ಗುಲ್ಬರ್ಗಾ

ಕಾಲುವೆ ದುರಸ್ತಿಗಾಗಿ 4 ಕೋಟಿ ವಾರ್ಷಿಕ ಟೆಂಡರ್

Published On :

ಕ.ಪ್ರ. ವಾರ್ತೆ  ಹುಣಸಗಿ  ಮೇ 19
ನಾರಾಯಣಪುರ ವಲಯದ ನಾರಾಯಣಪುರ ಹಾಗೂ ಹುಣಸಗಿ ವಿಭಾಗದಿಂದ ಕಾಲುವೆ ದುರಸ್ತಿಗಾಗಿ ಅಂದಾಜು 4 ಕೋಟಿ ರು.ಗಳ ವಾರ್ಷಿಕ ಟೆಂಡರ್ ಕರೆಯಲಾಗಿದೆ.
  ಅದರಂತೆ ಕೊಡೇಕಲ್ ವಿತರಣಾ ಕಾಲುವೆ, ಗೆದ್ದಲಮರಿ ವಿತರಣಾ ಕಾಲುವೆ, ಹುಣಸಗಿ ಶಾಖಾ ಕಾಲುವೆ, ಸಿದ್ದಾಪುರ ವಿತರಣಾ ಕಾಲುವೆ, ದೇವತ್ಕಲ್, ಬೈಲಾಪುರ, ಮುದನೂರು ಕಾಲುವೆಗಳಲ್ಲಿ ಬೇಸಿಗೆಯಲ್ಲಿನ ಕಾಲುವೆ ಹೂಳು ಎತ್ತುವುದು, ಬಿದ್ದಿರುವ ಡ್ರಾಪ್‌ಗಳು, ಸೇತುವೆಗಳು, ನೀರು ಸೋರುವಿಕೆಯನ್ನು ತಡೆಗಟ್ಟುವುದು ಈ ಕಾಮಗಾರಿ ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ.
ಅನಾರೋಗ್ಯಕರ ಸ್ಪರ್ಧೆ ಬೇಡ: ಇತ್ತೀಚೆಗೆ ಕೆಲ ಗುತ್ತಿಗೆದಾರರು ಕಾಮಗಾರಿಗೆ ನಿಗದಿಪಡಿಸಿದ ಮೊತ್ತಕ್ಕಿಂತ ಶೇ.40 ಮೊತ್ತಕ್ಕೂ ಕಡಿಮೆ ದರದಲ್ಲಿ ಕೆಲಸ ಮಾಡುವುದಾಗಿ ಟೆಂಡರ್ ಪಡೆದು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಇದರಿಂದ ರೈತರ ಜಮೀನಿಗೆ ನೀರು ತಲುಪಿಸಲು ಸಾಧ್ಯವಾಗದು. ಕಾರಣ ಕೆಲಸ ನಮಗೆ ದೊರಕಬೇಕೆಂದು ಅನಾರೋಗ್ಯಕರ ಸ್ಪರ್ಧೆ ಬೇಡ ಎಂದು ವೃತ್ತಿಪರ ಗುತ್ತಿಗೆದಾರರು ವಿನಂತಿ ಮಾಡಿದ್ದಾರೆ.
  ಯಾರು ತೀರಾ ಕಡಿಮೆ ಮೊತ್ತ ಹಾಕಿ ಗುತ್ತಿಗೆ ಪಡೆಯುತ್ತಾರೋ ಅವರಿಂದ ಗುಣಮಟ್ಟದ ಕೆಲಸ ಸಾಧ್ಯವಾಗದು ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಪ್ರತಿ ವರ್ಷ ನೀರಿನ ತೊಂದರೆ ಒಂದು ಕಡೆ ನಿದ್ದೆಗೆಡಿಸಿದ್ದರೆ, ಇನ್ನೊಂದು ಕಡೆ ಈ ಗುತ್ತಿಗೆದಾರರು ತಮಗೆ ಕೆಲಸವಾಗಲೆಬೇಕೆಂಬ ಹಠದಲ್ಲಿ ಕಾಮಗಾರಿಗೆ ನಿಗದಿತ ಹಣ ಖರ್ಚು ಮಾಡದೆ ಬಂದಿರುವ ಅನುದಾನ ವಾಪಸ್ ಕಳುಹಿಸುತ್ತಿದ್ದಾರೆ.
ಸುಮ್ಮನಿರಲ್ಲ- ರೈತರು: ಕಳಪೆ ಕಾಮಗಾರಿಯಾದಲ್ಲಿ ಈ ಬಾರಿ ನಾವು ಸುಮ್ಮನೆ ಕೂರುವುದಿಲ್ಲ. ಗುತ್ತಿಗೆದಾರನ ಮನೆಯ ಮುಂದೆ ಕುಳಿತು ಧರಣಿ ಮಾಡುತ್ತೇವೆ ಎಂದು ರೈತರು ಎಚ್ಚರಿಸಿದ್ದಾರೆ. ಇನ್ನು ಇಲಾಖೆ ಎಂಜನಿಯರುಗಳು ಹೇಗೆ ಕಾಮಗಾರಿ ಕೆಲಸದ ಮೇಲುಸ್ತುವಾರಿ ಮಾಡುವರೋ ನಾವು ನೋಡುತ್ತೇವೆ ಎಂದು ಯಡಹಳ್ಳಿ, ಅರಕೇರಾ(ಜೆ), ಕನಗಂಡನಹಳ್ಳಿ, ವಜ್ಜಲ, ಚನ್ನೂರು, ಕಲ್ಲದೇವನಹಳ್ಳಿ ಭಾಗದ ರೈತರು ನೀರಾವರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಣಮಟ್ಟದಲ್ಲಿ ರಾಜಿ ಇಲ್ಲ: ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅಂದಾಜು ಪತ್ರಿಕೆಯಲ್ಲಿ ನಿಗದಿಯಾದಂತೆ ಗುತ್ತಿಗೆದಾರ ಒಪ್ಪಂದ ಮಾಡಿಕೊಂಡಿರುತ್ತಾರೆ. ಅದರಂತೆ ನಮ್ಮ ಎಂಜನಿಯರುಗಳೂ ಕೆಲಸ ತೆಗೆದುಕೊಳ್ಳುತ್ತಾರೆ. ಈ ವಿಷಯದಲ್ಲಿ ಆತಂಕ ಬೇಡ ಎಂದು ಕಾರ್ಯಪಾಲಕ ಅಭಿಯಂತರ ಎಸ್.ಬಿ. ಪಾಟೀಲ ನಾರಾಯಣಪುರ,  ಲೋಕೇಶಪ್ಪಾ ಹುಣಸಗಿ ಅವರು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.