ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಮಗಾರಿ ಕೈಗೊಳ್ಳಿ
ಕನ್ನಡಪ್ರಭ ವಾರ್ತೆ ಯಾದಗಿರಿ ನ.11
ಖಾತ್ರಿ ಯೋಜನೆಯು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿಯೂ ಸಮರ್ಪಕ ಅನಷ್ಠಾನವಾಗಬೇಕು. ಈ ನಿಟ್ಟಿನಲ್ಲಿ ತಾಲೂಕು ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರು ಸೂಚಿಸಿದರು.
ನಗರದ ಕೋಟ್ಲಾ ಕಟ್ಟಡದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಪಂಚಾಯ್ತಿಯ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೇಟಿ ನೀಡಿ ಪರಿಶೀಲಿಸಿ: ಗ್ರಾಮೀಣ ಮಟ್ಟದಲ್ಲಿ ಈ ಖಾತ್ರಿ ಯೋಜನೆ ನಿರುದ್ಯೋಗ ನಿವಾರಣೆಗೆ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಈ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಸಂಬಂಧಪಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಂದ ಉತ್ತಮ ಕೆಲಸ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು. ಖಾತ್ರಿ ಪ್ರಗತಿ ಕಾಣದಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಭೆಗೆ ಮಾಹಿತಿ: ಖಾತ್ರಿಯಲ್ಲಿ ಜಿಲ್ಲೆಯ ಒಟ್ಟು 182865 ನೋಂದಾಯಿತ ಕುಟುಂಬಗಳಿವೆ. ಅವುಗಳಲ್ಲಿ ಒಟ್ಟು 181116 ಜಾಬ್ ಕಾರ್ಡ್ಗಳನ್ನು ವಿತರಿಸಲಾಗಿದೆ. 2013-14ನೇ ಸಾಲಿನಲ್ಲಿ 8727.12 ಲಕ್ಷಗಳ ಅನುದಾನವನ್ನು ನಿಗದಿಪಡಿಸಲಾಗಿದೆ. 8181 ಅನುಮೋದಿತ ಕಾಮಗಾರಿಗಳಾಗಿವೆ. ಜಿಲ್ಲೆಗೆ ಒಟ್ಟು 4221.21 ಲಕ್ಷ ಬಿಡುಗಡೆಯಾಗಿದೆ. ಇದೂವರೆಗೂ ಒಟ್ಟು 295998 ಮಾನವ ದಿನಗಳನ್ನು ಉತ್ಪನ್ನವಾಗಿವೆ ಎಂದು ಜಿಪಂ ಉಪಕಾರ್ಯದರ್ಶಿ ಮಹಮದ್ ಯೂಸೂಫ್ ಸಭೆಗೆ ಮಾಹಿತಿ ನೀಡಿದರು.
5 ಲಕ್ಷ ನೂತನ ಉದ್ಯೋಗಗಳು ಸೃಷ್ಟಿ: ರಾಜ್ಯದಲ್ಲಿ ಹೊಸ ಜವಳಿ ನೀತಿ ಅನುಷ್ಠಾನಗೊಂಡಲ್ಲಿ ಪ್ರತಿವರ್ಷಕ್ಕೆ 1 ಲಕ್ಷದಂತೆ 5 ವರ್ಷದಲ್ಲಿ 5 ಲಕ್ಷ ನೂತನ ಉದ್ಯೋಗಗಳು ಸೃಷ್ಟಿಯಾಗಲಿವೆ. ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ 3 ಸಾವಿರ ಎಕರೆ ಜಮೀನು ಅಗತ್ಯವಿದ್ದು, ಜಮೀನು ವಿವಾದ ತಲೆದೂರಿದೆ. ವಿವಾದ ಬಗೆಹರಿದ ನಂತರ ಸುಮಾರು 10 ಸಾವಿರಕ್ಕೂ ಹೆಚ್ಚು ಜವಳಿ ಪಾರ್ಕ್ಗಳು ನಿರ್ಮಾಣವಾಗಲಿವೆ. ಜಮೀನು ವಿವಾದವನ್ನು ಬಗೆ ಹರಿಸುವ ಕ್ರಮವನ್ನು ಕೆಐಎಡಿಬಿ ಇಲಾಖೆ ನಿರ್ವಹಿಸಬೇಕೆಂದು ಸಚಿವರು ತಿಳಿಸಿದರು.
ಹೆಚ್ಚುವರಿ ಅನುದಾನ: ಜಿಲ್ಲೆಯಲ್ಲಿ ಲ್ಯಾಂಡ್ ಆಮರ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ಕಾಮಗಾರಿ ಶೀಘ್ರ ಮುಗಿಸಲು ಇಲಾಖೆಯ ಅಧಿಕಾರಿ ಕಿಶೋರ್ಗೆ ಸಚಿವರು ಸೂಚಿಸಿದರು. ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿ, ಕೌಳೂರು ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಕಳೆದ 20-30 ವರ್ಷಗಳಿಂದಲೂ ಬೇಡಿಕೆ ಇದೆ. ಆ ಯೋಜನೆಗೆ ಹೆಚ್ಚುವರಿಯಾಗಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕೂಡಲೇ ಆ ಯೋಜನೆ ಆರಂಭಕ್ಕೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಒಂದು ವೇಳೆ ಅನುದಾನ ಇಲ್ಲದಿದ್ದಲ್ಲೀ ಮತ್ತಷ್ಟು ಅನುದಾನವನ್ನು ನೀಡುವ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ 15 ದಿನದೊಳಗೆ ಒಂದು ಸಮಗ್ರವಾದ ವರದಿ ನೀಡುವಂತೆ ಇಲಾಖೆಯ ಅಧಿಕಾರಿ ಹನುಮಂತ ರೆಡ್ಡಿ ಅವರಿಗೆ ತಿಳಿಸಿದರು.
ನೂತನ ಬಸ್ನಿಲ್ದಾಣಗಳ ಮಾಹಿತಿ: ಯಾದಗಿರಿ ಹೊಸ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ನೂತನವಾದ ಎನ್ಇಕೆಎಸ್ಆರ್ಟಿಸಿ ಬಸ್ಸುಗಳನ್ನು ಓಡಿಸುವಂತೆ ಯಾದಗಿರಿ ಎನ್ಇಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ್ ಕುಮಾರ್ಗೆ ತಿಳಿಸಿದ ಸಚಿವರು, ಗುರುಮಿಠಕಲ್ ಹಾಗೂ ಯಾದಗಿರಿಯ ನೂತನ ಬಸ್ನಿಲ್ದಾಣಗಳ ಸ್ಥಿತಿಗತಿಗಳ ಮಾಹಿತಿ ಪಡೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಂತೋಷ್ ಕುಮಾರ್ ಗುರುಮಿಠಕಲ್ನ ನೂತನ ಬಸ್ನಿಲ್ದಾಣ ಒಂದು ಅಥವಾ ಒಂದೂವರೆ ತಿಂಗಳೊಳಗೆ ಕಾಮಗಾರಿ ಮುಗಿಯಲಿದೆ. ಯಾದಗಿರಿಯ ನೂತನ ಬಸ್ನಿಲ್ದಾಣದ ಕಾಮಗಾರಿ 6ರಿಂದ 7 ತಿಂಗಳು ಕಾಲಾವಕಾಶ ಬೇಕು ಎಂದರು.
ಅಧಿಕಾರಿಗಳಿಗೆ ಸೂಚನೆ: ನಗರದಲ್ಲಿ ಬೀದಿ ದೀಪಗಳ ಅಳವಡಿಕೆಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಬೀದಿ ದೀಪಗಳ ಅಳವಡಿಕೆಗೆ ಅನುದಾನ ಕಡಿಮೆಯಾದಲ್ಲಿ ಜಿಲ್ಲಾಡಳಿತದ ವತಿಯಿಂದ 23 ಲಕ್ಷ ನೀಡಲಾಗುವುದು. ಲೋಕೋಪಯೋಗಿ ಇಲಾಖೆ ಹಾಗೂ ಜೆಸ್ಕಾಂ ಬೀದಿ ದೀಪಗಳ ಅಳವಡಿಕೆಗೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಸಂಬಂಧಿಸಿದ ಎರಡೂ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ವಯಸ್ಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಈ ಭಾಗದಲ್ಲಿ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಯಸ್ಕರ ಶಿಕ್ಷಣ ಇಲಾಖೆಯ ಪಾತ್ರ ಪ್ರಮುಖ. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಕೈಗೊಳ್ಳಲಾದ ಪ್ರಗತಿಯ ವಿವರವನ್ನು ಪ್ರತಿವಾರವೂ ನೀಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಕೆಲ ವಸತಿ ನಿಲಯಗಳ ಆವರಣದ ಮೇಲೆ ಹಾದೂ ಹೋಗಿರುವ ವಿದ್ಯುತ್ತಂತಿಗಳನ್ನು ತೆಗೆಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಕಾರ್ಯವನ್ನು ಸಚಿವರು ನಡೆಸಿದರು.
ಜಿಪಂ ಅಧ್ಯಕ್ಷ ಭೀಮಮ್ಮ ಕೃಷ್ಣ ಚಪೇಟ್ಲಾ, ಉಪಾಧ್ಯಕ್ಷ ಚನ್ನಬಸಮ್ಮ ಹಾಗೂ ಜಿಪಂ ಸಿಇಒ ಎಸ್.ಎ. ಜಿಲಾನಿ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಜಿಪಂ ಸದಸ್ಯರು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

