ಗುಲ್ಬರ್ಗಾ

ನೂತನ ತಾಲೂಕು ಕೇಂದ್ರಗಳ ಶೀಘ್ರ ಅಭಿವೃದ್ಧಿಗೊಳಿಸಿ

Published On :

ಯಾದಗಿರಿ: ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ 43 ಹೊಸ ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಲು ಚಿಂತನೆ ನಡೆಸಿದ್ದು ಖಂಡನಾರ್ಹ ಎಂದು ಬಿಜೆಪಿ ಮುಖಂಡ ಚಂದ್ರಶೇಖರಗೌಡ ಮಾಗನೂರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ವ್ಯವಸ್ಥಿತವಾಗಿ ದಮನಗೊಳಿಸಲು ಹುನ್ನಾರ ನಡೆಸಿದಂತೆ ಕಾಣುತ್ತಿದೆ. ಬಿಜೆಪಿ ಸರ್ಕಾರ ತಾಲೂಕು ಕೇಂದ್ರ ಎಂದು ಘೋಷಣೆ ಮಾಡಿ ಆಡಳಿತದಲ್ಲಿ ಸುಧಾರಣೆ ತರಲು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಉದ್ದೇಶಿಸಿತ್ತು.
ಕಂದಾಯ ಸಚಿವರ ಹೇಳಿಕೆಗೆ ಆಕ್ಷೇಪ: ಆದರೆ ಕಂದಾಯ ಸಚಿವರು ನೂತನ ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ಸುಮಾರು 100 ಕೋಟಿ ಬೇಕಾಗುತ್ತಿದ್ದು, ಅಷ್ಟು ಅನುದಾನ ಸರ್ಕಾರದ ಬೊಕ್ಕಸದಲ್ಲಿಲ್ಲ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಮಾಗನೂರ ಆಕ್ಷೇಪಿಸಿದ್ದಾರೆ. ತಾಲೂಕು ಕೇಂದ್ರದ ಘೋಷಣೆ ಮಾಡಬೇಕೆಂಬುದು ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ಮಾತ್ರವಲ್ಲ ಇದಕ್ಕಾಗಿ ಅನೇಕ ಹೋರಾಟಗಳು ನಡೆದಿವೆ. ಇದನ್ನೆಲ್ಲ ಗಮನಿಸಿಯೇ ಬಿಜೆಪಿ ಸರ್ಕಾರ ದಿಟ್ಟ ಕ್ರಮ ಕೈಗೊಂಡಿತ್ತು. ಜಿಲ್ಲೆಯ ಗುರುಮಠಕಲ್, ಹುಣಸಗಿ ಹಾಗೂ ವಡಗೇರಾವನ್ನು ತಾಲೂಕಾ ಕೇಂದ್ರಗಳನ್ನಾಗಿ ಘೋಷಿಸಲಾಗಿತ್ತು.
ಜನರಲ್ಲಿ ನಿರಾಸೆ: ಆದರೆ ಕಾಂಗ್ರೆಸ್ ಸರ್ಕಾರ ತಾಲೂಕು ಕೇಂದ್ರದ ಘೋಷಣೆಯ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ್ದು ನಿಜಕ್ಕೂ ರಾಜ್ಯದ ಜನತೆಯಲ್ಲಿ ನಿರಾಸೆ ಮೂಡಿಸಿದೆ. ಅಲ್ಲದೇ ಜಿಲ್ಲೆಯ ಹೊಸ ತಾಲೂಕು ವ್ಯಾಪ್ತಿಯ ಜನರಲ್ಲಿ ಬೇಸರ ಮೂಡಿಸಿದೆ. ಆದ್ದರಿಂದ ಹೊಸ ತಾಲೂಕುಗಳನ್ನು ರದ್ದುಪಡಿಸದೇ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.