ಶೃಂಗಾರಕ್ಕಾಗಿ ಕಾಯುತ್ತಿದೆ ಸಣ್ಣ ಕೆರೆ
ಕನ್ನಡಪ್ರಭ ವಾರ್ತೆ ಆಳಂದ ನ.13
ಆಳಂದ ನಗರ ಹೊರವಲಯದ ಉಮರಗಾ ಹೆದ್ದಾರಿ ಬದಿಯಲ್ಲಿನ ಏಕೈಕ ಸಣ್ಣ ನೀರಾವರಿ ಕೆರೆಗೆ ನೀರಿನ ಸಾಮರ್ಥ್ಯ ಹೆಚ್ಚಳ ಸೇರಿ ಹಸಿರು ವನ ನಿರ್ಮಿಸಿ ಶಾಲಾ ಮಕ್ಕಳಿಗೆ ಮತ್ತು ಪ್ರವಾಸಿಗರಿಗೆ ನಿಸರ್ಗದ ವಾತಾವರಣ ಕಲ್ಪಿಸಬೇಕೆಂಬ ಸಾರ್ವಜನಿಕರ ಬಹುದಿನಗಳ ಕೂಗು ಕನಸಾಗಿಯೇ ಉಳಿಯತೊಡಗಿದೆ.
ಪಟ್ಟಣದ ಸುತ್ತಲ್ಲಿನ ಪ್ರದೇಶದಲ್ಲಿ ಸಾರ್ವಜನಿಕರಿಗೆ ಉತ್ತಮ ಪರಿಸರವಾಗಲಿ, ವಾಯು ವಿಹಾರಕ್ಕಾಗಿ ಗಿಡ ಮರಗಳಾಗಲಿ ಯಾವುದು ಇಲ್ಲ. ಇದರಿಂದ ಬಿಡುವಿನ ಸಮಯದಲ್ಲಿ, ಬೆಳಗಿನ ಹೊತ್ತಿನಲ್ಲಿ ನಿಸರ್ಗದ ವಾತಾವರಣ ಇಲ್ಲವಾಗಿದೆ.
ಹೀಗಾಗಿಯೇ ಪಟ್ಟಣದ ಮೇಲ್ಭಾಗದಲ್ಲಿರುವ ಸಣ್ಣ ಕೆರೆಗೆ ಪರಿಸರ ಸಂರಕ್ಷಣೆಯ ಜೊತೆಗೆ ವಾಯು ವಿಹಾರ ತಾಣವಾಗಿಸಬೇಕೆಂಬುದು ಜನರ ಆಸೆ.
ಮನ ತಣಿಸಿಕೊಳ್ಳಲು ಉತ್ತಮ ವಾತಾವರಣ: ಈ ಕೆರೆಯ ಸುತ್ತಲಿನ ಪ್ರದೇಶದಲ್ಲಿ ಗಿಡಮರ ಬೆಳೆಸಿ, ಸದಾ ನೀರಿರುವಂತೆ ಮಾಡಿ, ಕೆರೆಯ ಆವರಣದಲ್ಲಿ ಉದ್ಯಾನವನ ನಿರ್ಮಿಸಿ ಕೆರೆಯ ಒಳಭಾಗದಲ್ಲಿ ಬೋಟ್ ಓಡಾಡುವಂತೆ ಮಾಡಿ, ಸುತ್ತಲಿನ ಪ್ರದೇಶದಲ್ಲಿ ಗಾರ್ಡನ್ ಮಾಡಿದರೆ ಮಕ್ಕಳಿಗೆ ಹಾಗೂ ನಾಗರಿಕರಿಗೆ ಕೊಂಚ ದಣಿವಾರಿಸಿಕೊಳ್ಳಲು ಹಾಗೂ ಮನತಣ್ಣಿಸಿಕೊಳ್ಳಲು ಉತ್ತಮ ವಾತಾವರಣ ಕಲ್ಪಿಸಿದಂತಾಗುತ್ತದೆ ಎಂದು ನಾಗರಿಕರು ಹೇಳತೊಡಗಿದ್ದಾರೆ.
ಪಟ್ಟಣಕ್ಕೂ ಕುಡಿವ ನೀರು: ಈ ಕೆರೆಯೂ ಪಟ್ಟಣದ ದಕ್ಷಿಣ ದಿಕ್ಕಿನ ಮೇಲ್ಭಾಗದಲ್ಲಿದೆ. ನೀರಿನ ಸಾಮರ್ಥ್ಯ ಹೆಚ್ಚಿಸಿದರೆ ಇಡೀ ಆಳಂದ ಪಟ್ಟಣಕ್ಕೂ ಕುಡಿವ ನೀರು ಪೂರೈಸಬಹುದು. ಮಳೆಗಾಲದಲ್ಲಿ ನಿರೀಕ್ಷಿತ ಮಳೆಯಾದರೆ ಸದಾ ತುಂಬಿ ಹರಿಯುವ ಈ ಕೆರೆಯನ್ನು ಒಡ್ಡಿನ ಸಾಮರ್ಥ್ಯ ಹೆಚ್ಚಿಸಿದರೆ ಹೆಚ್ಚಿನ ನೀರು ಸಂಗ್ರಹಗೊಂಡು ಎಲ್ಲದಕ್ಕೂ ಅನುಕೂಲವಾಗುತ್ತದೆ ಎಂದು ಪರಿಸರ ಪ್ರೇಮಿಗಳು ಜಿಲ್ಲಾ ಮತ್ತು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಅಂಗೈಯಲ್ಲೇ ಬೆಣ್ಣೆಯಿಟ್ಟು ತುಪ್ಪಕ್ಕೆ ಊರೆಲ್ಲ ಅಲೆದರೆಂಬ ಗಾದೆಯ ಮಾತಿನಂತೆ ಎಲ್ಲವು ನೈಸರ್ಗಿಕವಾಗಿ ನಮ್ಮ ಸುತ್ತಲಿನ ಪರಿಸರದಲ್ಲೇ ಇರುವಾಗ ಮತ್ತೊಂದು ಕಡೆ ಹೋಗುವ ಅನಿರ್ವಾಯತೆ ಯಾಕೆ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಹೆಚ್ಚುವರಿ ಒಣಭೂಮಿ: ಕೇಂದ್ರ ಸರ್ಕಾರದ ಲೇಕ್ ಅಭಿವೃದ್ಧಿ ಕೇಂದ್ರದಿಂದ ಗುಲ್ಬರ್ಗ- ಅಪ್ಪನಕೆರೆ ಅಭಿವೃದ್ಧಿ ಪಡಿಸಿದಂತೆ ಆಳಂದ ಪಟ್ಟಣಕ್ಕೆ ಹತ್ತಿಕೊಂಡಿರುವ ಈ ಕೆರೆ ಅಭಿವೃದ್ಧಿ ಪಡಿಸಿದರೆ ಉತ್ತಮ ಪರಿಸರ ಬೆಳೆಸಲು ಅವಕಾಶವಿದೆ.
ಕೆರೆ ವಿಸ್ತಾರಕ್ಕೆ ಇನ್ನೂ ಹೆಚ್ಚುವರಿ ಭೂಮಿ ಅಗತ್ಯ ಬಿದ್ದಲ್ಲಿ ಪಡೆಯಲು ಒಣಭೂಮಿ ಸಾಕಷ್ಟಿದೆ.
ಜನಸಂಖ್ಯೆ ಬೆಳೆದಂತೆ ಆಳಂದ ಬೆಳೆಯತೊಡಗಿದೆ. ಹೇಳಿಕೊಳ್ಳುವಂತ ನಿಸರ್ಗದ ವಾತಾವರಣ, ಪ್ರವಾಸಿ ತಾಣದ ಕೊರತೆ ಹೀಗೆ ಇಲ್ಲದ ನಡುವೆ ಏನೆಲ್ಲವನ್ನು ಮಾಡಬಹುದು ಎಂಬುದಕ್ಕೆ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವು ಈ ಕೆರೆಯ ಸುತ್ತಲಿನಲ್ಲಿ ಪರಿಸರ ನಿರ್ಮಾಣದ ಮನಸ್ಸು ಮಾಡಬೇಕಾಗಿದೆ ಎಂದು ಆಳಂದನ ಸಾಮಾಜಿಕ ಕಾರ್ಯಕರ್ತ, ಎಂಜಿನಿಯರ್ ತಾನಾಜಿ ಟಿ. ಸೂರ್ಯವಂಶಿ ಅಭಿಪ್ರಾಯಪಟ್ಟಿದ್ದಾರೆ.
ಕೆರೆಯೂ 1965ರಲ್ಲಿ ಉದ್ಭವಿಸಿದ ಬರ ನಿವಾರಣೆ ಹಾಗೂ ಕಾರ್ಮಿಕರಿಗೆ ಕೂಲಿ ಕೆಲಸ ನೀಡುವ ಉದ್ದೇಶ ಅಲ್ಲದೆ, ವ್ಯಾಪ್ತಿಯ ಸುಮಾರು 470 ಎಕರೆ ಪ್ರದೇಶಕ್ಕೆ ಎಡ ಮತ್ತು ಬಲ ಕಾಲುವೆ ಮೂಲಕ ನೀರುಣಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಬರುತ್ತ ಕೃಷಿ ಭೂಮಿಯಲ್ಲಿ ನಗರ ವಿಸ್ತಾರಗೊಂಡಿದೆ. ಹೀಗಾಗಿ ಮೊದಲಿನಷ್ಟು ವ್ಯಾಪ್ತಿಯಿಲ್ಲವಾಗಿದೆ.
ಒಡ್ಡಿನ 12 ಮೀಟರ್ ಎತ್ತರ, 420 ಮೀಟರ್ ಉದ್ದ, 80 ಮೀಟರ್ ವೆಸ್ಟ್ವೇರ್ ಹಾಗೂ ಕೆರೆ ಒಳಭಾಗದಲ್ಲಿ 24 ಚದುರ ಕಿ.ಮೀ. ನೀರು ಸಂಗ್ರಹಕ್ಕೆ ವಿಸ್ತಾರವಿದೆ.
ಸುಮಾರು 70 ಎಕರೆ ಪ್ರದೇಶ ಮುಳಗಡೆಯಾಗಿದೆ. ವೆಸ್ಟ್ವೇರ್ ಮೂಲಕ ಹರಿಯುವ ನೀರು ಅಮರ್ಜಾ ಅಣೆಕಟ್ಟೆ ಸೇರುತ್ತವೆ. ಎಡ ಕಾಲುವೆ ಒಂದುವರೆ ಕಿಲೋ ಮೀಟರ್ ಹಾಗೂ ಬಲಕಾಲುವೆ 1 ಕಿ.ಮೀ. ನಿರ್ಮಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

