ಗುಲ್ಬರ್ಗಾ

ದಕ್ಷಿಣೋತ್ತರ; ನೀರಿಲ್ಲದೆ ಜನ- ಜಾನುವಾರು ತತ್ತರ

Published On :

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 16

ಕುಡಿಯುವ ನೀರಿನ ಬವಣೆ ಜಿಲ್ಲೆಯ ಜೊತೆಗೇ ಗುಲ್ಬರ್ಗ ನಗರ ಪ್ರದೇಶವನ್ನು ಕಾಡುತ್ತಿದೆ ಎನ್ನಲು ಇಲ್ಲಿದೆ ಉದಾಹರಣೆ. ನಗರದ 55 ವಾರ್ಡ್‌ಗಳ ಪೈಕಿ ರಿಂಗ್ ರಸ್ತೆಗೆ ಅಂಟಿಕೊಂಡಿರುವ ಹೊರವಲಯದ ವಾರ್ಡ್‌ಗಳಲ್ಲೆಲ್ಲ ಬವಣೆ ಮುಗಿಲು ಮುಟ್ಟಿದೆ. ಕೊಳವೆ ಬಾವಿಗಳಿಲ್ಲ, ಇದ್ದ ಬಾವಿಗಳಲ್ಲಿ ನೀರಿಲ್ಲ. ನೀರಿದ್ದಲ್ಲಿ ಕರೆಂಟ್ ಇಲ್ಲ. ಕಳೆದೊಂದು ತಿಂಗಳಿಂದ ಇವುಗಳ ನಿರ್ವಹಣೆಗೆ ಯಾರೂ ಗಮನ ನೀಡುತ್ತಿಲ್ಲ ಎಂದು 'ಕನ್ನಡಪ್ರಭ' ಈ ಬಡಾವಣೆಗಳಲ್ಲಿ ಹೆಜ್ಜೆ ಹಾಕಿದಾಗ ಜನತೆ ದೂರಿದರು.
ಗುಲ್ಬರ್ಗ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರಗಳಲ್ಲಿ ಬರುವ ಈ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದರೂ ಪಾಲಿಕೆ ಸದಸ್ಯರಾಗಲಿ, ಜಲ ಮಂಡಲಿಯಾಗಲಿ ಇತ್ತ ಗಮನ ಹರಿಸುವ ಗೋಜಿಗೆ ಹೋಗಿಲ್ಲ ಎಂದು ಜನರೇ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಪನೂರಿಗೊಂದೇ ಬೊರ್‌ವೆಲ್: ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ನಗರದ ಹೊರ ವಲಯದ ವಾರ್ಡ್ ನಂ.32ರಲ್ಲಿ ಬರುವ ಕಪನೂರಿನಲ್ಲಿ ತೀವ್ರ ನೀರಿನ ಸಮಸ್ಯೆ ತಲೆದೋರಿದೆ. ಇಲ್ಲಿ ಸುಮಾರು 500ರಿಂದ 600 ಜನ ವಾಸವಾಗಿದ್ದು, ಇಲ್ಲಿನ ಜನತೆಗೆ ಅಗತ್ಯವಾಗಿ ಬೇಕಾಗಿರುವ ನೀರಿನ ಸೌಕರ್ಯವೇ ಇಲ್ಲ.
ಬಡಾವಣೆಗೊಂದು ನಲ್ಲಿ ವ್ಯವಸ್ಥೆ ಇದೆ. ಈ ನಲ್ಲಿಯಿಂದ ಎರಡ್ಮೂರು ದಿನಕ್ಕೊಮ್ಮೆ ನೀರು ಬರುತ್ತವೆ. ಅದು ಸಹ ಕೇವಲ 10ರಿಂದ 15 ನಿಮಿಷಗಳ ಕಾಲ ನೀರು ಬರುವುದರಿಂದ ಇಲ್ಲಿನ ಜನತೆ ಅನಿವಾರ್ಯವಾಗಿ ಬಡಾವಣೆಯ ಕೊನೆಯ ತುದಿಯಲ್ಲಿರುವ ಬೊರ್‌ವೆಲ್‌ಗೆ ಮೊರೆ ಹೋಗಬೇಕಾಗಿದೆ.
ಬಡಾವಣೆಯ ಎಲ್ಲ ಜನತೆಗೆ ಆಸರೆಯಾಗಿರುವ ಈ ಬೊರ್‌ವೆಲ್‌ಗೆ ಸಮರ್ಪಕವಾಗಿ ನೀರು ಬಾರದೆ ಇರುವುದರಿಂದ ಜನತೆ ನಿತ್ಯವೂ ಕೊಡ ನೀರು ತುಂಬಲು ಹರಸಾಹಸ ಮಾಡಬೇಕಾಗುತ್ತದೆ. ನೀರು ತುಂಬಲು ಜನತೆ ಹಗಲು-ರಾತ್ರಿ ಎನ್ನದೆ ಮುಗಿಬೀಳುತ್ತಿದ್ದಾರೆ.
ರೊಕ್ಕ ಕೊಟ್ಟಿ ಓಟ್ ಪಡೆದಿರುವೆ: ಈ ಮೊದಲು ಕಪನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುತ್ತಿರುವ ಈ ಕಪನೂರು ಕಳೆದ 15 ವರ್ಷಗಳಿಂದ ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ಇದುವರೆಗೂ ಮೂರು ಜನ ಸದಸ್ಯರು ಆಯ್ಕೆಯಾಗಿದ್ದಾರೆ.
ಆರಂಭದಲ್ಲಿ ಆಯ್ಕೆಯಾಗಿರುವ ಧರ್ಮಣ್ಣ ಎಂಬುವರು ಬಣ್ಣ ಬಣ್ಣದ ಮಾತ್ನಾಡಿ ಓಟ್ ಪಡೆದು ಒಮ್ಮೆಯೂ ಈ ಕಡೆ ತಿರುಗು ನೋಡಿಲ್ಲ, ಎರಡನೇ ಅವಧಿಗೆ ಆಯ್ಕೆಯಾಗಿರುವ ಶರಣಮ್ಮ ಎಂಬುವರು ಈ ಬಡಾವಣೆಗೆ ಅಗತ್ಯವಾಗಿರುವ ನೀರಿನ ಸೌಲಭ್ಯ ಕೊಡಿ ಎಂದು ಬೇಡಿಕೆಯಿಟ್ಟರೆ 'ರೊಕ್ಕ ಕೊಟ್ಟಿ ಓಟ್ ಪಡೆದಿರುವೆ, ನಿವೇನು ನನಗೆ ಓಟ್ ನೀಡಿ ಸಹಾಯ ಮಾಡಿಲ್ಲ. ನಾನೇಕೆ ಸಹಾಯ ಮಾಡಬೇಕು' ಎಂದು ಹೇಳುತ್ತಲೇ ತಮ್ಮ ಅಧಿಕಾರವಧಿ ಪೂರ್ಣಗೊಳಿಸಿದರು ಎಂದು ಬಡಾವಣೆಯ ನಿವಾಸಿ ಸುರೇಖಾ ಆಕ್ರೋಶದಿಂದಲೇ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು.
ಹೋರಾಟ ಮಾಡಿದರೆ ಜೈಲಿಗೆ ಕಳಿಸ್ತಾರೆ: 'ಬಡಾವಣೆಗೆ ನೀರ್ ಬೇಕೆಂದು ಹೋರಾಟ ಮಾಡಿದರೆ ಜೈಲಿಗೆ ಕಳುಹಿಸುತ್ತೀವಿ' ಎಂದು ಪೊಲೀಸರು ಹೆದರಿಸುತ್ತಿದ್ದಾರೆ. ಕಳೆದ ವರ್ಷ ನೀರಿಗಾಗಿ ಗಲ್ಲಿ ಮುಂದಿನ ರಸ್ತೆಯಲ್ಲಿ ಕೊಡ ಹಿಡಿದುಕೊಂಡು ಹೋರಾಟ ಮಾಡಿದರೆ ಜೈಲಿಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದರು. ಹೀಗಾಗಿ ಯಾರು ಪ್ರತಿಭಟನೆ ಮಾಡಲು ಮುಂದೆ ಬರುತ್ತಿಲ್ಲ ಎಂದು ಸುರೇಖಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಇತ್ತೀಚೆಗೆ ಆಯ್ಕೆಯಾಗಿರುವ ಲಕ್ಷ್ಮೀಬಾಯಿ ಅವರಿಗೆ ಭೇಟಿಯಾಗಿದ್ದೇವೆ. ಆಯ್ತು ನೋಡೋಣ ಎಂದು ಮಾತ್ರ ಹೇಳಿದ್ದಾರೆ. ಇನ್ನೂವರೆಗೂ ಬಡಾವಣೆಯ ನೀರಿನ ಸಮಸ್ಯೆಗೆ ಸ್ಪಂದಿಲ್ಲ ಎಂದು ಬಡಾವಣೆಯ ನಾಗರಿಕರು ದೂರಿದ್ದಾರೆ.
ರಾಜಾಪುರದಲ್ಲಿ ನೀರು ಬಿಡುವ ಸಮಯವೇ ಇಲ್ಲ: ಮಹಾನಗರ ಪಾಲಿಕೆಯ ವಾರ್ಡ್ ನಂ.46ರಲ್ಲಿ ಬರುವ ರಾಜಾಪುರ ಕೊಳಚೆ ಪ್ರದೇಶದಲ್ಲಿ ಮೂರು ನಳಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಇಲ್ಲಿ ನಲ್ಲಿಗಳಿಗೆ ಒಂದು ನಿಗದಿತ ಸಮಯಕ್ಕೆ ನೀರು ಬರುವುದಿಲ್ಲ. ಹೀಗಾಗಿ ರಾತ್ರಿ- ಹಗಲು ಎನ್ನದೆ ಜನತೆ ಕೊಡಗಳನ್ನು ಸಾಲಿಗಟ್ಟಿ ನಿಲ್ಲಿಸಿ ನೀರಿಗಾಗಿ ಪರದಾಡುತ್ತಿದ್ದಾರೆ.
ರಾಜಾಪುರ ನಗರದಲ್ಲಿ ಸಮರ್ಪಕ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ರಾಜಾಪುರ ಕೊಳಚೆ ಪ್ರದೇಶಕ್ಕೆ ಮಾತ್ರ ಸಮರ್ಪಕ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಈ ಪ್ರದೇಶಕ್ಕೆ ಸೌಲಭ್ಯ ನೀಡಲು ಪಾಲಿಕೆ ಸದಸ್ಯರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಕೊಳಚೆ ಪ್ರದೇಶದ ನಿವಾಸಿಗಳ ಆರೋಪವಾಗಿದೆ.
ಈ ಹಿಂದೆ ಆಯ್ಕೆಯಾಗಿರುವ ಪಾಲಿಕೆ ಸದಸ್ಯ ರವೀಂದ್ರನಾಥ ಹೊನ್ನಳ್ಳಿ ಅವರಿಗೆ ಹಲವಾರು ಬಾರಿ ಭೇಟಿ ಮಾಡಿ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತವಾಗಿ ಎಲ್ಲ ಮನೆಗಳಿಗೆ ನಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ, ಅವರು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಅವರ ಸಹೋದರ ಈರಣ್ಣ ಹೊನ್ನಳ್ಳಿ ಸದಸ್ಯರಾಗಿ ಆಯ್ಕೆಯಾಗಿದ್ದು, ಅವರಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಇಲ್ಲಿನ ಜನರ ಒತ್ತಾಸೆಯಾಗಿದೆ.
ಹೆಸರಿಗೆ ಮಾತ್ರ ನಲ್ಲಿ, ನೀರೆ ಬರೋದಿಲ್ರಿ: ಗುಲ್ಬರ್ಗ ತಾಲೂಕಿನ ತಾಜಸುಲ್ತಾನಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಸುಲ್ತಾನಪುರ ಹರಿಜನವಾಡದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಇಲ್ಲಿ ಬಾವಿಯ ಮೂಲಕ ನಲ್ಲಿಗಳಿಗೆ ಸರಬರಾಜು ಆಗುವ ನೀರು ಸರಿ ಹೋಗುವುದೇ ಇಲ್ಲ.
ಸಾರ್ವಜನಿಕವಾಗಿ ಮೂರು ನಲ್ಲಿಗಳ ವ್ಯವಸ್ಥೆ ಮಾಡಲಾಗಿದೆ. ಬಾವಿಯಿಂದ ಪೈಪ್‌ಲೈನ್ ಮೂಲಕ ನಲ್ಲಿಗೆ ನೀರು ಬಿಡಲಾಗುತ್ತಿದೆ. ಅದು ಸಹ ಎರಡು ದಿನಕ್ಕೊಮ್ಮೆ ಕೇವಲ 10ರಿಂದ 15 ನಿಮಿಷ ನೀರು ಬರುವುದರಿಂದ ಕುಟುಂಬಗಳಿಗೆ ನೀರು ಸಾಕಾಗುತ್ತಿಲ್ಲ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.
ಎರಡು ದಿನಕ್ಕೊಮ್ಮೆ ಬರುವ ನೀರು ಹಠಾತ್ ಬರದಿದ್ದರೆ ಒಂದು ವಾರಕಾಲ ಇಲ್ಲಿರುವ ಬೊರ್‌ವೆಲ್‌ಗೆ ಮೋರೆ ಹೋಗಬೇಕಾಗುತ್ತದೆ. ಒಂದು ಬೊರ್‌ವೆಲ್ ಸರಿ ಹೋಗುವುದಿಲ್ಲ, ಇನ್ನೊಂದು ಬೊರ್‌ವೆಲ್ ಕೊರಿಸಿ ಎಂದು ಗ್ರಾಪಂ ಅಧ್ಯಕ್ಷರಿಗೆ ಮನವಿ ಮಾಡಿದರೆ ನೀರಿನ ಅಂತರ್ಜಲ ಬತ್ತಿ ಹೋಗಿದೆ. ಬೊರ್‌ವೆಲ್ ಹಾಕಲಾಗದು ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಹರಿಜನವಾಡದ ಜನತೆ 'ಕನ್ನಡಪ್ರಭ'ದ ಎದುರು ತಮ್ಮ ಗೋಳು ತೋಡಿಕೊಂಡರು.
ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ನಗರ ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ, ಅಲ್ಲಿಂದ ಆಯ್ಕೆಯಾಗಿರುವ ಜನನಾಯಕರು ಶ್ರಮಿಸುವುದು ತುಂಬ ಜರೂರಾಗಿದೆ. ಇಲ್ಲೆಲ್ಲಾ ತುರ್ತು ಕ್ರಮ ಕೈಗೊಳ್ಳಲೇಬೇಕಾಗಿದೆ.
ಗುಲ್ಬರ್ಗ ಉತ್ತರ ಶಾಸಕ ಖಮರುಲ್ ಇಸ್ಲಾಂ, ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ನಗರದ ವಾರ್ಡ್‌ಗಳ ನಿವಾಸಿಗಳನ್ನು ಕಾಡುತ್ತಿರುವ ನೀರಿನ ಸಮಸ್ಯೆಗೆ ಶೀಘ್ರ ಸ್ಪಂದಿಸಬೇಕಾಗಿದೆ.
ನಿವಾಸಿಗಳ ಪ್ರಕಾರ, ಯಾರೂ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತ ತಮ್ಮೊಂದಿಗೆ ಚರ್ಚಿಸಿಲ್ಲ. ಇನ್ನಾದರೂ ಇವರಿಬ್ಬರೂ ನಾಯಕರು ಜನರನ್ನು ಕಂಡು, ಅವರ ಕುಡಿಯುವ ನೀರಿನ ವಿಚಾರದಲ್ಲಿರುವ ತೊಂದರೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವರೆ ಎಂಬುದನ್ನು ಎಂದಿನಂತೆ ಕಾದುನೋಡಬೇಕಾಗಿದೆ.

ಮಂತ್ರಿಗಿರಿ ಲಾಬಿಯಲ್ಲೇ ತಲ್ಲೀನ, ಸಮಸ್ಯೆ ಆಲಿಸಿಲ್ಲ ಖಮರುಲ್ಲಾ...
ಖಮರುಲ್ ಇಸ್ಲಾಂ ಪ್ರತಿನಿಧಿಸುವ ಗುಲ್ಬರ್ಗ ಉತ್ತರ ಕ್ಷೇತ್ರ ವಾರ್ಡ್ 1ರಿಂದ 30 ವ್ಯಾಪ್ತಿ ಹೊಂದಿದ್ದರೆ, ಗುಲ್ಬರ್ಗ ದಕ್ಷಿಣ ವಾರ್ಡ್ 31ರಿಂದ 55ರ ವ್ಯಾಪ್ತಿ ಹೊಂದಿದೆ. ಖಮರುಲ್ ಇಸ್ಲಾಂ ಗೆದ್ದ ಮರುದಿನವೇ ಬೆಂಗಳೂರು- ದೆಹಲಿ ಓಡಾಡುತ್ತಿದ್ದಾರೆ. ಮಂತ್ರಿಗಿರಿಗಾಗಿ ಲಾಬಿ ಮಾಡುತ್ತಿರುವ ಖಮರುಲ್ ಇಸ್ಲಾಂ ಇನ್ನೂ ಕುಡಿಯುವ ನೀರಿನ ಬವಣೆ ಇರುವ ಬಡಾವಣೆಗಳತ್ತ ಹೆಜ್ಜೆ ಹಾಕಬೇಕಾಗಿದೆ.
ಕಾಂಗ್ರೆಸ್ ಪೂರ್ಣ ಪ್ರಮಾಣದ ಸರ್ಕಾರ ಬಂದಿರುವುದರಿಂದ ಇಸ್ಲಾಂ ಈ ಅವಕಾಶವನ್ನು ಬಿಡಬಾರದು, ಮಂತ್ರಿಯಾಗಿಯೇ ತೀರಬೇಕು ಎಂದು ಪಣತೊಟ್ಟಿದ್ದಂತಿದೆ. ಸಿದ್ದು ಸಂಪುಟ ರಚನೆ ಕಸರತ್ತಂತೂ ನಡೆದಿದೆ. ಅದ್ಯಾವಾಗ ಖಮರುಲ್ ಇಸ್ಲಾಂ ಕ್ಷೇತ್ರದ ಜನರನ್ನು ಕಾಡುತ್ತಿರುವ ನೀರಿನ ಬವಣೆಯತ್ತ ನೋಡುವರೋ?

ದತ್ತುಗೆ ಹೊಸ ಅನುಭವ
ದತ್ತಾತ್ರೇಯ ರೇವೂರ್ ಮೊದಲ ಬಾರಿ ಶಾಸಕರಾದವರು. ಇವರಿಗಿದು ಹೊಸ ಅನುಭವ ಎನ್ನಬಹುದಾದರೂ ಕಳೆದ ಅವಧಿಗೆ ಶಾಸಕರಾಗಿದ್ದ ತಾಯಿ ಅರುಣಾರಿಗಿಂತಲೂ ಇವರೇ ಎಲ್ಲೆಡೆ ಓಡಾಡಿಕೊಂಡಿದ್ದು. ಸಾಕಷ್ಟು ವಿಷಯ ಅರಿತಿದ್ದರಿಂದ ದತ್ತು ಈ ಬಾರಿ ಬಡಾವಣೆ ಯಾತ್ರೆ ಮಾಡಲೇಬೇಕಾಗಿದೆ.
ಶಾಸಕರಾದ ಮಾರನೇ ದಿನವೇ ಬಡಾವಣೆ ಸುತ್ತಾಡುವ ತಮ್ಮ ಮನದಿಂಗಿತ ಹೊರಹಾಕಿದ್ದರು. ಆದರೆ ಇಂದಿಗೂ ಬಡಾವಣೆ ಭೇಟಿ ಶುರು ಮಾಡಿಲ್ಲ. ಬೇಸಿಗೆಯ ಈ ದಿನಗಳಲ್ಲಿ ನೀರಿಲ್ಲದೆ ನರಳುತ್ತಿರುವ, ಬೇಕಾಬಿಟ್ಟಿ ನೀರು ಪೂರೈಕೆಯಿಂದಲೂ ತೊಂದರೆ ಎದುರಿಸುತ್ತಿರುವ ಬಡಾವಣೆಯ ಜನರ ಬವಣೆಯ ಕಣ್ಣೀರು ಒರೆಸಲು ದತ್ತು ಪಾಟೀಲ್ ಹೊರಬಂದು ಬಡಾವಣೆ ಬವಣೆ ಖುದ್ದು ನೋಡಲು, ಪರಿಹಾರ ಹುಡುಕಲು ಅದ್ಯಾವಾಗ ಸಂಚಾರ ಆರಂಭಿಸುವರೋ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.