ಪರದಾಡುವ ಹಳ್ಳಿಗರಿಗೆ ಟ್ಯಾಂಕರ್ ನೀರೇ ಗತಿ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಆಳಂದ, ಮೇ 20
ಪಟ್ಟಣದ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ದಿನ ಬೆಳೆಗಾದರೆ ಕುಡಿಯುವ ನೀರಿಗಾಗಿ ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಟ್ಯಾಂಕರ್ ನೀರಿಗಾಗಿ ಕಾದು ಕುಳಿತರೆ, ಹಲವಡೆ ಪೂರೈಕೆಯಾಗುವ ಬೋರ್ವೆಲ್ನಿಂದ ಬರುವ ನಲ್ಲಿಗಳ ಮುಂದೆ ದಿನವಿಡೀ ಕೊಡಗಳ ಸಾಲು ಕಂಡು ಬರತೊಡಗಿದೆ. ಮತ್ತೊಂದಡೆ ನೀರಿಲ್ಲದೆ ಜಾನುವಾರುಗಳ ಪರಿಸ್ಥಿತಿ ಹೇಳತೀರದಾಗಿದೆ.
ವೃದ್ಧರು, ಮಹಿಳೆಯರು, ಯುವಕ- ಯುವತಿಯರು ದೂರ ದೂರದಿಂದ ಕೊಡ ಹೊತ್ತು ನೀರು ತರುವ ದೃಶ್ಯ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ದಿನಕಳೆದಂತೆ ಅಂತರ್ಜಲ ಕುಸಿತ ಬಾವಿ ಬೋರುವೆಲ್ ಬತ್ತಿ ನಿಂತು ಭೀಕರ ಸಮಸ್ಯೆಯಾಗತೊಡಗಿದೆ.
ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ: ಶಾಶ್ವತ ಕ್ರಮ ಕೈಗೊಳ್ಳದೆ ಪ್ರತಿ ಬೇಸಿಗೆ ಬಂದಾಗ ಮಾತ್ರ ಅಧಿಕಾರಿಗಳು, ಗ್ರಾಪಂ ಮಟ್ಟದ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎನ್ನುವಂತಾಗಿದೆ.
ನೀರಿನಂತೆ ಸರ್ಕಾರದ ಅನುದಾನ ಖರ್ಚಾದರೂ ನೀರು ದೊರೆಯದೆ ಇರುವ ಪರಿಸ್ಥಿತಿಯಲ್ಲಿ ಅದೇ ಅನುದಾನದಿಂದ ಶಾಶ್ವತ ಕ್ರಮ ಕೈಗೊಳ್ಳಲು ಮುಂದಾದರೆ ಇಂಥ ಗಂಭೀರ ಸಮಸ್ಯೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕ ರು.
ತಾಲೂಕು ಆಡಳಿತವು ಆಳಂದ ವಿಧಾನಸಭಾ ಕ್ಷೇತ್ರದ 112 ಹಳ್ಳಿಗಳ ಪೈಕಿ 30 ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಸಮಸ್ಯೆಯಿದ್ದ ಕಡೆ ಈಗಾಗಲೇ ಕೊರೆದ 58 ಬೋರ್ವೆಲ್ ಪೈಕಿ 35ಕ್ಕೆ ಮಾತ್ರ ನೀರು ದೊರೆತಿದೆ.
1.10 ಕೋಟಿ ಬಿಡುಗಡೆಯಾಗ್ಬೇಕು: ಬೇಸಿಗೆ ಒಟ್ಟು ಅವಧಿಗಾಗಿ ಜಿಪಂ.ನಿಂದ 60 ಲಕ್ಷ ಬಿಡುಗಡೆಯಾಗಿದೆ. ಇನ್ನೂ ಪೈಪ್ಲೈನ್ ಹಾಗೂ ಪಂಪ್ಸೆಟ್ ಖರೀದಿ, ದುಸ್ತಿಗಾಗಿ 61 ಲಕ್ಷ ಅನುದಾನ ಅಲ್ಲದೆ, ಜಿಲ್ಲಾಧಿಕಾರಿಗಳಿಂದ ಇನ್ನೂ 60 ಲಕ್ಷ ಸೇರಿ ಒಟ್ಟು 1.10 ಕೋಟಿ ಅನುದಾನ ಶೀಘ್ರವೇ ಬಿಡುಗಡೆಯಾದರೆ ಎಲ್ಲ ಕಡೆಯ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಾಂತಪ್ಪ ಠಕ್ಕಳಕಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಬೇಸಿಗೆ ಆಳಂದ ಪಾಲಿಗೆ ತುಂಬ ಕಠಿಣವಾಗಿ ಪರಿಣಮಿಸಿದೆ ಎನ್ನಲು ಈ ತಾಲೂಕಿನ ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿಯೇ ಕನ್ನಡಿ. ಏಕೆಂದರೆ- ಹಿಂದೆಂದೂ ಇಷ್ಟೊಂದು ಹಳ್ಳಿಗಳು ಸಮಸ್ಯಾತ್ಮಕ ಪಟ್ಟಿಯಲ್ಲಿ ಇರಲೇ ಇಲ್ಲ.
ಈ ಬಾರಿ ಬೇಸಿಗೆ ಪ್ರಖರವಾಗಿರುವುದರಿಂದ ಅಮರ್ಜಾ ನದಿ ಸಹ ಬತ್ತಿ ಹೋಗಿದೆ. ಇದರಿಂದಾಗಿ ಆಳಂದದಲ್ಲಿ ದಿನದಿಂದ ದಿನಕ್ಕೆ ನೀರಿನ ಹಾಹಾಕಾರ ಮುಗಿಲು ಮುಟ್ಟುತ್ತಿದೆ.
ಈ ಹಳ್ಳಿಗಳಿಗೆ ಟ್ಯಾಂಕರ್ ನೀರು...
ಕಳೆದ ಏ.8ರಿಂದ ತಾಲೂಕಿನ ಜವಳಗಾ ಗ್ರಾಮದಲ್ಲಿ ಟ್ಯಾಂಕರ್ ಕ ನೀರು ಸರಬರಾಜ ಆರಂಭಿಸಿದ ಆಡಳಿತವು ದಿನಕಳೆದಂತೆ ಇದುವರೆಗೂ ಸಾವಳೇಶ್ವರ, ಕಣಮಸ್, ಧುತ್ತರಗಾಂವ, ಅಂಬೇವಾಡ, ಹೋದಲೂರ, ಜಿರೋಳ್ಳಿ, ಜಿರೋಳಿ ತಾಂಡಾ, ಉಳಸಂಗಿ, ಪಾರ್ದಿ ತಾಂಡಾ, ಯಳಸಂಗಿ, ದರ್ಗಾಶಿರೂರ, ದರ್ಗಾಶಿರೂರ ಪಾರ್ದಿ ತಾಂಡಾ, ಝಳಕಿ, ಕಿಣ್ಣಿಅಬ್ಬಾಸ್, ಕೋಡಲಂಗರಗಾ, ತಾಂಡಾ, ಸಕ್ಕರಗಾ, ಹಳ್ಳಿಸಲಗರ ಮತ್ತು ಹಳ್ಳಿಸಲರಗ ತಾಂಡಾ, ತೆಲಾಕುಣಿ, ಖೇಡ ಉಮರಗಾ, ರುದ್ರವಾಡಿ, ಆಳಂಗಾ ಗ್ರಾಮ, ಹೋಬಳಿ ಕೇಂದ್ರ ಖಜೂರಿ, ಸರಸಂಬಾ, ಮಮದಾಪೂರ ಪಾರ್ದಿ ತಾಂಡಾ ಕೋತನಹಿಪ್ಪರಗಾ ಸೇರಿ 30 ಹಳ್ಳಿಗಗಳಲ್ಲಿ 27 ಟ್ಯಾಂಕರ್ನಿಂದ ಸಮಸ್ಯಾತ್ಮಕ ಬಡಾವಣೆಯಲ್ಲಿ ನೀರು ಪೂರೈಸಲಾಗುತ್ತಿದೆ ಎಂದು ತಹಸೀಲ್ದಾರ್ ಜಿ.ಕೆ. ಖಾಲೀಕ ಮತ್ತು ಶಾಂತಪ್ಪಾ ಟಕ್ಕಳಕಿ ಅವರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

