ಕಾಂಗ್ರೆಸ್ಸಿಂದ ದಲಿತರಿಗೆ ಅನ್ಯಾಯ; ಸಂಘಟನೆಗಳ ಪ್ರತಿಭಟನೆ
ಕನ್ನಡಪ್ರಭವಾರ್ತೆ ಯಾದಗಿರಿ ಮೇ 13
ಮುಖ್ಯಮಂತ್ರಿ ಸ್ಥಾನಕ್ಕೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡದ ಹಿನ್ನೆಲೆಯಲ್ಲಿ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದವು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ನೀಲಕಂಠ ಬಡಿಗೇರ, ಹಲವು ದಶಕಗಳಿಂದ ದಲಿತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಆದರೂ ಪಕ್ಷ ಮಾತ್ರ ದಲಿತರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದಿರುವುದು ಅತ್ಯಂತ ನೋವಿನ ಸಂಗತಿ ಎಂದರು.
ರಾಜಕೀಯವಾಗಿ ಮೋಸ: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಪಕ್ಷ ಮುಖ್ಯಮಂತ್ರಿ ಸ್ಥಾನವನ್ನು ಖರ್ಗೆ ಅವರಿಗೆ ನೀಡಲಿದೆ ಎಂದು ಇಡೀ ದಲಿತ ಸಮುದಾಯ ಆಶಾಭಾವನೆ ಹೊಂದಿತ್ತು. ಆದರೆ ಅವರಿಗೆ ಸಿಎಂ ಸ್ಥಾನ ನೀಡದೇ ದಲಿತರಿಗೆ ಕಾಂಗ್ರೆಸ್ ರಾಜಕೀಯವಾಗಿ ಮೋಸ ಮಾಡಿದೆ. ರಾಜಕೀಯದಲ್ಲಿ ದಲಿತರಿಗೆ ಪ್ರಾಶಸ್ತ್ಯ ನೀಡಿದೆ ಕಡೆಗಣನೆಯಾಗುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಆರೋಪಿಸಿದರು.
ಮೇಧಾವಿಗೆ ಸಿಗಲಿಲ್ಲ ಸೂಕ್ತ ಸ್ಥಾನಮಾನ: ನಗರಸಭೆ ಸದಸ್ಯ ಮರೆಪ್ಪ ಚೆಟ್ಟೇರಕರ್ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ)ನೇ ಕಲಂ ಜಾರಿಗೆ ತರುವಲ್ಲಿ ಖರ್ಗೆ ಅವರು ಮಹತ್ತರ ಪಾತ್ರ ವಹಿಸಿದ್ದಾರೆ. ಆದರೂ ಕಾಂಗ್ರೆಸ್ ಅವರಿಗೆ ಸೂಕ್ತ ಸ್ಥಾನ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಮರೆಪ್ಪ ಈಟೆ, ಸಾಬಣ್ಣ ಸುಂಗಲಕರ್, ವೀರಭದ್ರಪ್ಪ ಯಡ್ಡಳ್ಳಿ, ಪ್ರಭು ಬೊಮ್ಮನ್, ಅಯ್ಯಪ್ಪ ಸುಂಗಲಕರ್, ಮಲ್ಲಿನಾಥ ಸುಂಗಲಕರ್, ಶ್ರೀಶೈಲ ಹೊಸಮನಿ, ಭೀಮಪ್ಪ ಕಾಗಿ, ಗೋಪಾಲ ತಳಗೇರಾ, ಶರಣಪ್ಪ ಕೂಲೂರ, ಶರಣು ನಾಟೇಕಾರ, ಶಿವು ಗಿರೆಪ್ಪನೋರ್, ಚಂದಪ್ಪ, ಪ್ರಭು ಬುಕ್ಕಲ್, ಸೈದಪ್ಪ, ಶಿವು ಕುರಕುಂಬಳ ಇತರರು ಇದ್ದರು.
ಸಿದ್ದು ಸಿಎಂ, ಅಭಿಮಾನಿಗಳ ಸಂಭ್ರಮ
ಕೆಂಭಾವಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕೆಂಭಾವಿಯಲ್ಲಿ ಕನಕ ಯುವ ಸೇನೆಯ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಸಂಘದಿಂದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದು, ಅಭಿನವ ದೇವರಾಜ ಅರಸು ಎಂದೇ ಖ್ಯಾತರಾಗಿದ್ದಾರೆ. ಈ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ ಅಭಿವೃದ್ಧಿ ಹರಿಕಾರ ಎಂಬ ಹೆಸರಿಗೆ ಪಾತ್ರರಾಗಲಿ ಎಂದು ಹಾರೈಸಿದರು. ರಾಯಣ್ಣ ದೊಡಮನಿ ಮಾಳಳ್ಳಿ, ಬಸವರಾಜ ಪೂಜಾರಿ, ಮಲ್ಲಪ್ಪ ಪೂಜಾರಿ, ಮಾಳಪ್ಪ ಸುಂಕದ, ಕೆಂಚಪ್ಪ ಪೂಜಾರಿ, ರಮೇಶ ಕೊಡಗಾನೂರ, ಮುಕ್ಕಣ್ಣ ಮಾಳಳ್ಳಿ, ಜಟ್ಟೆಪ್ಪ ನಡಕೂರ, ದೇವು ಯಾಳಗಿ, ಪರಶುರಾಮ ತುಂಬಗಿ, ಮಾಳಪ್ಪ ತುಂಬಗಿ, ವಿರುಪಾಕ್ಷ ಯಾಳಗಿ ಇತರರು ಇದ್ದರು.
ಮುಂದಿನ ಅವಧಿಗಾದ್ರೂ ಸಿಎಂ ಮಾಡಿ
ಶಹಾಪುರ: 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನೇ ಉಸಿರಾಗಿಟ್ಟುಕೊಂಡು ದುಡಿಯುತ್ತಿರುವ ಧೀಮಂತ ನಾಯಕ, ಅಜಾತ ಶತ್ರು ಎಂದೇ ಬಿಂಬಿತವಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿರುವುದು ಇಡೀ ದಲಿತ ವರ್ಗಕ್ಕೆ ಆದ ಅವಮಾನ. ಇಡೀ ಹೈದ್ರಾಬಾದ್ ಕರ್ನಾಟಕದ ಜನತೆಯ ಆಶೋತ್ತರಗಳಿಗೆ ಧಕ್ಕೆ ತಂದ ಸಂಗತಿ ಎಂದು ಆರೋಪಿಸಿ ದಲಿತ ಸಮುದಾಯದ ಬಗೆಗಿನ ಕಾಂಗ್ರೆಸ್ ನಿಲುವನ್ನು ಖಂಡಿಸಿ ಹಲವಾರು ದಲಿತ ಸಂಘಟನೆಗಳು ಶಹಾಪುರ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದವು.
ಸೋನಿಯಾಗಾಂಧಿ, ರಾಹುಲ್ ಭಾವಚಿತ್ರಕ್ಕೆ ಚಪ್ಪಲಿ ಹಾರ: ದಲಿತ ಸಂಘಟನೆಗಳ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಘೋಷಣೆ ಕೂಗಿದರು.
ನಾಗಣ್ಣ ಬಡಿಗೇರ ಮಾತನಾಡಿ, ರಾಜ್ಯದಲ್ಲಿ ಇದುವರೆಗೆ ಅತೀ ಕಡಿಮೆ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ಎಲ್ಲಾ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ.
ಇನ್ನಾದರೂ ಕಾಂಗ್ರೆಸ್ಸಿನ ಅಧಿನಾಯಕರು ಯೋಚಿಸಿ 30 ತಿಂಗಳ ಅವಧಿಗಾದರೂ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವ ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸರಿಯಾದ ಬೆಲೆಯನ್ನು ಕಾಂಗ್ರೆಸ್ ತೆರಬೇಕಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಸೋಲಿನ ಹಿಂದೆಯೂ ಕಾಂಗ್ರೆಸ್ಸಿನ ಕಾಣದ ಕೈಗಳು ಕೆಲಸಮಾಡಿವೆ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೊನ್ನಪ್ಪ ಗಂಗನಾಳ, ಮಹಾದೇವ ದಿಗ್ಗಿ, ಶಿವಪುತ್ರ ಜವಳಿ, ಶರಣಪ್ಪ ಕೊಂಬಿನ್, ರಾಜು ಅಣಬಿ, ಭೀಮರಾಯ ಸೈದಾಪುರ, ಮರೆಪ್ಪ ಕನ್ಯಾಕೋಳೂರು, ಸಿದ್ದಪ್ಪ ಬೇವಿನಹಳ್ಳಿ, ಮರೆಪ್ಪ ಕ್ರಾಂತಿ, ಚಂದ್ರಶೇಖರ, ರಾಯಪ್ಪ ಗಂಗನಾಳ, ದೇವಿಂದ್ರಪ್ಪ ದಿಗ್ಗಿ, ಹೈಯಾಳಪ್ಪ ಗಂಗನಾಳ, ವಿರುಪಾಕ್ಷಿ, ಶಿವು ತಳವಾರ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

