ಪಕ್ಷ ನಿಷ್ಠನಿಗೇ 'ಕೈ' ಕೊಟ್ಟ ಹೈಕಮಾಂಡ್!
ಟಿನಾರಾಯಣ ಹೆಗಡೆ
ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಗೆದ್ದ ಹಿರಿಯ ರಾಜಕಾರಣಿ ಡಾ.ಎ.ಬಿ. ಮಾಲಕರೆಡ್ಡಿ ಅವರಿಗೆ ಸಿದ್ದರಾಮಯಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದು ಜಿಲ್ಲೆಯ ಜನತೆಗೆ ಆಶ್ಚರ್ಯ ಮೂಡಿಸಿದೆ. ಅಲ್ಲದೇ ಕಾಂಗ್ರೆಸ್‌ನ ಈ ನಡೆ ಬಗ್ಗೆ ಪಕ್ಷದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಾಲಕರೆಡ್ಡಿ ಅವರದ್ದು ಕಳಂಕರಹಿತ ರಾಜಕೀಯ ಜೀವನ. ಅಷ್ಟೇ ಅಲ್ಲ, ಸರಳ, ಮುತ್ಸದ್ದಿ ಹಾಗೂ ಅಪಾರ ರಾಜಕೀಯ ಅನುಭವಗಳನ್ನು ಅವರು ಹೊಂದಿದ್ದಾರೆ. ಪಕ್ಷಕ್ಕೆ ಸದಾ ನಿಷ್ಠೆ ತೋರಿದ ಅವರು ಸಹಜವಾಗಿಯೇ ಈ ಬಾರಿ ಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಪಕ್ಷದಲ್ಲಿ ಹಿರಿಯರಾಗಿರುವುದರಿಂದ ಹೈಕಮಾಂಡ್ ಅವರನ್ನು ಪರಿಗಣಿಸದಿರಲು ಕಾರಣಗಳೇ ಇರಲಿಲ್ಲ. ಇದೇ ಕಾರಣದಿಂದ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರಿಗೂ ಮಾಲಕರೆಡ್ಡಿ ಅವರು ಮೊದಲ ಹಂತದ ಸಂಪುಟದಲ್ಲೇ ಮಂತ್ರಿಯಾಗುತ್ತಾರೆ ಎಂದು ನಂಬಿದ್ದರು. ಆದರೆ ಜನರ ಲೆಕ್ಕಾಚಾರ ತಪ್ಪಿದ್ದು, ಕಾಂಗ್ರೆಸ್ ನಾಯಕರ ಲೆಕ್ಕಾಚಾರವೇ ಬೇರೆ ಇದ್ದಂತಿದೆ.
2 ಬಾರಿ ಸಚಿವರಾಗಿದ್ದರು: ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ 1989ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅವರು, ನಂತರ 94, 99ರಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದರು. 2004ರಲ್ಲಿ ಸೋತ ಅವರು, ಮತ್ತೆ 2008ರಲ್ಲಿ ಹಾಗೂ 2013ರಲ್ಲಿ ಗೆದ್ದಿದ್ದಾರೆ. ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ, ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿ ಅಪಾರ ರಾಜಕೀಯ ಅನುಭವವನ್ನು ಮಾಲಕರೆಡ್ಡಿ ಹೊಂದಿದ್ದಾರೆ. ಆದರೆ ಇವರ ಅನುಭವವನ್ನು ಸಿದ್ದರಾಮಯ್ಯ ಯಾಕೆ ಬಳಸಿಕೊಳ್ಳಲಿಲ್ಲ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.ಸೇವೆ ಅಪಾರ: ಮಾಲಕರೆಡ್ಡಿ ಅವರು ಶಿಕ್ಷಣ ಪ್ರೇಮಿ. ಆಧ್ಯಾತ್ಮ ಚಿಂತಕ ಹಾಗೂ ಖ್ಯಾತ ವೈದ್ಯರೂ ಹೌದು. 1975ರಿಂದ 91ರವರೆಗೆ ಸತತ ಮೂರು ಬಾರಿ ಗುಲ್ಬರ್ಗ ವಿವಿ ಸೆನೆಟ್ ಸದಸ್ಯರಾಗಿ, 1978ರಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೂ ಆಯ್ಕೆಯಾಗಿದ್ದರು. 1982ರಿಂದ 84ರವರೆಗೆ ವಿಧಾನ ಪರಿಷತ್ ಉಪಸಭಾಪತಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಕಾಂಗ್ರೆಸ್‌ನ ವಿವಿಧ ವಿಭಾಗಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಈಗಲೂ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಗೌಣವಾಗಿದೆ ಸೇವೆ: ಮಾಲಕರೆಡ್ಡಿ ರಾಜಕೀಯವಷ್ಟೇ ಅಲ್ಲದೇ ಆಧ್ಯಾತ್ಮ, ತತ್ವಜ್ಞಾನದ ಕಡೆಯೂ ಆಸಕ್ತಿ ಹೊಂದಿದ್ದಾರೆ.
ತಮ್ಮ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಬೀಳದಂತೆ ನೋಡಿಕೊಂಡಿದ್ದಾರೆ. ಆದರೆ ಅವರ ಈ ಎಲ್ಲ ಒಳ್ಳೆಯ ನಡತೆಗಳೇ ಮಂತ್ರಿ ಪದವಿ ತಪ್ಪಲು ಕಾರಣವಾಯಿತೇ ಎಂಬ ಶಂಕೆಯನ್ನು ಅವರ ಅನುಯಾಯಿಗಳು ವ್ಯಕ್ತಪಡಿಸುತ್ತಿದ್ದಾರೆ. ಪಕ್ಷಕ್ಕೆ ತೋರಿದ ನಿಷ್ಠೆ, ಪ್ರಾಮಾಣಿಕತೆ ಎಲ್ಲವೂ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಗೌಣವಾಗಿದೆ. ಮಾಲಕರೆಡ್ಡಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕದಿರುವುದು ಪಕ್ಷಾತೀತವಾಗಿ ಖಂಡನೆಯಾಗುತ್ತಿದೆ. ಕೆಲ ಜಿಲ್ಲೆಗಳಿಗೆ ನೀಡಿದಂತೆ ನೂತನ ಯಾದಗಿರಿಗೂ ಇಬ್ಬರು ಸಚಿವರನ್ನು ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ.ಆಶಾಭಾವನೆ: ಸಂಪುಟದಲ್ಲಿ ಇನ್ನೂ 5 ಖಾತೆಗಳು ಬಾಕಿಯಿದ್ದು, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಾಲಕರೆಡ್ಡಿ ಅವರನ್ನು ಪರಿಗಣಿಸಬಹುದು ಎನ್ನಲಾಗುತ್ತಿದೆ. ಆದ್ದರಿಂದ ಇನ್ನೂ ಆಶಾಭಾವನೆ ಹೊಂದಲಾಗಿದೆ. ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಲವಾರಿವೆ. ಈಗ ಮತ್ತೊಮ್ಮೆ ಅವಕಾಶ ಸಿಕ್ಕರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅವರ ಸೇವೆ ದೊರಕುತ್ತಿತ್ತು ಎಂಬ ಮಾತು ಕೇಳಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

