ಗುಲ್ಬರ್ಗಾ

ಕಂಪನಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಅಗತ್ಯ

Published On :

ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 24
ಸಮಾಜದ ಸಮ್ಮಿಲಿತ ಬೆಳವಣಿಗೆಯಲ್ಲಿ ಸಾಂಘಿಕ ಸಮಾಜದ ಹೊಣೆಗಾರಿಕೆ ಪಾತ್ರ ಎಂಬ ವಿಷಯ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ವತಿಯಿಂದ ಶುಕ್ರವಾರ ವಾಣಿಜ್ಯ ವಿಭಾಗದ ಸಭಾಂಗಣದಲ್ಲಿ ರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿತ್ತು.
ರಾಷ್ಟ್ರೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಪರಿಷತ್ತು, ನವದೆಹಲಿ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಸಾಂಘಿಕ ಸಮಾಜದ ಹೊಣೆಗಾರಿಕೆಯ ವಿವಿಧ ಆಯಾಮಗಳ ಕುರಿತು ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರದಿಂದ ಸುಮಾರು 125 ಪ್ರತಿಭಾನ್ವಿತ ವ್ಯಕ್ತಿಗಳು ಭಾಗವಹಿಸಿದ್ದು, ಸಾಮಾಜಿಕ ಹೊಣೆಗಾರಿಕೆಯ ಕುರಿತು ವಿಶೇಷ ಲೇಖನಗಳನ್ನು ಮಂಡಿಸಿದ್ದು, ಈ ಸಮ್ಮೇಳನ ಎರಡು ದಿನಗಳ ಕಾಲ ನಡೆಯಲಿದೆ.
ಮಸೂದೆ ಕಡ್ಡಾಯ: ಕೋಲ್ಕತ್ತಾದಲ್ಲಿನ ಭಾರತ ಖರ್ಚು ಲೆಕ್ಕಪತ್ರಗಳ ಕೇಂದ್ರದ ಕೇಂದ್ರೀಯ ಮಂಡಳಿ ಸದಸ್ಯ ಪಿ.ಎಸ್.ವಿ. ಜಗಮೋಹನ್ ರಾವ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಾಣಿಜ್ಯ ಸಾಮಾಜಿಕ ಹೊಣೆಗಾರಿಕೆಯನ್ನು ತಪ್ಪದೆ ನಿರ್ವಹಿಸುವುದು ಕಂಪನಿಗಳ ಆದ್ಯ ಕರ್ತವ್ಯವಾಗಿದೆ. ಇದನ್ನು ಕಾನೂನಿನ ಮೂಲಕ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಕಂಪನಿಗಳ ಮಸೂದೆ- 2010 ಜಾರಿಗೆ ತರಲು ನಿರ್ಧರಿಸಿದೆ ಎಂದರು. ಮಸೂದೆಗೆ ಈಗಾಗಲೇ ಲೋಕಸಭೆಯಲ್ಲಿ ಅನುಮೋದನೆ ನೀಡಿದ್ದು ರಾಜ್ಯಸಭೆ ಒಪ್ಪಿಗೆ ನೀಡುವುದನ್ನು ಬಾಕಿ ಉಳಿದಿದೆ ಎಂದ ಅವರು, ಒಟ್ಟಾರೆ ವಾರ್ಷಿಕ ಲಾಭದಲ್ಲಿನ ಶೇ.2ರಷ್ಟು ಭಾಗವನ್ನು ವಾಣಿಜ್ಯ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದನ್ನು ಉದ್ದೇಶಿತ ಮಸೂದೆ ಕಂಪನಿಗಳಿಗೆ ಕಡ್ಡಾಯಗೊಳಿಸುತ್ತದೆ ಎಂದರು.
ಪರಿಸರ ರಕ್ಷಣೆಗೆ ಸಹಯೋಗ ಅಗತ್ಯ: ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಮಾತನಾಡಿ, ಸಮಾಜ ನಮಗೇನು ನೀಡಿದೆ ಎಂಬುವುದಕ್ಕಿಂತ ಸಮಾಜಕ್ಕೆ ನಾವು ಏನನ್ನು ನೀಡಿದ್ದೇವೆ ಎಂಬುದು ಬಹಳ ಮುಖ್ಯವಾದ್ದದ್ದು. ಕಂಪನಿಗಳು/ಉದ್ಯಮಿಗಳು ಪುನರ್ವಸತಿ ಕೆಲಸ ಕಾರ್ಯಗಳನ್ನು ನಿಭಾಯಿಸುವುದರ ಜತೆಗೆ ಪರಿಸರ ರಕ್ಷಣೆಗೆ ಸಹಯೋಗ ನೀಡಬೇಕು ಎಂದರು.
ಸಮ್ಮೇಳನದ ಅಧ್ಯಕ್ಷ ಡಾ. ಬಿ. ವಿಜಯ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ದಯಾನಂದ, ಕುಲಸಚಿವ(ಮೌಲ್ಯಮಾಪನ ವಿಭಾಗ) ಎಚ್.ಸಿ. ಹಲ್ಸೆ, ಪ್ರೊ. ಶಿವಾಜಿ ವಾಗ್ಮಾರೆ, ಪ್ರೊ. ಲಕ್ಷ್ಮಣ ರಾಜನಾಳಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.