ಗುಲ್ಬರ್ಗಾ

'ವಡಗೇರಾದಲ್ಲಿ ಪಪೂ ಕಾಲೇಜು ಆರಂಭಿಸಿ'

Published On :

ಯಾದಗಿರಿ: ಈಗಾಗಲೇ ತಾಲೂಕೆಂದು ಘೋಷಣೆಯಾಗಿರುವ ವಡಗೇರಾದಲ್ಲಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸುತ್ತಮುತ್ತಲಿನ ಸುಮಾರು 50 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ವಡೇಗಾರ ಈಗಾಗಲೇ ತಾಲೂಕು ಕೇಂದ್ರವೆಂದು ಘೋಷಣೆಯಾಗಿದೆ. ಬೆಂಡೆಬೆಂಬಳಿ, ಕೊಂಕಲ್, ಬಿಳ್ಹಾರ, ಶಿವಪುರ, ಹಾಲಗೇರಾ ಹಾಗೂ ಇನ್ನೂ ಅನೇಕ ಗ್ರಾಮಗಳಲ್ಲಿ ಪ್ರೌಢಶಾಲೆಗಳಿವೆ. ಈ ಶಾಲೆಗಳಿಂದ ಪ್ರಸ್ತುತ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾದ ನೂರಾರು ವಿದ್ಯಾರ್ಥಿಗಳಿದ್ದಾರೆ. ಈ ಗ್ರಾಮೀಣ ಹೈಸ್ಕೂಲ್‌ಗಳಲ್ಲಿ ಉತ್ತಮ ಫಲಿತಾಂಶವೂ ಬಂದಿವೆ. ಆದರೆ ಈ ವಿದ್ಯಾರ್ಥಿಗಳಿಗೆ ಪಿಯುಸಿ ವ್ಯಾಸಂಗಕ್ಕೆ ಸಮೀಪದಲ್ಲಿ ಕಾಲೇಜು ವ್ಯವಸ್ತೆ ಇಲ್ಲ ಎಂಬಂತಾಗಿದೆ. ಆದ್ದರಿಂದ ಈ ಶೈಕ್ಷಣಿಕ ವರ್ಷದಲ್ಲೇ ಪಿಯು ಕಾಲೇಜು ಪ್ರಾರಂಭಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ಈ ಹಿಂದೆ ಕಾಲೇಜಿತ್ತು: ಈ ಹಿಂದೆ ವಡಗೇರಾ ಹೋಬಳಿ ಕೇಂದ್ರವಿದ್ದಾಗಲೇ ಇಲ್ಲಿ ಪಿಯುಸಿ ಕಾಲೇಜನ್ನು ಆರಂಭಿಸಲಾಗಿತ್ತು. ಕೆಲವು ವರ್ಷಗಳ ಕಾಲ 10ನೇ ತರಗತಿಯ ಫಲಿತಾಂಶದಲ್ಲಿ ಇಳಿತ ಕಂಡ ಕಾರಣ ಕಾಲೇಜಿಗೆ ಪ್ರವೇಶಗಳು ಕಡಿಮೆಯಾದವು. ಕಡಿಮೆ ದಾಖಲಾತಿಯ ನೆಪವೊಡ್ಡಿ ರಾಜ್ಯ ಸರ್ಕಾರ ಇಲ್ಲಿರುವ ಕಾಲೇಜನ್ನು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೊಬ್ಬೂರಿಗೆ ಸ್ಥಳಾಂತರಿಸಿತು. ಆಗ ಶಾಸಕ ಡಾ. ಎ.ಬಿ ಮಾಲಕರಡ್ಡಿ ಅವರು ಸರ್ಕಾರದ ಮೇಲೆ ಒತ್ತಡ ತಂದು ಅದನ್ನು ರದ್ದುಪಡಿಸಿದ್ದರು. ಇದರಿಂದ ಸುತ್ತಲಿನ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಸಮೀಪದಲ್ಲೇ ದೊರಕುವಂತಾಯಿತು.
ಕಾಗೇರಿ ತಮ್ಮೂರಿಗೆ ವರ್ಗಾಸಿದ್ದರು: ಆದರೆ, 2011ರಲ್ಲಿ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಕಡಿಮೆ ದಾಖಲಾತಿಯ ನೆಪವೊಡ್ಡಿ ಮತ್ತೆ ಇಲ್ಲಿಯ ಪಿಯು ಕಾಲೇಜನ್ನು ತಮ್ಮ ಸ್ವಂತ ಜಿಲ್ಲೆಯಾದ ಉತ್ತರ ಕನ್ನಡದ ಶಿರಸಿಯ ಸರ್ಕಾರಿ ಮಾರಿಕಾಂಬ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಸಿಬ್ಬಂದಿ ಸಮೇತವಾಗಿ ಸ್ಥಳಾಂತರ ಮಾಡಿದರು. ಇದರಿಂದ ಮತ್ತೆ ಇಲ್ಲಿಯ ವಿದ್ಯಾರ್ಥಿಗಳಿಗೆ ಪಿಯು ಕಾಲೇಜು ದೂರವಾಯಿತು. ಇದರಿಂದ ಈ ಭಾಗದ ಮಕ್ಕಳು ಪಿಯುಸಿ ಶಿಕ್ಷಣಕ್ಕಾಗಿ ಯಾದಗಿರಿ ಅಥವಾ ಶಹಾಪುರಕ್ಕೆ ಹೋಗಬೇಕಾಯಿತು.
ಕಾಲೇಜು ಅತ್ಯಗತ್ಯ: ಬಡ ಮಕ್ಕಳಿಗೆ ಪಿಯುಸಿ ಶಿಕ್ಷಣ ಗಗನಕುಸುಮವಾಯಿತು. ಆಗ ಎಚ್ಚತ್ತ ಇಲ್ಲಿಯ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಿದರೂ ಯಾವುದೆ ಪ್ರಯೋಜನವಾಗಲಿಲ್ಲ. ಈಗ ಮತ್ತೆ ಪಿಯುಸಿ ಕಾಲೇಜು ಆರಂಭಿಸುವ ಬಗ್ಗೆ ಮತ್ತೆ ಕೂಗು ಎದ್ದಿದೆ. ಈ ಬಾರಿ ಸುತ್ತಮುತ್ತಲಿನ ಹೈಸ್ಕೂಲ್‌ಗಳಲ್ಲಿ ಉತ್ತಮ ಫಲಿತಾಂಶ ಬಂದಿದ್ದರಿಂದ ಪಿಯುಸಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಆದರೆ ಸಮೀಪದಲ್ಲಿ ಪಿಯು ಕಾಲೇಜು ಇಲ್ಲದಿರುವುದರಿಂದ ಗ್ರಾಮೀಣ ಪ್ರತಿಭೆಗಳು ಶಿಕ್ಷಣದಿಂದ ವಂಚಿತರಾಗಬೇಕಾಗಿದೆ. ಓದನ್ನು ಅರ್ಧಕ್ಕೆ ಮೊಟಕುಗೊಳಿಸುವಂತಾಗಿದೆ ಎಂದು ಕರವೇ ಘಟಕದ ಅಧ್ಯಕ್ಷ ಶರಣು ಇಟಗಿ ಹೇಳುತ್ತಾರೆ.
ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಹಾಲಿ ಶಾಸಕರು ಈ ಹೊಸ ತಾಲೂಕು ಕೇಂದ್ರಕ್ಕೆ ಪಿಯುಸಿ ಕಾಲೇಜನ್ನು ಆರಂಭಿಸಿ ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.