20ರಂದು ಕುಡಿಯುವ ನೀರಿನ ಕಾಮಗಾರಿ ಸಿಎಂ ಚಾಲನೆ: ಸಚಿವ
ಕನ್ನಡಪ್ರಭ ವಾರ್ತೆ ಯಾದಗಿರಿ ನ.11
ಗುರುಮಠಕಲ್ ಪಟ್ಟಣ ಹಾಗೂ ಗುರುಮಠಕಲ್ ವ್ಯಾಪ್ತಿಯ 27 ಹಳ್ಳಿಗಳಿಗೆ ಶುದ್ಧ ಕುಡಿವ ನೀರು ಸರಬರಾಜು ಯೋಜನೆಗೆ 2013 ನ.20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಬಾಬುರಾವ ಚಿಂಚನಸೂರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭೀಮಾ ನದಿಯಿಂದ 45ಕಿ.ಮೀ. ದೂರದಲ್ಲಿರುವ ಗುರುಮಠಕಲ್ ಪಟ್ಟಣಕ್ಕೆ ಪೈಪ್ಲೈನ್ ಮೂಲಕ ಶುದ್ಧಕುಡಿವ ನೀರು ಪೂರೈಸುವುದು ಹಾಗೂ ಉದ್ದಕ್ಕೂ ದಾರಿಯಲ್ಲಿ ಬರುವ 27 ಗ್ರಾಮಗಳಿಗೂ ಕುಡಿವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ನ. 20ರಂದು ಬೆಳಗ್ಗೆ 10ಕ್ಕೆ ಗುರುಮಠಕಲ್ ಕ್ರೀಡಾಂಗಣದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ರೇಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯ್ತಿ ರಾಜ್ ಸಚಿವ ಎಚ್.ಕೆ. ಪಾಟೀಲ ಆಗಮಿಸುವರು. ರಾಜ್ಯದಲ್ಲಿ ಅತಿ ಹೆಚ್ಚಿನ ದೂರದಿಂದ (45 ಕಿಮೀ) ಕುಡಿವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ಇದಕ್ಕೆ ಒಟ್ಟಾರೆ 3 ನೀರು ಎತ್ತುವ ಕೇಂದ್ರಗಳಿವೆ. ಭೀಮನದಿ, ಅರಕೇರಾ ಬಳಿ ಹಾಗೂ ಚಿನ್ನಕಲ್ ಈ ಕೇಂದ್ರಗಳಾಗಿವೆ ಎಂದರು.
ಈ ಯೋಜನೆಯಿಂದ ಗುರುಮಠಕಲ್ ಪಟ್ಟಣಕ್ಕೆ ದಿವೊಂದಕ್ಕೆ 54.30 ಲಕ್ಷ ಲೀಟರ್ ಹಾಗೂ 27 ಹಳ್ಳಿಗಳಿಗೆ 49.70 ಲಕ್ಷ ಲೀಟರ್ ಶುದ್ಧ ಕುಡಿವ ನೀರು ಸರಬರಾಜು ಮಾಡಲಾಗುವುದು. ಕೇಂದ್ರ ಸರ್ಕಾರದ ನರ್ಮ ಯೋಜನೆಯಡಿ ಗುರುಮಿಠಕಲ್ ಪಟ್ಟಣದಲ್ಲಿ ಯುಜಿಡಿ (ಅಂಡರ್ ಗ್ರೌಂಡ್ ಡ್ರೆನೇಜ್ ಕಾಮಗಾರಿಗಳನ್ನು ಕೈಗೊಳ್ಳಲು 18 ಕೋಟಿ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರ ಈ ಕಾಮಗಾರಿಗಳನ್ನು ಆರಂಭಿಸಬೇಕಿದೆ ಎಂದು ಹೇಳಿದರು.
2013-14ನೇ ಸಾಲಿನಲ್ಲಿ ಹೊಸ ಜವಳಿ ನೀತಿ ಅನುಷ್ಠಾನವಾದ್ದಲ್ಲಿ ಸಬ್ಸಿಡಿ ಸೇರಿದಂತೆ ಹಲವು ಸೌಲಭ್ಯ ದೊರೆಯಲಿದೆ. ಇದರಿಂದ ನಿರುದ್ಯೋಗಿ ಸಮಸ್ಯೆಗಳು ನಿವಾವರಣೆಯಾಗಲಿದೆ. ಜಪಾನ್, ಚೈನಾ ಹಾಗೂ ಮಲೇಷ್ಯಾ ಜವಳಿ ರಂಗದಲ್ಲಿ ಅಭಿವೃದ್ಧಿ ಸಾಧಿಸಿದಂತೆ ಇಲ್ಲಿಯೂ ಅಭಿವೃದ್ಧಿ ಶಕೆ ಆರಂಭವಾಗಲಿದೆ. ಮುಂದಿನ 5 ವರ್ಷಗಳಲ್ಲಿ 5ಲಕ್ಷ ನೂತನ ಉದ್ಯೋಗಗಳನ್ನು ಸೃಷ್ಟಿಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

