ಸದ್ದಿಲ್ಲದೇ ಕನ್ನಡ ಸೇವೆಗೈದ ಮಹಾದೇವಿ ಕನ್ಯಾ ಶಾಲೆ
ಗುಲ್ಬರ್ಗ: 1934ನೇ ಇಸ್ವಿ. ಭಾರತ ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದರೆ ಗುಲ್ಬರ್ಗ ಸೇರಿದಂತೆ 18 ಜಿಲ್ಲೆಗಳ ವ್ಯಾಪ್ತಿಯ ಹೈದರಾಬಾದ್ ಸಂಸ್ಥಾನ ನಿಜಾಮರ ಆಳ್ವಿಕೆಯಲ್ಲಿತ್ತು. ಉರ್ದು ಆಡಳಿತ ಭಾಷೆ. ಕಲಿಕಾ ಮಾಧ್ಯಮವೂ ಉರ್ದು. ಇಂಥ ಪರಿಸ್ಥಿತಿಯಲ್ಲಿ ಕನ್ನಡ ಭಾಷೆ, ಕನ್ನಡ ಮಾತನಾಡುವವರು, ಕನ್ನಡ ಕಲಿಯಬೇಕು ಎನ್ನುವವರ ಸುತ್ತ ಸಂಕಷ್ಟಗಳ ಹುತ್ತ. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ಆರಂಭವಾದದ್ದೇ ಶರಣಬಸವೇಶ್ವರರ ಮಹಾ ದಾಸೋಹ ಪೀಠದಡಿಯಲ್ಲಿ ಮಹಾದೇವಿ ಕನ್ಯಾ ಶಾಲೆ. ಕೆಲವು ವರ್ಷಗಳ ಕಾಲ ಹೊರಗೆ ಉರ್ದು ಫಲಕ, ಒಳಗಡೆ ಕನ್ನಡ ಬೋಧನೆ ಇತ್ತು. ಹೀಗೆ ತುಂಬ ಜಾಣತನದಿಂದ ಕನ್ನಡ ಕಲಿಸುವ ಪರಿಪಾಠ ಈ ಶಾಲೆಯಲ್ಲಿತ್ತು ಎಂದರೆ ಕನ್ನಡದ ಮೇಲೆ ದೊಡ್ಡಪ್ಪ ಅಪ್ಪ ಅವರಿಗೆ ಅದೆಷ್ಟು ಒಲವಿತ್ತು ಎಂಬುದಕ್ಕೆ ಸಾಕ್ಷಿ. ಹಿಡಿದ ಕೆಲಸ ಬಿಡದವರಂತೆ ಛಲದಂಕಮಲ್ಲರಾಗಿ ಅಂದಿನ ದಾಸೋಹ ಪೀಠದ ದೊಡ್ಡಪ್ಪ ಅಪ್ಪ ಅವರು ಮನೆಮನೆಗೂ ಜಟಕಾ ಬಂಡಿ (ಕುದುರೆ ಗಾಡಿ)ಯಲ್ಲಿ ತೆರಳಿ ಮಹಿಳೆಯರಿಗೆ ಶಿಕ್ಷಣದ ಮಹತ್ವ ಸಾರಿದರು. ಅವರನ್ನೆಲ್ಲ ಶಾಲೆಗೆ ಬರುವಂತೆ ಪ್ರೇರೇಪಿಸಿದರು. ಅಷ್ಟೇ ಅಲ್ಲ, ಅದೆಷ್ಟೋ ವರ್ಷ ಕುದುರೆ ಗಾಡಿಗಳನ್ನಿಟ್ಟು ಶಾಲೆಗೆ ಬರುವ ಹೆಣ್ಮಕ್ಕಳಿಗೆ ತೊಂದರೆ ಆಗದಿರಲಿ ಎಂದು ಮನೆಗೂ ಅದೇ ಗಾಡಿಯಲ್ಲೇ ಕಳುಹಿಸುವ ಸೌಕರ್ಯ ಒದಗಿಸಿದ್ದರು.
ಮಹಿಳಾ ಶಾಲೆ: 1934ರಲ್ಲಿ ಹೆಣ್ಮಕ್ಕಳ ಶಿಕ್ಷಣದ ಮಹತ್ವ ಸಾರುತ್ತ, ಅವರಿಗೆಲ್ಲರಿಗೂ ಶಾಲೆಯನ್ನು ಒದಗಿಸಿದ ಕೀರ್ತಿ ದೊಡ್ಡಪ್ಪ ಅಪ್ಪ ಅವರಿಗೆ ಸಲ್ಲುತ್ತದೆ. ಈ ಶಾಲೆ ಹೈ- ಕ ನೆಲದ 6 ಜಿಲ್ಲೆಗಳಲ್ಲೇ ಏಕೈಕ ಹಾಗೂ ಚೊಚ್ಚಲ ಮಹಿಳಾ ಶಾಲೆಯಾಗಿ ಸಾಧನೆ ಮಾಡಿದ್ದು ಹೆಮ್ಮೆಯ ಸಂಗತಿ. ಈಗಲೂ ಈ ಶಾಲೆ ಸತತ 8 ದಶಕಗಳಿಂದ ಶರಣಬಸವೇಶ್ವರ ಮಂದಿರದ ಆವರಣದಲ್ಲಿ ಕನ್ನಡ ಕಟ್ಟುವ ಕೆಲಸ ಸದ್ದಿಲ್ಲದೆ ಮುಂದುವರಿಸಿದೆ.
- ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

