ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿ: ಉಮೇಶ ಜಾಧವ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಮೇ 20
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಒಳ್ಳೆಯ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅಭಿವೃದ್ಧಿಪಡಿಸಲು ಮತ್ತು ಮಾದರಿ ತಾಲೂಕನ್ನಾಗಿಸಲು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದು ನೂತನ ಶಾಸಕ ಡಾ. ಉಮೇಶ ಜಾಧವ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಚಿಂಚೋಳಿ- ಕಾಳಗಿ ವಲಯಗಳ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಪರೇಡ್ ಮೈದಾನದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರ್ಮಸಿಂಗ್ ಅವರ ಪ್ರಯತ್ನದಿಂದಾಗಿ ಹಾಗೂ ಸೋನಿಯಾ ಗಾಂಧಿ ಮತ್ತು ಯುವ ನೇತಾರ ರಾಹುಲ್ಗಾಂಧಿ ಅವರಿಂದ ಕೇಂದ್ರ ಯುಪಿಎ ಸರ್ಕಾರ ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ (ಜೆ) ವಿಧಿ ಜಾರಿಗೊಂಡಿದೆ ಎಂದರು.
ವರ್ಷಗಳಿಂದ ನೆನೆಗುದಿಗೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂವಿಧಾನ 371ನೇ (ಜೆ) ವಿಧಿಯ ಬಗ್ಗೆ ನಿಯಮಗಳನ್ನು ರೂಪಿಸಿ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳನ್ನು ನೀಡಲಾಗುವುದು ಎಂದ ಅವರು, ಚಿಂಚೋಳಿ ಪಟ್ಟಣದ ಗುಲ್ಬರ್ಗ- ಚಿಂಚೋಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ನಿರ್ಮಾಣ ಹಂತದಲ್ಲಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದರ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ತಾಲೂಕಿನಲ್ಲಿ ವೈದ್ಯರ ಹುದ್ದೆಗಳ ಭರ್ತಿ ಮತ್ತು ಸಣ್ಣ ನೀರಾವರಿ ಕೆರೆಗಳನ್ನು ಪುನಶ್ಚೇತನಗೊಳಿಸಿ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಿ ಕೊಡುವುದು ನಮ್ಮ ಉದ್ದೇಶ ಎಂದರು.
ಪಟ್ಟಣದಲ್ಲಿ ವಿಜ್ಞಾನ ಕಾಲೇಜು, ತಾಂತ್ರಿಕ ಕಾಲೇಜು ಮಂಜೂರಿಗೆ ಪ್ರಯತ್ನಿಸಲಾಗುವುದು. ಕಳೆದ ಬಿಜೆಪಿ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ರಸ್ತೆ ಹಾಳಾಗಿವೆ, ಚಿಂಚೋಳಿ ರಾಜ್ಯ ಹೆದ್ದಾರಿಯನ್ನು ಸುಧಾರಣೆಗೊಳಿಸಬೇಕಾಗಿದೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ರಸ್ತೆ ಸಮಸ್ಯೆಗಳನ್ನು ಸುಧಾರಿಸಬೇಕಾಗಿದೆ ಎಂದು ಹೇಳಿದರು.
ಸಹಕಾರ ಅಗತ್ಯ: ದಬ್ಬಾಳಿಕೆ, ಹೆದರಿಕೆ ಮತ್ತು ಅಂಜಿಕೆ ಇಲ್ಲದಂತೆ ಕಾನೂನು ಪ್ರಕಾರ ಕೆಲಸ ಮಾಡಬೇಕಾಗಿದೆ. 14 ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಎಲ್ಲರ ಸಹಕಾರದಿಂದ ಚಿಂಚೋಳಿ ಮತಕ್ಷೇತ್ರದಲ್ಲಿ ಕೈಕೊಳ್ಳುವ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ಅಗತ್ಯ ಎಂದರು.
ನನ್ನ ಗೆಲವಿಗೆ ಶ್ರಮಿಸಿದ ಪಕ್ಷದ ಎಲ್ಲ ಕಾರ್ಯಕರ್ತರನ್ನು ಎಂದಿಗೂ ಮರೆಯುವುದಿಲ್ಲ. ಚಿಂಚೋಳಿ ಸಮಗ್ರ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ಡಾ. ಉಮೇಶ ಜಾಧವ ಹೇಳಿದರು.
ಭೀಮರಾವ ತೇಗಲತಿಪ್ಪಿ, ಜಗದೇವ ಗುತ್ತೇದಾರ, ಬಸವರಾಜ ಮಲಿ, ನಾಗಯ್ಯ ಕೊಟ್ರಕಿ, ಕೆ.ಎಂ. ಹಾಶ್ಮಿ, ನರಸಮ್ಮ ಗಂಗನಪಳ್ಳಿ, ಇಂದುಮತಿ ಸ್ವಾಮಿ, ಜಗದೀಶ ಠಾಕೂರ, ವಿಠ್ಠಲ್ ಚವ್ಹಾಣ, ರಾಮಶೆಟ್ಟಿ ಪವಾರ, ಶಿವಕುಮಾರ ಕೊಳ್ಳೂರ, ಜಗನ್ನಾಥ ಕಟ್ಟಿ, ಶಾಮರಾವ ಕೊರವಿ, ಅಬ್ದುಲ್ ಬಾಸೀತ್ ಇತರರು ಉಪಸ್ಥಿತರಿದ್ದರು. ಅನೀಲಕುಮಾರ ಜಮಾದಾರ ಸ್ವಾಗತಿಸಿದರು. ಬಸವರಾಜ ಮೊಮ್ಮಯಿ ಆರ್. ಗಣಪತರಾವ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಚಿಂಚೋಳಿಕರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

