50ವರ್ಷವಾದ್ರೂ ಆಸ್ಪತ್ರೆಗೆ ಸಿಗದ ಸೌಲಭ್ಯ
ಕನ್ನಡಪ್ರಭ ವಾರ್ತೆ, ಕೆಂಭಾವಿ, ನ.10
ಕೇವಲ 5 ಸಾವಿರ ಜನಸಂಖ್ಯೆಗೋಸ್ಕರ ಆರಂಭವಾದ ಈ ಆಸ್ಪತ್ರೆ 50 ವರ್ಷ ಗತಿಸಿ ಈಗ 50 ಸಾವಿರ ಜನಸಂಖ್ಯೆ ಗಡಿದಾಟಿದರೂ ಇನ್ನೂ 5 ಸಾವಿರ ಜನಸಂಖ್ಯೆಗೆ ಸಿಗಬೇಕಾದ ಸೌಲಭ್ಯಗಳಲ್ಲಿಯೇ ಮುಂದುವರೆದಿದೆ.
ಐದು ಸಾವಿರ ಜನಸಂಖ್ಯೆ ಇದ್ದಾಗ ಈ ಆಸ್ಪತ್ರೆಗೆ 4 ಜನ ವೈದ್ಯರ ಹುದ್ದೆ ಮಂಜೂರಾತಿ ಇತ್ತು. ಆದರೆ ಈಗ ಆ ಹುದ್ದೆಗಳನ್ನೆಲ್ಲಾ ಭರ್ತಿ ಮಾಡದೆ ಓರ್ವ ವೈದ್ಯರಿಂದ ಮಾತ್ರ ನಡೆಯುತ್ತಿದೆ. ಆ ಆಸ್ಪತ್ರೆ ಕಟ್ಟಡವೂ ಸೇರಿದಂತೆ ಸಿಬ್ಬಂದಿಯ ವಸತಿ ಗೃಹಗಳು ಕೂಡಾ ಸಿಥಿಲಾವಸ್ಥೆಯಲ್ಲಿದ್ದು, ಅಲ್ಲಿ ವಾಸಿಸುವ ಸಿಬ್ಬಂದಿ ಕೈಯಲ್ಲಿ ಜೀವ ಹಿಡಿದುಕೊಂಡು ಇರುವ ಪರಿಸ್ಥಿತಿ ಬಂದೊದಗಿದೆ.
ಇತಿಹಾಸ ಪುಟಗಳಲ್ಲಿ ಮಾತ್ರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ಇತಿಹಾಸ ಹೊಂದಿದ್ದು, ದಿನಗಳು ಕಳೆದಂತೆಲ್ಲಾ ಈ ಆರೋಗ್ಯ ಕೇಂದ್ರ ಸೌಲಭ್ಯಗಳಿಂದ ವಂಚಿತಗೊಂಡು ಕೇವಲ ಇತಿಹಾಸ ಪುಟಗಳಲ್ಲಿ ಮಾತ್ರ ಉಳಿದು, ಇಲ್ಲೊಂದು ಉತ್ತಮ ಆಸ್ಪತ್ರೆ ಇತ್ತು ಎಂದೆನ್ನುವಂತಾಗುತ್ತದೆಯೋ ಎನ್ನುವ ಭೀತಿ ಇಲ್ಲಿಯ ಜನತೆಗೆ ಬಂದೊದಗಿದೆ. ಹೋಬಳಿ ಕೇಂದ್ರವಾದ ಕೆಂಭಾವಿಯು 1963 ರಲ್ಲಿಯೇ ಈ ಆಸ್ಪತ್ರೆಯನ್ನು ಪಡೆದು ಹೆಸರುವಾಸಿಯಾಗಿದೆ. ಅಂತಹ ಪ್ರಸಿದ್ಧ ಆಸ್ಪತ್ರೆ ಸುವರ್ಣ ಮಹೋತ್ಸವ ಆಚರಿಸಬೇಕಾದ ಸಂದರ್ಭ ಬಂದರೂ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿಯೇ ಮುಂದುವರೆದಿದೆ ಎಂದರೆ ದುರಾದೃಷ್ಟಕರ ಸಂಗತಿಯೇ ಹೌದು.
ಇದ್ದ ಸೌಲಭ್ಯಗಳ ಹಿಂಪಡಿಯುವಿಕೆ: ಜನಸಂಖ್ಯೆ ಹೆಚ್ಚಾದಂತೆಲ್ಲಾ ಅದಕ್ಕೆ ತಕ್ಕಂತೆ ಅನುಕೂಲತೆ ಮಾಡಿಕೊಡುವುದನ್ನು ಬಿಟ್ಟು ಇದ್ದ ಸೌಲಭ್ಯಗಳನ್ನು ಹಿಂಪಡೆಯುತ್ತಿರುವುದು ಯಾವ ನ್ಯಾಯ. ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಹಾಗೂ ಆಸ್ಪತ್ರೆಯಲ್ಲಿಯೇ ಅತೀ ಹೆಚ್ಚು ಹೆರಿಗೆಯಾಗುವ ಮತ್ತು ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ರಾಜ್ಯದಲ್ಲೇ ಹೋಬಳಿ ಕೇಂದ್ರದ ಎರಡನೇ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಜಿಲ್ಲೆಯ ಈ ಗಡಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಗುಲ್ಬರ್ಗ, ವಿಜಾಪುರ ಗಡಿ ಭಾಗದ ರೋಗಿಗಳು ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗಿದ್ದಾರೆ. ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರೂ ಹೆಸರುವಾಸಿಯಾಗಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಡಾ. ಆರ್.ಬಿ.ಚೌದ್ರಿ ಎಂಬ ವೈದ್ಯರು ಈ ಆಸ್ಪತ್ರೆಯಲ್ಲಿ ಹೆಸರು ಗಳಿಸಿ ನೆರೆಯ ಸಿಂದಗಿ ಮತಕ್ಷೇತ್ರದಿಂದ ಆರಿಸಿ ಬಂದು ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿಯೂ ಹೋದ ಖ್ಯಾತಿ ಈ ಆಸ್ಪತ್ರೆಗಿದೆ.
ಕಾರ್ಯ ರೂಪಕ್ಕೆ ಬಾರದ ಸುತ್ತೋಲೆ: ಈ ಹಿಂದೆ ಇದೇ ಜಿಲ್ಲೆಯವರಾದ ಶಾಸಕ ಡಾ. ಎ.ಬಿ. ಮಲಕರಡ್ಡಿ ಅವರು ಆರೋಗ್ಯ ಸಚಿವರಿದ್ದಾಗ ಈ ಆಸ್ಪತ್ರೆ 30 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿದೆ ಎಂದು ಸರ್ಕಾರದಿಂದ ಸುತ್ತೋಲೆ ಹೊರಟಿತಾದರೂ ಕೇವಲ ಕಾಗದದಲ್ಲಿ ಮಾತ್ರ ಇದ್ದು, ಕಾರ್ಯ ರೂಪಕ್ಕೆ ಬಾರದೇ ಹಾಗೇ ಉಳಿದಿದೆ. ಈ ಆಸ್ಪತ್ರೆ ಆರಂಭವಾದ ಎಷ್ಟೂ ವರ್ಷಗಳ ನಂತರ ಆರಂಭವಾದ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿವೆ. ಆದರೆ ಈ ಆಸ್ಪತ್ರೆ ಏಕೆ ಹಾಗೇ ಉಳಿದಿದೆ ಎನ್ನುವ ಚಿಂತೆ ಜನತೆಗೆ ಕಾಡುತ್ತಿದೆ.
ಇಂದು ಈ ಗುಲ್ಬರ್ಗ ವಿಭಾಗಕ್ಕೆ ಭೇಟಿ ಕೊಡುತ್ತಿರುವ ಆರೋಗ್ಯ ಸಚಿವ ಡಾ. ಯು.ಟಿ ಖಾದರ್ ಹಾಗೂ ಈ ಹಿಂದೆ ಈ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಹಾಗೂ ಸದ್ಯ ನಿರ್ದೇಶಕರಾಗಿರುವ ಮದನಗೋಪಾಲ ಅವರು ಸುವರ್ಣ ಮಹೋತ್ಸವ ಆಚರಿಸಿಕೊಳ್ಳಬೇಕಾದ ಆಸ್ಪತ್ರೆಯ ಸ್ಥಿತಿಗತಿ ಹೇಗಿದೆ ಎಂದು ನೋಡಲು ಈ ಆಸ್ಪತ್ರೆಗೆ ಭೇಟಿಕೊಟ್ಟು ಈ ಭಾಗದ ಜನರ ಬಹುದಿನಗಳ ಕನಸು ನನಸು ಮಾಡುವರೇ ಎಂಬುವುದು ನಾಗರಿಕರ ಒತ್ತಾಸೆಯಾಗಿದೆ.
-ಹಳ್ಳೇರಾವ.ಎಸ್. ಕುಲಕರ್ಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

