ಅತ್ಯಾಚಾರವೆಸಗಿದ್ದ ಪೊಲೀಸ್ ಪೇದೆ ಸೆರೆ
ಗುಲ್ಬರ್ಗ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ ಪೊಲೀಸ್ ಪೇದೆಯೊಬ್ಬನನ್ನು ಶನಿವಾರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಮಲಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಚಿಂಚೋಳಿ ತಾಲೂಕಿನ ತಾಜಲಾಪುರದ ಮೋಹನರೆಡ್ಡಿ ಬಂಧಿತ ಪೊಲೀಸ್ ಪೇದೆ.
ಈತ ಚಿಂಚೋಳಿ ತಾಲೂಕಿನ ಹಸರಗುಂಡಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ. 26 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ನಂತರ ಮದುವೆಯಾಗಲು ನಿರಾಕರಿಸಿದ್ದನು. ಇದರಿಂದ ಮಾನಸಿಕವಾಗಿ ನೊಂದಿದ್ದ ಯುವತಿ ನ. 3ರಂದು ಚಿಂಚೋಳಿ ಪಟ್ಟಣದ ಹೊರವಲಯದಲ್ಲಿರುವ ಮುಲ್ಲಾಮಾರಿ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು.
ಆತ್ಮಹತ್ಯೆಗೆ ಯತ್ನಿಸಿದ ಈ ಯುವತಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ೋಯುವತಿ ನೀಡಿದ ದೂರಿನ ಮೇರೆಗೆ ನ. 3ರಂದು ಮೋಹನರೆಡ್ಡಿಯನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಕಾಶಿನಾಥ ತಳಕೇರಿ ತಿಳಿಸಿದ್ದಾರೆ.
ಜೂಜುಕೋರರ ಬಂಧನ
ಗುಲ್ಬರ್ಗ: ನಗರದ ಲಾಹೋಟಿ ಪೆಟ್ರೋಲ್ ಬಂಕ್ ಎದುರುಗಡೆಯ ಕ್ಷೌರದಂಗಡಿ ಹತ್ತಿರ ಜೂಜಾಟದಲ್ಲಿ ತೊಡಗಿದ್ದ 16 ಜನರನ್ನು ಬಂಧಿಸಿರುವ ಪೊಲೀಸರು ಅವರಿಂದ 18, 640 ಜಪ್ತಿ ಮಾಡಿಕೊಂಡಿದ್ದಾರೆ.
ಎ ಉಪ ವಿಭಾಗದ ಡಿವೈಎಸ್ಪಿ ಸವಿಶಂಕರ ನಾಯಕ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಪಿಐ ಬಿ.ಬಿ. ಭಜಂತ್ರಿ, ಪಿಎಸ್ಐಗಳಾದ ಮಲ್ಲಿಕಾರ್ಜುನ ಬಂಡೆ, ಮುರುಳಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಗಮೇಶ್ವರ ರಥೋತ್ಸವ ನಾಳೆ
ಜೇವರ್ಗಿ: ತಾಲೂಕಿನ ಗುಡೂರ ಎಸ್.ಎ. ಗ್ರಾಮದ ಆರಾಧ್ಯ ದೈವ ಸಂಗಮೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ನ.11 ರಂದು ವೈಭವದ ರಥೋತ್ಸವ ಜರುಗಲಿದೆ ಎಂದು ಗ್ರಾಮದ ಅಮೃತಗೌಡ ಬಿರಾದಾರ, ರಾಯಗುಂಡಪ್ಪ ಕುಸನೂರ ತಿಳಿಸಿದ್ದಾರೆ. ಜಾತ್ರಾ ಉತ್ಸವದ ಅಂಗವಾಗಿ ಕಳೆದ 8ರಿಂದ ಪ್ರತಿನಿತ್ಯ ಪಲ್ಲಕ್ಕಿ ಸೇವೆ ಹಾಗೂ ಪುರವಂತರ ಸೇವೆ ಜರುಗುತ್ತಿದೆ. ಕಳೆದ 7 ರಿಂದ ಉತ್ಸವದ ನಿಮಿತ್ತ ಸಂಗಮೇಶ್ವರರಿಗೆ ವಿಶೇಷ ಪೂಜೆ ಅಲಂಕಾರ ನಡೆಯುತ್ತಿದೆ. 11ರಂದು ನಡೆಯಲಿರುವ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಸಂಗಮೇಶ್ವರರ ದರ್ಶನ ಪಡೆದು ಪುನೀತರಾಗಬೇಕೆಂದು ಸಮಿತಿ ಕೋರಿದೆ. ನ.11 ಮತ್ತು 12ರಂದು ಮಹಾಲಕ್ಷ್ಮೀ ಡ್ರಾಮಾ ಸಿನ್ಸ್ ರಂಗ ಸಜ್ಜಿಕೆಯಲ್ಲಿ ಕಿವುಡ ಮಾಡಿದ ಕಿತಾಪತಿ, ಕೈಲಾಗದ ಗಂಡ ಕೈಲಾಸ ಕಂಡ ನಾಟಕ ಪ್ರದರ್ಶನವಾಗಲಿದೆ.
ಸ್ಫೂರ್ತಿಗೆ ರ್ಯಾಂಕ್
ಸಿಂಧನೂರು: ನಗರದ ನ್ಯಾಷನಲ್ ಕಾಲೇಜ್ ಆಫ್ ಆರ್ಟ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ನ ವಿದ್ಯಾರ್ಥಿನಿ ಸ್ಫೂರ್ತಿ ಕೆ.ಎಂ. ಗುಲ್ಬರ್ಗ ವಿಶ್ವವಿದ್ಯಾಲಯದ ಬಿಬಿಎಂ 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ 9ನೇ ರ್ಯಾಂಕ್ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪಂಪಾಪತಿ ಪಾಟೀಲ್, ಸದಸ್ಯರಾದ ಎನ್. ಸತೀಶ, ಶಾರದಾ ಚಂದ್ರಶೇಖರ ಪಾಟೀಲ್, ಚಂದ್ರಶೇಖರಗೌಡ ಬೂದಿಹಾಳ, ಪ್ರಾಚಾರ್ಯ ಶರಣಪ್ಪ ಅಭಿನಂದಿಸಿದ್ದಾರೆ.
ಶಿಕ್ಷಕಿ ಸರಗಳವು
ಗುಲ್ಬರ್ಗ: ಬೈಕ್ ಮೇಲೆ ಬಂದ ಸರಗಳ್ಳನೊಬ್ಬ ಶಿಕ್ಷಕಿಯ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾದ ಘಟನೆ ಜಯನಗರದಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ಬೆಣ್ಣೂರ (ಬಿ) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೀರಾಬಾಯಿ ಗಂಡ ದಶರಥ ಶುಕ್ರವಾರ ಸಂಜೆ 7ರ ಸುಮಾರಿಗೆ ಜಯ ನಗರದ ಹನುಮಾನ ಮಂದಿರ ಹತ್ತಿರವಿರುವ ಬರುತ್ತಿದ್ದಾಗ ಎದುರಿನಿಂದ ಬೈಕ್ ಮೇಲೆ ಬಂದ ಸರಗಳ್ಳ ಇವರ ಕೊರಳಲ್ಲಿದ್ದ 1.50 ಲಕ್ಷ ಮೌಲ್ಯದ 45 ಗ್ರಾಂ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೌಢಶಾಲಾ ವಿದ್ಯಾರ್ಥಿಗಳ ವಿವಿಧ ಸ್ಪರ್ಧೆ: ಬಹುಮಾನ ವಿತರಣೆ
ದೇವದುರ್ಗ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೊತ್ಸಾಹಕ ಸೊಸೈಟಿ, ಬೆಂಗಳೂರು ಹಾಗೂ ಉಪ-ಪಾದೇಶಿಕ ವಿಜ್ಞಾನ ಕೇಂದ್ರ, ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಈಚೆಗೆ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅರಕೇರಾ ಗ್ರಾಮದ ಸಿದ್ದಯ್ಯ ಹವಾಲ್ದಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶಾಸಕ ವೆಂಕಟೇಶ ನಾಯಕ ಉದ್ಘಾಟಿಸಿ ಮಾತನಾಡಿ, ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗುವ ಮೂಲಕ ವಿದ್ಯಾರ್ಥಿಗಳ ಜ್ಞಾನವೃದ್ಧಿಯಾಗಲಿದೆ. ಈ ಮೂಲಕ ಭವಿಷ್ಯದಲ್ಲಿ ಹೊಣೆಗಾರಿಕೆಯಿಂದ ಬದುಕು ಸಾಗಿಸಲು ಪೂರಕ ಸಾಮರ್ಥ್ಯ ದೊರೆಯಲಿದೆ ಎಂದರು.
ಅರಕೇರಾ ಗ್ರಾಪಂ ಅಧ್ಯಕ್ಷೆ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಇಒ ಎಚ್.ಡಿ. ಹುನಗುಂದ, ಎಸ್ಡಿಎಂಸಿ ಸದಸ್ಯರು, ಶಾಲೆಯ ಮುಖ್ಯ ಗುರುಗಳು, ಪ್ರಾಚಾರ್ಯರು, ಶಿಕ್ಷಕರು ಭಾಗವಹಿಸಿದ್ದರು. ಕೊನೆಗೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಶಂಕರನಾಗ್ 59 ಜನ್ಮದಿನ ಆಚರಣೆ
ಯಾದಗಿರಿ: ಇಲ್ಲಿನ ಅಂಬೇಡ್ಕರ್ ನಗರದಲ್ಲಿ ಶಂಕರನಾಗ ಆಟೋ ಅಭಿಮಾನಿಗಳ ಸಂಘದ ವತಿಯಿಂದ ಶನಿವಾರ ಕನ್ನಡದ ಖ್ಯಾತ ಚಲನಚಿತ್ರನಟ ಶಂಕರನಾಗ್ 59 ಜನ್ಮದಿನವನ್ನು ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ಅದ್ಧೂರಿಯಿಂದ ಆಚರಿಸಲಾಯಿತು. ನಗರ ಪೊಲೀಸ್ ಠಾಣೆಯ ಪಿಎಸ್ಐ ಎನ್.ವೈ. ಗುಂಡುರಾವ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸಿ ಮಾತನಾಡಿ, ದಿವಗಂತ ಶಂಕರನಾಗ್ ಕೇವಲ ಒಬ್ಬ ಚಿತ್ರನಟನಾಗಿ ಮಾತ್ರ ಉಳಿದಿರಲಿಲ್ಲ. ಒಬ್ಬ ಅಸಾಮಾನ್ಯ ವ್ಯಕ್ತಿಯಾಗಿ, ಕನಸುಗಾರನಾಗಿ, ಸಮಾಜದ ಮುಖಿಯಾಗಿ ಗುರುತಿಸಿಕೊಂಡಿದ್ದರು ಎಂದು ಹೇಳಿದರು. ಶಂಕರನಾಗ್ ಆಟೋರಾಜ ಚಿತ್ರದಲ್ಲಿ ನಾಯಕನ ವಿಶಿಷ್ಟ ಗುಣ ಮೆರೆದು, ಎಂದೆಂದಿಗೂ ಆಟೋ ಡ್ರೈವರುಗಳ ಆರಾಧ್ಯದೈವವಾದರು. ಆಟೋ ಚಾಲಕರು ಸೇವಾ ಮನೋವನೆಯನ್ನು ರೂಡಿಸಿಕೊಳ್ಳಬೇಕು. ಸಂಚಾರಿ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಜನರಿಗೆ ಉತ್ತಮ ಸೇವೆ ಒದಗಿಸಲು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಶಂಕರನಾಗ್ ಆಟೋ ಚಾಲಕ ಅಭಿಮಾನಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಈಟೇ, ಉಪಾಧ್ಯಕ್ಷ ರಾಜಶೇಖರ, ಎನ್. ತಿಘೇಲ್, ಶಿವಶರಣ ಕುಂಬಾರ್, ಶರಣಪ್ಪ ಕುಲೂರ, ದೇವಿಂದ್ರ ಬಿರನಾಳ, ಮಾರ್ತಂಡಪ್ಪ ಕೋನಿಮನಿ, ಹುಸೇನಿ, ಹಣುಮಂತ ಬಿರನಾಳ, ಅಲಿಂ ಷಾಷ, ಮಲ್ಲಯ್ಯ ಅರಿಕೇರಿ ಇದ್ದರು.
12 ರಂದು ಗಡಿನಾಡು ಉತ್ಸವ
ಯಾದಗಿರಿ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಸೈದಾಪುರ ವಲಯ ಮಟ್ಟದಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಗಡಿನಾಡು ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಾಲೂಕಿನ ಸೈದಾಪುರ ಗ್ರಾಮದ ಬಸವೇಶ್ವರ ವೃತ್ತದಲ್ಲಿ ನ.12 ರಂದು ಸಾಯಂಕಾಲ 5ಕ್ಕೆ ಹಮ್ಮಿಕೊಳ್ಳಲಾಗಿದೆ. ಜವಳಿ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರು ಸಚಿವ ಬಾಬುರಾವ ಚಿಂಚನಸೂರ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡುವರು. ಅಧ್ಯಕ್ಷತೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ವಹಿಸುವರು. ಜ್ಯೋತಿಯನ್ನು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶರಣಿಕಕುಮಾರ ಧೋಖಾ ಬೆಳವರು. ಕನ್ನಾಡಂಬೆ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷೆ ರಾಧಮ್ಮ ಭಾಗಪ್ಪ ಕೋರಿ ಪೂಜೆ ಸಲ್ಲಿಸುವರು. ಕಾರ್ಯಕ್ರಮದಲ್ಲಿ ವೆಂಕಟೇಶ ಮೀಲ್ಟ್ರಿ, ಭೀಮಣ್ಣಗೌಡ ಕ್ಯಾತನಾಳ, ಶಾಮಲಾ ವಾರದ, ಲಲಿತಾ ನಾಯಕ, ಬಸವಂತರಾಯಗೌಡ, ಚಂದ್ರಶೇಖರ ವಾರದ, ಭೀಮಣ್ಣಗೌಡ ಕೂಡ್ಲೂರ್, ಬಸರಡ್ಡಿ ಹೆಗ್ಗಣಗೇರಾ, ಚೌಡಯ್ಯ ಬಾವೂರ, ನಾಗರಾಜ ಹಡಪದ, ರಾಕೇಶ ನೀಲಹಳ್ಳಿ, ಮಲ್ಲೇಶ ನಾಯಕ ಕೂಡ್ಲೂರ್ ಆಗಮಿಸುವರು ಎಂದು ತಾಲೂಕ ಕಾರ್ಯದರ್ಶಿ ಬಸವರಾಜ ನಾಯಕ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಿಕ್ಷಕ ಸೂರ್ಯ ಪ್ರಕಾಶ ಘನಾತೆ, ಪತ್ರಕರ್ತರಾದ ಕರಬಸಯ್ಯ ದಂಡಗಿಮಠ, ರಾಘವೇಂದ್ರ ಕೆ.ಬಿ. ನಾರಾಯಣ್ಣೋರ್ ಸನ್ಮಾನಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

