ಜಡೆಯ ಶಾಂತಲಿಂಗಶ್ರೀಗಳ ನಿಂಬಾಳ ಪುರ ಪ್ರವೇಶ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.8
ಜಿಲ್ಲೆಯ ಆಳಂದ ತಾಲೂಕಿನ ನಿಂಬಾಳ ಗ್ರಾಮಸ್ಥರು ಮಾದರಿಯ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ಸರ್ವ ಜನಾಂಗದವರು ಒಗ್ಗೂಡಿ ಗ್ರಾಮವನ್ನು ಮದ್ಯ ವ್ಯಸನ ಮುಕ್ತವನ್ನಾಗಿಸುವ ಸಂಕಲ್ಪ ತೊಟ್ಟಿದ್ದಾರೆ.
ಕಳೆದ ವಿಜಯದಶಮಿ ದಿನದಿಂದ ಗ್ರಾಮದಲ್ಲಿ ಮದ್ಯ ಮಾರಾಟ ಹಾಗೂ ಕುಡಿತಕ್ಕೆ ಕಡಿವಾಣ ಹಾಕುವ ನಿರ್ಣಯ ಕೈಗೊಂಡಿದ್ದರಿಂದ ದೀಪಾವಳಿ ಹಬ್ಬವು ಗ್ರಾಮದ ಸರ್ವರ ಬಾಳಲ್ಲಿ ಬೆಳಕು ಮೂಡಿರುವುದು ಕಂಡುಬಂತು.
ನಿಂಬಾಳ ಗ್ರಾಮ ಮದ್ಯವ್ಯಸನಮುಕ್ತ ಗ್ರಾಮವಾಗಬೇಕೆಂದು ಹಲವು ಸಲ ಗ್ರಾಮಸ್ಥರಲ್ಲಿ ಅರಿವು ಹಾಗೂ ವಿಶ್ವಾಸ ಮೂಡಿಸಿದ್ದ ಗ್ರಾಮದ ಶಾಂತಲಿಂಗೇಶ್ವರ ವಿರಕ್ತ ಮಠಾಧಿಪತಿ, ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿ ಅವರು ಮದ್ಯ ಮಾರಾಟ ಹಾಗೂ ಕುಡಿತಕ್ಕೆ ನಿಷೇಧ ಹೇರುವವರೆಗೂ ಹಾಗೂ ಈ ಕುರಿತು ಗ್ರಾಮಸ್ಥರು ಒಗ್ಗೂಡಿ ಐತಿಹಾಸಿಕ ನಿರ್ಣಯ ಕೈಗೊಳ್ಳುವರೆಗೂ ನಿಂಬಾಳಕ್ಕೆ ಬರುವುದಿಲ್ಲ ಎಂದು ಹೇಳಿದ್ದರು.
ಅದರಂತೆ ಕಳೆದ ಬೆನಕನ ಹಾಗೂ ಮಹಾಲಯ ಅಮವಾಸ್ಯೆಗೆ ಬರುವುದಿಲ್ಲ ಎಂದು ಮೊದಲೇ ಪೂಜ್ಯರು ಗ್ರಾಮಸ್ಥರಿಗೆ ಸ್ಪಷ್ಟಪಡಿಸಿದ್ದರು. ಇದರಿಂದ ದಿಕ್ಕು ತೋಚದಂತಾದ ಗ್ರಾಮಸ್ಥರು ಪೂಜ್ಯರು ಇಡೀ ಗ್ರಾಮಕ್ಕೆ ಬೆಳಕು ತೋರಿಸಿದ್ದಾರೆ. ಅವರ ಮನಸ್ಸಿಗೆ ನೋವುಂಟು ಮಾಡುವುದು ಬೇಡ ಎಂದು ಪೂಜ್ಯರ ಸದಾಶಯ ಹಾಗೂ ಸಂಕಲ್ಪಕ್ಕೆ ಕೈ ಜೋಡಿಸಿದರು.
ಗುರುಗಳ ಸದಾಶಯದಂತೆ ಗ್ರಾಮಸ್ಥರು ಕಳೆದ ವಿಜಯದಶಮಿ ದಿನದಂದು ಮದ್ಯ ಮಾರಾಟ ಹಾಗೂ ಕುಡಿತಕ್ಕೆ ನಿರ್ಬಂಧ ಹೇರಲಾಯಿತಲ್ಲದೇ, ಇದಕ್ಕಾಗಿ ಗ್ರಾಮದ ಸರ್ವ ಜನಾಂಗದವರ ನೇತೃತ್ವದಲ್ಲಿ ಪಂಚ ಕಮಿಟಿ ರಚಿಸಲಾಯಿತು. ಈಗ ಗ್ರಾಮದಲ್ಲಿ ಹೊಸ ಹೊಸ ಬೆಳಕು ಮೂಡಿದೆ.
ಪುರ ಪ್ರವೇಶಿಸಿದ ಪೂಜ್ಯರು: ಕಳೆದ ವಿಜಯದಶಮಿ ಹಬ್ಬದ ದಿನದಿಂದ ಗ್ರಾಮಸ್ಥರು ಮದ್ಯ ವ್ಯಸನಮುಕ್ತ ಗ್ರಾಮವನ್ನಾಗಿಸಿದ್ದರಿಂದ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಈಚೆಗೆ ನಿಂಬಾಳ ಪುರ ಪ್ರವೇಶ ಮಾಡಿದರು. ಅಮಾವಾಸ್ಯೆಯಂದು ಸಹಸ್ರಾರು ಭಕ್ತರಿಗೆ ಆಶೀರ್ವಾ ದ ನೀಡಿದರು. 3 ತಿಂಗಳ ಬಳಿಕ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮೀಜಿಗಳು ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅಂದು ಇಡೀ ಗ್ರಾಮವೇ ಎದುರು ನಿಂತು ಸ್ವಾಗತ ಕೋರಿತು.
ದಲಿತ ಕೇರಿಯಲ್ಲಿ ಜಾಗಣತಿ ಪಾದಯಾತ್ರೆ: ಗ್ರಾಮಸ್ಥರ ಸ್ವಾಗತದೊಂದಿಗೆ ಪೂಜ್ಯರು ಗ್ರಾಮದ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದರು. ಬೀದಿಗಳುದ್ದಕ್ಕೂ ಪ್ರತಿ ಮನೆ ಮುಂದೆ ದೀಪಗಳನ್ನಿಟ್ಟು ಮನೆಯ ಹಾಗೂ ಮನದ ಬೆಳಕು ಮೂಡಿಸಿದ ದೇವರು ಎಂದು ಮಹಿಳೆಯರು ಮತ್ತು ಮನೆಯ ಯಜಮಾನರು ಪೂಜ್ಯರಿಗೆ ಆನಂದದಿಂದ ಹೇಳುತ್ತಿರುವುದು ಕಂಡು ಬಂತು. ದಲಿತ ಕೇರಿಯಲ್ಲೂ ಜಾಗೃತಿ ಪಾದಯಾತ್ರೆ ಕೈಗೊಂಡು ಕೇರಿಯ ಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಯುವಕ ರಾಜಕುಮಾರ ಗೂಳ, ಶ್ರೀಗಳ ಆಜ್ಞೆಯಂತೆ ಪಾಲನಾ ನಿರ್ಧಾರ ಕೈಗೊಳ್ಳಲಾಗಿದೆ. ಜೀವನುದ್ದಕ್ಕೂ ಗುರುಗಳ ಸದಾಶಯಕ್ಕೆ ಧಕ್ಕೆ ಬಾರದಂತೆ ಹಾಗೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಜಡೆಯ ಶಾಂತಲಿಂಗ ಮಹಾಸ್ವಾಮೀಜಿ ಗ್ರಾಮದ ಎಲ್ಲ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಬಾಳು ಬೆಳಗಲಿ ಎಂದು ಶುಭ ಹಾರೈಸಿದರು. ನಂತರ ಮಠದಲ್ಲಿ ಸೇರಿದ್ದ ಸಭೆಯಲ್ಲಿ ಇಡೀ ಗ್ರಾಮಸ್ಥರು ಪೂಜ್ಯರ ಸನ್ನಿಧಾನದಲ್ಲಿ ಮದ್ಯವ್ಯಸನ ಮುಕ್ತಕ್ಕೆ ಪ್ರತಿಜ್ಞೆಗೈದರು.
ಈ ಸಂದರ್ಭ ಮುಖಂಡರಾದ ಅರವಿಂದ ಪಾಟೀಲ್ ಹಾಗೂ ಗುರುಶಾಂತ ಪಾಟೀಲ್ ಮತ್ತು ಇತರರು ಮಾತನಾಡಿ, ಗುರುಗಳು ಗ್ರಾಮದ ಮಠದ ಪೀಠಾಧಿಪತಿಗಳಾಗಿ ಬಂದು 35 ವರ್ಷಗಳಾಗುತ್ತಲಿವೆ. ಇಂದಿನ ದಿನದವರೆಗೂ ಅದು ಕೊಡಿ, ಇದು ಕೊಡಿ ಎಂದು ಯಾವುದೇ ಒಂದು ದೇಣಿಗೆ ಕೇಳಿಲ್ಲ. ಒಳ್ಳೆಯ ನಡೆ-ನುಡಿಯಿಂದ ಬದುಕಿರಿ ಎಂಬುವುದಾಗಿ ಆಶೀರ್ವದಿಸುತ್ತಾ ಬಂದಿದ್ದಾರೆ ಎಂದರು.
ಮದ್ಯ ವ್ಯಸನ ಮುಕ್ತವನ್ನು ಗ್ರಾಮದ ಹಿತಕ್ಕಾಗಿ ಹೇಳಿದ್ದಾರೆ. ಈಗ ಅವರ ಸದಾಶಯದಂತೆ ಗ್ರಾಮಸ್ಥರೆಲ್ಲರೂ ಬದ್ಧರಾಗಿದ್ದೇವೆ ಎಂದು ಹೇಳಿದರು.
ಮಾಧ್ಯಮದವರಿಗೆ ಸಲಹೆ: ಇದೇ ಸಂದರ್ಭ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮೀಜಿಗಳು, ಇದು ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಗ್ರಾಮದ ಹಿತಕ್ಕಾಗಿ ಹಾಗೂ ಜನರನ್ನು ಸುಧಾರಿಸಲಿಕ್ಕಾಗಿ ಈ ಕೆಲಸ ಮಾಡಿ ಬಹಳ ದಿನವಾಗಿದೆ. ಇದನ್ನು ಕೇವಲ ಪ್ರಚಾರಕ್ಕಾಗಿ ನೀವು (ಮಾಧ್ಯಮದವರು) ಮಾಡುವುದು ಬೇಡ. ನಿಮ್ಮಿಂದ ಇಲ್ಲಿ ಜನರು ಮಾಡುತ್ತಿರುವ ಕೆಲಸಕ್ಕೆ ಏನಾದರೂ ಸಲಹೆ, ಸಹಕಾರವಿದ್ದರೆ ಕೊಡುವ ಕೆಲಸ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ. ಅಲ್ಲಿಂದ (ಗುಲ್ಬರ್ಗದಿಂದ) ಇಲ್ಲಿಗೆ ನೀವೂ ಬಂದಿದ್ದು ಸಾರ್ಥಕವಾಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಲಿಖಿತವಾಗಿ ಬರೆದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

