ಕಾಂಗ್ರೆಸ್ ವಿರುದ್ಧ ಶೋಷಿತ ಸಂಘಟನೆಗಳ ಆಕ್ರೋಶ
ಕನ್ನಡಪ್ರಭ ವಾರ್ತೆ, ಶಹಾಬಾದ್, ಮೇ 11
ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ, ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇವಲ ಶೋಷಿತ ಸಮುದಾಯಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕಾಗಿ ಸಿಎಂ ಸ್ಥಾನ ಕೈತಪ್ಪುವಂತೆ ಮಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಪ್ರತಿಕೃತಿಯನ್ನು ವಾಡಿ ಪಟ್ಟಣದ ಶೋಷಿತ ಸಮುದಾಯಗಳ ಒಕ್ಕೂಟದಿಂದ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನವಬೌದ್ಧ ಸಮಾಜದ ಕಾರ್ಯಾಧ್ಯಕ್ಷ ಇಂದ್ರಜಿತ್ ಸಿಂಗೆ, ಆನಂದ ಇಂಗಳಗಿ ನೇತೃತ್ವದಲ್ಲಿ ಶನಿವಾರ ಸಂಜೆ ಡಾ. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಕೃತಿ ದಹಿಸಿದರು. ಈ ವೇಳೆ ದಲಿತ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಶರಣಪ್ಪ ವಾಡೇಕರ್ ಮಾತನಾಡಿ, ಖರ್ಗೆಯವರು ಗುರುಮಠಕಲ್ ಮತಕ್ಷೇತ್ರದಿಂದ ಸತತ ಏಳು ಬಾರಿ, ಒಂದು ಬಾರಿ ಚಿತ್ತಾಪುರ ಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಪ್ರತಿ ಪಕ್ಷದ ನಾಯಕರಾಗಿ, ಸಚಿವರಾಗಿ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಪಕ್ಷದ ವರಿಷ್ಠರ ಅಣತಿಯಂತೆ ಲೋಕಸಭೆಗೆ ಸ್ಪರ್ಧಿಸಿದ ಅಲ್ಲಿಯೂ ಜಯ ಗಳಿಸಿ, ಸೋಲಿಲ್ಲದ ಸರ್ದಾರ, ಅಭಿವೃದ್ಧಿಯ ಹರಿಕಾರರೆಂದು ಹೆಸರು ಪಡೆದಿದ್ದಾರೆ ಎಂದರು.
ನಿಷ್ಕಳಂಕ ವ್ಯಕ್ತಿತ್ವ: ತಮ್ಮ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ, ನಿಷ್ಕಳಂಕ ವ್ಯಕ್ತಿತ್ವ ಹೊಂದಿದ್ದಾರೆಂದು ಹೇಳಿದ ಅವರು, ಅವರೊಬ್ಬ ದಲಿತ ಸಮುದಾಯಕ್ಕೆ ಸೇರಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರಿಗೆ ಮುಖ್ಯಮಂತ್ರಿ ಸ್ಥಾನದಿಂದ ವಂಚಿತಗೊಳಿಸಲಾಗಿದೆ ಎಂದು ದೂರಿದರು. ಕಾಂಗ್ರೆಸ್ ದಲಿತ, ಶೋಷಿತ ವಿರೋಧಿಯಾಗಿದ್ದು, ಪಕ್ಷದಲ್ಲಿರುವ ಎಲ್ಲ ಶೋಷಿತ ವರ್ಗದ ನಾಯಕರು ಪಕ್ಷದಿಂದ ಹೊರ ಬರಬೇಕು ಎಂದು ಆಗ್ರಹಿಸಿದರು.
ಆನಂದ ಬಡಿಗೇರ, ರಾಹುಲ್ ಮೇನಗಾರ, ಶ್ರವಣಕುಮಾರ ಮೊಸಳಗಿ, ಸಂದೀಪ ಕಟ್ಟಿ, ವಿಜಯಕುಮಾರ ಯಲಸತ್ತಿ, ಕಿಶೋರ ಸಿಂಗೆ, ಅರುಣ ಬರ್ಮಾ, ನಾಗೇಶ ಗಾಯಕವಾಡ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

