ಪಿಟ್ಲೈನ್ ನಿರ್ಮಾಣ: ಇಂದು ಅಡಿಗಲ್ಲು
ಗುಲ್ಬರ್ಗ: ತವರೂರಿಗೆ ರೇಲ್ವೆ ಮೂಲ ಸೌಕರ್ಯ ಸಿರಿ ವೃದ್ಧಿಸುವಂತೆ ಮಾಡುತ್ತಿರುವ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಇದೀಗ 6 ಕೋಟಿ ವೆಚ್ಚದಲ್ಲಿ ಗುಲ್ಬರ್ಗ ರೈಲು ನಿಲ್ದಾಣದಲ್ಲಿ ನಿರ್ಮಿಸಲು ಹೊರಟಿರುವ ಪಿಟ್ ಲೈನ್ ಕಾಮಗಾರಿ ಈ ಭಾಗದ ರೈಲು ಮೂಲ ಸೌಕರ್ಯಕ್ಕೆ ಹೊಸ ತಿರುವು ತರುವಂಥದ್ದಾಗಿದೆ.
ಗುಲ್ಬರ್ಗದಿಂದಲೇ ಬೆಂಗಳೂರು, ಮುಂಬೈ, ಹೈದ್ರಾಬಾದ್ ಮುಂತಾದ ಬೃಹತ್ ನಗರಗಳಿಗೆ ರೈಲುಗಳನ್ನು ಓಡಿಸಿ ಎಂಬ ಈ ಭಾಗದವರ ಬೇಡಿಕೆ ಈಡೇರಿಸಲು ಹೊರಟಿರುವ ಸಚಿವರು, ಇದಕ್ಕೆ ಪ್ರಾಥಮಿಕ ಅಗತ್ಯವಾಗಿರುವ ಪಿಟ್ ಲೈನ್ ಕಾಮಗಾರಿಯನ್ನು ಗುಲ್ಬರ್ಗದಲ್ಲಿ ಆರಂಭಿಸಲು ಮುಂದಾಗಿದ್ದಾರೆ. 6 ಕೋಟಿ ವೆಚ್ಚದ ಯೋಜನೆಗೆ ಶನಿವಾರ ಅಡಿಗಲ್ಲು ಹಾಕಲಿದ್ದಾರೆ. ಗುಲ್ಬರ್ಗ- ಬೀದರ್ ರೈಲು ಮಾರ್ಗ ಕಾಮಗಾರಿಯೂ ವೇಗ ಪಡೆದಿರುವ ಈ ಹಂತದಲ್ಲಿ ಪಿಟ್ ಲೈನ್ ಯೋಜನೆ ಹೈ- ಕ ನೆಲದಲ್ಲಿ ರೈಲು ಸಂಪರ್ಕದಲ್ಲಿ ಪ್ರಮಖ ಪಾತ್ರ ನಿರ್ವಹಿಸುವುದು ನಿಶ್ಚಿತ.
6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಸಂಕಲ್ಪ: ರಾಜ್ಯದಲ್ಲಿ ಪ್ರಮುಖ ಶೈಕ್ಷಣಿಕ ಹಾಗೂ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಗುಲ್ಬರ್ಗದಿಂದಲೇ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಈ ಕಾಮಗಾರಿಯಿಂದ ಸುಲಭವಾಗಲಿದೆ. ಗುಲ್ಬರ್ಗದಲ್ಲಿನ ಪಿಟ್ ಲೈನ್ 24 ಕೋಚ್ಗಳ ನಿರ್ವಹಣೆಯ ಸಾಮರ್ಥ್ಯ ಪಡೆದಿದೆ. 6 ತಿಂಗಳಲ್ಲೇ ಸದರಿ ಕಾಮಗಾರಿ ಪೂರ್ಣಗೊಳಿಸಲು ರೇಲ್ವೆ ಇಲಾಖೆ ಸಂಕಲ್ಪಿಸಿದೆ. ಈ ಯೋಜನೆ ಗುಲ್ಬರ್ಗಕ್ಕೆ ಖರ್ಗೆಯವರ ಇದುವರೆಗೂ ನೀಡಿರುವ ಕೊಡುಗೆಗಳಲ್ಲೇ ಮಹತ್ವದ್ದಾಗಿ ನಿಂತಿದೆ.
ಅಫಜಲ್ಪುರ ಆರ್ಒಬಿ: ಗುಲ್ಬರ್ಗ- ಅಫಜಲ್ಪುರ ರಸ್ತೆಯಲ್ಲಿರುವ ಲೇವೆಲ್ ಕ್ರಾಸಿಂಗ್ನಲ್ಲಿ ವಾಹನ, ಜನ ದಟ್ಣೆಯಿಂದಾಗಿ ನಿತ್ಯವೂ ಪರದಾಟ. ಇದನ್ನು ತಪ್ಪಿಸಲು ಆದ್ಯತೆ ಮೇರೆಗೆ ಇಲ್ಲಿ ಚತುಷ್ಪಥ ಆರ್ಒಬಿ ನಿರ್ಮಾಣ ಯೋಜನೆ ಮಂಜೂರು ಮಾಡಿದ್ದಾರೆ. ಈ ಯೋಜನೆಗೂ ನ.16 ರ ಶನಿವಾರ ಶಿಲಾನ್ಯಾಸ.
ವೆಚ್ಚ ಹಂಚಿಕೆ ಆಧಾರದಲ್ಲಿ ಈ ಯೋಜನೆ ಕೈಗೊಳ್ಳಲಾಗಿದ್ದು, ಯೋಜನೆಯ ಒಟ್ಟು ವೆಚ್ಚ 28.35 ಕೋಟಿ ರೇಲ್ವೆ ಪಾಲು 14.14 ಕೋಟಿಯಾದರೆ ರಾಜ್ಯದ ಪಾಲು 14.21 ಕೋಟಿ. 12 ತಿಂಗಳಲ್ಲಿ ಸದರಿ ಕಾಮಗಾರಿ ಪೂರ್ಣಗೊಳಿಸುವ ಗುರಿಯೊಂದಿಗೆ ರೇಲ್ವೆ ಕಾಮಗಾರಿಗೆ ನ.16ರಂದು ಹಸಿರು ನಿಶಾನೆ ತೋರುತ್ತಿದೆ.
ರೇಲ್ವೆ ಇಲಾಖೆ ಹಳಿ ಮೇಲಿನ 36 ಮೀಟರ್ ಸೇತುವೆಯ ದಾಟು ನಿರ್ಮಿಸುತ್ತಿದ್ದರೆ ರಾಜ್ಯ ಸರ್ಕಾರ ಈ ಸೇತುವೆಯ ಸಂಪರ್ಕ ರಸ್ತೆಯನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿದೆ. ಈ ಆರ್ಒಬಿ ಜೊತೆಗೇ ಪಾದಚಾರಿಗಳಿಗೆ, ಬೈಕ್ಗಳಿಗೆ, ಇತರೆ ವಾಹನಗಳಿಗೆ ಅನುಕೂಲವಾಗಲು ಸಬ್ವೇ ಸಹ ನಿರ್ಮಿಸಲಾಗುತ್ತಿದೆ. ಪ್ರತಿ 18 ಮೀಟರ್ನಂತೆ 2 ಸಂಖ್ಯೆಯ ದಾಟುವನ್ನು ನಿರ್ಮಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

