'ಜೀವನದುದ್ದಕ್ಕೂ ನಿಮ್ಮೊಂದಿಗಿರುವೆ'
ಯಾದಗಿರಿ: ಜೀವನದುದ್ದಕ್ಕೂ ಒಂದೇ ಪಕ್ಷಕ್ಕೆ ನಿಷ್ಠೆಯನ್ನು ಹೊಂದಿದ್ದು, ಆ ನಿಷ್ಠೆ ಕೊನೆಯವರೆಗೂ ಉಳಿಸಿಕೊಂಡು ನಿಮ್ಮೊಂದಿಗೆ ಇರುತ್ತೇನೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಕಾರಣ ನಗರದಲ್ಲಿ ಏರ್ಪಡಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಹಾಗೂ ಮತದಾರ ಬಂಧುಗಳು ಸಾಕಷ್ಟು ವಿಶ್ವಾಸವನ್ನು ವ್ಯಕ್ತಪಡಿಸಿ ನಿಷ್ಠೆಯಿಂದ ದುಡಿದ ಫಲವಾಗಿಯೇ ಗೆಲವಿನ ಅಂಚಿಗೆ ಬಂದು ನಿಲ್ಲಲು ಸಾಧ್ಯವಾಯಿತು ಎಂದರು. ವಾಸ್ತವವಾಗಿ ಅದು ಸೋಲಲ್ಲ. ದುರಾದೃಷ್ಟವಶಾತ್ ನಾವು ಗೆಲ್ಲಲಾಗಲಿಲ್ಲ. ಅದಕ್ಕಾಗಿ ಯಾರೂ ಧೃತಿಗೆಡಬಾರದು. ಮುಂಬರುವ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಿ ಗೆಲವಿನ ದಾರಿಗೆ ಸಾಗೋಣವೆಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದರು.
ಸೋಲಿಗೆ ವರಿಷ್ಠರ ವಿಷಾದ: ರಾಜ್ಯಮಟ್ಟದ ಆತ್ಮಾವಲೋಕನ ಸಭೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ನನ್ನ ಸೋಲಿಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಸಮಯ ಅಭಾವ ಮತ್ತು ಕಾರ್ಯ ಬಾಹುಳ್ಯದ ಒತ್ತಡದಿಂದ ಗುರುಮಠಕಲ್ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಬರಲಾಗಲಿಲ್ಲ. ಒಂದು ವೇಳೆ ತಾವು ಬಂದಿದ್ದರೆ ಖಂಡಿತವಾಗಿಯೂ ಕಂದಕೂರ ಗೆಲ್ಲುತ್ತಿದ್ದರು. ನಮ್ಮ ಶಾಸಕರ ಸಂಖ್ಯೆ 41 ಆಗುತ್ತಿತ್ತು ಎಂದು ಪ್ರಸ್ತಾಪಿಸಿದ್ದನ್ನು ಇಂದಿನ ಸಭೆಯಲ್ಲಿ ಕಂದಕೂರ ಅವರು ಸ್ಮರಿಸಿಕೊಂಡರು.
ಹೊರಗಿನವರಿಗೆ ಮಣೆ- ಅಸಮಾಧಾನ: ಕಳೆದ ಐದು ವರ್ಷಗಳ ಚಿಂಚನಸೂರ ಆಡಳಿತ ವೈಖರಿಯನ್ನು ಮತ್ತು ಅವರ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಅನೇಕ ಗ್ರಾಮಗಳಲ್ಲಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೂ ಜನತೆ ಅವರಿಗೆ ಮಣೆ ಹಾಕಿದ್ದು ಕ್ಷೇತ್ರದ ದುರಂತ ಎಂದರು. ಹೊರಗಿನವರಿಗೆ ಮಣೆ ಹಾಕುವ ಪ್ರವೃತ್ತಿ ಕ್ಷೇತ್ರದಲ್ಲಿ ಮುಂದುವರೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಇನ್ನು ಮುಂದಾದರೂ ಹೊರಗಿನವರಿಗೆ ಅವಕಾಶ ನೀಡದಂತೆ ಜನರು ಜಾಗೃತರಾಗಬೇಕೆಂದು ಮನವಿ ಮಾಡಿದರು. ಸಹಜವಾಗಿಯೇ ಸೋಲಿನಿಂದ ನನಗೂ ಮತ್ತು ಕಾರ್ಯಕರ್ತರಿಗೂ ಆಘಾತವಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಸಂಘಟಿತ ಶಕ್ತಿಯಿಂದ ಪ್ರಯತ್ನಿಸೋಣ. ಇನ್ನು ಮುಂದೆ ಎಲ್ಲಾ ಸಂದರ್ಭಗಳಲ್ಲಿಯೂ ಕಾರ್ಯಕರ್ತರ ಬೇಕು ಬೇಡಗಳಿಗೆ ಸ್ಪಂದಿಸುತ್ತೇನೆ. ಕ್ಷೇತ್ರದ ಆಗು ಹೋಗುಗಳಿಗೆ ಪ್ರಾಮಾಣಿಕವಾಗಿ ನಿಮ್ಮೊಂದಿಗಿರುತ್ತೇನೆ ಎಂದರು.
ಮುಖಂಡರಾದ ನವಾಜರೆಡ್ಡಿ ಚಪೆಟ್ಲಾ, ಶರಣಗೌಡ ಯಡ್ಡಳ್ಳಿ, ನಾಗರತ್ನ ಆನಪೂರ, ನಾರಾಯಣರಾವ ಕಂಬದ, ದಾವಲಸಾಬ್, ಜನಾರ್ಧನ ಅಲ್ಲಿಪೂರ ಮತ್ತು ಶರಣಗೌಡ ಕಂದಕೂರ ಮಾತನಾಡಿದರು. ಈ ಸಂದರ್ಭದಲ್ಲಿ ಚೆನ್ನಾರೆಡ್ಡಿ ಬಿಳ್ಹಾರ, ಬಸವರಾಜ ಚಂಡ್ರಿಕಿ, ವಿಶ್ವನಾಥರೆಡ್ಡಿ ಚಿಂತಕುಂಟ, ಭೋಜನಗೌಡ ಯಡ್ಡಳ್ಳಿ, ನಾಗರಾಜ ಬಿಳ್ಹಾರ, ಸೋಮಣ್ಣಗೌಡ ಬೆಳಗೇರಿ, ಶಂಕರರೆಡ್ಡಿ ಯಲಸತ್ತಿ, ಬೀಮರೆಡ್ಡಿ ಚಪೆಟ್ಲಾ, ಬಸವರಾಜ ಗಟ್ಟರೆಡ್ಡಿ, ಬೀಮನಗೌಡ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

