಬೇಕಷ್ಟೆ.
--
ನೂತನ ಸಿಎಂ ಸ್ಥಾನಕ್ಕೆ ಸಿದ್ದು, ವಿಜಯೋತ್ಸವ
ಚಿಂಚೋಳಿ: ರಾಜ್ಯದ ನೂತನ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಸಿದ್ರಾಮಯ್ಯನವರ ಹೆಸರು ಪ್ರಕಟಿಸುತ್ತಿದ್ದಂತೆಯೇ ಪಟ್ಟಣದಲ್ಲಿ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಪಟ್ಟಣದ ಬಸ್ ಡಿಪೋ ಎದುರಿನ ಚಿಂಚೋಳಿ- ತಾಂಡೂರ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ತಿಂಡಿ ಹಂಚಿಕೊಂಡು ಸಂಭ್ರಮ ಆಚರಿಸಿದರು.
ಕಾಂಗ್ರೆಸ್ ಮುಖಂಡರಾದ ಬಸವರಾಜ ಪಾಟೀಲ್, ಕೆ.ಎಂ. ಬಾರಿ, ಲಕ್ಷ್ಮಣ ಆವಂಟಿ, ಜಗನ್ನಾಥ ಕಟ್ಟಿ, ಶೇಖರ ಗಾರಂಪಳ್ಳಿ, ಅಬ್ದುಲ್ ಬಾಸೀತ, ವೀರಶೆಟ್ಟಿ ಬೈರ, ಶ್ರೀನಿವಾಸ ಚಿಂಚೋಳಿಕರ್, ಶ್ರೀನಿವಾಸ ಬಂಡಿ, ನಾರಾಯಣ ಕೊಟ್ರಕಿ, ವಿಜಯಕುಮಾರ ಘಾಟಗೆ, ಮಲ್ಲಿಕಾರ್ಜುನ ಕೊಟಪಳ್ಳಿ ಶಿವನಾಗಯ್ಯ ಸ್ವಾಮಿ, ಮತೀನ ಸೌದಾಗರ ಮೋಹಿನ್ ಸೌದಗರ, ಹಣಮಂತ ಪೂಜಾರಿ ಇತರರ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
'ಸಿಎಂ ಸ್ಥಾನ ಖರ್ಗೆಗೆ ನೀಡಿ'
ಗುಲ್ಬರ್ಗ: ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಖ್ಯಾತ ಸಾಹಿತಿ ಪ್ರೊ. ವಸಂತ ಕುಷ್ಠಗಿ ಕಾಂಗ್ರೆಸ್ ಹೈಕಮಾಂಡ್ಗೆ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ದಕ್ಷ, ಚತುರ, ಜನತೆಯ ಬಗ್ಗೆ ಕಳಕಳಿಯುಳ್ಳ ಮುತ್ಸದಿ, ಜನಾನುರಾಗಿ, ಸತ್ಯನಿಷ್ಠರ, ಕರ್ತವ್ಯ ನಿಷ್ಟ ನಾಯಕನೊಬ್ಬ ವಿಧಾನಸಭೆಯನ್ನು ನಡೆಸಲು ರಾಜ್ಯದ ಮುಖ್ಯಮಂತ್ರಿಯಾಗಿ ಹೊಣೆಹೊರಬೇಕಾಗಿದೆ.
ರಾಜ್ಯದ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದುಗೆ ಸಿಎಂ ಸ್ಥಾನ: ಅಭಿನಂದನೆ
ಗುಲ್ಬರ್ಗ: ಮಾಜಿ ಉಪಮುಖ್ಯಮಂತ್ರಿ, ಹಾಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕುರಬರ ಸಂಘ ಜಿಲ್ಲಾ ಶಾಖೆ ಕಾಂಗ್ರೆಸ್ ಹೈಕಮಾಂಡ್ಗೆ ಅಭಿನಂದಿಸಿದೆ.
ದಕ್ಷ ಆಡಳಿತಗಾರ, ರಾಜ್ಯದ ಸಮಗ್ರ ಅಭಿವೃದ್ಧಿಯ ಹರಿಕಾರ ಆಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ಸಮರ್ಥರಾಗಿದ್ದು, ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕಾಗಿ ಅವರು ಉತ್ತಮ ಆಡಳಿತ ನೀಡುವರೆಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಜಿ. ಬೆಳಕೇರಿ, ವಕೀಲರಾದ ಯಶ್ವಂತ ಯಾತನೂರ, ಗುರುನಾಥ ಪೂಜಾರಿ, ಭೀಮಾಶಂಕರ, ಶಾಮ ದಿಡ್ಡಿಮನಿ ಮತ್ತು ಗುರುನಾಥ ಜಮಗಾ ಉಪಸ್ಥಿತರಿದ್ದರು.
ಖರ್ಗೆ ಬೆಂಬಲಿಸಿ ದೀರ್ಘದಂಡ ನಮಸ್ಕಾರ
ಗುಲ್ಬರ್ಗ: ಹೈ.ಕ. ಭಾಗದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆಗೊಳಿಸುವಂತೆ ಕನ್ನಡ ಸೇನೆ ಕರ್ನಾಟಕದ ಮುಖಂಡ ಶಿವಶರಣಪ್ಪ ಖಣದಾಳ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ, ತೆಂಗಿನಕಾಯಿ ಒಡೆದು ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಗಮನ ಸೆಳೆದರು.
ಹೈ.ಕ. ಭಾಗದ ಅಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನದ 371 (ಜೆ) ವಿಧಿ ಸಂಸತ್ತಿನಲ್ಲಿ ತಿದ್ದುಪಡಿಗೊಳಿಸುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಗತಿಪರ ಚಿಂತಕರಾಗಿದ್ದು, ಅವರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸುವಂತೆ ದೇವರಲ್ಲಿ ಪ್ರಾರ್ಥನೆ ಗೈದು ದೀರ್ಘದಂಡ ನಮಸ್ಕಾರ ಮಾಡಿದರು.
ಕಳೆದ 40 ವರ್ಷಗಳಿಂದ ಯಾವುದೇ ವಿವಾದ ಇಲ್ಲದೆ ರಾಜಕೀಯ ನಡೆಸಿದ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ನ ಹೈಕಮಾಂಡಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಂ.ಡಿ. ಪಾಟೀಲ್, ನಾಗರಾಜ ಸ್ವಾದಿ, ಆಕಾಶ ಉಪಾಧ್ಯಾಯ, ಭೀಮಾಶಂಕರ ಪಟ್ಟಣ, ಗುಂಡಪ್ಪ ಲಂಡನಕರ್ ಇತರರು ಉಪಸ್ಥಿತರಿದ್ದರು.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

