ನೀರಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಸಮಸ್ಯೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಸೇಡಂ ಮೇ 19
ಸೇಡಂ ತಾಲೂಕಿನಾದ್ಯಂತ ಕಳೆದ ಹಲವಾರು ವರ್ಷಗಳಿಂದ ನೀರಿನ ತೀವ್ರ ತೊಂದರೆಯಿದ್ದು, ಈ ಬಾರಿ ಅಷ್ಟೊಂದು ಕಂಡು ಬಂದಿಲ್ಲ. ಅಂತರ್ಜಲ ಮಟ್ಟದಲ್ಲಿ ಸ್ವಲ್ಪ ಕುಸಿತವಿದ್ದರೂ ತಾಲೂಕು ಆಡಳಿತ ತಕ್ಕಮಟ್ಟಿಗೆ ಪ್ರಯತ್ನಪಡುತ್ತಿದೆ.
ಆದರೆ ನೀರು ಸರಬರಾಜಿಗೆ ಗ್ರಾಮೀಣ ಭಾಗದಲ್ಲಿ ದಿನಕ್ಕೆ ಆರು ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳುವ ಸರ್ಕಾರ ಕೇವಲ 2ರಿಂದ 3 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡುತ್ತಿರುವುದೇ ದೊಡ್ಡ ತಲೆ ನೋವಾಗಿದೆ.
ನೀರಿದ್ದರೂ ಪೂರೈಕೆ ಮಾಡಲಾಗುತ್ತಿಲ್ಲ: ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಬ್ರಿಡ್ಜ್ ಕಂ-ಬ್ಯಾರೇಜ್ ನಿರ್ಮಾಣದಿಂದಾಗಿ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಂಡಿದ್ದು, ಕೊಳವೆಬಾವಿಗಳಲ್ಲಿ ನೀರು ಲಭ್ಯವಿದೆಯಾದರೂ ಅದು ಜನ ಮತ್ತು ಜಾನುವಾರುಗಳಿಗೆ ಸಮರ್ಪಕ ಪೂರೈಕೆ ಮಾಡಲು ಪಂಚಾಯತಿಗಳಿಗೆ ಸಾಧ್ಯವಾಗುತ್ತಿಲ್ಲ.
ಈ ಬ್ರಿಡ್ಜ್ ಕಂ-ಬ್ಯಾರೇಜ್ಗಳು ಜನರಿಗೆ ಉಪಯೋಗವಾಗುವುದಕ್ಕಿಂತ ಹೆಚ್ಚು ಸಿಮೆಂಟ್ ಕಂಪನಿಗಳಿಗೆ ಅನುಕೂಲವಾಗಿವೆ. ಇನ್ನು ಹಳ್ಳಿಗಳಲ್ಲಿ ಕೊರೆದಿರುವ ಕೈ ಪಂಪ್ಗಳಲ್ಲಿ ಎಷ್ಟೇ ಪ್ರಯತ್ನಪಟ್ಟರೂ ನೀರು ಮೇಲೆ ಬಾರದಂತಾಗಿದೆ. ಇನ್ನು ನೀರು ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಗಮನಿಸಿ ಹಲವು ಗ್ರಾಮಗಳಲ್ಲಿ ಸಿಂಗಲ್ ಫೇಸ್ ಮೋಟಾರ್ ಕೂಡಿಸಿದ್ದು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.
ಹೋರಾಟದ ಅನಿವಾರ್ಯತೆ: ತಾಲೂಕಿನ ಕೋಡ್ಲಾ ಗ್ರಾಮ ಪಂಚಾಯಿತಿಯಲ್ಲಿ ಕೆಲವು ದಿನಗಳ ಮೊದಲು ಕುಡಿಯುವ ನೀರಿನ ತೀವ್ರ ಸಮಸ್ಯೆ ಕಾಣಿಸಿಕೊಂಡಾಗ ಅಧಿಕಾರಿಗಳು ತಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸದ್ದರಿಂದ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಗಚ್ಚಿನಮಠ ಹಾಗೂ ಇನ್ನಿತರ ಗ್ರಾಮದ ಪ್ರಮುಖರ ನೇತೃತ್ವದಲ್ಲಿ ಸರಣಿ ಉಪವಾಸವನ್ನೂ ಸಹ ಕೈಗೊಳ್ಳಲಾಗಿತ್ತು. ಈ ಹೋರಾಟದ ಪರಿಣಾಮವಾಗಿ ಕೋಡ್ಲಾದಲ್ಲಿ ಮೂರು ಕೊಳವೆಬಾವಿ ಕೊರೆಸಿ ನೀರು ಪೂರೈಕೆ ಮಾಡಲಾಗಿದೆ. ಸದ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಿಸಿದಂತಾಗಿದೆ.
ಹಂದರಕಿ ಗ್ರಾಪಂ ವ್ಯಾಪ್ತಿಯ ಗೌಡನಹಳ್ಳಿ, ನಾಡೇಪಲ್ಲಿ ಗ್ರಾಪಂ ಹಾಗೆಯೇ ರಿಬ್ಬನಪಲ್ಲಿ, ಮೋತಕಪಲ್ಲಿ, ಕಡಚರ್ಲಾ, ಮದಕಲ್, ಆಡಕಿ, ಬಟಗೇರಾ(ಕೆ), ದುಗನೂರ, ಲಿಂಗಂಪಲ್ಲಿ, ಪಾಕಾಲ ಇನ್ನಿತರ ಗ್ರಾಮಗಳಲ್ಲಿ ನೀರಿನ ಸಮಸ್ಯೆಯನ್ನು ಸ್ಥಳೀಯ ಪಿಡಿಒಗಳೇ ತಕ್ಕಮಟ್ಟಿಗೆ ಸ್ಪಂದಿಸಿ ಪರಿಹರಿಸಿದ್ದಾಗಿ ಹೇಳಲಾಗುತ್ತಿದೆ.
ಸಿಂಗಲ್ ಫೇಸ್ ಮೋಟಾರ್ ಅಳವಡಿಕೆ: ನೀರು ಸರಬರಾಜು ಮಾಡಲು ಗ್ರಾಮೀಣ ಭಾಗದಲ್ಲಿ ತ್ರಿಫೇಸ್ ಕರೆಂಟ್ ಅಭಾವದಿಂದಾಗಿ ಹಲವಾರು ಗ್ರಾಮಗಳಲ್ಲಿ ಸಿಂಗಲ್ ಫೇಸ್ ಮೋಟಾರು ಅಳವಡಿಸಿರುವುದಾಗಿ ತಾಲೂಕು ಪಂಚಾಯತಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕ ನಲ್ಲಿಗಳಿಗೆ ಅಳವಡಿಸಲಾಗುವ ಟೂಟಿ(ನಲ್ಲಿಯ ಸ್ವಿಚ್)ಯನ್ನು ಜನರು ಕಿತ್ತುವುದರಿಂದ ಕೆಲವು ಗ್ರಾಮಗಳಲ್ಲಿ ಎತ್ತರದ ಹಲವು ಬಡಾವಣೆಗಳ ಜನರಿಗೆ ಎಷ್ಟೇ ಪ್ರಯತ್ನ ಮಾಡಿದರೂ ನೀರು ಸರಬರಾಜಾಗುತ್ತಿಲ್ಲ. ಕಾರಣ ಸಾರ್ವಜನಿಕ ನೀರು ಪೂರೈಕೆಗಾಗಿ ಪೈಪ್ಲೈನ್ ಹಾದು ಹೋಗುವ ಹಾದಿಯಲ್ಲಿಯ ಜನರೂ ಕೂಡ ತಮಗೆ ಬೇಕಾದಷ್ಟು ನೀರು ತೆಗೆದುಕೊಂಡ ನಂತರವಾದರೂ ಟೂಟಿಗಳನ್ನು ಮುಚ್ಚುವುದರಿಂದ ಎಲ್ಲರಿಗೂ ನೀರು ಪೂರೈಕೆ ಮಾಡಬಹುದು.
ಸಾರ್ವಜನಿಕರೂ ಸಹಕರಿಸಬೇಕು: ಆದರೆ ಹಲವಾರು ಗ್ರಾಮಗಳಲ್ಲಿ ಸಾರ್ವಜನಿಕ ನಲ್ಲಿಗಳಿಗೆ ಅಳವಡಿಸಿದ ಟೂಟಿಯನ್ನೇ ಮುರಿದು ಹಾಕಿದ್ದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತಿದೆ. ಕುಡಿಯುವ ನೀರು ಸಮರ್ಪಕ ಪೂರೈಕೆಗಾಗಿ ಸಾರ್ವಜನಿಕರೂ ಸಹಕರಿಸಿದಲ್ಲಿ ಇನ್ನೂ ಉತ್ತಮ ಎನ್ನುವುದು ಹಲವು ಗ್ರಾಪಂ ಪಿಡಿಒಗಳ ಅಭಿಪ್ರಾಯ.
ಇನ್ನು ಹಲವಾರು ಗ್ರಾಮಗಳಲ್ಲಿ ನೀರು ಸರಬರಾಜು ಪ್ರಾರಂಭಗೊಂಡ ತಕ್ಷಣ ಬೇಸಿಗೆಯ ಬಿರು ಬಿಸಿಲನ್ನೂ ಲೆಕ್ಕಿಸದೇ ನೀರಿನ ಗುಮ್ಮಿಗಳಿಗೆ ನೀರು ಪೂರೈಕೆ ಆಗೋದೆ ತಡ ಗುಮ್ಮಿಗಳಿಗೇ ಪೈಪ್ ಹಾಕಿ ನೀರು ತುಂಬಿಕೊಳ್ಳುವುದೂ ಇದೆ. ಏಕೆಂದರೆ- ಎಷ್ಟು ಕರೆಂಟ್ ಇರುತ್ತದೋ ಏನೋ ನೀರು ಬಂದಾಗಲೇ ತುಂಬಿಕೊಂಡರಾಯಿತು ಎನ್ನುವ ಧಾವಂತ.
ಮಂತ್ರಿ ಡಾ. ಶರಣ ಗಮನ ಹರಿಸಲಿ
ಹ್ಯಾಟ್ರಿಕ್ ಗೆಲವಿನ ಮೂಲಕ ಮಂತ್ರಿಯಾಗಿರುವ ಸೇಡಂ ಶಾಸಕರಾದ ಡಾ. ಶರಣಪ್ರಕಾಶ ಪಾಟೀಲರು ತಾವು ದೆಹಲಿ ಮತ್ತು ಬೆಂಗಳೂರು ಮಧ್ಯೆ ಓಡಾಟದಲ್ಲಿದ್ದ ಕಾರಣ ಇಲ್ಲಿನ ನೀರಿನ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ತಾಲೂಕಿನಾದ್ಯಂತ ತೀವ್ರವಾದ ನೀರಿನ ಹಾಹಾಕಾರವಿಲ್ಲದಿದ್ದರೂ ಸಮರ್ಪಕ ಪೂರೈಕೆಯ ಹಾಗೂ ನಿರ್ವಹಣಾ ಕೊರತೆಯಿಂದಾಗಿ ಸಮಸ್ಯೆ ಇನ್ನೂ ಇದೆ. ಇದಕ್ಕೆ ಜನಪ್ರತಿನಿಧಿಗಳೂ ಸಹ ಮುತುವರ್ಜಿ ವಹಿಸಿ ನೀರು ಪೂರೈಕೆಗಾಗಿ ಮೇಲುಸ್ತುವಾರಿ ವಹಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

